Site icon Vistara News

Deepavali 2023: ಹಣತೆ ಬೆಳಗಿ ದೀಪಾವಳಿ ಆಚರಿಸಿದ US ಅಧ್ಯಕ್ಷ ಜೋ ಬೈಡೆನ್‌, ಜಿಲ್‌

joe biden jill biden

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (US president Joe Biden) ಹಾಗೂ ಪ್ರಥಮ ಮಹಿಳೆ ಜಿಲ್ ಬೈಡೆನ್‌ (Jill Biden) ನಿನ್ನೆ ರಾತ್ರಿ ಶ್ವೇತಭವನದಲ್ಲಿ (white house) ಹಣತೆ ಬೆಳಗಿ ದೀಪಾವಳಿ (Deepavali 2023) ಆಚರಿಸಿದರು.

ದೀಪಾವಳಿ ಹಬ್ಬದ ಸಂದರ್ಭವನ್ನು ಗೌರವಿಸಲು ಅಧ್ಯಕ್ಷ ಜೋ ಬೈಡೆನ್ ಅವರು ಮತ್ತು ಜಿಲ್ ಬೈಡೆನ್ ದೀಪಗಳನ್ನು ಬೆಳಗಿಸುವ ವೀಡಿಯೊವನ್ನು Xನಲ್ಲಿ ಹಂಚಿಕೊಂಡರು. “ಇಂದು ಜಿಲ್ ಮತ್ತು ನಾನು ದೀಪಾವಳಿಯ ಸಂದೇಶವನ್ನು ಸಂಕೇತಿಸಲು ಹಣತೆಯನ್ನು ಬೆಳಗಿಸಿದೆವು. ದ್ವೇಷ ಮತ್ತು ವಿಭಜನೆಯ ಕತ್ತಲೆಯ ವಿರುದ್ಧ ವಿವೇಕ, ಪ್ರೀತಿ ಮತ್ತು ಏಕತೆಯ ಬೆಳಕನ್ನು ಅನ್ವೇಷಿಸುವುದು ಇದರ ಸಂಕೇತವಾಗಿದೆ. ನಮ್ಮ ರಾಷ್ಟ್ರದ ನಿರಂತರ ಚೈತನ್ಯ ಹಾಗೂ ಬೆಳಕನ್ನು ಹಂಚಿಕೊಂಡು ಸ್ವೀಕರಿಸೋಣ ಮತ್ತು ಶಕ್ತಿ ಪಡೆಯೋಣʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹ್ಯಾಲೊವೀನ್ ಆಚರಣೆಯ ಅಕ್ಕಪಕ್ಕದಲ್ಲೇ ದೀಪಾವಳಿ ಹಬ್ಬವೂ ಬರುತ್ತದೆ. ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್ ಮತ್ತು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಂತಹ ಜನಪ್ರಿಯ ತಾಣಗಳಲ್ಲಿ ದೀಪಗಳ ಹಬ್ಬವನ್ನು ಆಚರಿಸುವುದರೊಂದಿಗೆ ಅಮೆರಿಕದಲ್ಲಿ ದೀಪಾವಳಿ ಆಚರಣೆಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ವೈಟ್ ಹೌಸ್ ಕೂಡ ದೀಪಾವಳಿಯನ್ನು ಆಚರಿಸುತ್ತಿದೆ.

