Site icon Vistara News

Explainer: ಬುಲ್‌ಡೋಜರ್‌ಗೆ ಮತ್ತಷ್ಟು ಸದ್ದು

ಬುಲ್‌ಡೋಜರ್‌ ಬಾಬಾ

ಸಾರ್ವಜನಿಕ ಶಾಂತಿಭಂಗ, ಕಾನೂನು ಸುವ್ಯವಸ್ಥೆಗೆ ಸೆಡ್ಡು ಹೊಡೆಯುವವರ ಮೇಲೆ ಮೊದಲು ಬುಲ್‌ಡೋಜರ್‌ ಬಳಸಿ ಸುದ್ದಿಯಾದವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.‌ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ ಜಾರಿಗಳ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವರು ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸಿದಾಗ ಅವರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದೂ ಅಲ್ಲದೆ, ಅವರ ನಿವಾಸಗಳನ್ನು ಬುಲ್‌ಡೋಜರ್‌ ಮೂಲಕ ನೆಲಸಮಗೊಳಿಸುವ ಕಠಿಣ ಕ್ರಮ ತೆಗೆದುಕೊಂಡರು ಯೋಗಿ. ಅವರ ಈ ಕ್ರಮ ಸಮಾಜದ್ರೋಹಿಗಳಲ್ಲಿ ದೊಡ್ಡ ಮಟ್ಟದ ನಡುಕ ಹುಟ್ಟಿಸಿತು. ಕಾನೂನುಬಾಹಿರ ಶಕ್ತಿಗಳಲ್ಲಿ ಹೆದರಿಕೆ ಹುಟ್ಟಿಸುವ ಈ ಕ್ರಮ ಬಹುಮಟ್ಟಿಗೆ ಯಶಸ್ವಿಯಾಯಿತು.

ಬುಲ್‌ಡೋಜರ್‌ ಮಾಮಾ

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರ ಆಡಳಿತ ಜನಮೆಚ್ಚುಗೆ ಗಳಿಸಿದ್ದು ಮತ್ತು ಎರಡನೇ ಬಾರಿಗೆ ಬಿಜೆಪಿಗೆ ಅವರು ಬಹುಮತ ತಂದುಕೊಟ್ಟಿರುವುದರ ಹಿಂದೆ ಅವರ ಕಠಿಣ ಕಾನೂನು ಕಾರ್ಯಾಚರಣೆಗಳ ಪಾತ್ರವಿದೆ ಎಂದೇ ನಂಬಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲೂ ಅವರ ಬುಲ್‌ಡೋಜರ್‌ ಸೂತ್ರವನ್ನು ಅನುಸರಿಸುವ ರೂಢಿ ಆರಂಭವಾಯಿತು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಅಪರಾಧ ಮತ್ತು ಸಾರ್ವಜನಿಕ ಶಾಂತಿಭಂಗ ಮಾಡುವ ಕ್ರಿಮಿನಲ್‌ಗಳ ಮೇಲೆ ಮಹಾಸ್ತ್ರವಾಗಿ ಇದನ್ನು ಪ್ರಯೋಗಿಸಲು ಆರಂಭಿಸಿದರು. ಖರ್‌ಗೋನ್‌ನಲ್ಲಿ ರಾಮನವಮಿ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಗಳ 16 ಮನೆಗಳು ಹಾಗೂ 29 ಅಂಗಡಿಗಳ ಮೇಲೆ ಬುಲ್‌ಡೋಜರ್‌ ಹರಿಸಿದರು. ಬುಲ್‌ಡೋಜರ್‌ ಮಾಮಾ ಎಂಬ ಖ್ಯಾತಿ ಗಳಿಸಿಕೊಂಡರು.

