Site icon Vistara News

Delhi Riots | ಪುಷ್ಪಾ ಸ್ಟೈಲಲ್ಲಿ ಸನ್ನೆ ಮಾಡಿದ ಜಹಾಂಗೀರ್‌ಪುರಿ ಗಲಭೆ ಪ್ರಮುಖ ಆರೋಪಿ: 20 ಜನರ ಬಂಧನ

riots

ನವದೆಹಲಿ: ನವದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹನುಮಾನ್‌ ಜಯಂತಿ ಶೋಭಾಯಾತ್ರೆ ವೇಳೆ ಶನಿವಾರ ನಡೆದ ಗಲಭೆಗಳಿಗೆ (Jhangirpuri Riots) ಸಂಬಂಧಿಸಿದಂತೆ ಪ್ರಮುಖ ಆರೋಪಿ ಅನ್ಷರ್‌ (Anshar) ಸೇರಿ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಪ್ರಕಾರ. ಶೋಭಾಯಾತ್ರೆ ಶಾಂತಿಯುತವಾಗಿ ನಡೆಯುತ್ತಿತ್ತು. ಅದು ಮಸೀದಿಯೊಂದರ ಬಳಿ ಬಂದಾಗ ಅದರೊಳಗಿನಿಂದ ಬಂದ ಕೆಲವರು ಶೋಭಾಯಾತ್ರೆಯಲ್ಲಿದ್ದವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಎರಡೂ ಗುಂಪನ್ನು ಸಮಾಧಾನಪಡಿಸಲು ಪೊಲೀಸರು ಪ್ರಯತ್ನ ನಡೆಸಿದರು. ಇದ್ದಕ್ಕಿದ್ದಂತೆ ಒಂದು ಗುಂಪು ಘೋಷಣೆಗಳನ್ನು ಕೂಗುತ್ತ ಕಲ್ಲು ತೂರಾಟ ಆರಂಭಿಸಿತು.

ನಂತರ ಎರಡೂ ಕಡೆಗಳಿಂದ ಘೋಷಣೆಗಳು ಹಾಗೂ ಕಲ್ಲುತೂರಾಟ ನಡೆಯಿತು. ಈ ಸಮಯದಲ್ಲಿ ಪೊಲೀರು ಶಾಂತಿಗಾಗಿ ಮನವಿ ಮಾಡಿದರು. ಆದರೆ ಒಂದು ಗುಂಪು ಕಲ್ಲು ತೂರಾಟವನ್ನು ಮುಂದುವರಿಸಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು 40-50 ಅಶ್ರುವಾಯು ಶೆಲ್‌ ಪ್ರಯೋಗಿಸಿದರು.

ಈ ಸಂದರ್ಭದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಮೇಧಾ ಲಾಲ್‌ ಅವರ ಎಡಗೈಗೆ ಗಾಯವಾಗಿದೆ. ಹಾಗೂ 6-7 ಪೊಲೀಸ್‌ ಅಧಿಕಾರಿಗಳು ಮತ್ತು ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. 4-5 ಕಾರು, ಒಂದು ದ್ವಿಚಕ್ರ ವಾಹನಕ್ಕೆ ಈ ಸಂದರ್ಭದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು.

ಹೆಚ್ಚಿನ ಓದಿಗಾಗಿ: Explainer: ಏನಿದು ಪಿಎಫ್‌ಐ? ಯಾಕೆ ಬ್ಯಾನ್‌ ಒತ್ತಾಯ?

ಈ ಬಗ್ಗೆ ಟ್ವೀಟ್‌ ಮಾಡಿದ್ದ ದೆಹಲಿ ಪೊಲೀಸ್‌ ಆಯುಕ್ತ ರಾಕೇಶ್‌ ಆಸ್ಥಾನಾ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಜಹಾಂಗೀರ್‌ಪುರಿ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಲಾಗಿದೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾಗರಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದರು.

