Site icon Vistara News

Modi in Karnataka: ದೇಶಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಕರ್ನಾಟಕದಿಂದ ನೂರಾರು ಕೋಟಿ ರೂ. ಕಪ್ಪು ಹಣ ರವಾನೆ: ಮೋದಿ ಆರೋಪ

Modi in Karnataka Karnataka Congress government sends black money to party candidates all over India

ಮೈಸೂರು: ಕರ್ನಾಟಕ ಸರ್ಕಾರವು (Karnataka Congress Government) ಡೆಲ್ಲಿ ಕಾಂಗ್ರೆಸ್‌ ನಾಯಕರ ಪಾಲಿಗೆ ಎಟಿಎಂ ಆಗಿದೆ. ಅಲ್ಲದೆ, ದೇಶಾದ್ಯಂತ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕರ್ನಾಟಕ ಕಾಂಗ್ರೆಸ್‌ನಿಂದ ನೂರಾರು ಕೋಟಿ ರೂಪಾಯಿ ಕಪ್ಪು ಹಣವನ್ನು (Black Money) ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೈಸೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ (Modi in Karnataka) ಗಂಭೀರ ಆರೋಪ ಮಾಡಿದ್ದಾರೆ. ಇಂಥ ಕಾಂಗ್ರೆಸ್‌ ನಿಮಗೆ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೈಸೂರು-ಕೊಡಗು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ್ದಾರೆ. ಈ ವೇಳೆ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆರ್ಥಿಕ ದಿವಾಳಿಯಾಗಿರುವ ಕಾಂಗ್ರೆಸ್‌ ಸರ್ಕಾರ

ಕರ್ನಾಟಕದಲ್ಲಿ ಸಮರ್ಪಕ ಕರೆಂಟ್‌ ನೀಡುತ್ತಿಲ್ಲ, ರೈತರಿಗೆ ತ್ರೀಫೇಸ್‌ ವಿದ್ಯುತ್‌ ಅನ್ನು ಸರಿಯಾಗಿ ಕೊಟ್ಟಿಲ್ಲ. ವಿದ್ಯಾರ್ಥಿಗಳ ಸ್ಕಾಲರ್ಶಿಪ್ ನಿಲ್ಲಿಸಿದ್ದಾರೆ‌. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಕರ್ನಾಟಕ ಸರ್ಕಾರ ಕೊಡುತ್ತಿದ್ದ 4 ಸಾವಿರ ರೂ. ಸಹಾಯ ಧನವನ್ನು ಬಂದ್ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರದ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್‌ ಸರ್ಕಾರ ರಾಜ್ಯವವನ್ನು ದಿವಾಳಿ ಮಾಡಿದೆ. ಒಂದು ಕಡೆ ಕುಡಿಯಲು ನೀರಿಲ್ಲ. ಬೆಂಗಳೂರಿನಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಕೊಡಲಾಗುತ್ತಿದೆ. ಸಮಸ್ಯೆ ತಾರಕಕ್ಕೇರಿದೆ. ಆದರೆ, ಇದರ ಬಗ್ಗೆ ಸರ್ಕಾರದವರು ಏನೂ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್‌ ಪಕ್ಷವು ಕರ್ನಾಟಕವನ್ನು ಲೂಟಿ ಮಾಡುತ್ತಿದೆ. ಈ ಪಕ್ಷದ ನಾಯಕರ ಬಳಿ ಕೋಟಿಗಟ್ಟಲೆ ಹಣ ಇರುವುದು ಐಟಿ ರೇಡ್‌ಗಳಲ್ಲಿ ಪತ್ತೆಯಾಗಿದೆ. ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರವು ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಭಾರತ್‌ ಮಾತಾಕಿ ಜೈ ಅನ್ನು ಕಾಂಗ್ರೆಸ್‌ನಲ್ಲಿ ಪರ್ಮಿಶನ್‌ ಬೇಕು!

