Site icon Vistara News

Lok Sabha Election 2024: ಏಪ್ರಿಲ್‌ 26ಕ್ಕೆ ಮೊದಲ ಹಂತದ ಮತದಾನ; ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

Lok Sabha Election 2024 General holiday for first phase of polling on April 26

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ (Voting in Karnataka) ನಡೆಯಲಿದೆ. ಅಂದು ಎಲ್ಲ ಕಾರ್ಮಿಕರು, ಅರ್ಹ ಮತದಾರರು (Labour Voters) ಮತದಾನ ಮಾಡುವ ಸಲುವಾಗಿ ಸಾರ್ವತ್ರಿಕ ರಜೆ (General holiday for voting) ಘೋಷಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.

ಈ ಬಗ್ಗೆ ಕಾರ್ಮಿಕ ಆಯುಕ್ತರು ಆದೇಶವನ್ನು ಹೊರಡಿಸಿದ್ದು, ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆ ದಿನಾಂಕವನ್ನು 2024ರ ಮಾರ್ಚ್‌ 16ರಂದು ಘೋಷಿಸಿದ್ದು, ಅದರಂತೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಿಗದಿಯಾಗಿರುತ್ತದೆ. ಏಪ್ರಿಲ್‌ 26ರ ಶುಕ್ರವಾರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಹಾಗೂ ಮೇ 07ರ ಮಂಗಳವಾರ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಮಿಕರು ಸಹ ಮತದಾನ ಮಾಡಬೇಕಿದೆ. ಹಾಗಾಗಿ ಅಂದು ಕಾರ್ಮಿಕರಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದೇಶದಲ್ಲೇನಿದೆ?

ಸದರಿ ದಿನಾಂಕದಂದು ಮತದಾನ ನಡೆಯಲಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳು 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ 3-ಎ ಪ್ರಕಾರ ಮತ ಚಲಾಯಿಸಲು ಅವಕಾಶ ಮಾಡಿ ಕೊಡಬೇಕಾಗುತ್ತದೆ. ಆದ್ದರಿಂದ, ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಅರ್ಹರಿರುವ ಎಲ್ಲ ಕಾರ್ಮಿಕ ಮತದಾರರಿಗೆ ಏಪ್ರಿಲ್‌ 26ರಂದು ವೇತನ ಸಹಿತ ರಜೆ ನೀಡಿ, ಎಲ್ಲ ಅರ್ಹ ಕಾರ್ಮಿಕರು ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಅನುವು ಮಾಡಿಕೊಡಲು ಸೂಚಿಸಲಾಗಿದೆ.

ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

ವಿದ್ಯುನ್ಮಾನ ಮತಯಂತ್ರಗಳ (EVM- ಇವಿಎಂ) ಕುರಿತು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕಾನೂನು ಹೋರಾಟದ ನಡುವೆಯೇ ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (1st phase Voting) ನಡೆಯುತ್ತಿದೆ. ಇವಿಎಂಗಳಲ್ಲಿ ಚಲಾವಣೆಯಾದ 100% ಮತಗಳನ್ನೂ ವಿವಿಪ್ಯಾಟ್ (VVPAT) ವ್ಯವಸ್ಥೆಯ ಮೂಲಕ ಪರಿಶೀಲಿಸುವ ವ್ಯವಸ್ಥೆ ಜಾರಿ ಮಾಡಬೇಕು (VVPAT Verification) ಎಂದು ಅರ್ಜಿದಾರರು ಕೋರಿದ್ದಾರೆ. ಈ ಸಂದರ್ಭದಲ್ಲಿ, ಇವಿಎಂ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ವಿವಿಪ್ಯಾಟ್‌ ಮೂಲಕ ಅದರ ಪರಿಶೀಲನೆ ಹೇಗೆ, ಎಂಬುದನ್ನು ವಿವರವಾಗಿ ತಿಳಿಯೋಣ.

