ಮುಂದಿನ ರಾಷ್ಟ್ರಪತಿ ಚುನಾವಣೆಗೆ ತಯಾರಿಯನ್ನು ಆಡಳಿತ ಪಕ್ಷ ಬಿಜೆಪಿ ಆಗಲೇ ಆರಂಭಿಸಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನೀತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿರ್ದೇಶನದಂತೆ ಅವರು ಈ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಬೆಂಬಲ ಕೋರುವ ಅಂಗವಾಗಿ ಈ ಭೇಟಿ ನಡೆದಿದೆ ಎಂದು ಪಕ್ಷ ಹೇಳಿದೆ. ಆದರೆ, ಸ್ವತಃ ನಿತೀಶ್ ಕುಮಾರ್ ಅವರನ್ನೇ ರಾಷ್ಟ್ರಪತಿಗಳ ಪಟ್ಟಕ್ಕೆ ಕೂರಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದೂ ಊಹಿಸಲಾಗಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ನಿತೀಶ್ ಅವರಿಗೊಂದು ವಿಶೇಷ ಪಾತ್ರವಿದೆ. ಅವರು ತಾವಿದ್ದ ಒಕ್ಕೂಟಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ ಇತಿಹಾಸ ಹೊಂದಿದ್ದಾರೆ. 2012ರಲ್ಲಿ ಅವರು ಎನ್‌ಡಿಎ ಪಾಳಯದಲ್ಲಿ ಇದ್ದರೂ ಪ್ರತಿಪಕ್ಷ ಯುಪಿಎ ನಿಲ್ಲಿಸಿದ ಪ್ರಣಬ್ ಮುಖರ್ಜಿ ಅವರನ್ನು ಬೆಂಬಲಿಸಿದ್ದರು. ನಂತರ 2017ರಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ಮುಂತಾದ ಪಕ್ಷಗಳಿದ್ದ ಮಹಾ ಒಕ್ಕೂಟದಲ್ಲಿ ತಾವಿದ್ದರೂ, ತಮ್ಮ ಒಕ್ಕೂಟದ ಅಭ್ಯರ್ಥಿ ಮೀರಾ ಕುಮಾರ್ ಬದಲಾಗಿ ಎನ್‌ಡಿಎ ನಿಲ್ಲಿಸಿದ ಅಭ್ಯರ್ಥಿ ರಾಮನಾಥ್ ಕೋವಿಂದ್ ಪರವಾಗಿ ಮತ ಹಾಕಿದ್ದರು.
ಈ ನಡುವೆ ಬಿಜು ಜನತಾ ದಳ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳನ್ನೂ ಈ ವಿಷಯವಾಗಿ ಬಿಜೆಪಿ ಸಂಪರ್ಕಿಸಿದ್ದು, ಇಬ್ಬರು ಬಿಜೆಪಿ ಪರವಾಗಿ ನಿಲ್ಲಲಿದ್ದಾರೆ ಎಂದು ಭಾವಿಸಲಾಗಿದೆ.
ಯಾವಾಗ ರಾಷ್ಟ್ರಪತಿ ಚುನಾವಣೆ?
ಈ ವರ್ಷ ಜುಲೈ 25ರಂದು ರಾಮನಾಥ್ ಕೋವಿಂದ್ ಅವರ ಅವಧಿ ಮುಗಿಯುತ್ತದೆ. ಅವರಿಗೆ ಈಗ 76 ವರ್ಷ. 75 ವರ್ಷದ ಬಳಿಕ ಯಾವುದೇ ದೊಡ್ಡ ಹುದ್ದೆಗೆ ಸ್ಪರ್ಧಿಸುವಂತಿಲ್ಲ ಎಂಬುದು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾಕಿಕೊಂಡಿರುವ ಆದರ್ಶ. ಆದರೆ ರಾಷ್ಟ್ರಪತಿ ವಿಚಾರದಲ್ಲಿ ಈ ಆದರ್ಶವನ್ನು ಅದು ಅನುಸರಿಸಲಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯದು.
ರಾಷ್ಟ್ರಪತಿಗಳ ಆಯ್ಕೆ ಹೇಗೆ?
ರಾಷ್ಟ್ರಪತಿಗಳ ಚುನಾವಣೆ ಎಂಬುದು ಒಂದು ಬಗೆಯ ಕುತೂಹಲಕಾರಿ ಲೆಕ್ಕಾಚಾರದಿಂದ ಕೂಡಿದೆ. ಇಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಹುಮತ ಹೊಂದಿದ್ದವರು ಗೆಲ್ಲುತ್ತಾರೆ ಎಂದೇನಿಲ್ಲ. ಇದರ ಲೆಕ್ಕಾಚಾರ ಕೊಂಚ ಜಟಿಲವಾಗಿದ್ದು, ರಾಜ್ಯ ವಿಧಾನಸಭೆಗಳನ್ನೂ ಒಳಗೊಳ್ಳುತ್ತದೆ.
ಎಲೆಕ್ಟೋರಲ್ ಕಾಲೇಜ್
ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಎಲೆಕ್ಟೋರಲ್ ಕಾಲೇಜ್‌ನಲ್ಲಿ 543 ಲೋಕಸಭೆ ಸದಸ್ಯರು, 233 ರಾಜ್ಯಸಭೆ ಸಂಸದರು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4,120 ಶಾಸಕರು ಸೇರುತ್ತಾರೆ. ಎಲ್ಲ ಮತಗಳೂ ಸೇರಿದ ಒಟ್ಟಾರೆ ಮತಮೌಲ್ಯ 10,98,903.
