Site icon Vistara News

Chandrayaan-3 mission: ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್‌ ಫೌಂಡೇಶನ್

vikram lander pragyan rover

ಹೊಸದಿಲ್ಲಿ: ಚಂದ್ರಯಾನ-3 ಮಿಷನ್‌ನ (Chandrayaan-3 mission)‌ ಯಶಸ್ಸಿಗೆ ಕಾರಣವಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO – ಇಸ್ರೋ) ತಂಡವನ್ನು ಸೋಮವಾರ ʼ2024ರ ಜಾನ್ ಎಲ್. ಜಾಕ್ ಸ್ವಿಗರ್ಟ್ ಜೂನಿಯರ್ʼ ಪ್ರಶಸ್ತಿಯನ್ನು (US Award) ಬಾಹ್ಯಾಕಾಶ ಪರಿಶೋಧನೆಗಾಗಿ (space exploration) ನೀಡಿ ಗೌರವಿಸಲಾಗಿದೆ. ಸ್ಪೇಸ್ ಫೌಂಡೇಶನ್ (Space Foundation) ಇದನ್ನು ನೀಡುತ್ತಿದೆ.

ಬಾಹ್ಯಾಕಾಶ ಪರಿಶೋಧನೆಯ ಸಾಧ್ಯತೆಯನ್ನು ಹೆಚ್ಚಿಸುವಲ್ಲಿ ಚಂದ್ರಯಾನದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಚಂದ್ರಯಾನ-3 ಮಿಷನ್ ನಡೆಸಲಾಗಿತ್ತು. ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಲ್ಯಾಂಡಿಂಗ್ ಮಾಡಿತ್ತು. ಈ ಸಾಧನೆಯನ್ನು ಸಾಧಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿತ್ತು. ನಂತರ ಚಂದ್ರಯಾನ 3ರ ಮೂನ್ ಲ್ಯಾಂಡರ್ ಲ್ಯಾಂಡಿಂಗ್ ಸೈಟ್ ಅನ್ನು ʼಶಿವಶಕ್ತಿʼ ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದರು.

ಕೊಲೊರಾಡೋದಲ್ಲಿ ವಾರ್ಷಿಕ ಬಾಹ್ಯಾಕಾಶ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ನೀಡಲಾದ ಪ್ರಶಸ್ತಿಯನ್ನು ಇಸ್ರೋ ಪರವಾಗಿ ಹ್ಯೂಸ್ಟನ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಿಸಿ ಮಂಜುನಾಥ್ ಅವರು ಸ್ವೀಕರಿಸಿದರು.

“ಬಾಹ್ಯಾಕಾಶದಲ್ಲಿ ಭಾರತದ ನಾಯಕತ್ವವು ಜಗತ್ತಿಗೆ ಸ್ಫೂರ್ತಿಯಾಗಿದೆ” ಎಂದು ಸ್ಪೇಸ್ ಫೌಂಡೇಶನ್ ಸಿಇಒ ಹೀದರ್ ಪ್ರಿಂಗಲ್ ಜನವರಿಯಲ್ಲಿ ಪ್ರಶಸ್ತಿಯನ್ನು ಘೋಷಿಸಿದಾಗ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಇಡೀ ಚಂದ್ರಯಾನ-3 ತಂಡದ ಪ್ರವರ್ತಕ ಕೆಲಸವು ಬಾಹ್ಯಾಕಾಶ ಪರಿಶೋಧನೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಅವರ ಗಮನಾರ್ಹವಾದ ಚಂದ್ರನ ಲ್ಯಾಂಡಿಂಗ್ ನಮಗೆಲ್ಲರಿಗೂ ಮಾದರಿಯಾಗಿದೆ. ಅಭಿನಂದನೆಗಳು. ನೀವು ಮುಂದೆ ಏನು ಮಾಡುತ್ತೀರಿ ಎಂದು ನೋಡಲು ನಾವು ಕಾಯುತ್ತಿದ್ದೇವೆ” ಎಂದು ಅವರು ಹೇಳಿದರು.

ಸ್ಪೇಸ್‌ ಫೌಂಡೇಶನ್, ಪತ್ರಿಕಾ ಪ್ರಕಟಣೆಯಲ್ಲಿ, ಇಸ್ರೋ ಅಭಿವೃದ್ಧಿಪಡಿಸಿದ ಚಂದ್ರಯಾನ-3 ಮಿಷನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಮನುಕುಲದ ಬಾಹ್ಯಾಕಾಶ ಪರಿಶೋಧನೆಯ ಪರಿಧಿಯನ್ನು ವಿಸ್ತರಿಸಿದೆ ಎಂದು ಹೈಲೈಟ್ ಮಾಡಿದೆ.