ಕೋರ್ಟ್‌ನಲ್ಲಿ ನಡೆಸದ ವಾದವಿವಾದಗಳ ಸಮಯದಲ್ಲಿ, ಬ್ಯಾಲೆಟ್ ವೋಟಿಂಗ್ ಸಿಸ್ಟಮ್‌ಗೆ ಹಿಂತಿರುಗಲು ಸಲಹೆಗಳು ಬಂದಿವೆ. ಅರ್ಜಿದಾರರು ಯುರೋಪಿಯನ್ ರಾಷ್ಟ್ರಗಳ ಉದಾಹರಣೆ ತೋರಿಸಿದ್ದಾರೆ. ಆದರೆ, “ಪಶ್ಚಿಮ ಬಂಗಾಳದ ಜನಸಂಖ್ಯೆಯೇ ಜರ್ಮನಿಗಿಂತ ಹೆಚ್ಚಿರುವುದನ್ನು ಗಮನಿಸಿ. ಇಂತಹ ಹೋಲಿಕೆಗಳನ್ನು ಮಾಡಬೇಡಿ” ಎಂದು ನ್ಯಾಯಾಲಯವು ಅರ್ಜಿದಾರರಿಗೆ ಹೇಳಿದೆ. ನಿನ್ನೆ, ಭಾರತೀಯ ಚುನಾವಣಾ ಆಯೋಗದ ವಕೀಲರು ಇವಿಎಂ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ರೀತಿಯ ಟ್ಯಾಂಪರಿಂಗ್ ವಿರುದ್ಧ ಹೇಗೆ ದೋಷರಹಿತವಾಗಿದೆ ಎಂಬುದನ್ನು ವಿವರಿಸಿದರು.

ಇವಿಎಂ ಕೆಲಸ ಮಾಡುವುದು ಹೇಗೆ?

EVM ಎರಡು ಘಟಕಗಳನ್ನು ಹೊಂದಿದೆ- ನಿಯಂತ್ರಣ ಘಟಕ ಮತ್ತು ಮತದಾನ ಘಟಕ. ಇವುಗಳನ್ನು ಕೇಬಲ್ ಮೂಲಕ ಸಂಪರ್ಕಿಸಲಾಗಿದೆ. ಇವಿಎಂ ನಿಯಂತ್ರಣ ಘಟಕವು ಪೋಲಿಂಗ್ ಆಫೀಸರ್‌ ಬಳಿ ಇರುತ್ತದೆ. ಮತಯಂತ್ರ ಸಾಮಾನ್ಯವಾಗಿ ಮತದಾರನ ಖಾಸಗಿತನಕ್ಕಾಗಿ ಮುಚ್ಚಿದ ಆವರಣದೊಳಗೆ ಇರುತ್ತದೆ.

ಮತಗಟ್ಟೆಯಲ್ಲಿ, ಮತಗಟ್ಟೆ ಅಧಿಕಾರಿಯು ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ. ನಂತರ ನೀವು ಮತ ​​ಚಲಾಯಿಸಲು ಅನುವು ಮಾಡಿಕೊಡುವ ಬ್ಯಾಲೆಟ್ ಬಟನ್ ಅನ್ನು ಒತ್ತುತ್ತಾರೆ. ಬ್ಯಾಲೆಟ್ ಯೂನಿಟ್‌ನಲ್ಲಿ ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳು ಅವುಗಳ ಪಕ್ಕದಲ್ಲಿ ನೀಲಿ ಬಟನ್‌ಗಳಿರುತ್ತವೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತಬೇಕು.

