Site icon Vistara News

ವಿಸ್ತಾರ Explainer: Char Dham ಯಾತ್ರಾ ಸಾವುಗಳಿಗೆ ಕೋವಿಡ್‌ ಕಾರಣವೇ?

char dham pilgrimage

ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಚಾರ್‌ಧಾಮ್‌ ಯಾತ್ರೆ (char dham) ಮಾಡಬೇಕು ಎಂಬುದು ಭಾರತೀಯರಲ್ಲಿ ಹೆಚ್ಚಿನವರ ಕನಸು. ಈ ಬಾರಿ ಯಾತ್ರಿಕರ ಸಾವುಗಳ ಸಂಖ್ಯೆ ಮಾತ್ರ ಬೆಚ್ಚಿ ಬೀಳಿಸುವಂತಿದೆ. 27 ದಿನಗಳಲ್ಲಿ 108 ಸಾವುಗಳು ದಾಖಲಾಗಿವೆ.

ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ. ಜೀವನದಲ್ಲಿ ಒಂದು ಸಲವಾದರೂ ಈ ನಾಲ್ಕು ತಾಣಗಳ ದರ್ಶನ ಮಾಡಿ ಬರಬೇಕು ಅಂದುಕೊಂಡಿರುತ್ತಾರೆ ಬಹಳ ಮಂದಿ. ಆದರೆ ಈ ಚತುರ್ಧಾಮಗಳ ಯಾತ್ರೆಯಲ್ಲಿ ರಿಸ್ಕು ಕೂಡ ಇದೆ. ಅನೇಕ ಮಂದಿ ಆರೋಗ್ಯ ಬಿಗಡಾಯಿಸಿ ಮೃತಪಡುತ್ತಾರೆ. ಇವು ವರ್ಷಪೂರ್ತಿ ತೆರೆದಿರುವುದಿಲ್ಲ. ಮಳೆಗಾಲ ಹಾಗೂ ತೀವ್ರ ಚಳಿಗಾಲದಲ್ಲಿ ಈ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಂಜು ಮುಸುಕಿರುವುದರಿಂದ ಹಾಗೂ ಹಿಮ ಬೀಳುವುದರಿಂದ, ದೇವಾಲಯಗಳೂ ಹಿಮದಲ್ಲಿ ಮುಚ್ಚಿ ಹೋಗುತ್ತವೆ. ಈ ಸಂದರ್ಭದಲ್ಲಿ ದೇವಾಲಯಗಳು ಬಾಗಿಲು ಹಾಕುತ್ತವೆ. ಏಪ್ರಿಲ್‌ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಈ ನಾಲ್ಕೂ ದೇವಾಲಯಗಳೂ ಬಾಗಿಲು ತೆರೆಯುತ್ತವೆ. ಅಕ್ಟೋಬರ್‌ನಲ್ಲಿ ಅಂದರೆ ಸುಮಾರಾಗಿ ದೀಪಾವಳಿಯ ಹೊತ್ತಿಗೆ ಇವು ಬಾಗಿಲು ಹಾಕುತ್ತವೆ. ಆರು ತಿಂಗಳ ಕಾಲ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡಬಹುದು. ಈ ಪ್ರವಾಸೀ ಸೀಸನ್‌ ಹೊರತುಪಡಿಸಿ ನೀವು ಇಲ್ಲಿಗೆ ಹೋಗಲು ಬಯಸಿದರೆ ಕರೆದುಕೊಂಡು ಹೋಗೋರೂ ಯಾರೂ ಇರೋಲ್ಲ. ಸೀಸನ್‌ನ ಆರು ತಿಂಗಳಲ್ಲಿ ಸರಕಾರ ಕೂಡ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿರುತ್ತದೆ.

ಹಾಗಿದ್ದರೂ ಈ ಸಾವುಗಳು ಸಂಭವಿಸ್ತಾ ಇರೋದು ಯಾಕೆ? ಕಳೆದ ವರ್ಷ, ಅದಕ್ಕಿಂತ ಹಿಂದಿನ ವರ್ಷ ಸಾವುಗಳು ಸಂಭವಿಸಿರಲಿಲ್ವಾ? ನೋಡೋಣ.