ಇಂದು ಇಡೀ ದೇಶ ಕಾಂಗ್ರೆಸ್‌ ವಿರುದ್ಧ ಮಾತನಾಡುತ್ತಿದೆ. ಭಾರತ್‌ ಮಾತಾಕಿ ಜೈ ಎಂದು ಹೇಳಬೇಕಾದರೂ ಕಾಂಗ್ರೆಸ್‌ನಲ್ಲಿ ಅನುಮತಿಯನ್ನು ಪಡೆಯಬೇಕಾ? ಎಂದು ಮತದಾರರ ಬಳಿ ಪ್ರಶ್ನೆ ಮಾಡಿದ ಮೋದಿ, ಇಂಥ ದೇಶ ವಿರೋಧಿ ಕಾಂಗ್ರೆಸ್‌ ನಮಗೆ ಬೇಕಾ? ಇಂಥ ಕಾಂಗ್ರೆಸ್‌ಗೆ ನೀವು ಮತ ಹಾಕುತ್ತೀರಾ? ಇದೊಂದು ತುಕಡೇ ತುಕಡೇ ಪಾರ್ಟಿಯಾಗಿದೆ. ದೇಶವನ್ನು ವಿಭಜನೆ ಮಾಡುವುದೇ ಕಾಂಗ್ರೆಸ್‌ನ ಅಜೆಂಡಾವಾಗಿದೆ. ಇದಕ್ಕೆ ಜನರು ಪಾಠ ಕಲಿಸಬೇಕಿದೆ ಎಂದು ಗುಡುಗಿದರು.

ಕಾಂಗ್ರೆಸ್‌ ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷಿ ಕೇಳುತ್ತದೆ!

ವಿಶ್ವದಲ್ಲಿ ಭಾರತದ ಗೌರವ ಹೆಚ್ಚಿದೆ. ಭಾರತದ ಹೆಸರು ರಾರಾಜಿಸುತ್ತಿದೆ. ನಮ್ಮ ದೇಶಕ್ಕೆ ಮನ್ನಣೆ ನೀಡಿದೆ. ಆದರೆ, ನಮ್ಮ ಕಾಂಗ್ರೆಸ್‌ ನಾಯಕರೊಬ್ಬರು ವಿದೇಶಕ್ಕೆ ಹೋಗಿ ನಮ್ಮ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ. ಇನ್ನು ಈ ಕಾಂಗ್ರೆಸ್‌ನವರು ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದಕ್ಕೆ ಸಾಕ್ಷಿಯನ್ನು ಕೇಳುತ್ತಿದೆ. ಕರ್ನಾಟಕದಲ್ಲಿ ತುಷ್ಟೀಕರಣ ರಾಜಕಾರಣವನ್ನು ಕಾಂಗ್ರೆಸ್‌ ಮಾಡುತ್ತಿದೆ. ಮತ ಬ್ಯಾಂಕ್‌ಗಳ ಮೂಲಕ ಆಟವಾಡುವ ಕಾಂಗ್ರೆಸ್‌ ನಿಮಗೆ ಬೇಕಾ ಎಂದು ಪ್ರಶ್ನೆ ಮಾಡಿದರು.

ಮೋದಿ ಇರುವವರೆಗೂ ಹಿಂದು ಧರ್ಮದ ನಾಶ ಮಾಡಲು ಬಿಡಲ್ಲ

ಈ ವರ್ಷದ ಆರಂಭದಲ್ಲಿ ಜನವರಿ 22ರಂದು ನಾವು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಿದೆವು. ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್‌ನವರು ಅಪಮಾನ ಮಾಡಿದ್ದಾರೆ. ಕಾಂಗ್ರೆಸ್‌ ಹಾಗೂ ಇಂಡಿಯಾ ಅಲೆಯನ್ಸ್‌ ಅವರು ಬಾಯ್ಕಾಟ್‌ ಮಾಡಿದ್ದಾರೆ. ಇವರು ಹಿಂದು ಧರ್ಮದ ಶಕ್ತಿಯನ್ನು ನಾಶ ಮಾಡಲು ಕಾಂಗ್ರೆಸ್‌ನವರು ಹುನ್ನಾರ ನಡೆಸಿದ್ದಾರೆ. ಆದರೆ, ಈ ನಿಮ್ಮ ನರೇಂದ್ರ ಮೋದಿ ಇರುವವರೆಗೆ, ನಿಮ್ಮ ಆಶೀರ್ವಾದ ಮೋದಿ ಮೇಲೆ ಇರುವವರೆಗೂ ದೇಶದಲ್ಲಿ ಯಾವ ದುಷ್ಟ ಶಕ್ತಿಗಳು ಏನೂ ಮಾಡಲು ಆಗದು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ನೀಡಿದರು.

