Site icon Vistara News

Indian National: ರಷ್ಯಾದಲ್ಲಿ ಉಕ್ರೇನ್‌ ವಾಯುದಾಳಿಗೆ ಭಾರತದ ಯುವಕ ಬಲಿ

Ukraine Air Strike

23-year-old Indian national hired as security helper killed in Russia-Ukraine war

ಮಾಸ್ಕೊ: ರಷ್ಯಾ ಹಾಗೂ ಉಕ್ರೇನ್‌ ಮಧ್ಯೆ ಸಮರ (Russia Ukraine War) ನಡೆಯುತ್ತಿದ್ದು, ಭಾರತೀಯ ಯುವಕರನ್ನು ರಷ್ಯಾ ಸೇನೆಯ ಸಹಾಯಕ್ಕಾಗಿ ನೇಮಿಸಿಕೊಂಡಿದೆ ಎಂಬ ವರದಿಗಳು ಕೇಳಿಬಂದ ಬೆನ್ನಲ್ಲೇ ರಷ್ಯಾದಲ್ಲಿ ಉಕ್ರೇನ್‌ ಮಾಡಿದ ಡ್ರೋನ್‌ ದಾಳಿಯಲ್ಲಿ (Ukraine Air Strike) ಭಾರತ ಮೂಲದ ಯುವಕನೊಬ್ಬ ಮೃತಪಟ್ಟಿದ್ದಾನೆ. ರಷ್ಯಾ ಹಾಗೂ ಉಕ್ರೇನ್‌ ಗಡಿಯಲ್ಲಿ ನಡೆದ ದಾಳಿಯಲ್ಲಿ ಭಾರತದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಗುಜರಾತ್‌ನ ಸೂರತ್‌ ಜಿಲ್ಲೆಯ ಹೇಮಿಲ್‌ ಅಶ್ವಿನ್‌ಭಾಯಿ ಮಂಗುಕಿಯಾ ಎಂಬ ಯುವಕನು ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ರಷ್ಯಾದ ಸೇನೆಯ ಸಹಾಯಕನಾಗಿ 2023ರ ಡಿಸೆಂಬರ್‌ನಲ್ಲಿ ಸೇರ್ಪಡೆಯಾಗಿದ್ದ. ಈತನು ಸೇನೆಯ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ನಿಗದಿತ ಗುರಿಗಳ ಮೇಲೆ ಉಕ್ರೇನ್‌ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಭಾರತದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಸಹಾಯಕ್ಕೆ ಮೊರೆ ಹೋದ ಪೋಷಕರು

ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ರಷ್ಯಾ ಪರವಾಗಿ ಕೆಲಸ ಮಾಡುತ್ತಿರುವ ಭಾರತದ ಯುವಕರನ್ನು ರಕ್ಷಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಯುವಕರ ಪೋಷಕರು ಮನವಿ ಮಾಡಿದ್ದಾರೆ. ಭಾರತೀಯ ಯುವಕರಿಗೆ ಹಣದ ಆಮಿಷವೊಡ್ಡಿ, ಅವರನ್ನು ಸೇನೆಯ ಏಜೆಂಟ್‌ಗಳನ್ನಾಗಿ ರಷ್ಯಾ ನೇಮಕ ಮಾಡಿಕೊಂಡಿದೆ. ಇವರನ್ನು ರಕ್ಷಿಸಿ, ಭಾರತಕ್ಕೆ ಕಳುಹಿಸಬೇಕು ಎಂದು ಯುವಕರ ಪೋಷಕರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ಬಗ್ಗೆ ಅಮೆರಿಕದ ಪ್ರಶ್ನೆಗೆ ‘ಸ್ಮಾರ್ಟ್’‌ ಉತ್ತರ ಕೊಟ್ಟ ಜೈಶಂಕರ್; ಏನದು?

ರಷ್ಯಾ ಸೇನೆಯ ಸಹಾಯಕರಾಗಿ ಭಾರತದ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಹೇಳಿದ್ದರು. “ರಷ್ಯಾ ಸೇನೆಯ ಸಹಾಯಕರಾಗಿ ಭಾರತದ ಕೆಲ ಯುವಕರನ್ನು ನೇಮಿಸಲಾಗಿದೆ ಎಂಬುದು ಗೊತ್ತಾಗಿದೆ. ರಷ್ಯಾ ಅಧಿಕಾರಿಗಳ ಜತೆ ಈ ಕುರಿತು ಭಾರತದ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಭಾರತದ ಯುವಕರು ರಷ್ಯಾ ಸೇನೆಗೆ ನೆರವು ನೀಡುವ ಮುನ್ನ ಎಚ್ಚರದಿಂದ ಇರಬೇಕು” ಎಂದು ಹೇಳಿದ್ದರು. ಭಾರತದ ಸುಮಾರು 21 ಯುವಕರು ರಷ್ಯಾ ಸೇನೆಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version