ಕಳೆದ ವರ್ಷ ಹಾಗೂ ಅದಕ್ಕಿಂತ ಹಿಂದಿನ ವರ್ಷ, ಅಂದರೆ 2021 ಮತ್ತು 2020ರಲ್ಲಿ ಯಾವುದೇ ಗಣನೀಯವಾದ ಸಾವುನೋವುಗಳು ಸಂಭವಿಸಿರಲಿಲ್ಲ. ಯಾಕೆಂದರೆ ಕೊರೊನಾ ವೈರಸ್‌ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ದೇವಾಲಯಗಳಿಗೆ ಸಾಮೂಹಿಕ ತೀರ್ಥಯಾತ್ರೆಯನ್ನು ನಿರ್ಭಂಧಿಸಲಾಗಿತ್ತು. ಅಲ್ಪ ಪ್ರಮಾಣದ ಯಾತ್ರಿಕರು ಇಲ್ಲಿಗೆ ಭೇಟಿ ನೀಡಿದ್ದರು. ಆದರೆ 2019ರಲ್ಲಿ 90 ಯಾತ್ರಿಕರು, 2018ರಲ್ಲಿ 102 ಯಾತ್ರಿಕರು, 2017ರಲ್ಲಿ 112 ಯಾತ್ರಿಕರು ಮೃತಪಟ್ಟಿದ್ದರು. ಇದು ಯಾತ್ರೆ ನಡೆಯುವ ಒಟ್ಟಾರೆ ಆರು ತಿಂಗಳಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ.

ಹಾಗಿದ್ದರೆ ಈ ವರ್ಷ ಏನಾಗಿದೆ?

ಈ ವರ್ಷದ ಸಾವುಗಳ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ. ಈ ವರ್ಷ ನಿರೀಕ್ಷೆಯಂತೆ ಚಾರ್‌ಧಾಮ್ ಯಾತ್ರೆ ಮೇ 3ರಿಂದ ಆರಂಭವಾಗಿದೆ. ಮೇ 6ರಂದು ಕೇದಾರನಾಥ ಬಾಗಿಲು ತೆರೆದರೆ, ಬದರಿನಾಥ ಮೇ 8ರಂದು ತೆರೆಯಿತು. ಮೇ 3ರಿಂದಲೇ ಯಾತ್ರಿಕರು ಸಾಲಾಗಿ ನಡಿಗೆ ಶುರು ಮಾಡಿದ್ದಾರೆ. ಇದುವರೆಗಿನ 27 ದಿನಗಳಲ್ಲೇ 108 ಯಾತ್ರಿಕರು ನಡುದಾರಿಯಲ್ಲಿ ನಾನಾ ಸಮಸ್ಯೆಗಳಿಗೆ ಈಡಾಗಿ ಮೃತಪಟ್ಟಿದ್ದಾರೆ. ಆದರೆ ಯಾತ್ರೆ ಪೂರ್ತಿಯಾಗಲು ಇನ್ನೂ ಐದು ತಿಂಗಳಿದೆ. ಲಕ್ಷಾಂತರ ಮಂದಿ ಯಾತ್ರೆ ಹೊರಟಿದ್ದಾರೆ. ಅಷ್ಟರಲ್ಲಿ ಏನಾಗಬಹುದು? ಊಹೆ ಮಾಡುವುದು ಅಸಾಧ್ಯ.

ಇದನ್ನೂ ಓದಿ: Explainer: ಚಾರ್‌ಧಾಮ್‌ ಯಾತ್ರೆ: ಸಾವುಗಳಿಗೆ ಕಾರಣವೇನು, ತಡೆಯುವುದು ಹೇಗೆ?

ಮುತ್ತಿಕೊಂಡ ಜನಸಾಗರ

ಈ ವರ್ಷದ ಚತುರ್ಧಾಮ ತೀರ್ಥಯಾತ್ರೆಗೆ ಜನಸಾಗರವೇ ಹರಿದು ಬಂದಿದೆ. ಈ ಒಂದು ತಿಂಗಳಲ್ಲಿ ಕನಿಷ್ಠ 12 ಲಕ್ಷ ಮಂದಿ ನಾಲ್ಕೂ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ. ಹೋಲಿಕೆ ಮಾಡುವುದಾದರೆ, 2019ರಲ್ಲಿ 32 ಲಕ್ಷ ಯಾತ್ರಿಕರು ಹಾಗೂ 2018ರಲ್ಲಿ 26 ಲಕ್ಷ ಯಾತ್ರಿಕರು ಭೇಟಿ ಕೊಟ್ಟಿದ್ದರು. ಈ ವರ್ಷ ಅಂದಾಜು 50 ಲಕ್ಷಕ್ಕೂ ಅಧಿಕ ಜನ ಈ ನಾಲ್ಕು ತಾಣಗಳಿಗೆ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಕಲೆದ ಎರಡು ವರ್ಷ ಕೋವಿಡ್‌ಕಾರಣದಿಂದ ಯಾತ್ರೆಯನ್ನು ನಿರ್ಭಂಧಿಸಿದ್ದು, ಈ ವರ್ಷ ಯಾವುದೇ ನಿರ್ಬಂಧಗಳಿಲ್ಲದಿರುವುದು ಈ ನೂಕುನುಗ್ಗಲಿಗೆ ಕಾರಣ.

