Site icon Vistara News

Bihar politics | ಬಿಹಾರ ಕ್ಯಾಬಿನೆಟ್‌ನಲ್ಲಿ ಆರ್‌ಜೆಡಿಗೆ ಸಿಂಹಪಾಲು?

nitish

ಪಟನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರದಲ್ಲಿ ಬಿಹಾರದ ಹೊಸ ಕ್ಯಾಬಿನೆಟ್ 32 ಸಚಿವರನ್ನು ಹೊಂದಿರಲಿದ್ದು, ಅದರಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 15ರಿಂದ 16 ಸ್ಥಾನಗಳ ಸಿಂಹಪಾಲು ಪಡೆಯುವ ಸಾಧ್ಯತೆಯಿದೆ.

ಇನ್ನೆರಡು ಮೂರು ದಿನಗಳಲ್ಲಿ ಸಚಿವರು ಮತ್ತು ಖಾತೆಗಳ ಹೆಸರು ಅಂತಿಮಗೊಳ್ಳಲಿದ್ದು, ಚಿತ್ರಣ ಸ್ಪಷ್ಟವಾಗಲಿದೆ. ಆಗಸ್ಟ್ 15ರ ಮೊದಲು ವಿಸ್ತರಣೆ ಪೂರ್ಣಗೊಳ್ಳಲಿದೆ ಎಂದು ಆರ್‌ಜೆಡಿ ನಾಯಕರೊಬ್ಬರು ಹೇಳಿದ್ದಾರೆ.

ಬುಧವಾರ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲಿ 30 ಸದಸ್ಯರಿದ್ದರು.

ಆಡಳಿತಾರೂಢ ಮಹಾಘಟಬಂಧನ್ ನಾಯಕರ ಪ್ರಕಾರ, ಜೆಡಿಯು 13ರಿಂದ 14 ಸಚಿವರನ್ನು ಹೊಂದುವ ಸಾಧ್ಯತೆಯಿದೆ. ಮುಖ್ಯಮಂತ್ರಿ ನಿತೀಶ್‌ ಅವರೇ ಗೃಹ ಇಲಾಖೆಯನ್ನೂ ಹೊಂದಿರುತ್ತಾರೆ. ಕಾಂಗ್ರೆಸ್‌ಗೆ ಎರಡು-ಮೂರು ಸ್ಥಾನಗಳು, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಒಂದು ಕ್ಯಾಬಿನೆಟ್ ಸ್ಥಾನವನ್ನು ಪಡೆಯಬಹುದು.

ಸಮ್ಮಿಶ್ರ ಸರ್ಕಾರದ ಹಿರಿಯ ಪಾಲುದಾರನಾಗಿರುವ ಆರ್‌ಜೆಡಿ ಕ್ಯಾಬಿನೆಟ್‌ನಲ್ಲಿ ಅತ್ಯಧಿಕ ಪಾಲನ್ನು ಹೊಂದಿರಲಿದ್ದು, ಇತರರು ತಮ್ಮ ಶಾಸಕರ ಸಂಖ್ಯೆಗೆ ಅನುಗುಣವಾಗಿ ಪಾಲನ್ನು ಪಡೆಯುವ ಸಾಧ್ಯತೆಯಿದೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಪಕ್ಷದ ಶಾಸಕರ ಸಂಖ್ಯೆ, ಸಮ್ಮಿಶ್ರದಲ್ಲಿ ರಾಜಕೀಯವಾಗಿ ಪಕ್ಷದ ಪ್ರಾಮುಖ್ಯತೆ, ರಾಜ್ಯದ ವಿವಿಧ ಜಾತಿ ಗುಂಪುಗಳು ಮತ್ತು ಪ್ರದೇಶ ಪ್ರಾತಿನಿಧ್ಯ ಗಮನಿಸಲಾಗುತ್ತದೆ.

ಇದನ್ನೂ ಓದಿ: 2017ರಲ್ಲಿ ನಡೆದ ತಪ್ಪನ್ನು ಮರೆಯೋಣ ಎಂದ ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್

ಐವರು ಶಾಸಕರ ಒಂದು ಸಚಿವ ಸ್ಥಾನ ಎಂಬುದು ಕೂಡ ಸಂಪುಟದಲ್ಲಿ ವಿವಿಧ ಮಿತ್ರಪಕ್ಷಗಳ ಪಾಲು ನಿರ್ಧರಿಸುವ ಸೂತ್ರಗಳಲ್ಲಿ ಒಂದು. “ಸಚಿವ ಸ್ಥಾನ ಹಂಚಿಕೆಯಲ್ಲಿ ಪಕ್ಷಗಳ ನಡುವೆ ಯಾವುದೇ ವಿವಾದವಿಲ್ಲ” ಎಂದು ಆಡಳಿತಾರೂಢ ಮೈತ್ರಿಕೂಟದ ನಾಯಕರೊಬ್ಬರು ಹೇಳಿದ್ದಾರೆ. ಆರ್‌ಜೆಡಿ ಗೃಹ, ರಸ್ತೆ ನಿರ್ಮಾಣ, ಹಣಕಾಸು, ಆರೋಗ್ಯ, ಗಣಿ ಮತ್ತು ಅರಣ್ಯ ಇಲಾಖೆಗಳ ಮೇಲೆ ಕಣ್ಣಿಟ್ಟಿದೆ. ಜೆಡಿಯು ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಕೆಲಸಗಳು, ಅಬಕಾರಿ, ನೋಂದಣಿ ಮತ್ತು ಮಾಹಿತಿ, ಸಾರ್ವಜನಿಕ ಸಂಪರ್ಕ ಇಲಾಖೆ (ಐಪಿಆರ್‌ಡಿ) ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್‌ಗೆ ಸಹಕಾರ, ಭೂಕಂದಾಯ ಸೇರಿ ಒಂದೆರಡು ಇಲಾಖೆಗಳು ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ.

ಆರ್‌ಜೆಡಿ ಸ್ಪೀಕರ್ ಹುದ್ದೆಗೂ ಆಕಾಂಕ್ಷಿಯಾಗಿದೆ. ಪಕ್ಷದ ಹಿರಿಯ ನಾಯಕ ಅವಧ್ ಬಿಹಾರಿ ಚೌಧರಿ ಅವರು ಈ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಮೂರು ಎಡಪಕ್ಷಗಳು- ಸಿಪಿಐ-ಎಂಎಲ್ (ಲಿಬರೇಶನ್), ಸಿಪಿಐ ಮತ್ತು ಸಿಪಿಐ (ಎಂ) ಮಂತ್ರಿಮಂಡಲ ಸೇರುವ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.

ಇದನ್ನೂ ಓದಿ:‌ ನಾವು ಮೋದಿಯನ್ನು 2024ರ ಚುನಾವಣೆಯಲ್ಲಿ ನೋಡಿಕೊಳ್ತೇವೆ: ನಿತೀಶ್​ ಕುಮಾರ್ ಆವಾಜ್​

Exit mobile version