ನವೆಂಬರ್ 12ರಂದು ಹಾಕಿದ ಮತ್ತೊಂದು X ಪೋಸ್ಟ್‌ನಲ್ಲಿ ಬೈಡೆನ್ ದೀಪಾವಳಿ ಶುಭಾಶಯಗಳನ್ನು ಮತ್ತಷ್ಟು ವಿಸ್ತರಿಸಿದರು. “ತಲೆಮಾರುಗಳಷ್ಟು ಕಾಲ ದಕ್ಷಿಣ ಏಷ್ಯಾದಿಂದ ಬಂದು ಅಮೆರಿಕನ್ನರಾಗಿರುವವರು ನಮ್ಮ ರಾಷ್ಟ್ರದ ಬಟ್ಟೆಯಲ್ಲಿ ದೀಪಾವಳಿ ಸಂಪ್ರದಾಯಗಳ ಕುಸುರಿಯನ್ನು ನೇಯ್ದಿದ್ದಾರೆ. ಇದು ಅಜ್ಞಾನ, ದ್ವೇಷ, ವಿಭಜನೆಯ ಕತ್ತಲೆಯ ವಿರುದ್ಧ ವಿವೇಕ, ಪ್ರೀತಿ ಮತ್ತು ಏಕತೆಯ ಬೆಳಕನ್ನು ಹುಡುಕುವ ಸಂದೇಶವನ್ನು ಸಂಕೇತಿಸುತ್ತದೆ” ಎಂದಿದ್ದಾರೆ.

“ಇದು ಕಳೆದ ಕೆಲವು ಕಷ್ಟಕರ ವರ್ಷಗಳಿಂದ ನಮ್ಮ ರಾಷ್ಟ್ರವು ಬಲವಾಗಿ ಹೊರಹೊಮ್ಮಲು ಸಹಾಯ ಮಾಡಿದ ಸಂದೇಶವಾಗಿದೆ. ಈಗ ಎಂದಿಗಿಂತಲೂ ಇದು ಹೆಚ್ಚು ಮುಖ್ಯವಾಗಿದೆ. ಈ ದೀಪಾವಳಿಯಂದು, ಬೆಳಕಿನ ಶಕ್ತಿಯನ್ನು ನಾವು ಹಂಚಿಕೊಳ್ಳೋಣ. ಅಮೆರಿಕ ಮತ್ತು ಪ್ರಪಂಚದಾದ್ಯಂತ ದೀಪಾವಳಿ ಆಚರಿಸುತ್ತಿರುವ ಒಂದು ಶತಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇವೆ” ಎಂದು ಬರೆದಿದ್ದಾರೆ.

ಬೈಡೆನ್ ಅವರು ಪ್ರತಿವರ್ಷವೂ ದೀಪಾವಳಿಯ ಸಮಯದಲ್ಲಿ ವಿವಿಧ ಸಮುದಾಯಗಳಿಗೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸುತ್ತಾರೆ. ಕಳೆದ ವರ್ಷವೂ ಸಹ, ಅವರು ದೀಪಾವಳಿ ಆಚರಿಸಿ ಸಂದೇಶ ನೀಡಿದ್ದರು. “ಈ ದಿನದಂದು, ಅಮೆರಿಕದಾದ್ಯಂತ ಹರಡಿರುವ ದಕ್ಷಿಣ ಏಷ್ಯಾದ ಸಮುದಾಯವು ಪ್ರದರ್ಶಿಸಿರುವ ಆಶಾವಾದ, ಧೈರ್ಯ ಮತ್ತು ಸಹಾನುಭೂತಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಒಟ್ಟಾಗಿ, ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ನರು ಈ ಸಾಂಕ್ರಾಮಿಕ ರೋಗದಿಂದ (ಕೊರೊನಾ) ಬಲಶಾಲಿಯಾಗಿ ಹೊರಹೊಮ್ಮಲು ನಮಗೆ ಸಹಾಯ ಮಾಡುತ್ತಿರಲಿ, ಎಲ್ಲರಿಗೂ ಸಹಾಯವಾಗುವ ಆರ್ಥಿಕತೆಯನ್ನು ನಿರ್ಮಿಸುತ್ತಿರಲಿ ಅಥವಾ ನಮ್ಮ ದೇಶಕ್ಕೆ ಸೇವೆ ಸಲ್ಲಿಸುತ್ತಿರಲಿ ಹೀಗೆ ಯಾವುದರಲ್ಲೇ ಇರಲಿ ನಾವು ರಾಷ್ಟ್ರವಾಗಿ ಯಾರೆಂಬುದರ ಆತ್ಮವನ್ನು ಪ್ರತಿಬಿಂಬಿಸುತ್ತಾರೆ” ಎಂದು ಅವರು ಬರೆದಿದ್ದರು.

Exit mobile version