ಯಾವ್ಯಾವ ತಾಣ ಎಷ್ಟು ಎತ್ತರದಲ್ಲಿದೆ?

ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ- ಈ ನಾಲ್ಕು ತಾಣಗಳು ಕೂಡ ಉತ್ತರಾಖಂಡ ರಾಜ್ಯದಲ್ಲಿವೆ. ಹಿಮಾಲಯದ ಪ್ರಾಂತ್ಯದ ಎತ್ತರದ ಪ್ರದೇಶಗಳಲ್ಲಿವೆ. ಯಮುನೋತ್ರಿ ಮತ್ತು ಗಂಗೋತ್ರಿಗಳು ಉತ್ತರಕಾಶಿಯಲ್ಲಿ, ಕೇದಾರನಾಥವು ರುದ್ರಪ್ರಯಾಗದಲ್ಲಿದೆ ಮತ್ತು ಬದರಿನಾಥವು ಚಮೋಲಿಯಲ್ಲಿದೆ. ಇವುಗಳಲ್ಲಿ ಅತ್ಯಂತ ಎತ್ತರದಲ್ಲಿ ಇರುವ ಪ್ರದೇಶ ಅಂದರೆ ಕೇದಾರನಾಥ. ಸಮುದ್ರ ಮಟ್ಟದಿಂದ ಇದರ ಎತ್ತರ ಕೇದಾರನಾಥ 3,553 ಮೀಟರ್, ಅಥವಾ 11,700 ಅಡಿಗಳು. ನಂತರದ ಸ್ಥಾನದಲ್ಲಿ ಗಂಗೋತ್ರಿ 3,415 ಮೀಟರ್‌ ಅಥವಾ 11,204 ಅಡಿಗಳು, ಬದರಿನಾಥ 3,300 ಮೀಟರ್‌ಅಥವಾ 10,823 ಅಡಿಗಳು, ಕೊನೆಯದಾಗಿ ಯಮುನೋತ್ರಿ 3,293 ಮೀಟರ್‌ ಅಥವಾ 10,800 ಅಡಿಗಳ ಎತ್ತರದಲ್ಲಿವೆ. ಇಷ್ಟೊಂದು ಎತ್ತರದಲ್ಲಿ ಯಾತ್ರಿಕರ ಬಲಿ ಪಡೆಯಲು ಹಲವಾರು ಸಂಗತಿಗಳು ಕಾದು ಕುಳಿತಿರುತ್ತವೆ.

ಮೊದಲನೆಯದಾಗಿ ಇಲ್ಲಿನ ಹೈ ಅಲ್ಟಿಟ್ಯೂಡ್‌ ಅಥವಾ ಎತ್ತರ. ಯಾವುದೇ ಪರ್ವತ ಟ್ರೆಕ್ಕಿಂಗ್‌ನಲ್ಲಿ ಇರುವ ಅಪಾಯಗಳು ಇದರಲ್ಲಿಯೂ ಇರುತ್ತವೆ. ಹಿಮಾಲಯ ಪರ್ವತಗಳ ವಾತಾವರಣದಲ್ಲಿ ಕಡಿಮೆ ಆರ್ದ್ರತೆ, ಹೆಚ್ಚಿನ UV ವಿಕಿರಣ, ಹೆಚ್ಚಿನ ಗಾಳಿಯ ಒತ್ತಡ ಮತ್ತು ಕಡಿಮೆ ಆಮ್ಲಜನಕದ ಮಟ್ಟ- ಇದು ಮೈಯ ತಾಪಮಾನದಲ್ಲಿ ವೇಗವಾಗಿ ಕುಸಿತಕ್ಕೆ ಕಾರಣವಾಗುತ್ತದೆ. ಉತ್ತರಾಖಂಡದ ಆರೋಗ್ಯ ಇಲಾಖೆಯ ಪ್ರಕಾರ, ಇದುವರೆಗಿನ ಸಾವುಗಳಿಗೆ ಕಾರಣ ಎತ್ತರದ ಕಾಯಿಲೆ. ಸರಿಯಾದ ಮುಂಜಾಗರೂಕತೆಯಿಲ್ಲದ ಯಾರಾದರೂ ಈ ಅಪಾಯಕ್ಕೆ ಒಳಗಾಗಬಹುದು. ಆದರೆ ಹೃದಯದ ಸಮಸ್ಯೆಗಳನ್ನು ಹೊಂದಿರುವವರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಏನಿದು Mountain Sickness?