ಜಾನ್ ಎಲ್. ʼಜ್ಯಾಕ್’ ಸ್ವಿಗರ್ಟ್ ಜೂನಿಯರ್ ಪ್ರಶಸ್ತಿ ಎಂದರೇನು?

ಬಾಹ್ಯಾಕಾಶ ಪರಿಶೋಧನೆಗಾಗಿ ಜಾನ್ L. “ಜ್ಯಾಕ್” ಸ್ವಿಗರ್ಟ್ ಜೂನಿಯರ್ ಪ್ರಶಸ್ತಿ ನೀಡಲಾಗುತ್ತದೆ. ಬಾಹ್ಯಾಕಾಶ ಸಂಸ್ಥೆ ಅಥವಾ ಸಂಸ್ಥೆಗಳ ಒಕ್ಕೂಟದಿಂದ ಬಾಹ್ಯಾಕಾಶ ಪರಿಶೋಧನೆ ಮತ್ತು ಅನ್ವೇಷಣೆಯಲ್ಲಿ ಆಗುವ ಗಮನಾರ್ಹ ಸಾಧನೆಗಳನ್ನು ಗುರುತಿಸುತ್ತದೆ.

ಈ ಪ್ರಶಸ್ತಿಯು ಗಗನಯಾತ್ರಿ ಜಾನ್ L. “ಜ್ಯಾಕ್” ಸ್ವಿಗರ್ಟ್ ಜೂನಿಯರ್ ಅವರ ಗೌರವಾರ್ಥ ಸ್ಥಾಪಿಸಲ್ಪಟ್ಟಿದೆ. ಅವರ ಕೊಡುಗೆಗಳು “ಸ್ಪೇಸ್ ಫೌಂಡೇಶನ್ʼʼ ಸ್ಥಾಪನೆಗೆ ಸ್ಫೂರ್ತಿ ನೀಡಿವೆ. ಕೊಲೊರಾಡೋ ಮೂಲದ ಸ್ವಿಗರ್ಟ್, ನಿವೃತ್ತ US ನೌಕಾಪಡೆಯ ಕ್ಯಾಪ್ಟನ್ ಜೇಮ್ಸ್ A. ಲೊವೆಲ್ ಜೂನಿಯರ್ ಮತ್ತು ಫ್ರೆಡ್ ಹೈಸ್ ಜೊತೆಗೆ ಅಪೊಲೊ 13 ಚಂದ್ರನ ಕಾರ್ಯಾಚರಣೆಯ ಭಾಗವಾಗಿದ್ದರು. ಈ ಕಾರ್ಯಾಚರಣೆಯು ಚಂದ್ರನ ಮಾರ್ಗದಲ್ಲಿ ನಿರ್ಣಾಯಕ ಆಮ್ಲಜನಕ ಟ್ಯಾಂಕ್ ವೈಫಲ್ಯವನ್ನು ಎದುರಿಸಿತ್ತು. ಪರಿಣಾಮವಾಗಿ ಭೂಮಿಗೆ ಸಾಹಸಪೂರ್ವಕವಾಗಿ, ನಾಟಕೀಯವಾಗಿ ಮರಳಿತ್ತು.

ಚಂದ್ರಯಾನ-3

ಭಾರತವು ತನ್ನ ಚಂದ್ರಯಾನ-3 ಮಿಷನ್‌ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯುವಿಕೆಯನ್ನು ಸಾಧಿಸುವ ಮೂಲಕ ಇತಿಹಾಸವನ್ನು ಬರೆದಿದೆ. ಈ ಮೈಲಿಗಲ್ಲನ್ನು ಚಂದ್ರಯಾನ-3 ರ ವಿಕ್ರಮ್ ಎಂಬ ಲ್ಯಾಂಡರ್, ಪ್ರಗ್ಯಾನ್ ರೋವರ್ ಮೂಲಕ ಕಳೆದ ಆಗಸ್ಟ್ 23ರಂದು ಸಂಜೆ 6.04ಕ್ಕೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಸಾಧಿಸಲಾಯಿತು.

US, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಚಂದ್ರನ ಮೇಲೆ “ಸಾಫ್ಟ್ ಲ್ಯಾಂಡಿಂಗ್” ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ನಾಲ್ಕನೇ ದೇಶವಾಗಿ ಭಾರತ ಗುರುತಿಸಲ್ಪಟ್ಟಿದೆ. ಈ ಸಾಧನೆಯನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ 3ರ ಚಂದ್ರನ ಲ್ಯಾಂಡಿಂಗ್ ಯಶಸ್ಸಿನ ಸ್ಮರಣಾರ್ಥ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚಂದ್ರಯಾನ 3 ಇಳಿದ ಜಾಗವೀಗ ‘ಶಿವಶಕ್ತಿ’;‌ ದೇಶದ ಸಾಧನೆ ಚಿರಾಯು

Exit mobile version