Site icon Vistara News

Explainer: ಹಿಂದಿ ರಾಷ್ಟ್ರಭಾಷೆ ಹೌದೋ, ಅಲ್ಲವೋ?

ಕನ್ನಡದ ನಟ ಕಿಚ್ಚ ಸುದೀಪ್‌ ಹಾಗೂ ಬಾಲಿವುಡ್‌ ನಟ ಅಜಯ್‌ ದೇವಗನ್‌ ನಡುವೆ ಒಂದು ಟ್ವೀಟ್‌ ವಾರ್‌ ನಡೆಯಿತು. ಟಿವಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಸುದೀಪ್‌ ಹೇಳಿದ ʼʼಹಿಂದಿ ರಾಷ್ಟ್ರಭಾಷೆ ಅಲ್ಲʼʼ ಎನ್ನುವ ಮಾತನ್ನು ಇಟ್ಟುಕೊಂಡು ಅಜಯ್‌ ದೇವಗನ್‌, ʼʼಹಾಗಿದ್ದರೆ ನಿಮ್ಮ ಸಿನಿಮಾಗಳನ್ನು ಹಿಂದಿಗೆ ಯಾಕೆ ಡಬ್‌ ಮಾಡುತ್ತೀರಿ?ʼʼ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ಸುದೀಪ್‌, ʼʼನೀವು ಹಿಂದಿಯಲ್ಲಿ ಮಾಡಿದ ಟ್ವೀಟನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದರೆ ಅದಕ್ಕೆ ಕಾರಣ ನಾವು ಹಿಂದಿಯನ್ನು ಓದುತ್ತೇವೆ, ಬರೆಯುತ್ತೇವೆ, ಅರ್ಥ ಮಾಡಿಕೊಳ್ಳುತ್ತೇವೆ ಎಂದು. ಆದರೆ ನಾನು ಕನ್ನಡದಲ್ಲಿ ಟ್ವೀಟ್‌ ಮಾಡಿದ್ದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತಿತ್ತು?ʼʼ ಎಂದು ಪ್ರಶ್ನಿಸಿದ್ದರು. ನಂತರ ಇಬ್ಬರೂ ಸಮಾಧಾನಪೂರ್ವಕವಾಗಿ ಈ ವಾಗ್ವಾದಕ್ಕೆ ಮಂಗಳ ಹಾಡಿದ್ದರು.

ಆದರೆ ಇವರಿಬ್ಬರ ಟ್ವೀಟ್‌ಗಳು ಕನ್ನಡ ಪ್ರೇಮಿಗಳು ಮತ್ತು ಹಿಂದಿ ಪ್ರೇಮಿಗಳ ನಡುವೆ ಸಾಕಷ್ಟು ಕಿಚ್ಚು ಹೊತ್ತಿಸಿದೆ. ಕನ್ನಡ ಸಿನಿಮಾ ಪ್ರೇಮಿಗಳು, ಕನ್ನಡ ಭಾಷಾ ಹೋರಾಟಗಾರರು, ಅಜಯ್‌ ಟ್ವೀಟ್‌ಗೆ ಉಗ್ರವಾಗಿ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ, ಜೆಡಿಎಸ್‌ ನಾಯಕ ಕುಮಾರಸ್ವಾಮಿ ಮುಂತಾದವರು ಕೂಡ ಪ್ರತಿಕ್ರಿಯಿಸಿದ್ದರು.

ವಾಸ್ತವವಾಗಿ ಈ ವಿವಾದ ಮತ್ತೆ ಮತ್ತೆ ಜೀವ ಪಡೆಯುತ್ತಲೇ ಇದೆ. ಕಳೆದ ಬಾರಿ ಗೃಹ ಸಚಿವ ಅಮಿತ್‌ ಶಾ ಅವರು ʼʼಹಿಂದಿ ದೇಶದ ಸಂಪರ್ಕ ಭಾಷೆ ಆಗಬೇಕುʼʼ ಎಂದು ಹೇಳಿದಾಗಲೂ ದಕ್ಷಿಣ ಭಾರತೀಯ ಪ್ರಜೆಗಳು ವಿರೋಧಿಸಿದ್ದರು. ದ್ರಾವಿಡ ಚಳವಳಿಯ ಪ್ರಭಾವ ಸ್ಪಷ್ಟವಾಗಿರುವ ತಮಿಳುನಾಡಿನಲ್ಲಿ ಈ ವಿರೋಧ ಇನ್ನಷ್ಟು ಉಗ್ರವಾಗಿತ್ತು.