ಸಂಕಲ್ಪ ಪತ್ರವೇ ಮೋದಿಯ ಗ್ಯಾರಂಟಿ

ಇಂದು ಬಿಜೆಪಿ ಸಂಕಲ್ಪ ಪತ್ರವನ್ನು ಹೊರತಂದಿದೆ. ಈ ಸಂಕಲ್ಪ ಪತ್ರವು ಮೋದಿಯ ಗ್ಯಾರಂಟಿ ಆಗಿದೆ. ಪ್ರತಿ ಬಡವರಿಗೆ ಇನ್ನು 5 ವರ್ಷವೂ ಉಚಿತ ಪಡಿತರವನ್ನು ನೀಡಲಾಗುವುದು. ಪ್ರತಿ ಹಿರಿಯ ನಾಗರಿಕರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು. ಅಂದರೆ, 70 ವರ್ಷ ದಾಟಿದವರಿಗಾಗಿ ಆಯುಷ್ಮಾನ್‌ ಭಾರತ್‌ ಯೋಜನೆ ವಿಸ್ತರಣೆ ಮಾಡಲಾಗಿದೆ. ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ, ಮುಂದಿನ 5 ವರ್ಷದೊಳಗೆ ದಶದ ಕಡು ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣ ಮಾಡಲಾಗುವುದು. ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆ ಜಾರಿ ಮಾಡಲಾಗುವುದು. ಇದು ಮೋದಿಯ ಗ್ಯಾರಂಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Modi in Karnataka we will not allow Hinduism to be destroyed PM Narendra Modi

ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ

ಕರ್ನಾಟಕವು ದೇಶದ ಐಟಿ ಹಾಗೂ ತಂತ್ರಜ್ಞಾನದ ಹಬ್‌ ಆಗಿದೆ. ನಮ್ಮ ಯೋಜನೆಗಳಿಂದ ಇಲ್ಲಿಗೆ ಬಹುದೊಡ್ಡ ಲಾಭವಾಗಲಿದೆ. ಆಟೋಮೊಬೈಲ್‌ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕನ್ನಡವು ದೇಶದ ಸಮೃದ್ಧ ಭಾಷೆಯಾಗಿದೆ. ಕನ್ನಡ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಆದ್ಯತೆಯನ್ನು ನೀಡಲಾಗುವುದು. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೋಡಿದರು.

ಎನ್‌ಡಿಎ ಹೇಳಿದ್ದನ್ನೇ ಮಾಡುತ್ತದೆ

ಆರ್ಟಿಕಲ್‌ 370 ಇರಬಹುದು, ತ್ರಿಬಲ್‌ ತಲಾಕ್‌ ಇರಬಹುದು, ಮಹಿಳೆಯರ ಸುರಕ್ಷತೆ ಇರಬಹುದು ಇಲ್ಲವೇ ರಾಮ ಮಂದಿರ ನಿರ್ಮಾಣ ಇರಬಹುದು. ಇವುಗಳ ಈಡೇರಿಕೆಯು ಮೋದಿಯ ಗ್ಯಾರಂಟಿಯಾಗಿದೆ. ನಿಮ್ಮ ಮತ ಮೋದಿಗೆ ಶಕ್ತಿ ನೀಡುತ್ತದೆ. ಎನ್‌ಡಿಎ ಏನು ಹೇಳುತ್ತದೆಯೋ ಅದನ್ನು ಮಾಡಿಯೇ ಮಾಡುತ್ತದೆ ಎಂಬುದಕ್ಕೆ ಈ ಎಲ್ಲವೂ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕರ್ನಾಟಕದ ಪರಂಪರೆಯನ್ನು ಹೊಗಳಿದ ಮೋದಿ

ಕರ್ನಾಟಕದಲ್ಲಿ ಎನ್‌‌ಡಿಎಗೆ ಎಚ್.ಡಿ. ದೇವೇಗೌಡರಂತಹ ಹಿರಿಯರ ಮಾರ್ಗದರ್ಶನವಿದೆ. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಅವರ ಅನುಭವ ಇದೆ. ಕರ್ನಾಟಕ ಮಹಾ ಪರಂಪರೆಯ ಭಾಗವಾಗಿದೆ. ಸುತ್ತೂರು ಮಠದ ಪರಂಪರೆ, ರಾಷ್ಟ್ರಕವಿ‌ ಕುವೆಂಪು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮರಣೆ ಇದೆ ಎಂದು ನರೇಂದ್ರ ಮೋದಿ ಬಣ್ಣಿಸಿದರು.

