ಇಸ್ಲಾಮಾಬಾದ್/ನವದೆಹಲಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನಿಗಾಗಿ ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ (Pakistan) ತೆರಳಿ, ಪ್ರಿಯತಮ ನಸ್ರುಲ್ಲಾನನ್ನು ಮದುವೆಯಾದ (Anju Love Story) ರಾಜಸ್ಥಾನದ ಅಂಜು ಈಗ ಉಲ್ಟಾ ಹೊಡೆದಿದ್ದಾರೆ. “ನಾನಿಲ್ಲಿ ಖುಷಿಯಿಂದ ಇಲ್ಲ, ನನ್ನಿಂದ ತಪ್ಪಾಗಿದೆ. ಹಾಗಾಗಿ, ನಾನು ಭಾರತಕ್ಕೆ ವಾಪಸ್ ಬರುತ್ತೇನೆ” ಎಂಬುದಾಗಿ ಅಂಜು ಹೇಳಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
“ಪಾಕಿಸ್ತಾನದಲ್ಲಿ ಎಲ್ಲವೂ ಚೆನ್ನಾಗಿದೆ. ನಾನು ಬೇರಾವುದೋ ಆಲೋಚನೆಗಳನ್ನು ಇಟ್ಟುಕೊಂಡು ಇಲ್ಲಿಗೆ ಬಂದಿದೆ. ಆದರೆ, ನಾನಿಲ್ಲಿ ಖುಷಿಯಿಂದ ಇಲ್ಲ. ನಾನು ಮಾಡಿದ ತಪ್ಪಿನ ಅರಿವಾಗಿದೆ. ಇಲ್ಲಿ ನಡೆದಿರುವುದಕ್ಕೆ ಭಾರತದಲ್ಲಿ ನನ್ನ ಕುಟುಂಬಸ್ಥರು ಅವಮಾನಿತರಾಗಿದ್ದಾರೆ. ಅವರು ನನ್ನಿಂದ ತೊಂದರೆ ಅನುಭವಿಸಿದ್ದಾರೆ. ನನ್ನ ಮಕ್ಕಳ ಮುಖವನ್ನು ನೆನೆದರೆ ನನಗೆ ಸಂಕಟವಾಗುತ್ತಿದೆ. ಹಾಗಾಗಿ, ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ” ಎಂಬುದಾಗಿ ಅಂಜು ಹೇಳಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ನನ್ನ ಬಳಿ ಎಲ್ಲದಕ್ಕೂ ಉತ್ತರ ಇದೆ
“ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ. ನಾನೊಬ್ಬಳೇ ಎಲ್ಲವನ್ನೂ ಎದುರಿಸುತ್ತೇನೆ. ಮಾಧ್ಯಮದವರಿಗೆ ನಡೆದ ಎಲ್ಲ ಘಟನೆಯನ್ನು ಹೇಳುತ್ತೇನೆ. ಅವರ ಎಲ್ಲ ಪ್ರಶ್ನೆಗಳಿಗೂ ನನ್ನ ಬಳಿ ಉತ್ತರವಿದೆ. ಪಾಕಿಸ್ತಾನದಲ್ಲಿ ನನ್ನ ಮೇಲೆ ಯಾವುದೇ ರೀತಿಯ ಒತ್ತಡ, ಒತ್ತಾಯ ಹೇರಿಲ್ಲ ಎಂಬುದನ್ನು ಹೇಳಲು ಇಚ್ಛಿಸುತ್ತೇನೆ. ನಾನು ಪಾಕಿಸ್ತಾನಕ್ಕೆ ಬಂದಿದ್ದು ನನ್ನ ನಿರ್ಧಾರದಿಂದಲೇ ಹೊರತು, ಒತ್ತಾಯಕ್ಕಲ್ಲ. ಮಾಧ್ಯಮಗಳ ಒತ್ತಡದಿಂದಾಗಿ ನಾನು ಪಾಕಿಸ್ತಾನಕ್ಕೆ ಬಂದ ಆರಂಭದಲ್ಲೇ ವಾಪಸಾಗಲು ಆಗಲಿಲ್ಲ. ನಾನು ನನ್ನ ಮಕ್ಕಳನ್ನು ನೋಡಬೇಕು. ಹಗಲು-ರಾತ್ರಿ ಅವರ ನೆನಪು ಕಾಡುತ್ತಿದೆ” ಎಂದು ಅಂಜು ಬೇಸರ ವ್ಯಕ್ತಪಡಿಸಿದ್ದಾರೆ.
ಅಂಜು ನಸ್ರುಲ್ಲಾ ವೈರಲ್ ವಿಡಿಯೊ
ಇದನ್ನೂ ಓದಿ: Anju Love Story: ನನ್ನ ಮಗಳು ಸತ್ತಂತೆ ಎಂದಿದ್ದ ತಂದೆಗೆ ಕರೆ ಮಾಡಿದ ಅಂಜು; ಆಕೆ ಹೇಳಿದ್ದೇನು?
ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೋದ ಅಂಜು ಇಸ್ಲಾಂಗೆ ಮತಾಂತರವಾಗಿದ್ದಾರೆ. ಮತಾಂತರದ ಬಳಿಕವೇ ಅವರು ನಸ್ರುಲ್ಲಾನನ್ನು ಮದುವೆಯಾಗಿದ್ದು, ಈಗ ಅವರ ಹೆಸರು ಫಾತಿಮಾ ಆಗಿದೆ. ಅಂಜು ಹಾಗೂ ನಸ್ರುಲ್ಲಾ ಅವರ ಪ್ರಿ ವೆಡ್ಡಿಂಗ್ ಶೂಟ್ ವಿಡಿಯೊ ಕೂಡ ಭಾರಿ ವೈರಲ್ ಆಗಿತ್ತು. ಇನ್ನು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋದ ಅಂಜು ನಮ್ಮ ಪಾಲಿಗೆ ಸತ್ತ ಹಾಗೆ ಎಂದು ಆಕೆಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಇಷ್ಟೆಲ್ಲ ವಿರೋಧ ಎದುರಿಸುತ್ತಿರುವ ಅಂಜು ಯಾವಾಗ ಭಾರತಕ್ಕೆ ಬರುತ್ತಾರೆ ಎಂಬ ಕುರಿತು ಮಾಹಿತಿ ಇಲ್ಲ.