ಮತದಾನ ಪ್ರಕ್ರಿಯೆ

ಮತಗಟ್ಟೆ ಅಧಿಕಾರಿಯ ನಿಯಂತ್ರಣ ಘಟಕವು ಬಹು ಬಟನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ʼballot’ ಎಂಬ ಶೀರ್ಷಿಕೆಯಿದು. ಒಮ್ಮೆ ಅಧಿಕಾರಿಯು ಈ ಗುಂಡಿಯನ್ನು ಒತ್ತಿದರೆ, ʼಬ್ಯುಸಿ’ ಎಂಬ ಶೀರ್ಷಿಕೆಯ ಕೆಂಪು ದೀಪವು ಬೆಳಗುತ್ತದೆ. ಒಂದು ಮತವನ್ನು ದಾಖಲಿಸಲು ನಿಯಂತ್ರಣ ಘಟಕ ಸಿದ್ಧವಾಗಿದೆ ಎಂದು ಇದು ಸೂಚಿಸುತ್ತದೆ. ಮತದಾರ ಇರುವ ಬ್ಯಾಲೆಟ್ ಯೂನಿಟ್‌ನಲ್ಲಿ ಹಸಿರು ದೀಪ ಆನ್ ಆಗಿದ್ದು, ಮತದಾನಕ್ಕೆ ಯಂತ್ರ ಸಿದ್ಧವಾಗಿದೆ ಎಂದು ಸಂಕೇತಿಸುತ್ತದೆ. ನಂತರ ಮತದಾರನು ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತುತ್ತಾನೆ. ಬ್ಯಾಲೆಟ್ ಯೂನಿಟ್ ದೃಷ್ಟಿಹೀನ ಮತದಾರರಿಗೆ ಬ್ರೈಲ್ ಲಿಪಿಯನ್ನು ಸಹ ಹೊಂದಿದೆ.

ಮತದಾರರು ಮತದಾನ ಮಾಡಿದ ನಂತರ, ನಿಯಂತ್ರಣ ಘಟಕವು ಬೀಪ್ ಧ್ವನಿಯನ್ನು ಹೊರಸೂಸುತ್ತದೆ. ಇದು ಮತದಾನ ಪೂರ್ಣಗೊಂಡಿದೆ ಎಂದು ಸೂಚಿಸುತ್ತದೆ. ನಿಯಂತ್ರಣ ಘಟಕವು ಎಲ್‌ಇಡಿ ಪರದೆ ಮತ್ತು ಬಟನ್‌ಗಳನ್ನು ಹೊಂದಿದ್ದು, ಅದರಲ್ಲಿ ದಾಖಲಾಗಿರುವ ಒಟ್ಟು ಮತಗಳ ಸಂಖ್ಯೆಯನ್ನು ನೋಡಲು ಬಳಸಬಹುದು. ಎಲ್ಲಾ ಮತಗಳು ದಾಖಲಾದ ನಂತರ, ಮತಗಟ್ಟೆ ಅಧಿಕಾರಿಯು ನಿಯಂತ್ರಣ ಘಟಕದ ಬದಿಯಲ್ಲಿರುವ ಗುಂಡಿಯನ್ನು ಒತ್ತಿ, ಯಂತ್ರವನ್ನು ಮುಚ್ಚುತ್ತಾರೆ. ಎಣಿಕೆಯ ದಿನದಂದು, ಪ್ರತಿ ಅಭ್ಯರ್ಥಿ ಪಡೆದ ಒಟ್ಟು ಮತಗಳನ್ನು ನೋಡಲು ʼresult’ ಶೀರ್ಷಿಕೆಯ ಬಟನ್ ಅನ್ನು ಬಳಸಲಾಗುತ್ತದೆ. ನಿಯಂತ್ರಣ ಘಟಕದಿಂದ ಎಲ್ಲಾ ಡೇಟಾವನ್ನು ಅಳಿಸಲು ಬಳಸಬಹುದಾದ ʼclear’ ಬಟನ್ ಕೂಡ ಇದೆ.

VVPAT ಎಂದರೇನು?

