ಪಟನಾ: ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬ ಫೇಮಸ್ಸು. ಛತ್ತೀಸ್‌ಗಢ ಬಲರಾಮ್ ಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಅವರು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಸ್ಫೂರ್ತಿದಾಯಕ ಕಥೆಗಳು, ವ್ಯಕ್ತಿ ಚಿತ್ರಗಳು ಎಲ್ಲರಿಗೂ ಅಚ್ಚುಮೆಚ್ಚು ಮತ್ತು ಪ್ರೇರಣಾದಾಯಕ. ತಿಂಗಳ ಹಿಂದಷ್ಟೇ ಅವರು ತಮ್ಮ ಗೆಳೆಯ, ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಸುದ್ದಿ ಮಾಡಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದವರಿಗೂ ಭವ್ಯ ಭವಿಷ್ಯವಿದೆ ಎನ್ನುವುದನ್ನು ಈ ಮೂಲಕ ಅವರ ಯುವಜನರಿಗೆ ಸಾರಿ ಹೇಳಿದ್ದರು.
ಇಂಥ ಮೋಟಿವೇಷನಲ್ ಆಫೀಸರ್ ಅವನೀಶ್ ಶರಣ್ ಈ ಬಾರಿ ತಮ್ಮದೇ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡನ್ನು ಹಂಚಿಕೊಂಡು ಸೌಂಡ್ ಮಾಡಿದ್ದಾರೆ. ಅವರು ಎಸ್ಸೆಸ್ಸೆಲ್ಸಿಯಲ್ಲಿ ಪಡೆದಿರುವ ಅಂಕ ನೋಡಿದರೆ, ಅಷ್ಟೇ ಅಂಕ ಪಡೆದರೂ ಎಂಥಾ ಸಾಧನೆ ಮಾಡಿದ್ದಾರಲ್ಲಾ ಅಂತ ಎಲ್ಲರಿಗೂ ಅನಿಸದಿರದು ಮತ್ತು ಅದೆಷ್ಟೋ ಜನರಿಗೆ ಇದು ಸ್ಫೂರ್ತಿಯಾಗಲಿದೆ.
ಅವನೀಶ್ ಅವರ ಟ್ವೀಟ್ ಗೆ ಇದುವರೆಗೂ ಲಕ್ಷಾಂತರ ಲೈಕ್‌ಗಳು ಬಂದಿವೆ ಮತ್ತು ಸಾವಿರಾರು ಮಂದಿ ಶೇರ್ ಮಾಡಿಕೊಂಡಿದ್ದಾರೆ.
ಅವನೀಶ್ ಅವರು ೧೯೯೬ರಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಿದ್ದರು. ಅವರದು ಬಿಹಾರ ಎಸ್ಸೆಸ್ಸೆಲ್ಸಿ ಬೋರ್ಡ್. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಒಟ್ಟು ೭೦೦ ಅಂಕಗಳಲ್ಲಿ ಅವನೀಶ್‌ಗೆ ಸಿಕ್ಕಿದ್ದು ಕೇವಲ ೩೧೪ ಅಂಕ. ಅಂದರೆ ಒಟ್ಟಾರೆಯಾಗಿ ೪೪.೮೫%. ಆದರೆ, ಈ ಕಳಪೆ ಅಂಕ ಅವರ ಸಾಧನೆಗೆ ಎಂದೂ ಅಡ್ಡಿಯಾಗಲೇ ಇಲ್ಲ.
ಬೋರ್ಡ್‌ನಿಂದ 1996 ರಲ್ಲಿ ನಡೆದ 10 ನೇ ತರಗತಿಯ ಪರೀಕ್ಷೆಯಲ್ಲಿ 700 ಅಂಕಗಳಿಗೆ 314 ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ. ಅಂತಿಮ ಸ್ಕೋರ್ 44.85%.