ರಾಷ್ಟ್ರಭಾಷೆಯ ಬಗ್ಗೆ ಸಂವಿಧಾನ ಏನು ಹೇಳುತ್ತೆ?

ಭಾರತದಲ್ಲಿ ಯಾವುದೇ ಭಾಷೆಯನ್ನು “ರಾಷ್ಟ್ರಭಾಷೆʼʼ ಎಂದು ಘೋಷಿಸಿಲ್ಲ. ಆದರೆ ಹಿಂದಿ ಮತ್ತು ಇಂಗ್ಲಿಷ್‌ಗಳು ʼಅಧಿಕೃತ ಭಾಷೆʼಗಳಾಗಿವೆ.
ಸಂವಿಧಾನದ 343ನೇ ವಿಧಿ ಹೀಗೆ ಹೇಳಿದೆ: (1) ದೇವನಾಗರಿ ಲಿಪಿಯಲ್ಲಿ ಬರೆಯುವ ಹಿಂದಿ, ಭಾರತ ಒಕ್ಕೂಟದ ಅಧಿಕೃತ ಭಾಷೆಯಾಗಿದೆ. (2) ಈ ಸಂವಿಧಾನ ಜಾರಿಗೆ ಬಂದ ಬಳಿಕದ 15 ವರ್ಷಗಳ ಕಾಲ, ಭಾರತ ಒಕ್ಕೂಟದ ಎಲ್ಲ ಆಡಳಿತ ನಿರ್ವಹಣೆಗಾಗಿ ಇಂಗ್ಲಿಷ್‌ ಭಾಷೆಯನ್ನು ಬಳಸುವುದು. ಈ ಅವಧಿಯಲ್ಲಿ ರಾಷ್ಟ್ರಪತಿಗಳು ಆಡಳಿತ ನಿರ್ವಹಣೆಗೆ ಇಂಗ್ಲಿಷ್‌ ಜೊತೆಗೆ ಹಿಂದಿಯನ್ನು ಮತ್ತು ದೇವನಾಗರಿ ಅಂಕಿಗಳನ್ನು ಬಳಸುವುದನ್ನು ಅಧಿಕೃತಗೊಳಿಸಬಹುದು. (3) ಈ ಅವಧಿಯ ಬಳಿಕ, ಸಂಸತ್ತು, ಇಂಗ್ಲಿಷ್‌ ಬಳಕೆಯ ಬಗ್ಗೆ ಮತ್ತು ದೇವನಾಗರಿ ಅಂಕಿಗಳ ಬಳಕೆಯ ಬಗ್ಗೆ ಕಾನೂನು ರೂಪಿಸಬಹುದು.
ʼಅಧಿಕೃತ ಭಾಷಾ ಕಾಯಿದೆʼಯನ್ನು 1963ರಲ್ಲಿ ರೂಪಿಸಿ ಜಾರಿಗೆ ತರಲಾಯಿತು. ಅದರ ಪ್ರಕಾರ, ಇಂಗ್ಲಿಷ್‌ ಹಾಗೂ ಹಿಂದಿಗಳು ಆಡಳಿತ ನಿರ್ವಹಣೆಗಾಗಿ ಅಧಿಕೃತ ಭಾಷೆಗಳಾಗಿ ಮುಂದುವರಿದವು.

