Site icon Vistara News

ಭಾರತದ ಸುತ್ತ ಚೀನಾ ಸಾಲದ ಸುಳಿ: ಭೌಗೋಳಿಕ ರಾಜಕೀಯ ಹಿಡಿತಕ್ಕೆ ಹೊಸ ಮಾರ್ಗ

China Flag

ಬೆಂಗಳೂರು: ಒಂದು ದೊಡ್ಡ ರಾಷ್ಟ್ರವನ್ನು ಕಟ್ಟಿಹಾಕಲು ಅದರ ಜತೆಗೆ ನೇರ ಹಣಾಹಣಿಗೆ ಇಳಿಯುವ ಬದಲಿಗೆ ಅದರ ನೆರೆಯ ಸಣ್ಣಪುಟ್ಟ ರಾಷ್ಟ್ರಗಳನ್ನು ನಿಯಂತ್ರಣಕ್ಕೆ ತಂದುಕೊಂಡು ಆಟವಾಡುವುದು ಅನೇಕ ವರ್ಷಗಳಿಂದ ನಡೆದುಕೊಂಡುಬಂದಿರುವ ತಂತ್ರ. ಇಂಥದ್ದೇ ತಂತ್ರದ ಕಾರಣಕ್ಕೆ ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿದ್ದರೆ ಇತ್ತ ಇಂಥದ್ದೇ ಕಾರಣಕ್ಕೆ ಚೀನಾವು ಭಾರತದ ಸುತ್ತಲಿನ ಸಣ್ಣಪುಟ್ಟ ದೇಶಗಳನ್ನು ತನ್ನ ಸಾಲದ ಸುಳಿಯಲ್ಲಿ ಸಿಲುಕಿಸಿ ನಿಯಂತ್ರಣಕ್ಕೆ ಪಡೆಯುತ್ತಿದೆ.

ಏಷ್ಯಾ ಖಂಡದಲ್ಲಿ ನಾಯಕತ್ವ ವಹಿಸಬಲ್ಲ ಎರಡು ರಾಷ್ಟ್ರಗಳೆಂದರೆ ಚೀನಾ ಹಾಗೂ ಭಾರತ. ತನ್ನ ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ವಿಶ್ವಮಟ್ಟದಲ್ಲಿ ಮಾನ್ಯತೆ ಗಳಿಸಬೇಕು ಎನ್ನುವುದು ಭಾರತದ ಮಾರ್ಗ. ಆದರೆ ಚೀನಾ ಮಾತ್ರ ಭಾರತವನ್ನು ವಿವಿಧ ವಾಮಮಾರ್ಗದ ಕಟ್ಟಿಹಾಕಲು ಪ್ರಯತ್ನಸುತ್ತಲೇ ಇದೆ.