ಎತ್ತರದ ಕಾಯಿಲೆ (Mountain sickness), ಇದನ್ನು ಪರ್ವತದ ಕಾಯಿಲೆ ಎಂದೂ ಕರೆಯಲಾಗುತ್ತದೆ. ಇದು ಲಭ್ಯವಿರುವ ಆಕ್ಸಿಜನ್‌ ಮಟ್ಟಕ್ಕೆ ನಿಮ್ಮ ದೇಹ ಹೊಂದಿಕೊಳ್ಳದೆ ಹೋದಾಗ ಸಂಭವಿಸುವ ರೋಗಲಕ್ಷಣಗಳ ಒಂದು ಗುಂಪು. ನೀವು ಪರ್ವತದ ಎತ್ತರದ ಮಟ್ಟ ಹಾಗೂ ಆಕ್ಸಿಜನ್‌ ಮಟ್ಟಕ್ಕೆ ಹೊಂದಿಕೊಳ್ಳಲು ಅಗತ್ಯವಾದ ಸಾಕಷ್ಟು ಕಾಲದ ವಿಶ್ರಾಂತಿ ಪಡೆಯದೆ ಬೇಗಬೇಗನೆ ಪರ್ವತದ ಹೆಚ್ಚಿನ ಎತ್ತರದತ್ತ ಧಾವಿಸಿದರೆ ಹೀಗಾಗುತ್ತದೆ.

ಪರ್ವತದಲ್ಲಿ ಎತ್ತರಕ್ಕೆ ಹೋದಂತೆ ಗಾಳಿಯಲ್ಲಿರುವ ಆಕ್ಸಿಜನ್‌ ಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ಸ್ವಲ್ಪ ಎತ್ತರಕ್ಕೆ ಏರಿದ ಬಳಿಕ ಅಲ್ಲಿಗೆ ನಿಮ್ಮ ದೇಹ ಒಗ್ಗಿಕೊಳ್ಳಬೇಕು. ಅಲ್ಲಿನ ಗಾಳಿಯ ಒತ್ತಡಕ್ಕೆ ನಿಮ್ಮ ದೇಹ ಒಗ್ಗಿಕೊಂಡ ಬಳಿಕ ಮುಂದೆ ಚಲಿಸಬೇಕು. ನಿಮ್ಮ ದೇಹದ ತ್ರಾಣಕ್ಕಿಂತ ಹೆಚ್ಚಿನ ಎತ್ತರಕ್ಕೆ ಪ್ರಯಾಣಿಸಿದರೆ ದೇಹ ಕುಸಿಯುತ್ತದೆ. 2500 ಮೀಟರ್‌ಎತ್ತರ ಮೀರಿ ಪ್ರಯಾಣಿಸುವ ಯಾರಿಗಾದರೂ ಇದು ಸಂಭವಿಸಬಹುದು.

ತಲೆನೋವು, ತಲೆ ತಿರುಗುವಿಕೆ, ವಾಕರಿಕೆ, ವಾಂತಿ, ಆಯಾಸ, ಶಕ್ತಿಯ ನಷ್ಟ, ಉಸಿರಾಟದ ತೊಂದರೆ, ನಿದ್ರೆಯ ತೊಂದರೆಗಳು, ಹಸಿವಿನ ನಷ್ಟ ಮುಂತಾದವು ಈ ಸಮಸ್ಯೆಯ ಲಕ್ಷಣಗಳು. ರೋಗಲಕ್ಷಣಗಳು ಸಾಮಾನ್ಯವಾಗಿ ಎತ್ತರದ ಪ್ರದೇಶಕ್ಕೆ ಬಂದ ನಂತರ 12ರಿಂದ 24 ಗಂಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ದೇಹವು ಎತ್ತರದ ಬದಲಾವಣೆಗೆ ಸರಿಹೊಂದಿದ ಬಳಿಕ ಒಂದು ದಿನ ಅಥವಾ ಎರಡು ದಿನಗಳಲ್ಲಿ ಕಡಿಮೆಯಾಗುತ್ತದೆ. ಸೌಮ್ಯವಾದ ಲಕ್ಷಣಗಳು ಕಂಡುಬಂದರೆ ಅಪಾಯವಿಲ್ಲ.‌