ಅವರ ಜೀವನ ಹೂವಿನ ಹಾಸಿಗೆ ಆಗಿರದೆ ಕಲ್ಲು- ಮುಳ್ಳುಗಳಿಂದ ತುಂಬಿತ್ತು ಎಂದು ಖುದ್ದು ಅವನೀಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶಾಲಾ ದಿನಗಳಲ್ಲಿ ಓದಲು ಕರೆಂಟ್ ಇಲ್ಲದೆ ಲಾಟೀನು ಬೆಳಕಿನಲ್ಲಿ ಓದುತ್ತಿದ್ದರಂತೆ. ತಮ್ಮ ತಂದೆಯಿಂದ ಪ್ರಭಾವಿತರಾಗಿರುವ ಅವನೀಶ್ ಸಾಧಿಸಲು ಬೇಕಾಗಿರುವುದು ಶ್ರದ್ಧೆ ಎನ್ನುತ್ತಾರೆ.
10ನೇ ತರಗತಿಯಲ್ಲಿ ಕಡಿಮೆ ಅಂಕ ಬಂದರೂ ಅವನೀಶ್ ಆಯ್ಕೆ ಮಾಡಿದ್ದು ಯೂನಿಯನ್ ಪಬ್ಲಿಕ್ ಸರ್ವಿಸ್ ಪರೀಕ್ಷೆಯನ್ನು (UPSC). ಅದರಲ್ಲಿ ಅವರಿಗೆ ಉನ್ನತ ರ‍್ಯಾಂಕ್ ಬಂದಿತ್ತು.
ಅವನೀಶ್ ಅವರ ಈ ಪೋಸ್ಟ್ ಟ್ವಿಟರ್‌ನಲ್ಲಿ ಭಾರಿ ಮೆಚ್ಚುಗೆ ಪಡೆದಿದೆ. ಅನೇಕರು ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. “ನಾನು ಖಿನ್ನತೆಗೆ ಒಳಗಾದಾಗ ನಿಮ್ಮ ವಾಲ್ ನೋಡುತ್ತೇನೆ. ಯಾವುದೂ ಅಸಾಧ್ಯವಲ್ಲ ಎಂದು ನನ್ನಂತಹ ಯುವಕರನ್ನು ನೀವು ಪ್ರೇರೇಪಿಸುತ್ತೀರಿ ಎಂದು ನಿಮಗೆ ತಿಳಿದಿಲ್ಲ ಸರ್, ನಿಮ್ಮ ಬಗ್ಗೆ ಓದಿದಾಗಲೆಲ್ಲಾ ನನಗೆ ಸಾಧಿಸುವ ಸ್ಫೂರ್ತಿ ಹೆಚ್ಚಾಗುತ್ತದೆ. ಜೀವನದಲ್ಲಿ ಹೋರಾಡಲು ಶಕ್ತಿ ನೀಡುತ್ತದೆ” ಎಂದು ಒಬ್ಬರು ಬರೆದಿದ್ದಾರೆ.
೧೯೯೬ರಲ್ಲೇ 10ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮತ್ತೊಬ್ಬರು, “ನಾನು 1996 ರಲ್ಲಿ ಅದೇ ಪರೀಕ್ಷೆಯಲ್ಲಿ 65% ಗಳಿಸಿದ್ದೆ. ನನ್ನ ಶಾಲೆಯ ಟಾಪರ್ 75% ಕ್ಕಿಂತ ಹೆಚ್ಚು ಪಡೆದಿದ್ದರಿಂದ ಆ ಸಮಯದಲ್ಲಿ ತುಂಬಾ ದುಃಖವಾಯಿತು. ಆದರೆ, ಈಗ ನೆಮ್ಮದಿ ಆಗಿದ್ದೇನೆ. ಯಾಕೆಂದರೆ, ನಾನು ಸಾಧಿಸಿದ್ದೇನೆʼʼ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ಜಸ್ಟ್ ಪಾಸ್, ಇಂದು ಐಎಎಸ್: ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಸ್ಫೂರ್ತಿದಾಯಕ ಕಥೆ