ಸದ್ಯ ಶ್ರೀಲಂಕಾದಲ್ಲಿ ಎದುರಾಗಿರುವ ಸಂಕಷ್ಟಕ್ಕೆ ಚೀನಾದ ಈ ನೀರಿಯೇ ಕಾರಣ. ನೆರೆ ರಾಷ್ಟ್ರ ಶ್ರೀಲಂಕಾ ಆರ್ಥಿಕತೆ ಬಹುಮಟ್ಟಿಗೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಇತ್ತೀಷೆಗಷ್ಟೆ ಎಲ್‌ಟಿಟಿಇ ಉಗ್ರರ ಕಪಿಮುಷ್ಠಿಯಿಂದ ಹೊರಬರುತ್ತಿರುವ ರಾಷ್ಟ್ರದ ಆರ್ಥಿಕತೆ ಇನ್ನೂ ಹೆಚ್ಚಿನ ಅವಕಾಶಗಳಿಗೆ ತೆಎದುಕೊಂಡಿಲ್ಲ. ಈ ಸಂದರ್ಭವನ್ನೇ ಅವಕಾಶವನ್ನಾಗಿ ಬಳಸಿಕೊಳ್ಳಲು ಚೀನಾ ತನ್ನದೇ EXIM ಬ್ಯಾಂಕ್‌ ಮೂಲಕ ಸಾಲ ನೀಡಿದೆ. ತನ್ನ ದೇಶದ ಉತ್ಪನ್ನಗಳು ಮತ್ತು ಸೇವೆಗಳ ರಫ್ತನ್ನು ಉತ್ತೇಜಿಸಲು ಹಣಕಾಸು ನೆರವು ನೀಡುವ ಸಲುವಾಗಿ ಚೀನಾ ಸ್ಥಾಪಿಸಿಕೊಂಡಿರುವ ಬ್ಯಾಂಕ್‌ ಇದು. ಈ ಬ್ಯಾಂಕ್‌ ಮೂಲಕ ಶ್ರೀಲಂಕಾದ ಹೊಂಬಂಟೊಟ ಬಂದರು ನಿರ್ಮಾಣಕ್ಕೆ ಅಗಾಧ ಪ್ರಮಾಣದ ಸಾಲವನ್ನು ಚೀನಾ ನೀಡಿತು. ಆದರೆ ಈ ಬಂದರಿನಿಂದ ಹೇಗೆ ಆದಾಯದ ಮಾರ್ಗ ರೂಪಿಸಿಕೊಳ್ಳುವುದು ಎಂಭ ಅರಿವಿಲ್ಲದ ಶ್ರೀಲಂಕಾ, ಕೊನೆಗೆ ಸಾಲದ ಮೊತ್ತಕ್ಕೆ ಸರಿಹೊಂದಿಸಲು ಬಂದರನ್ನೇ ಚೀನಾಕ್ಕೆ ತೊಂಭತ್ತೊಂಭತ್ತು ವರ್ಷಕ್ಕೆ ಗುತ್ತಿಗೆ ನೀಡಿತು. ಇನ್ನು ಈ ಬಂದರಿಗೆ ಕೇವಲ ಹದಿನೆಂಟು ಕಿಲೋಮೀಟರ್‌ ದೂರದಲ್ಲಿ ದುಬಾರಿ ಬಡ್ಡಿ ಸಾಲ ನೀಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲಾಯಿತು. ಚೀನಾದಿಂದ ಬರೊಬ್ಬರಿ 6% ಬಡ್ಡಿ ದರದಲ್ಲಿ ಸಾಲ ಪಡೆದ ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದ ರಾಜಪಕ್ಸ, ಮತ್ತಲ ರಾಜಪಕ್ಷ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಇದು ವಿಶ್ವದಲ್ಲೆ ಅತ್ಯಂತ ಕಡಿಮೆ ವಿಮಾನಗಳು ಹಾರಾಡುವ ವಿಮಾನ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 12 ಸಾವಿರ ಚದರ ಅಡಿ ವಿಸ್ತೀರ್ಣದ ಟರ್ಮಿನಲ್‌ ಕಟ್ಟಡ, 12 ಚೆಕ್‌ ಇನ್‌ ಕೌಂಟರ್‌, ಎರಡು ಗೇಟ್‌ ಜತೆಗೆ ವಿಶ್ವದ ಅದಿ ದೊಡ್ಡ ಜೆಟ್‌ ವಿಮಾನವನ್ನು ನಿರ್ವಹಿಸುವ ಸಾಮರ್ಥ್ಯವುಳ್ಳ ಇಂತಹ ಸುಸಜ್ಜಿತ ವಿಮಾನ ನಿಲ್ದಾಣವನ್ನು ಸಾಲದ ಹಣದಲ್ಲಿ ಶ್ರೀಲಂಕಾ ನಿರ್ಮಿಸಿತು. ಆದರೆ ಅದರ ಬಳಕೆಯೇ ಅತ್ಯಂತ ಕಡಿಮೆಯಾಗಿ, ಬಹುತೇಕ ನಿಷ್ಕ್ರಿಯ ಎಂಬಂತಾಗಿದೆ.

ಇದೀಗ ಶ್ರೀಲಂಕಾದಲ್ಲಿ ಆರ್ಥಿಕತೆ ಅಧೋಗತಿಗೆ ಸಾಗಿ ಕೊನೆಗೆ ಸಾರ್ವಜನಿಕ ಪ್ರತಿಭಟನೆಗೆ ಕಾರಣವಾಗಿ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡುವ ಹಂತಕ್ಕೆ ಬಂದಿದೆ.

ಇದೇ ರೀತಿ ಪಾಕಿಸ್ತಾನ, ಬಾಂಗ್ಲಾದೇಶಗಳಿಗೂ ಅನೇಕ ಅನುಪಯುಕ್ತ ಯೋಜನೆಗಳಿಗೆ ಬೃಹತ್‌ ಪ್ರಮಾಣದ ಸಾಲವನ್ನು ಚೀನಾ ನೀಡುತ್ತಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವ ಈ ರಾಷ್ಟ್ರಗಳು ತಮಗೊಬ್ಬ ಆಪದ್ಬಾಂಧವ ಸಿಕ್ಕ ಎಂಬ ಉಮ್ಮೇದಿನಲ್ಲಿ ಸಾಲದ ಬಲೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯೇ ಸಂಪೂರ್ಣ ಕುಸಿದು ಅರಾಜಕತೆ ನಿರ್ಮಾಣವಾಗಿದೆ.