ಇದನ್ನೂ ಓದಿ: ಚಾರ್‌ ಧಾಮ್‌ ಯಾತ್ರೆಯಲ್ಲಿ 100 ದಾಟಿದ ಸಾವು, 50 ವರ್ಷ ಮೇಲ್ಪಟ್ಟ ಯಾತ್ರಿಕರ ಆರೋಗ್ಯ ತಪಾಸಣೆ ಕಡ್ಡಾಯ

ಆದರೆ ರೋಗಲಕ್ಷಣಗಳು ಹೆಚ್ಚು ತೀವ್ರವಾಗಿದ್ದರೆ, ಸಮಯ ಕಳೆದಂತೆ ಸ್ಥಿತಿ ಬಿಗಡಾಯಿಸುತ್ತದೆ. ಉಸಿರಾಟದ ತೊಂದರೆ ಮತ್ತು ಸುಸ್ತು ಹೆಚ್ಚಾಗುತ್ತದೆ. ದೇಹದ ಬ್ಯಾಲೆನ್ಸ್‌ತಪ್ಪುವುದು, ವಾಕಿಂಗ್ ತೊಂದರೆಗಳು ಉಂಟಾಗಬಹುದು. ಚಿಕಿತ್ಸೆಯ ಹೊರತಾಗಿಯೂ ವಾಸಿಯಾಗಲು ನಿರಾಕರಿಸುವ ಭಯಾನಕ ತಲೆನೋವು, ಎದೆಯಲ್ಲಿ ಹಿಸುಕಿದಂತಾಗುವುದು- ಉಂಟಾಗಬಹುದು.

ಇಂತಹ ಪರಿಸ್ಥಿತಿಯಲ್ಲಿ, ವೈದ್ಯಕೀಯ ಸಹಾಯವನ್ನು ಪಡೆಯುವುದು ಅವಶ್ಯಕ. ಇಲ್ಲಿ ಕೆಟ್ಟ ಅಂಶವೆಂದರೆ, ಪರ್ವತ ಪ್ರಾಂತ್ಯಗಳಲ್ಲಿ ಸರಿಯಾದ ವೈದ್ಯಕೀಯ ನೆರವು ಸಿಗುವುದಿಲ್ಲ. ತೀರಾ ಎತ್ತರದಲ್ಲಿ, ಕಾಡುಗಳ ನಡುವೆ ಟ್ರೆಕ್ಕಿಂಗ್‌ಮಾಡುವಾಗ ಇದು ಸಾಮಾನ್ಯ. ವರದಿಗಳ ಪ್ರಕಾರ, ಈ ಬಾರಿ ಸಾವನ್ನಪ್ಪಿದ 108 ಜನರಲ್ಲಿ ಯಾರನ್ನೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿಲ್ಲ ಎಂದು ಸರ್ಕಾರ ಹೇಳಿದೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಪರ್ವತ ಕಾಯಿಲೆಗಳು ಈ ಸಾವುಗಳಿಗೆ ಕಾರಣ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯವಾಗಿ ಅನರ್ಹವಾಗಿರುವ ಯಾತ್ರಾರ್ಥಿಗಳು ಪ್ರಯಾಣಿಸದಂತೆ ಸಲಹೆ ನೀಡಲಾಗುತ್ತಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಯಾತ್ರಿಕರಿಗೆ ಆರೋಗ್ಯ ತಪಾಸಣೆ ಪ್ರಾರಂಭಿಸಿದೆ.

ಯಮುನೋತ್ರಿ

ಕೋವಿಡ್‌ಗೆ ಬಲಿಯಾದರೇ?

