ಹಿಮಾಲಯದ ಪೂರ್ವ ಕಾರಕೋರಮ್ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶವು ಭಾರತದ ರಕ್ಷಣೆಗೆ ಹೇಳಿಮಾಡಿಸಿದಂತಿದೆ. ಆದರೆ ನಮ್ಮ ಯೋಧರಿಗೆ ಅದು ಯಮಪಾಶವಾಗಿದೆ. ಇಂತಹ ನೀರ್ಗಲ್ಲಿನಲ್ಲಿ ೧೯೮೪ರಲ್ಲಿ ನಾಪತ್ತೆಯಾದ ಯೋಧ ಲಾನ್ಸ್ ನಾಯಕ್ ಚಂದ್ರಶೇಖರ್ ಅವರ ಶವವು ೩೮ ವರ್ಷಗಳ ನಂತರ ಅಂದರೆ, ಕಳೆದ ಆಗಸ್ಟ್ ೧೩ರಂದು ಪತ್ತೆಯಾಗಿರುವುದು ಸಿಯಾಚಿನ್‌ನ ಭೀಕರತೆಗೆ ನಿದರ್ಶನವಾಗಿದೆ.
ಸುಮಾರು ೫,೭೦೦ ಮೀಟರ್ ಎತ್ತರದ ಹಾಗೂ ೭೬ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಹರಡಿರುವ ರಾಶಿ ರಾಶಿ ಹಿಮವು ದೇಶದ ಯೋಧರ ಮೈ ಕೊರೆಯುತ್ತದೆ. ಇಲ್ಲಿ ಶತ್ರು ಸೈನ್ಯಕ್ಕಿಂತ ಹವಾಮಾನವೇ ಯೋಧರಿಗೆ ದೊಡ್ಡ ಶತ್ರುವಾಗಿದೆ. ಹಾಗಾಗಿ, ಲಾನ್ಸ್ ನಾಯಕ್ ಚಂದ್ರಶೇಖರ್ ಅವರಂತಹ ಉದಾಹರಣೆಗಳು, ಹಿಮಪಾತದಿಂದ ಯೋಧರು ಹುತಾತ್ಮರಾಗುವ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಹಾಗಾದರೆ, ಸಿಯಾಚಿನ್‌ನಲ್ಲಿ ಪರಿಸ್ಥಿತಿ ಹೇಗಿದೆ? ಇದು ಭಾರತಕ್ಕೆ ಹೇಗೆ ಪ್ರಮುಖ? ಎಷ್ಟು ಯೋಧರು ಕೊರೆವ ಚಳಿಯಲ್ಲಿ ದೇಶ ರಕ್ಷಣೆ ಮಾಡುತ್ತಾರೆ? ಇದಕ್ಕಾಗಿ ಕೇಂದ್ರ ಸರಕಾರ ಎಷ್ಟು ಹಣ ವ್ಯಯಿಸುತ್ತದೆ ಎಂಬುದರ ವಿವರ ಇಲ್ಲಿದೆ.
ಭಾರತಕ್ಕೆ ಏಕೆ ಇದು ಪ್ರಮುಖ?
ವ್ಯೂಹಾತ್ಮಕವಾಗಿ ಭಾರತಕ್ಕೆ ಸಿಯಾಚಿನ್ ನೀರ್ಗಲ್ಲು ಪ್ರದೇಶವು ನಿರ್ಣಾಯಕವಾಗಿದೆ. ಚೀನಾ ಹಾಗೂ ಪಾಕಿಸ್ತಾನದ ಸೇನೆಯು ನೇರವಾಗಿ ಸಂಪರ್ಕ ಸಾಧಿಸುವುದನ್ನು ಸಿಯಾಚಿನ್ ತಡೆಯುತ್ತದೆ. ಇದರಿಂದಾಗಿ ಎರಡೂ ರಾಷ್ಟ್ರಗಳ ಸೈನಿಕರು ಭಾರತದ ವಿರುದ್ಧ ಪಿತೂರಿ ಮಾಡಲು ಆಗುವುದಿಲ್ಲ. ಹಾಗೆಯೇ, ಎತ್ತರದ ಪ್ರದೇಶವಾಗಿರುವುದರಿಂದ ಪಾಕಿಸ್ತಾನ ಮತ್ತು ಚೀನಾ ಮೇಲೆ ಭಾರತ ನಿಗಾ ಇಡಲು, ಅವುಗಳ ಚಟುವಟಿಕೆಗಳನ್ನು ಗಮನಿಸಲು ನೆರವಾಗುತ್ತದೆ. ಪಾಕಿಸ್ತಾನದ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನದ ಬೆಳವಣಿಗೆಗಳ ಮೇಲೂ ಭಾರತ ಒಂದು ಕಣ್ಣಿಡಲು ಸಿಯಾಚಿನ್ ಸಹಕಾರಿಯಾಗಿದೆ.