ಕರ್ನಾಟಕ ಜನತೆ ಆಶೀರ್ವಾದ ಬಿಜೆಪಿ ಮೇಲಿದೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ದೇಶ ಕಂಡ ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದಾರೆ. ಅವರ ಜತೆ ಒಡನಾಟ ಹೊಂದಿರುವುದು ನನ್ನ ಸೌಭಾಗ್ಯವಾಗಿದೆ. ಮೈಸೂರು ಹಾಗೂ ಕರ್ನಾಟಕದ ಮಹಾಜನತೆಯ ಆಶೀರ್ವಾದ ನಮ್ಮ ಮೇಲಿದೆ ಎಂಬುದು ಇಷ್ಟು ಜನ ಈ ಸಮಾವೇಶದಲ್ಲಿ ಸೇರಿರುವುದನ್ನು ನೋಡಿದರೇ ಗೊತ್ತಾಗುತ್ತದೆ ಎಂದು ಮೋದಿ ಹೇಳಿದರು.

ಮೋದಿಗೆ ವಿಶೇಷ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಬಿಜೆಪಿ ಘಟಕದಿಂದ ವಿಶೇಷ ಉಡುಗೊರೆಯನ್ನು ನೀಡಲಾಯಿತು. ರಾಮಾ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ದೇವರನ್ನೊಳಗೊಂಡ ಮರದಲ್ಲಿ ಕೆತ್ತನೆ ಮಾಡಿರುವ ಮೂರ್ತಿಯನ್ನು ಉಡುಗೊರೆಯಾಗಿ ಕೊಡಲಾಯಿತು. ಸುಮಾರು ಎರಡು ಅಡಿ ಎತ್ತರ ಇರುವ ಮರದ ಮೂರ್ತಿಯನ್ನು ವಿಶೇಷ ಕುಸುರಿಯ ಮೂಲಕ ಕೆತ್ತನೆ ಮಾಡಲಾಗಿದೆ. ಜತೆಗೆ ಮೈಸೂರು ಪೇಟ, ರೇಷ್ಮೆ ಶಲ್ಯ ಹಾಗೂ ಹಾರ ಹಾಕಿ ಸನ್ಮಾನ ಮಾಡಲಾಯಿತು.

ಇದನ್ನೂ ಓದಿ: Modi in Karnataka: ಮೋದಿ ಗೆಲ್ಲಿಸಲು ಈ ಇಳಿವಯಸ್ಸಿನಲ್ಲೂ ರಾಜ್ಯದೆಲ್ಲೆಡೆ ಪ್ರಚಾರ ಮಾಡುವೆ; ಪ್ರಧಾನಿಯನ್ನು ಹಾಡಿಹೊಗಳಿದ ದೇವೇಗೌಡರು

ಒಂದೇ ವೇದಿಕೆಯಲ್ಲಿ ಪ್ರಧಾನಿ ಮತ್ತು ಮಾಜಿ ಪ್ರಧಾನಿ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಉಭಯ ಪಕ್ಷಗಳ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ತಳಮಟ್ಟದಲ್ಲಿ ಬಿಜೆಪಿ – ಜೆಡಿಎಸ್‌ ಕಾರ್ಯಕರ್ತರು ಒಂದಾಗಬೇಕಿದ್ದು, ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆ.

ಅಲ್ಲದೆ, ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ಶಕ್ತಿ ಪ್ರದರ್ಶನ ಮಾಡಲಾಗಿದೆ. ಜತೆಗೆ ಸದಾ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿಕೊಂಡು ಬರುತ್ತಲೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಕಾಂಗ್ರೆಸ್‌ಗೆ ಮೋದಿ ಟಕ್ಕರ್ ಕೊಟ್ಟಿದ್ದಾರೆ. ಮೈಸೂರು- ಕೊಡಗು, ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಲು ಮನವಿ ಮಾಡಿರುವ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ವರ್ಚಸ್ಸಿಗೆ ಪೆಟ್ಟುಕೊಡುವ ತಂತ್ರಗಾರಿಕೆಯನ್ನು ಈ ಸಮಾವೇಶದ ಮೂಲಕ ರೂಪಿಸಿದ್ದರು. ಇನ್ನು ಹಾಸನ, ಮಂಡ್ಯ ಜಿಲ್ಲೆಗಳ ಇತಿಹಾಸದಲ್ಲೇ ಬಿಜೆಪಿ- ಜೆಡಿಎಸ್ ಕಾಂಬಿನೇಷನ್‌ನಲ್ಲಿ ಇದು ಮೊದಲ ಪ್ರಯೋಗವಾಗಿದೆ.

Exit mobile version