ಈ ವರ್ಷದ ಯಾತ್ರೆಯಲ್ಲಿ ಕಂಡುಬಂದ ಹೆಚ್ಚಿನ ಸಾವುಗಳಿಗೆ ಕೋವಿಡ್‌ ಕಾರಣ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಅಂದರೆ, ಈ ಸಾವಿಗೆ ಒಳಗಾದವರು ಇತ್ತೀಚೆಗೆ ಕೋವಿಡ್‌ಗೆ ತುತ್ತಾಗಿ ಚೇತರಿಸಿಕೊಂಡಿರಬಹುದು. ಅಥವಾ ಲಕ್ಷಣರಹಿತ ಕೋವಿಡ್‌ ಸೋಂಕಿತರಾಗಿರುವ ಸಾಧ್ಯತೆಯೂ ಇದೆ. ಇದರಿಂದ ಅವರ ಶ್ವಾಸಕೋಶ ಹಾಗೂ ಹೃದಯ ದುರ್ಬಲವಾಗಿರುವ ಸಾಧ್ಯತೆ ಇದೆ. ಪರ್ವತ ಪ್ರಾಂತ್ಯದ ಚಾರಣಕ್ಕೆ ಹೃದಯ ಮತ್ತು ಶ್ವಾಸಕೋಶ ಸದೃಢವಾಗಿರಬೇಕು. ಗಾಳಿಯಲ್ಲಿ ಕಡಿಮೆ ಆಕ್ಸಿಜನ್‌ ಮಟ್ಟ ಇರುವುದರಿಂದ ಶ್ವಾಸಕೋಶ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ವಾತಾವರಣ ತಣ್ಣಗಾಗಿರುವುದರಿಂದ ದೇಹದ ತಾಪಮಾನ ಕಾಪಾಡಿಕೊಳ್ಳಲು ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ದೇಹ ಹೊರಗಿನ ತಾಪಮಾನಕ್ಕೆ ಒಗ್ಗಿಕೊಳ್ಳುವುದಕ್ಕೂ ಮುನ್ನವೇ ಹತ್ತಾರು ಕಿಲೋಮೀಟರ್‌ಗಳಷ್ಟು ದೂರ ನಡೆಯುವುದು, ಹತ್ತುವುದು ಅಪಾಯಕಾರಿ. ಈ ಬಾರಿಯ ಶೇ.95ರಷ್ಟು ಸಾವುಗಳಿಗೆ ಕೋವಿಡ್‌ ಕಾರಣ ಎಂದು ಹೇಳಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮೂರನೇ ಕಾರಣ, ಯಾತ್ರಿಕರ ಪ್ರಾಯ ಹಾಗೂ ಕೋಮಾರ್ಬಿಡಿಟಿಗಳು. ಅಂದರೆ ಹೃದಯದ ಸಮಸ್ಯೆಗಳು ಅಥವಾ ಡಯಾಬಿಟಿಸ್‌ ಹೊಂದಿದವರು ಈ ಯಾತ್ರೆಗಳಲ್ಲಿ ಹೆಚ್ಚಿನ ರಿಸ್ಕ್‌ಗೆ ಒಳಗಾಗಿದ್ದಾರೆ. ರಕ್ತದೊತ್ತಡ ಹೊಂದಿದವರಲ್ಲಿ ಹೃದಯದ ಕಾರ್ಯವೈಖರಿ ಮತ್ತು ರಕ್ತಪರಿಚಲನೆ ನಿಧಾನವಾಗಬಹುದು. ಮಧುಮೇಹಿಗಳಲ್ಲಿ ಲ್ಯಾಕ್ಟಿಕ್‌ ಅಸಿಡೋಸಿಸ್‌ ಉಂಟಾಗುವುದರಿಂದ ಸಾವು ಸಂಭವಿಸಬಹುದು. ಗಟ್ಟಿಮುಟ್ಟಾಗಿರುವವರು, ನಿತ್ಯ ಜಿಮ್‌ಗೆ ಹೋಗುವವರು ಈ ಯಾತ್ರೆಯನ್ನು ಸುಲಭವಾಗಿ ಮುಗಿಸಬಹುದು ಎಂಬುದು ತಪ್ಪು ಕಲ್ಪನೆ. ಅಥ್ಲೆಟಿಕ್‌ ದೇಹಪ್ರಕೃತಿಯ ವ್ಯಕ್ತಿಗಳಿಗೆ ಹೆಚ್ಚಿನ ಆಕ್ಸಿಜನ್‌ ಬೇಕಾಗುತ್ತದೆ ಮತ್ತು ಅವರು ಕೂಡ ರಿಸ್ಕ್‌ನಲ್ಲೇ ಇರುತ್ತಾರೆ.