ಯೋಧರಿಗೆ ಹವಾಮಾನವೇ ದೊಡ್ಡ ಶತ್ರು
ಸಿಯಾಚಿನ್ ಹಾಗೂ ಹಿಮದ ರಾಶಿ ಅವಿಭಾಜ್ಯ ಅಂಗಗಳು. ಅದರಲ್ಲೂ, ೫,೭೦೦ ಮೀಟರ್ ಎತ್ತರದ ಪ್ರದೇಶದಲ್ಲಿ ಕೊರೆವ ಚಳಿ, ಬೀಸುವ ಚಳಿಗಾಳಿ ಮಧ್ಯೆ ದೇಶವನ್ನು ಕಾಯುವುದು ಯೋಧರಿಗೆ ನಿಜವಾದ ಸವಾಲಾಗಿದೆ. ಪದೇಪದೆ ಉಂಟಾಗುವ ಹಿಮಪಾತದಿಂದ ಶತ್ರುಸೈನ್ಯದ ವಿರುದ್ಧ ಹೋರಾಡುವುದು ಬಿಡಿ, ಸಿಯಾಚಿನ್‌ನಲ್ಲಿ ವಾಸಿಸುವುದೇ ಯೋಧರಿಗೆ ಸವಾಲಿನ ಸಂಗತಿಯಾಗಿದೆ. ಹಾಗಾಗಿಯೇ, ಸಿಯಾಚಿನ್‌ಅನ್ನು ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಯಲಾಗುತ್ತದೆ. ಒಂದೊಂದು ಸಲ ಉಷ್ಣಾಂಶ ಪ್ರಮಾಣವು -೬೦ ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದರೆ ಇಲ್ಲಿನ ಭೀಕರ ಪರಿಸ್ಥಿತಿಯನ್ನು, ಚಳಿಯ ಕೊರೆತವನ್ನು ಊಹಿಸಿಕೊಳ್ಳಬಹುದಾಗಿದೆ.
೩೮ ವರ್ಷದಲ್ಲಿ ೮೬೯ ಯೋಧರು ಹುತಾತ್ಮ
ಹಿಮದ ರಾಶಿಗಳಲ್ಲಿ, ಎತ್ತರದ ಪ್ರದೇಶದಲ್ಲಿ ಕಾಲ ಕಳೆಯುವ ಯೋಧರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಒಂದೋ ಕಾಯಿಲೆ ಅಥವಾ ಇಲ್ಲವೇ ಹಿಮಪಾತದಿಂದ ಹುತಾತ್ಮರಾಗುವ ದುರ್ಗಮ ಪರಿಸ್ಥಿತಿ ಅಲ್ಲಿಯದು. ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಹೈಪೊಕ್ಸಿಯಾ (ದೇಹದಲ್ಲಿರುವ ಆಮ್ಲಜನಕ ಪ್ರಮಾಣ ಕುಂಠಿತವಾಗುವುದು), ಹೈಪೊಥರ್ಮಿಯಾ (ದೇಹದ ಉಷ್ಣಾಂಶ ಕಡಿಮೆಯಾಗಿರುವುದು), ಉಸಿರಾಟದ ಸಮಸ್ಯೆ ಹಾಗೂ ವೈಟ್‌ಔಟ್ಸ್ (ಮೂರ್ಛೆ ಹೋಗುವುದು) ಸೇರಿ ಹಲವು ಕಾಯಿಲೆಗಳು ಒಕ್ಕರಿಸುತ್ತವೆ. ಹೀಗೆ ವಿವಿಧ ಕಾಯಿಲೆ, ಹಿಮಪಾತ ಮುಂತಾದ ಕಾರಣಗಳಿಂದ ೧೯೮೪ರಿಂದ ಇದುವರೆಗೆ ೮೬೯ ಯೋಧರು ಅಲ್ಲಿ ಹುತಾತ್ಮರಾಗಿದ್ದಾರೆ. ಇಷ್ಟೇ ಅವಧಿಯಲ್ಲಿ ಪಾಕಿಸ್ತಾನದ ೨ ಸಾವಿರ ಯೋಧರು ಬಲಿಯಾಗಿದ್ದಾರೆ. ಇಲ್ಲಿಯ ಹಿಮಪಾತದಲ್ಲಿ ಭೂಗತರಾದ ಯೋಧರ ಶವಗಳು ಎಷ್ಟೋ ಬಾರಿ ದಶಕಗಳ ಬಳಿಕ ಪತ್ತೆ ಆಗುವುದೂ ಇದೆ. ವಿಶೇಷ ಎಂದರೆ ಇಷ್ಟು ವರ್ಷಗಳ ಬಳಿಕವೂ ಶವ ಇಲ್ಲಿ ಸಂಪೂರ್ಣ ಕೊಳೆಯುವುದಿಲ್ಲ!