ಸಂವಿಧಾನ ಸಭೆಯಲ್ಲಿ ಚರ್ಚೆ

ಸಂವಿಧಾನ ರಚನೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ಪ್ರಸ್ತಾಪ ಗದ್ದಲ ಎಬ್ಬಿಸಿತು. ಆಗ ಸಭೆಯ ಸದಸ್ಯರಾಗಿದ್ದ ತಮಿಳುನಾಡು ಮೂಲದ ಕಾಂಗ್ರೆಸ್‌ ನಾಯಕ ಟಿ.ಟಿ.ಕೃಷ್ಣಮಾಚಾರಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರು ಅಂದು ಮಾಡಿದ್ದ ಪ್ರಖರ ಭಾಷಣವು ದಕ್ಷಿಣ ಭಾರತದಲ್ಲಿ ಪ್ರಾಂತೀಯ ಭಾಷಾ ಪ್ರೇಮವನ್ನು ಎಚ್ಚರಿಸಿತ್ತು. ತೀವ್ರ ವಾದ- ವಿವಾದದ ಬಳಿಕ ʼಮುನ್ಷಿ- ಅಯ್ಯಂಗಾರ್‌ʼ ಸೂತ್ರವನ್ನು ಅನುಸರಿಸಲು ತೀರ್ಮಾನಿಸಲಾಯಿತು. ಅದರ ಪ್ರಕಾರ, ಯಾವುದೇ ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿ ಘೋಷಿಸದೆ, ಹಿಂದಿ ಮತ್ತ ಇಂಗ್ಲಿಷ್‌ ಅನ್ನು ಅಧಿಕೃತ ಭಾಷೆಗಳನ್ನಾಗಿ ಮಾತ್ರ ಅಂಗೀಕರಿಸಲಾಯಿತು.

ಸಂವಿಧಾನದ 8ನೇ ಶೆಡ್ಯೂಲ್‌

ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಹಿಂದಿ, ಕನ್ನಡ, ತಮಿಳು ಸೇರಿದಂತೆ ಭಾರತದ 22 ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಈ ಎಲ್ಲ ಭಾಷೆಗಳನ್ನು ಅಭಿವೃದ್ಧಿ ಮಾಡಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂವಿಧಾನ ನಿರ್ದೇಶಿಸಿದೆ. ಹೀಗಾಗಿ ಎಲ್ಲ 22ರಂತೆ ಹಿಂದಿ ಕೂಡ ಒಂದು ಭಾರತೀಯ ಭಾಷೆ. ಆದರೆ ತಮ್ಮ ಮಾತೃಭಾಷೆ ಎಂದು ಜನರು ಹೇಳಿಕೊಳ್ಳುವ ಭಾಷೆಗಳು, ಉಪಭಾಷೆಗಳು, ಭಾಷಾವೈವಿಧ್ಯ ಎಲ್ಲದರ ಮೊತ್ತ ಸುಮಾರು 19,500 ! ಇನ್ನು 10,000ಕ್ಕೂ ಅಧಿಕ ಮಂದಿ ಮಾತಾಡುವ ಭಾಷೆಗಳ ಸಂಖ್ಯೆ 121. ಭಾಷಾಶಾಸ್ತ್ರಜ್ಞ ಗಣೇಶ್‌ ದೇವಿಯವರ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಸುಮಾರು 100 ಭಾಷೆಗಳು ಬಳಕೆಯಲ್ಲಿಲ್ಲದೆ ನಶಿಸಿ ಹೋಗಿವೆ. 8ನೇ ಶೆಡ್ಯೂಲ್‌ ಸೇರ್ಪಡೆಗೆ ಕರ್ನಾಟಕದ ತುಳು ಸೇರಿದಂತೆ ಇನ್ನೂ 38 ಭಾಷೆಗಳ ಬೇಡಿಕೆ ಇದೆ.