ನಾಲ್ಕನೇ ಕಾರಣ, ಯಾತ್ರಿಕರ ಒತ್ತಡ, ಗಡಿಬಿಡಿ ಇತ್ಯಾದಿಗಳು. ಮೂರು ವಾರಗಳಲ್ಲಿ 12 ಲಕ್ಷ ಮಂದಿ ಯಾತ್ರೆ ಮುಗಿಸಿದ್ದಾರೆ ಎಂದರೆ ಮಾರ್ಗದಲ್ಲಿ ಇರಬಹುದಾದ ಒತ್ತಡವನ್ನು ನೀವೇ ಊಹಿಸಿಕೊಳ್ಳಬಹುದು. ಇವುಗಳಲ್ಲೆಲ್ಲ ಕಷ್ಟಕರವಾದ ಕೇದಾರನಾಥಕ್ಕೆ ಹೋಗುವುದಕ್ಕೆ ನೀವು ಗೌರೀಕುಂಡದಿಂದ 16 ಕಿಲೋಮೀಟರ್‌ ಟ್ರೆಕ್ಕಿಂಗ್‌ ಮಾಡಬೇಕು. ಇದು ಬಹಳ ಕಡಿದಾದ ದಾರಿ. ಆದರೆ ಸೋನ್‌ಪ್ರಯಾಗದಿಂದ ಗೌರಿಕುಂಡಕ್ಕೆ ಖಾಸಗಿ ವಾಹನಗಳು ಹೋಗುವುದಿಲ್ಲ ಹಾಗೂ ಸೀಮಿತ ವಾಹನ ವ್ಯವಸ್ಥೆ ಇರುವುದರಿಂದ, ಈ 8 ಕಿಲೋಮೀಟರ್‌ ದೂರವನ್ನು ಕೂಡ ನಡೆದೇ ಕ್ರಮಿಸಬೇಕಾಗುತ್ತದೆ. ಒಟ್ಟಾರೆ 24 ಕಿಲೋಮೀಟರ್‌ ದೂರದ ಕಡಿದಾದ ನಡಿಗೆಯಲ್ಲಿ ಇಕ್ಕಟ್ಟಾದ ದಾರಿ ಮತ್ತು ಭಕ್ತರ ನೂಕುನುಗ್ಗಾಟ ಹೆಚ್ಚು. ವಿಶ್ರಮಿಸಿಕೊಳ್ಳಲು ಸೂಕ್ತ ವ್ಯವಸ್ಥೆಯೂ ಇಲ್ಲ. ಜೊತೆಗೆ ಕುದುರೆಯ ಮೇಲೆ ಹೋಗುವವರು ಕೂಡ ಪಾದಚಾರಿಗಳನ್ನು ತಳ್ಳಿಕೊಂಡೇ ಹೋಗುತ್ತಾರೆ. ಈ ಹದಿನಾರು ಕಿಲೋಮೀಟರ್‌ಗಳಲ್ಲಿ ಯಾತ್ರಿಕರು ಏರುವ ಎತ್ತರವು ನೂರಾರು ಮೀಟರ್‌ಗಳಷ್ಟು ಇರುತ್ತದೆ ಹಾಗೂ ಇದನ್ನು ಕಡಿಮೆ ಸಮಯದಲ್ಲಿ ಕ್ರಮಿಸಬೇಕು. ಆಕ್ಸಿಜನ್‌ ಮಟ್ಟ ಕಡಿಮೆಯಾಗುವುದು ಇಲ್ಲಿಯೇ. ಉತ್ತರಾಖಂಡ ರಾಜ್ಯ ಸರಕಾರ, ಸ್ಥಳದಲ್ಲಿ ತಾನು 112 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿರುವುದಾಗಿ ಹೇಳಿದೆ. ಆದರೆ ಲಕ್ಷಾಂತರ ಯಾತ್ರಿಕರಿಗೆ 112 ಆಂಬ್ಯುಲೆನ್ಸ್‌ಗಳು ಎಲ್ಲೆಲ್ಲಿಗೂ ಸಾಲದು. ಹಾಗೇ ಅದು ಒದಗಿಸ್ತಾ ಇರುವ ವೈದ್ಯಕೀಯ ಸಹಾಯವೂ ತೀರಾ ಪ್ರಾಥಮಿಕ ಮಟ್ಟದ್ದು. ದಾರಿಯಲ್ಲಿ ಹೃದಯದ ಭಾರಿ ಸಮಸ್ಯೆಗಳು ಕಂಡುಬಂದರೆ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಲು ಹೃಷಿಕೇಶಕ್ಕೇ ಕರೆದುಕೊಂಡು ಹೋಗಬೇಕು. ಹೀಗಾಗಿ ಚೇತರಿಸಿಕೊಳ್ಳೋಕೆ ಕೂಡ ಸಮಯವಿಲ್ಲ ಎಂಬ ಸನ್ನಿವೇಶ ಇದೆ.