ತಾನು ವಿಶ್ವಾದ್ಯಂತ ಸರ್ಕಾರಗಳಿಗೆ ನೀಡಿರುವ ಸಾಲದ ಮೊತ್ತದಲ್ಲಿ ಶ್ರೀಲಂಕಾ ಪಾಲು ಅತ್ಯಂತ ಕಡಿಮೆ ಎಂದು ಚೀನಾ ಹೇಳುತ್ತದೆ ಹಾಗೂ ಅಧಿಕೃತ ಅಂಕಿ ಅಂಶಗಳನ್ನು ನೀಡುತ್ತದೆ. ಆದರೆ ಈ ಅಂಕಿ ಅಂಶಗಳಲ್ಲಿ ಕೇವಲ ಸರ್ಕಾರಿ ಸಾಲದ ಲೆಕ್ಕ ಮಾತ್ರವೇ ಇರುತ್ತದೆ. ಆದರೆ ಚೀನಾದ ಖಾಸಗಿ ಸಂಸ್ಥೆಗಳು, ಸರ್ಕಾರದ ಅಧೀನದ ಉದ್ದಿಮೆಗಳು ನೀಡಿದ ಬೃಹತ್‌ ಸಾಲದ ಲೆಕ್ಕ ಇರುವುದಿಲ್ಲ. ಸಾಲದ ಸುಳಿಯಲ್ಲಿ ದೇಶಗಳನ್ನು ಸಿಲುಕಿಸಿ, ಆ ದೇಶಗಳಲ್ಲಿ ತನ್ನ ಸೇನಾ ನೆಲೆಗಳನ್ನು ವಿಸ್ತರಣೆ ಮಾಡಿ ಮೂರೂ ದಿಕ್ಕಿನಿಂದ ಭಾರತವನ್ನು ಕಟ್ಟಿಹಾಕುವ ಗುರಿಯನ್ನು ಚೀನಾ ಹೊಂದಿದೆ.

ಫೆಬ್ರುಅರಿ 20ರಂದು ಮ್ಯೂನಿಷ್‌ನಲ್ಲಿ ನಡೆದ ಸಮ್ಮೇಳನದ ವೇಳೆ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್‌ ಮೆಮನ್‌ ಅವರು, ಚೀನಾ ನೀಡುತ್ತಿರುವ ರೀತಿಯಲ್ಲೆ ಬೃಹತ್‌ ಪ್ರಮಾಣದ ಸಾಲವನ್ನು ಕ್ವಾಡ್‌ ರಾಷ್ಟ್ರಗಳೂ ನಮ್ಮ ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡಬಲ್ಲವೇ ಎಂದು ಬಹಿರಂಗವಾಗಿಯೇ ಪ್ರಶ್ನಿಸಿದರು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದ ಭಾರತದ ವಿದೇಶಾಂಕಗ ಸಚಿವ ಎಸ್‌. ಜೈಶಂಕರ್‌ ಅವರು, ತಮಗೆ ಗತ್ಯವಿಲ್ಲ ಹಾಗೂ ಸುಸ್ಥಿರವಲ್ಲದ ಯೋಜನೆಗಳಿಗೆ ಸಾಲದ ಹಣವನ್ನು ಹೂಡಿಕೆ ಮಾಡುವ ಮುನ್ನ ದೇಶಗಳು ಮರು ಆಲೋಚನೆ ಮಾಡಬೇಕು ಎಂದು ತಿಳಿಸಿದರು. ಹಡಗೇ ಬಾರದ ಬಂದರು, ವಿಮಾನವೇ ಆಗಮಿಸದ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವುದು ಉತ್ತಮ ನಿರ್ಧಾರವಲ್ಲ ಎಂದು ಕಿವಿಮಾತು ಹೇಳಿದ್ದರು.

ಚೀನಾ ಹೆಚ್ಚಿನ ಸಾಲ ನೀಡಿ ನೆರೆ ದೇಶಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಭಾರತ ಈ ನಿಟ್ಟಿನಲ್ಲಿ ಸ್ಪರ್ಧೆಗೆ ಇಳಿಯುತ್ತಿಲ್ಲ. ಈ ದೇಶಗಳಿಗೇ ಜಾಗೃತಿ ಮೂಡಿಸುವ ಮೂಲಕ ಸುಸ್ಥಿರ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಿದೆ.

Exit mobile version