Site icon Vistara News

Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

Covishield Vaccine

Covishield Vaccine

ನವದೆಹಲಿ: ಕೊರೊನಾ (Covid 19) ಎದುರಿಸಲು ನೀಡಲಾದ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.

ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟು ಮಾಡಬಹುದು ಎಂದು ಲಸಿಕೆ ತಯಾರಕರು ಇಂಗ್ಲೆಂಡ್‌ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ವೇಣುಗೋಪಾಲನ್‌ ಗೋವಿಂದನ್‌ ಅವರಿಗೆ ತಮ್ಮ ಮಗಳ ಹಠಾತ್‌ ಸಾವಿಗೆ ಲಸಿಕೆಯೇ ಕಾರಣ ಇರಬಹುದು ಎಂಬ ಅನುಮಾನ ಕಾಡಿದ್ದು, ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಿಸಿದ್ದಾರೆ.

ವೇಣುಗೋಪಾಲನ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 2021ರಲ್ಲಿ ಇವರ ಪುತ್ರಿ 20 ವರ್ಷದ ಕಾರುಣ್ಯ ಕೋವಿಶೀಲ್ಡ್ ಪಡೆದ ಬಳಿಕ ಸಾವನ್ನಪ್ಪಿದ್ದರು. ಆಸ್ಟ್ರಾಜೆನಿಕಾ ಸಂಸ್ಥೆ ಬಹಳ ತಡವಾಗಿ ಅಂದರೆ ಹಲವರು ಜೀವ ಕಳೆದುಕೊಂಡ ನಂತರ ತನ್ನ ಲಸಿಕೆಯ ಲೋಪದೋಷಗಳನ್ನು ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿ ದೇಶದಲ್ಲಿ ವ್ಯಾಪಕವಾಗಿ ಹಂಚಿತ್ತು.

ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ನೀಡಿ 15 ಯುರೋಪಿಯನ್ ದೇಶಗಳು ಕೋವಿಶೀಲ್ಡ್‌ ಬಳಕೆಗೆ ನಿಷೇಧ ಹೇರಿದ ಬಳಿಕವಾದರೂ ಸೆರಂ ಇನ್‌ಸ್ಟಿಟ್ಯೂಟ್‌ ಈ ಲಸಿಕೆಯ ಪೂರೈಕೆಯನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಇದರಿಂದ ತೊಂದರೆಗೊಳಗಾಗಿ ತಮ್ಮವರನ್ನು ಕಳೆದುಕೊಂಡ ಅನೇಕ ಪೋಷಕರು ನ್ಯಾಯಾಲಯಗಳಲ್ಲಿ ಹೋರಾಟ ಮಾಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ವೇಣುಗೋಪಾಲನ್ ಹೇಳಿದ್ದಾರೆ. ಈಗಾಗಲೇ ಈ ಲಸಿಕೆಯಿಂದ ಜೀವ ಕಳೆದುಕೊಂಡ ಸಂತ್ರಸ್ತರ 8 ಕುಟುಂಬಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಸೆರಮ್ ಇಸ್ಟಿಟ್ಯೂಟ್‌ನ ಪೂನಾವಾಲಾ ಅವರು ತಾವು ಮಾಡಿದ ಪಾಪಗಳಿಗೆ ಉತ್ತರ ನೀಡಬೇಕು. ಅವರ ತಪ್ಪಿನಿಂದ ಬಲಿಯಾದ ಜೀವಗಳಿಗೆ ಉತ್ತರ ನೀಡಬೇಕು ಎಂದು ಗೋವಿಂದನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಈ ಲಸಿಕೆಗೆ ಅನುಮೋದನೆ ನೀಡಿದ ಸರ್ಕಾರಿ ಅಧಿಕಾರಿಗಳ ಬಗ್ಗೆಯೂ ಅವರು ಕಿಡಿ ಕಾರಿದ್ದಾರೆ. ಹಾಗೆಯೇ 2021ರಲ್ಲಿ ರಚನಾ ಗಂಗು ಎಂಬವರು ಕೂಡ ತಮ್ಮ 18 ವರ್ಷದ ಮಗಳು ರಿತೈಕಾಳನ್ನು ಕಳೆದು ಕೊಂಡಿದ್ದು, ಇದಕ್ಕೂ ಕೋವಿಶೀಲ್ಡ್‌ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಈ ಹಿಂದೆಯೂ ಅನುಮಾನ ಮೂಡಿಸಿದ್ದವು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯು ಈ ವಿವಾದದ ಕುರಿತು ಇನ್ನೂ ಹೇಳಿಕೆ ನೀಡಿಲ್ಲ.

Exit mobile version