ದಿನಕ್ಕೆ ೭ ಕೋಟಿ ರೂ. ವ್ಯಯ
ರಕ್ಷಣೆ ಹಾಗೂ ವ್ಯೂಹಾತ್ಮಕ ದೃಷ್ಟಿಯಿಂದ ಪ್ರಾಮುಖ್ಯತೆ ಹೊಂದಿರುವ ಸಿಯಾಚಿನ್‌ನಲ್ಲಿ ಭಾರತ ೩,೦೦೦ಕ್ಕೂ ಅಧಿಕ ಯೋಧರನ್ನು ನಿಯೋಜಿಸಿದೆ. ಯೋಧರಿಗೆ ಮೂಲ ಸೌಕರ್ಯ, ಟೆಂಟ್ ಸೇರಿ ಸೂಕ್ತ ಸೌಲಭ್ಯ ಒದಗಿಸಲು ನಿತ್ಯ ೫-೭ ಕೋಟಿ ರೂ. ವ್ಯಯಿಸುತ್ತದೆ. ವಾರ್ಷಿಕವಾಗಿ ೩,೦೦೦ ಕೋಟಿ ರೂ. ಖರ್ಚು ಮಾಡುತ್ತದೆ. ಯೋಧರ ಬಟ್ಟೆ ಹಾಗೂ ಪರ್ವತಗಳ ಮೇಲೆ ಬಳಸುವ ಉಪಕರಣಗಳಿಗಾಗಿಯೇ ಕೇಂದ್ರ ಸರಕಾರ ೭,೫೦೦ ಕೋಟಿ ರೂ. ಖರ್ಚು ಮಾಡಿದೆ. ಒಬ್ಬ ಯೋಧರ ಪರ್ಸನಲ್ ಕಿಟ್‌ಗೆ ಒಂದು ಲಕ್ಷ ರೂ. ಖರ್ಚಾಗುತ್ತದೆ. ಇದರಿಂದಾಗಿಯೇ, ಸಿಯಾಚಿನ್‌ಅನ್ನು ವಿಶ್ವದ ಅತ್ಯಂತ ದುಬಾರಿ ಸಮರಭೂಮಿ ಎಂದೂ ಕರೆಯಲಾಗುತ್ತದೆ.
