ನವ ದೆಹಲಿ: ನಾಯಿ ಬೊಗಳಿದ್ದಕ್ಕೆ ನೆರೆಮನೆಯ ವ್ಯಕ್ತಿಯೊಬ್ಬ ನಾಯಿ ಹಾಗೂ ಅದರ ಮಾಲೀಕನಿಗೆ ಕಬ್ಬಿಣದ ರಾಡ್ನಿಂದ ಹೊಡೆದ ಆಘಾತಕಾರಿ ಘಟನೆ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಪಶ್ಚಿಮ ವಿಹಾರ್ ಏರಿಯಾದಲ್ಲಿರುವ ನಿವಾಸಿಯೊಬ್ಬರು ನಾಯಿಯನ್ನು ಸಾಕಿದ್ದರು. ಅದೇ ಏರಿಯಾದಲ್ಲಿದ್ದ ಪಕ್ಕದ ಮನೆಯ ವ್ಯಕ್ತಿಯೊಬ್ಬ ನಾಯಿ ಬೊಗಳುತ್ತೆ ಎಂಬ ಕಾರಣಕ್ಕೆ ನೇರವಾಗಿ ಬಂದು ನಾಯಿಯ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದಿದ್ದಾನೆ. ಈ ವೇಳೆ ತಡೆಯಲು ಬಂದ ನಾಯಿಯ ಮಾಲೀಕನಿಗೂ ರಾಡ್ನಿಂದ ಹೊಡೆದಿದ್ದಾನೆ. ಇನ್ನು ರಾಡ್ನಿಂದ ಗಂಭೀರ ಗಾಯಗೊಂಡ ನಾಯಿ ಹಾಗೂ ಆತನ ಮಾಲೀಕ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮತ್ತೊಬ್ಬ ಇದನ್ನು ತಡೆಯಲು ಬಂದಿದ್ದಾನೆ. ತುಂಬಾ ಸಮಯದವರೆಗೂ ಗಲಾಟೆ ನಡೆದಿದೆ. ಈ ವೇಳೆ ತಡೆಯಲು ಬಂದ ಮತ್ತೊಬ್ಬ ವ್ಯಕ್ತಿಯ ತಲೆಗೂ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ.
ಇದನ್ನು ಓದಿ | ಜುಲೈ 1ರಿಂದ ಸಾಕು ನಾಯಿಗಳಿಗೆ ಕಬ್ಬನ್ ಪಾರ್ಕ್ ಪ್ರವೇಶವಿಲ್ಲ
ಘಟನೆ ನಡೆದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಇನ್ನು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ನಾಯಿ ಹಾಗೂ ಅದರ ಮಾಲೀಕರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟನೆ ಸಂಬಂಧ ನಾಯಿಯ ಮಾಲೀಕ ರಕ್ಷಿತ್ ಎಂಬುವವರು ಪಶ್ಚಿಮ ವಿಹಾರ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ದೂರು ನೀಡಿದ್ದಾರೆ. ದೂರಿನನ್ವಯ ಹಲ್ಲೆ ಮಾಡಿದ ವ್ಯಕ್ತಿ ಮೇಲೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ| ನಾಯಿಗಳ ʼಸೌಂದರ್ಯ ಸ್ಪರ್ಧೆʼಯಲ್ಲಿ ಗೆದ್ದ ಮಿ. ಹ್ಯಾಪಿ ಫೇಸ್ ಹೇಗಿದೆ ನೋಡಿ!