ಬದರಿನಾಥ ದೇವಾಲಯ

ಹಾಗಿದ್ರೆ ಚಾರ್‌ಧಾಮ್‌ ಯಾತ್ರೆಗೆ ಮೊದಲು ತೆಗೆದುಕೊಳ್ಳಬೇಕಾದ ಮುಂಜಾಗರೂಕತೆಗಳು ಏನು?

ಹೃದ್ರೋಗ ಹೊಂದಿರುವ ರೋಗಿಗಳು ಮತ್ತು ಕೋವಿಡ್‌ನಿಂದ ಇತ್ತೀಚೆಗೆ ಚೇತರಿಸಿಕೊಂಡವರು ಈ ಯಾತ್ರೆಯನ್ನು ತ್ಯಜಿಸಬೇಕು ಅಥವಾ ಮುಂದೂಡಬೇಕು. ಅಂಥವರು ತೀರ್ಥಯಾತ್ರೆಗೆ ಹೋಗುತ್ತಿದ್ದರೆ, ಯಾವುದೇ ಆರೋಗ್ಯದ ಅಪಾಯಗಳನ್ನು ಗುರುತಿಸಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮೊಂದಿಗೆ ವೈದ್ಯಕೀಯ ಸಹಾಯವಾಣಿ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು. ಉಸಿರಾಟದ ತೊಂದರೆ ಇದ್ದಲ್ಲಿ ಸಣ್ಣ ಆಮ್ಲಜನಕ ಸಿಲಿಂಡರ್ ಅನ್ನು ಸಹ ಇಟ್ಟುಕೊಳ್ಳಬಹುದು.‌

ಇದನ್ನೂ ಓದಿ: ‌Explainer: ಇಷ್ಟೊಂದು ಹೆಚ್ಚಿದ್ದೇಕೆ GST ಕಲೆಕ್ಷನ್?

ಯಾತ್ರೆಯನ್ನು ಮಾಡುವವರು ದಾರಿಯುದ್ದಕ್ಕೂ ಒಂದು ದಿನದ ವಿಶ್ರಾಂತಿಗೆ ಅವಕಾಶ ನೀಡಬೇಕು. ಕಡಿಮೆಯಾದ ಆಮ್ಲಜನಕದ ಮಟ್ಟಕ್ಕೆ ದೇಹವು ಒಗ್ಗಿಕೊಳ್ಳಲು, ಪ್ರತಿದಿನ 800-1000 ಮೀಟರ್‌ಗಳಿಗಿಂತ ಹೆಚ್ಚಿನ ಎತ್ತರವನ್ನು ಹತ್ತಬಾರದು. ಹೃದಯದ ತೊಂದರೆಗಳು, ಉಸಿರಾಟದ ಕಾಯಿಲೆಗಳು, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಸನ್‌ಸ್ಕ್ರೀನ್‌, ಕಣ್ಣುಗಳಿಗೆ ಸನ್‌ಗ್ಲಾಸ್‌ಧರಿಸಬೇಕು. ಸಾಕಷ್ಟು ನೀರು ಕುಡಿಯುವುದು ಮತ್ತು ಆಹಾರ ಸೇವಿಸುವುದು ಕಡ್ಡಾಯ. ದೇಹದಲ್ಲಿ ಶಕ್ತಿಸಂಚಯ ಸಾಕಷ್ಟು ಇರುವಂತೆ ನೋಡಿಕೊಳ್ಳಲು ಹೆಚ್ಚಿನ ಆಹಾರ ಸೇವನೆ ಅಗತ್ಯ. ಎಣ್ಣೆತಿಂಡಿಗಳು, ಸ್ಮೋಕಿಂಗ್‌ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಕೆ ಹೇಳುತ್ತಾರೆ.

ಇನ್ನೂ ಐದು ತಿಂಗಳ ಕಾಲ ಚಾರ್‌ಧಾಮ ಯಾತ್ರೆ ಮುಂದುವರಿಯಲಿದೆ. ನೀವೂ ಕೂಡ ಇದಕ್ಕೆ ಪ್ಲಾನಿಂಗ್‌ ಮಾಡಿರಬಹುದು. ಹುಷಾರಾಗಿ ಹೋಗಿಬನ್ನಿ, ನಿಮ್ಮ ದೇಹದ ಬಗ್ಗೆ ಎಚ್ಚರ, ಮುಂಜಾಗರೂಕತೆ ಇರಲಿ. ಹ್ಯಾಪಿ ಜರ್ನಿ!

Exit mobile version