ಗಾಯಗೊಂಡ ಎಸ್‌ಐ ಮೇಧಾ ಲಾಲ್‌ ಅವರು ಹೇಳುವಂತೆ, ಘೋಷಣೆ ಕೂಗುತ್ತಿದ್ದವರ ಭಾಷೆಯ ಧಾಟಿ ಬಂಗಾಳಿ ಅಥವಾ ಬಾಂಗ್ಲಾದೇಶದ ಧಾಟಿಯನ್ನು ಹೋಲುತ್ತಿತ್ತು. ಪ್ರಾರಂಭದಲ್ಲಿ ಪೊಲೀಸರು 9 ಜನರನ್ನು, ನಂತರದಲ್ಲಿ 5 ಜನರನ್ನು ಬಂಧಿಸಿದ್ದರು. ಇದೀಗ ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ದೆಹಲಿ ಪೊಲೀಸರು ತಿಳಿಸಿರುವಂತೆ, ಪ್ರಮುಖ ಆರೋಪಿ ಅನ್ಷರ್‌ ವಿರುದ್ಧ ಈಗಾಗಲೆ ಹಲ್ಲೆ, ಜೂಜು ಸೇರಿ ಅನೇಕ ಪ್ರಕರಣಗಳು ದಾಖಲಾಗಿವೆ. ಸದ್ಯ ಆತ ಪೊಲೀಸ್‌ ಬಂಧನದಲ್ಲಿದ್ದು, ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ. ಇದೀ ವೇಳೆ, ಬಂಧಿತರಾಗಿರುವ ಆರೋಪಿಗಳ ಪೋಷಕರು ಹೇಳಿಕೆ ನೀಡಿದ್ದಾರೆ. ತಮ್ಮ ಮಕ್ಕಳ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ, ಅವರೆಲ್ಲರೂ ಅಮಾಯಕರು ಎಂದು ತಿಳಿಸಿದ್ದಾರೆ.

ಪುಷ್ಪಾ ಸ್ಟೈಲಲ್ಲಿ ನಡೆದ ಅನ್ಷರ್‌

ಆರೋಪಿ ಅನ್ಷರ್‌ ತನಗೆ ಈ ಕೃತ್ಯ ಎಸಗಿದ್ದಕ್ಕೆ ಯಾವುದೇ ಹಿಂಜರಿಕೆ ಇಲ್ಲ ಎನ್ನುವುದನ್ನು ತೋರ್ಪಡಿಸಿದ್ದಾನೆ. ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿರುವಾಗ ಮಾಧ್ಯಮಗಳ ಕ್ಯಾಮೆರಾ ಇರುವುದನ್ನು ಗಮನಿಸಿದ್ದಾನೆ. ಈ ಸಮಯದಲ್ಲಿ ಪುಷ್ಪಾ ಸಿನಿಮಾದಲ್ಲಿ ನಾಯಕನ ರೀತಿ ಕೈಯಿಂದ ಆಕ್ಷನ್‌ ಮಾಡಿ ನಗುನಗುತ್ತ ಮುನ್ನಡೆದಿದ್ದಾನೆ. ಇದೇ ಅನ್ಷರ್‌, ಈ ಹಿಂದೆ ನವದೆಹಲಿಯಲ್ಲಿ ಸಿಎಎ ವಿರುದ್ಧದ ಗಲಭೆಗಳ ಸಂದರ್ಭದಲ್ಲೂ ಜಹಾಂಗೀರ್‌ಪುರಿಯಿಂದ ಶಹೀನ್‌ಬಾಘ್‌ಗೆ ಜನರನ್ನು ಕರೆದೊಯ್ದಿದ್ದ ಮಾಸ್ಟರ್‌ ಮೈಂಡ್‌ ಎಂದು ಆಮ್‌ ಆದ್ಮಿ ಪಕ್ಷದ ಮಾಜಿ ಶಾಸಕ ಹಾಗೂ ಇದೀಗ ಬಿಜೆಪಿಯಲ್ಲಿರುವ ಕಪಿಲ್‌ ಮಿಶ್ರಾ ಆರೋಪಿಸಿದ್ದಾರೆ. ಇಡೀ ಘಟನೆ ನಡೆಯಲು ಭಾರತೀಯ ಜನತಾ ಪಕ್ಷವೇ ಕಾರಣ ಎಂದು ಆಮ್‌ ಆದ್ಮಿ ಪಕ್ಷ ಆರೋಪ ಮಾಡಿದೆ.

Exit mobile version