Site icon Vistara News

Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ ಬ್ಯಾನ್!

Everest Spices

After Singapore, Hong Kong Bans Sale Of MDH, Everest Spices

ಸಿಟಿ ಆಫ್‌ ವಿಕ್ಟೋರಿಯಾ: ಸಿಂಗಾಪುರದಲ್ಲಿ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest Spices) ಫಿಶ್ ಕರಿ ಮಸಾಲಾ (Fish Curry Masala) ಮಾರಾಟ ನಿಷೇಧಗೊಳಿಸಿದ ಬೆನ್ನಲ್ಲೇ, ಹಾಂಕಾಂಗ್‌ನಲ್ಲೂ (Hong Kong) ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹಾಗಾಗಿ, ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ. ಇದರ ಪರಿಣಾಮ ಭಾರತದ ಉತ್ಪನ್ನಗಳ ಮೇಲೂ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್‌ ರಾಸಾಯನಿಕ ಇರುವ ಕಾರಣ ಹಾಂಕಾಂಗ್‌ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಎಂಡಿಎಚ್‌ನ ಕರಿ ಪೌಡರ್‌, ಮಿಕ್ಸ್ಡ್‌ ಮಸಾಲಾ ಪೌಡರ್‌ ಹಾಗೂ ಸಾಂಬಾರ್‌ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.

“ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್‌ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್‌ ಎಥಿಲೀನ್‌ ಆಕ್ಸೈಡ್‌ ಪತ್ತೆಯಾಗಿದೆ. ಈ ಆಕ್ಸೈಡ್‌ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್‌ ಕಾರಕ ಕಾರ್ಸಿನೋಜೆನಿಕ್‌ ರಾಸಾಯನಿಕವೂ ಪತ್ತೆಯಾಗಿದೆ. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ” ಎಂಬುದಾಗಿ ಹಾಂಕಾಂಗ್‌ನ ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್‌ 5ರಂದೇ ಆದೇಶ ಹೊರಡಿಸಿದೆ.

ಕ್ಯಾನ್ಸರ್‌ ಕುರಿತು ಸಂಶೋಧನೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೇ ಎಥಿಲೀನ್‌ ಆಕ್ಸೈಡ್‌ನ ಅಪಾಯದ ಕುರಿತು ವರದಿ ನೀಡಿದೆ. ಇದು ಕ್ಯಾನ್ಸರ್‌ ಕಾರಕ ಎಂಬುದಾಗಿ ಜಾಗತಿಕ ಸಂಸ್ಥೆ ತಿಳಿಸಿದೆ. ಹಾಗಾಗಿ, ನಾಲ್ಕೂ ಉತ್ಪನ್ನಗಳ ಸಂಗ್ರಹ, ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹಾಂಕಾಗ್‌ ತಿಳಿಸಿದೆ. ಅನುಮತಿ ನೀಡಿದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿ ಇಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಕೂಡ ಎವರೆಸ್ಟ್‌ ಫಿಶ್‌ ಕರಿ ಮಸಾಲಾ ನಿಷೇಧಿಸುವಾಗ ತಿಳಿಸಿತ್ತು.

ಇದನ್ನೂ ಓದಿ: Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Exit mobile version