ಹಿಂದಿ ವಿರೋಧಿ ಚಳವಳಿ

1937ರಲ್ಲಿ ಆಗಿನ ಮದ್ರಾಸ್‌ ಪ್ರಾಂತ್ಯದಲ್ಲಿ ಸಿ.ರಾಜಗೋಪಾಲಾಚಾರಿ ಅವರ ನೇತೃತ್ವದಲ್ಲಿ ರಚನೆಯಾದ ಕಾಂಗ್ರೆಸ್‌ ಸರಕಾರ, ಶಾಲೆಗಳಲ್ಲಿ ಹಿಂದಿ ಬೋಧನೆಯನ್ನು ಕಡ್ಡಾಯಗೊಳಿಸಲು ಮುಂದಾಯಿತು. ಆದರೆ ಉಗ್ರ ಭಾಷಾಭಿಮಾನಿಗಳಾದ ತಮಿಳರು ಇದಕ್ಕೆ ಸೊಪ್ಪು ಹಾಕಲಿಲ್ಲ. ಇದರ ವಿರುದ್ಧ ಪೆರಿಯಾರ್‌ ನೇತೃತ್ವದಲ್ಲಿ ದೊಡ್ಡ ಪ್ರತಿಭಟನೆ ಆಂದೋಲನ ಆರಂಭವಾಯಿತು. ದ್ರಾವಿಡ ವರ್ಸಸ್‌ ಆರ್ಯ ಸ್ವರೂಪ ಪಡೆದುಕೊಂಡಿತು. ಮೂರು ವರ್ಷ ನಿರಂತರ ಹೋರಾಟ ನಡೆಯಿತು. 1939ರಲ್ಲಿ ಕಾಂಗ್ರೆಸ್‌ ಸರಕಾರವೇ ಇದರ ಕಾವಿಗೆ ಬಳಲಿ ಬಿದ್ದುಹೋಯಿತು. ಕೊನೆಗೆ 1940ರಲ್ಲಿ ಅಲ್ಲಿನ ಗವರ್ನರ್‌ ಹಿಂದಿ ಕಡ್ಡಾಯ ನೀತಿ ರದ್ದುಪಡಿಸಿ ಆದೇಶ ಹೊರಡಿಸಿದರು.

ಹಿಂದಿ ದಿವಸ್‌

ಸೆ.14ನ್ನು ಹಿಂದಿ ದಿವಸ್‌ ಎಂದು ಆಚರಿಸುವ ಪರಿಪಾಠ 1953ರಿಂದ ಆರಂಭವಾಯಿತು. 1949ರ ಸೆ.14ರಂದು ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನವನ್ನು ಸಂವಿಧಾನ ರಚನಾ ಸಭೆ ನೀಡಿತ್ತು. ಇದರ ನೆನಪಿಗಾಗಿ ಹಿಂದಿ ದಿವಸ್‌ ಆಚರಣೆಯನ್ನು ಕೇಂದ್ರ ಸರಕಾರ ಆಚರಿಸುತ್ತಿದೆ. ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಇನ್ನಷ್ಟು ವಿಸ್ತರಿಸಲು, ಗಟ್ಟಿಗೊಳಿಸಲು ಕೇಂದ್ರ ನಡೆಸುತ್ತಿರುವ ಪ್ರಯತ್ನವಿದು. ಹಿಂದಿ ಬೆಲ್ಟ್‌ನ ರಾಜ್ಯಗಳು (ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ದಿಲ್ಲಿ, ಹರಿಯಾಣ, ಜಾರ್ಖಂಡ್‌, ರಾಜಸ್ಥಾನ) ಕೇಂದ್ರದ ರಾಜಕೀಯದಲ್ಲಿ ಸದಾ ಪಡೆಯುವ ಬಲಿಷ್ಠ ಸ್ಥಾನಮಾನಗಳು, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಪದೇ ಪದೇ ಬಿಂಬಿಸುವುದರಲ್ಲಿ ಪರ್ಯವಸಾನವಾಗುತ್ತಿವೆ.

ಇದನ್ನೂ ಓದಿ: ಕರೊನಾ ಕಾಲ ಇನ್ನೂ ಕಳೆದಿಲ್ಲ: ಮುಂಜಾಗ್ರತೆ ವಹಿಸಿ ಎಂದ ಪ್ರಧಾನಿ ಮೋದಿ

ಯಾವ ಮಾತೃಭಾಷಿಕರು ಎಷ್ಟು?

(2011ರ ಜನಗಣತಿ ಪ್ರಕಾರ)
ಹಿಂದಿ 26.60%
ಬಂಗಾಳಿ 7.94%
ಮರಾಠಿ 6.86%
ತೆಲುಗು 6.70%
ತಮಿಳು 5.75%
ಕನ್ನಡ 3.61%

Exit mobile version