ಏಕಾಏಕಿ ನಿಯೋಜನೆ ಮಾಡಲಾಗದು
ಭಾರತೀಯ ಸೇನೆಯಲ್ಲಿ “ಸಿಯಾಚಿನ್ ವಾರಿಯರ್ಸ್” ಎಂಬ ವಿಭಾಗವೇ ಇದೆ. ಸಿಯಾಚಿನ್ ವಾರಿಯರ್ಸ್‌ಗೆ ಆಯ್ಕೆ ಮಾಡಲು ಹಲವು ಮಾನದಂಡಗಳಿವೆ. ಪರ್ವತಾರೋಹಣ ಮಾಡುವುದು, ಹಿಮ ಸ್ವಚ್ಛಗೊಳಿಸುವುದು, ಸದೃಢ ಯೋಧರಲ್ಲಿಯೇ ಹೆಚ್ಚು ದಷ್ಟಪುಷ್ಟರಾಗಿರುವವರು, ಹಿಮದ ಬಂಡೆಗಳನ್ನು ಒಡೆಯುವುದು, ಡ್ರಿಲ್ಲಿಂಗ್ ಸೇರಿ ಹಲವು ಕೌಶಲ ಇದ್ದವರನ್ನು ಆಯ್ಕೆ ಮಾಡಲಾಗುತ್ತದೆ. ನಿಯೋಜನೆಗೂ ಮುನ್ನ ತರಬೇತಿ ನೀಡಲಾಗುತ್ತದೆ. ಹಂತ ಹಂತವಾಗಿ ಎತ್ತರದ ಪ್ರದೇಶಗಳಿಗೆ ನಿಯೋಜಿಸಲಾಗುತ್ತದೆ. ಸಿಯಾಚಿನ್ ನೀರ್ಗಲ್ಲಿನ ತುದಿ ತಲುಪಲು ಯೋಧರು ೨೮ ದಿನಗಳವರೆಗೆ ೧೨೮ ಕಿಲೋಮೀಟರ್ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ. ಹಾಗೆಯೇ, ಸಿಯಾಚಿನ್‌ನಲ್ಲಿ ಯೋಧರು ಮೂರು ತಿಂಗಳಿಗೊಮ್ಮೆ ಸ್ನಾನ ಮಾಡುತ್ತಾರೆ! ವಾರದಲ್ಲಿ ಎರಡು ಬಾರಿ ಇಡೀ ದೇಹಕ್ಕೆ ಜೆಲ್ ಮಸಾಜ್ ಮಾಡಿದರೆ, ಅದೇ ಯೋಧರಿಗೆ ಸ್ನಾನ!
ಆಪರೇಷನ್ ಮೇಘದೂತ ಗೊತ್ತಾ?
ಯುವ ಪೀಳಿಗೆಗೆ “ಆಪರೇಷನ್ ಮೇಘದೂತ”ದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ, ೧೯೮೪ರಲ್ಲಿ ನಡೆದ ಆಪರೇಷನ್ ಮೇಘದೂತವು ದೇಶದ ರಕ್ಷಣೆಯ ದೃಷ್ಟಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಹಾಗೆ ನೋಡಿದರೆ, ೧೯೭೦ರ ದಶಕದವರೆಗೂ ಸಿಯಾಚಿನ್‌ನಲ್ಲಿ ಸೈನಿಕರನ್ನು ನಿಯೋಜಿಸುತ್ತಿರಲಿಲ್ಲ. ೧೯೮೦ರ ದಶಕದ ಆರಂಭದಲ್ಲಿ ಯಾವಾಗ ಪಾಕಿಸ್ತಾನದ ಕಣ್ಣು ಸಿಯಾಚಿನ್ ಮೇಲೆ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಯಿತೋ, ಆಗಲೇ “ಆಪರೇಷನ್ ಮೇಘದೂತ” ಎಂಬ ರಹಸ್ಯ ಕಾರ್ಯಾಚರಣೆ ಆರಂಭಿಸಲಾಯಿತು. ಸಿಯಾಚಿನ್‌ಗೆ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಯಿತು. ೧೯೮೪ರಲ್ಲಿ ಸಿಯಾಚಿನ್ ಮೇಲೆ ಪಾಕಿಸ್ತಾನದ ಸೇನೆ ನಿಯಂತ್ರಣ ಸಾಧಿಸಲು ಮುಂದಾದಾಗ ಭಾರತದ ಯೋಧರು ತಿರುಗೇಟು ನೀಡಿ, ಸಿಯಾಚಿನ್‌ಅನ್ನು ಉಳಿಸಿಕೊಂಡರು. ಅಂದಹಾಗೆ, ಆಗಸ್ಟ್ ೧೩ರಂದು ಹೆಮ್ಮೆಯ ಯೋಧ ಲಾನ್ಸ್ ನಾಯಕ್ ಅವರ ಪಾರ್ಥಿವ ಶರೀರ ಸಿಕ್ಕಿತಲ್ಲ, ಅವರು ೩೮ ವರ್ಷಗಳ ಹಿಂದೆ ಬಂದೂಕು ಹಿಡಿದು ಸಿಯಾಚಿನ್ ಮೇಲೆ ನಿಂತಿದ್ದು ಇದೇ ಆಪರೇಷನ್ ಮೇಘದೂತದ ಭಾಗವಾಗಿ.
ಇದನ್ನೂ ಓದಿ | Independence Day | ಕೊರೆವ ಚಳಿಯಲ್ಲೂ ಸಿಯಾಚಿನ್‌ನಲ್ಲಿ ತಿರಂಗಾ ಹಾರಿಸಿದ ಯೋಧರು