VVPAT ಎಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್. ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ಚಲಾಯಿಸಿದ ಅಭ್ಯರ್ಥಿಗೇ ಆ ಮತ ಹೋಗಿದೆಯೇ ಎಂದು ನೋಡಲು ಅವಕಾಶವಿರುವ ಯಂತ್ರ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒಮ್ಮೆ ಒತ್ತಿದರೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗೆ ಸಂಪರ್ಕಗೊಂಡಿರುವ VVPAT, ಏಳು ಸೆಕೆಂಡುಗಳ ಕಾಲ ಮತದಾರರಿಗೆ ಗೋಚರಿಸುವ ಕಾಗದದ ಸ್ಲಿಪ್ ಅನ್ನು ಉತ್ಪಾದಿಸುತ್ತದೆ. ಅದರ ನಂತರ, ಪೇಪರ್ ಸ್ಲಿಪ್ VVPAT ಯಂತ್ರದಲ್ಲಿರುವ ಡ್ರಾಪ್ ಬಾಕ್ಸ್‌ಗೆ ಬೀಳುತ್ತದೆ.

ಪ್ರಸ್ತುತ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿಯೂ 5 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಇವಿಎಂಗಳೊಂದಿಗೆ ಕ್ರಾಸ್-ಚೆಕ್ ಮಾಡಲಾಗುತ್ತದೆ. 100 ಶೇಕಡ ಇವಿಎಂಗಳಲ್ಲಿ ದಾಖಲಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಕ್ರಾಸ್ ಚೆಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಯಸಿವೆ. ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್ ಲೈಟ್ ಆನ್ ಆಗಿದ್ದು, ಮತದಾರರು ತಮ್ಮ ಮತವನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಅರ್ಜಿದಾರರು ಕೋರಿದ್ದಾರೆ. ಪೇಪರ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಸಲಹೆಯಾಗಿದೆ. ಚುನಾವಣಾ ಆಯೋಗ ಇದನ್ನು ವಿರೋಧಿಸಿದೆ. ಇದು ಮತದಾನದ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಳಕೆಯಾಗಬಹುದು ಎಂದು ಹೇಳಿದೆ.

ಇದನ್ನೂ ಓದಿ: VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

ಸಮಯ ಉಳಿಕೆ

ಚುನಾವಣಾ ಆಯೋಗದ ಪ್ರಕಾರ ಇವಿಎಂ ವ್ಯವಸ್ಥೆ ಫೂಲ್ ಪ್ರೂಫ್ ಆಗಿದೆ. ಇದು ಮತ ಎಣಿಕೆ ಸಮಯವನ್ನು ಉಳಿಸುತ್ತದೆ, ಟ್ಯಾಂಪರ್ ಪ್ರೂಫ್ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಇವಿಎಂಗಳು ಹಗುರವಾಗಿವೆ ಮತ್ತು ಸದೃಢವಾಗಿವೆ- ಮತಗಟ್ಟೆ ಅಧಿಕಾರಿಗಳು ದೂರದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಟ್ರೆಕ್ಕಿಂಗ್‌ ಮಾಡಬೇಕಾದ ದೇಶದಲ್ಲಿ ಇದು ನಿರ್ಣಾಯಕವಾಗಿದೆ.

ಎಲ್ಲರ ಸಮ್ಮುಖದಲ್ಲಿ ಪರಿಶೀಲನೆ

ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ ಮತ್ತು ಬ್ಯಾಟರಿ/ಪವರ್ ಪ್ಯಾಕ್‌ ಇದರೊಂದಿಗೆ ಬರುತ್ತದೆ. ಸ್ಥಿರವಾದ ವಿದ್ಯುತ್ ಸರಬರಾಜನ್ನು ಹೊಂದಿರದ ಪ್ರದೇಶಗಳಲ್ಲಿ ಮತದಾನವನ್ನು ಸಕ್ರಿಯಗೊಳಿಸಲು ಇದು ಮತ್ತೊಂದು ನಿರ್ಣಾಯಕ ವೈಶಿಷ್ಟ್ಯ. ಪ್ರತಿ ಚುನಾವಣೆಗೂ ಮುನ್ನ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ನಡೆಸಲಾಗುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಇವಿಎಂಗಳಲ್ಲಿನ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ವಿವಿಧ ಘಟಕಗಳ ಕಾರ್ಯವನ್ನು ಪ್ರದರ್ಶಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಸಲಾಗುತ್ತದೆ.

Exit mobile version