ದಿಲ್ಲಿಯಲ್ಲಿ ಕೋಲಾಹಲ

ಮುಂದುವರಿದ ಭಾಗವಾಗಿ ಬುಲ್‌ಡೋಜರ್‌ ದಿಲ್ಲಿಗೂ ಕಾಲಿಟ್ಟಿದೆ. ಜಹಾಂಗೀರ್‌ಪುರಿಯಲ್ಲಿ ಅಕ್ರಮವಾಗಿ ಕಟ್ಟಿಕೊಳ್ಳಲಾಗಿದ್ದ ಮನೆಗಳನ್ನು ದಿಲ್ಲಿ ಮಹಾನಗರಪಾಲಿಕೆ (ಎನ್‌ಡಿಎಂಸಿ) ಬುಲ್‌ಡೋಜರ್‌ ಬಳಸಿ ಕೆಡವಿದೆ. ಇದಕ್ಕೆ ಹಿನ್ನೆಲೆಯಾಗಿ ಹನುಮಾನ್‌ ಜಯಂತಿ ಸಂದರ್ಭದಲ್ಲಿ ನಡೆದ ಗಲಭೆ ಇತ್ತು. ಹನುಮಾನ್‌ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಗಲಭೆಗೆ ಕಾರಣರಾದ ಆರೋಪಿಗಳು ಈ ಜಹಾಂಗೀರ್‌ಪುರಿಯವರು ಎಂಬ ಹಿನ್ನೆಲೆಯಲ್ಲಿ, ಅಕ್ರಮ ಕಟ್ಟಡ ನಿರ್ಮಾಣ ಕಾರ್ಯದ ಕಾರಣವಿಟ್ಟುಕೊಂಡು ಈ ಮನೆಗಳನ್ನು ಕೆಡವಲಾಗಿದೆ. ಇದು ಸ್ಲಂ ಪ್ರದೇಶವಾಗಿದ್ದು, ಇಲ್ಲಿ ತಗಡಿನ ಶೀಟ್‌ ಹೊದೆಸಿದ ತಾತ್ಕಾಲಿಕ ಶೆಡ್‌ಗಳಿದ್ದವು. ಈ ಮಧ್ಯೆ ಇದನ್ನು ಪ್ರಶ್ನಿಸಿದ ಜಹಾಂಗೀರ್‌ಪುರಿಯ ಕಕ್ಷಿದಾರರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದು, ಈ ಕಾರ್ಯಾಚರಣೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ನೀಡಿದ ಬಳಿಕವೂ ಎರಡು ಗಂಟೆ ನಡೆಸಲಾಗಿತ್ತು.

ಮುಸ್ಲಿಮರ ಮೇಲೆ ಬ್ರಹ್ಮಾಸ್ತ್ರ?

ಇದು ಬಿಜೆಪಿ ಮುಸ್ಲಿಮರನ್ನು ಬೆದರಿಸಲು ಪ್ರಯೋಗಿಸುತ್ತಿರುವ ಕಾನೂನುಬಾಹಿರ, ಸಂವಿಧಾನಬಾಹಿರ ಅಸ್ತ್ರ, ಇದು ಗೂಂಡಾಗಿರಿಯಲ್ಲದೆ ಮತ್ತೇನಲ್ಲ ಎಂದು ಎಡಪಕ್ಷಗಳು, ಕಾಂಗ್ರೆಸ್‌, ಆಪ್‌ ಮುಂತಾದವು ಆರೋಪಿಸಿವೆ. ಎಡಪಕ್ಷ ನಾಯಕಿ ಬೃಂದಾ ಕಾರಟ್‌ ಅವರು ಜಹಾಂಗೀರ್‌ಪುರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬುಲ್‌ಡೋಜರ್‌ ಮುಂದೆ ಬಂದು ಪ್ರತಿಭಟಿಸಿದ್ದಾರೆ. ʼʼಇದು ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲೆ ನಡೆಯುತ್ತಿರುವ ದಾಳಿ, ಅಲ್ಪಸಂಖ್ಯಾತರ ಮೇಲೆ ಸರಕಾರಿ ಪ್ರಾಯೋಜಿತ ಹಲ್ಲೆʼʼ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಆದರೆ, ʼʼಈ ಕಾರ್ಯಾಚರಣೆ ಕಾನೂನಾತ್ಮಕವಾಗಿ ನಡೆದಿದ್ದು, ಇದಕ್ಕೆ ಮತೀಯ ಕೋನ ನೀಡಬಾರದುʼʼ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಸ್ಪಷ್ಟಪಡಿಸಿದ್ದಾರೆ. ದೇಶಾದ್ಯಂತ ರಾಜಕೀಯ ವಾಗ್ಯುದ್ಧಕ್ಕೆ ಪ್ರಸ್ತುತ ಬುಲ್‌ಡೋಜರ್‌ ವಸ್ತುವಾಗಿದೆ.

ಇದನ್ನೂ ಓದಿ: Explainer: ಕಾಂಗ್ರೆಸ್‌ ಉಳಿಸೋಕೆ ಪ್ರಶಾಂತ್‌ ಕಿಶೋರ್‌ ಪ್ಲಾನ್‌ ಏನು?

ಕರ್ನಾಟಕದಲ್ಲಿ ?

ಕರ್ನಾಟಕದಲ್ಲೂ ಸಮಾಜವಿರೋಧಿ ಶಕ್ತಿಗಳ ಮೇಲೆ ಬುಲ್‌ಡೋಜರ್‌ ಅಸ್ತ್ರವನ್ನು ಪ್ರಯೋಗಿಸಬೇಕು ಎಂದು ಬಿಜೆಪಿಯ ಕೆಲವು ಶಾಸಕರು, ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಗೃಹ ಸಚಿವರು, ʼʼಕರ್ನಾಟಕದ ಸಾಮಾಜಿಕ, ಕಾನೂನು ಸುವ್ಯವಸ್ಥೆಗೆ ಸೂಕ್ತವಾಗುವ ಕ್ರಮವನ್ನು ಅನುಸರಿಸುತ್ತೇವೆʼʼ ಎಂದಿದ್ದಾರೆ.

Exit mobile version