ಬೆಂಗಳೂರು: ರಾಜ್ಯದಲ್ಲಿ ನನ್ನ ತಂದೆ ಎಚ್.ಡಿ. ಕುಮಾರಸ್ವಾಮಿ (HD Kumaraswamy), ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ಹೆಸರಿನಲ್ಲಿ ಬಹಳಷ್ಟು ಜನ ಶಾಸಕರಾಗಿ, ನಾಯಕರಾಗಿ ಹೊರಹೊಮ್ಮಿದ್ದಾರೆ. ನಾನು ರಾಮನಗರದಲ್ಲಿ ಸ್ಪರ್ಧೆ ಮಾಡಿದ್ದೆ. ಕ್ಷೇತ್ರದ ಜನ ನನ್ನ ಕೈ ಬಿಟ್ಟಿರಲಿಲ್ಲ. ಆದರೆ, ಕಾಂಗ್ರೆಸ್ ಮುಖಂಡರು ಮಧ್ಯರಾತ್ರಿ 2 ಗಂಟೆಗೆ ಐದು ಸಾವಿರ ರೂಪಾಯಿ ಟೋಕನ್ ಹಂಚಿ ನನಗೆ ಮೋಸ ಮಾಡಿದರು. ಎರಡು ಬಾರಿ ಸೋಲಾಗಿದೆ, ಒಪ್ಪಿಕೊಳ್ಳುತ್ತೇನೆ. ಇದರ ಬಗ್ಗೆ ನನಗೆ ನೋವಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಣ್ಣೀರು ಹಾಕಿದ್ದಾರೆ. ಅಲ್ಲದೆ, ತಾವು ಇನ್ನು ಚುನಾವಣೆಗೆ ಸ್ಪರ್ಧೆ ಮಾಡುವುದಿದ್ದರೆ ರಾಮನಗರದಲ್ಲಿಯೇ, ಈ ಜಿಲ್ಲೆಯನ್ನು ಬಿಟ್ಟು ಬೇರೆ ಎಲ್ಲಿಯೂ ಸ್ಪರ್ಧೆ ಮಾಡಲಾರೆ ಎಂದು ಹೇಳಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ ಅವರು ಗೆಲುವು ಸಾಧಿಸಿದರೆ, ಇಲ್ಲಿ ತೆರವಾಗುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಪರ ಪ್ರಚಾರ ಭಾಷಣದ ವೇಳೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ರಾಜ್ಯದಲ್ಲಿ ತಂದೆಯವರ, ದೇವೇಗೌಡರ ಹೆಸರಿನಲ್ಲಿ ಬಹಳಷ್ಟು ಜನ ಶಾಸಕರಾಗಿ, ನಾಯಕರಾಗಿ ಹೊರ ಹೊಮ್ಮಿದ್ದಾರೆ. ನನ್ನ ನಡವಳಿಕೆಯಲ್ಲೇನಾದರೂ ಸಮಸ್ಯೆ ಇದೆಯೇ? ನಾನು ಚುನಾವಣೆಗೆ ಸ್ಪರ್ಧೆ ಮಾಡಿದರೆ ಅದು ರಾಮನಗರ ಜಿಲ್ಲೆಯಲ್ಲೇ, ಜಿಲ್ಲೆ ಬಿಟ್ಟು ಬೇರೆ ಎಲ್ಲೂ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ.
ಎಚ್‌ಡಿಕೆ ಜಿಲ್ಲೆಯ ಜನರನ್ನು ಸಂಪಾದನೆ ಮಾಡಿದ್ದಾರೆ
ರಾಮನಗರ ಜಿಲ್ಲೆಯ ಜನ ನಮ್ಮ ತಂದೆಯವರಿಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದಾರೆ. ಇದನ್ನು ನಾವು ಯಾವತ್ತೂ ಮರೆಯುವುದಿಲ್ಲ. ಸಿನಿಮಾ ನಿರ್ಮಾಪಕರಾಗಿ ದುಡಿಮೆ ಮಾಡಿದ ಹಣದಿಂದ ಕೇತಗಾನಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದ್ದರು. ನನ್ನ ತಂದೆಯವರು ಎಂದೂ ಹಣ ಮಾಡಲು ಹೋಗಿಲ್ಲ. ಅವರು ಏನಾದರೂ ಸಂಪಾದನೆ ಮಾಡಿದ್ದರೆ ಅದು ಈ ಜಿಲ್ಲೆಯ ಜನರಾಗಿದ್ದಾರೆ. ಮಂಡ್ಯದಲ್ಲಿ ಸ್ಥಳೀಯರನ್ನು ಅಭ್ಯರ್ಥಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ನನ್ನ ಹೆಗಲ ಮೇಲೆ ಜವಾಬ್ದಾರಿ ಹಾಕಿದ್ದರು. ಮಂಡ್ಯದ ಸ್ಥಳೀಯ ನಾಯಕರ ಜತೆಗೆ ಸಭೆ ಮಾಡಿದ್ದೆ. ಅಲ್ಲಿ ನಮ್ಮ ಕುಟುಂಬದವರಿಂದಲೇ ಸ್ಪರ್ಧೆ ಮಾಡಬೇಕೆಂಬ ಒತ್ತಡ ಹೆಚ್ಚಿತ್ತು. ಈ ಸಂಬಂಧ ಬಂದು ವರದಿಯನ್ನು ನೀಡಿದ್ದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಮಣಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್; ಟಾರ್ಗೆಟ್ ಡಿಕೆಶಿ!
ಕಳೆದ ಬಾರಿ ಸೋಲು ಕಂಡಿದ್ದ ನಿಖಿಲ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಈ ವೇಳೆ ಸೋಲು ಕಂಡಿದ್ದರು. ಇದಕ್ಕೆ ಕಾಂಗ್ರೆಸ್‌ನವರು ಕೊನೇ ದಿನ ಕೂಪನ್ ಹಂಚಿಕೆ ಮಾಡಿ ತಮ್ಮ ಸೋಲಿಗೆ ಕಾರಣರಾದರು ಎಂದು ನಿಖಿಲ್ ಆಗಾಗ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈಗ ತಮ್ಮ ಸ್ಪರ್ಧೆ ಬಗ್ಗೆ ಹೇಳಿರುವ ನಿಖಿಲ್, ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಾದರೆ ಅದು ರಾಮನಗರ ಜಿಲ್ಲೆಯಿಂದ ಮಾತ್ರವೇ” ಎಂದು ಹೇಳಿದ್ದಾರೆ.