ಈ ಮತಮೌಲ್ಯವನ್ನು ಲೆಕ್ಕ ಹಾಕುವುದು ಹೀಗೆ: ಪ್ರತೀ ಸಂಸದ ಹಾಗೂ ಶಾಸಕರ ಮತಕ್ಕೂ ಅದರದೇ ಮೌಲ್ಯವಿರುತ್ತದೆ. ಸಂಸದರ ಮತದ ಮೌಲ್ಯ 708. ಶಾಸಕರ ಮತದ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗುತ್ತದೆ. ಅದು ಆಯಾ ರಾಜ್ಯದ ಜನಸಂಖ್ಯೆ (1971ರ ಗಣತಿ ಆಧರಿಸಿ) ನಿರ್ಣಯವಾಗುತ್ತದೆ.
ಉತ್ತರ ಪ್ರದೇಶದ ಶಾಸಕರ ಮತದ ಮೌಲ್ಯ ಅತಿ ಹೆಚ್ಚು. 208 ಮತಮೌಲ್ಯವನ್ನು ಹೊಂದಿರುವ ಇಲ್ಲಿನ 403 ಶಾಸಕರ ಒಟ್ಟಾರೆ ಮತಮೌಲ್ಯ 83.824. ರಾಜ್ಯದ 80 ಸಂಸದರ ಒಟ್ಟು ಮತಮೌಲ್ಯ 56,640. ಇಲ್ಲಿನ ಸಂಸದರು ಮತ್ತು ಶಾಸಕರ ಮತಗಳ ಮೌಲ್ಯ ಒಟ್ಟಾರೆಯಾಗಿ 1.4 ಲಕ್ಷದಷ್ಟಿದ್ದು, ರಾಷ್ಟ್ರಪತಿ ನಿರ್ಧಾರದಲ್ಲಿ 12.7 ಶೇಕಡ ತೂಕವನ್ನು ಹೊಂದಿದೆ.
ಪಂಜಾಬ್‌ನಂಥ ಸಣ್ಣ ರಾಜ್ಯಗಳ ಎಂಎಲ್‌ಎ ಮತಮೌಲ್ಯ 118. ಉತ್ತರಾಖಂಡ 64, ಗೋವಾ 20.
ಚುನಾವಣೆಗೆ ಸ್ಪರ್ಧಿಗಳು ತಮ್ಮ ನಾಮಕರಣ ಪತ್ರ ಸಲ್ಲಿಸಿದ ಬಳಿಕ ಎಲ್ಲರಿಗೂ ಬ್ಯಾಲೆಟ್ ಪೇಪರ್‌ಗಳನ್ನು ನೀಡಲಾಗುತ್ತದೆ. ಸಂಸದರಿಗೆ ಹಸಿರು ಹಾಗೂ ಶಾಸಕರಿಗೆ ಗುಲಾಬಿ ಬಣ್ಣದ ಮತಪತ್ರಗಳು.
ಈ ಬಾರಿ ಮತಮೌಲ್ಯ ಇಳಿಕೆ
ಈ ಬಾರಿ ಸಂಸದರ ಮತಮೌಲ್ಯ 708ರಿಂದ 700ಕ್ಕೆ ಇಳಿಕೆಯಾಗಲಿದೆ. ಅದಕ್ಕೆ ಕಾರಣ ಜಮ್ಮು- ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲದಿರುವುದು. ಸಂಸದರ ಮತದ ಮೌಲ್ಯ ನಿರ್ಧಾರವಾಗುವುದು ಎಲ್ಲ ರಾಜ್ಯಗಳ ಶಾಸಕರ ಮತಗಳ ಸಂಖ್ಯೆಯನ್ನು ಆಧರಿಸಿ. ಜಮ್ಮು- ಕಾಶ್ಮೀರದಲ್ಲಿ ಇದ್ದ 83 ಶಾಸಕರ ಮತಗಳು ಈಗ ಇಲ್ಲದಿರುವುದರಿಂದ ಅಷ್ಟು ಮತಮೌಲ್ಯ ಕಡಿಮೆಯಾಗುತ್ತಿದೆ.
ಸೋಲು ಗೆಲುವಿನ ನಿಷ್ಕರ್ಷೆ
ಈ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸಿದವರು ವಿಜಯಿ ಆಗುತ್ತಾರೆ ಎಂಬ ಖಾತ್ರಿ ಇಲ್ಲ! ಗೆಲುವನ್ನು ಅವರು ಪಡೆದ ಕೋಟಾ ಆಧರಿಸಿ ನಿರ್ಧರಿಸಲಾಗುತ್ತದೆ. ಅದನ್ನು ನಿರ್ಧರಿಸಲು ಈ ಕೆಳಗಿನ ಸೂತ್ರವನ್ನು ಅನುಸರಿಸಲಾಗುತ್ತದೆ.
ಕೋಟಾ= ಪಡೆದ ಮತಗಳ ಮೌಲ್ಯವನ್ನು ಎರಡರಿಂದ ಭಾಗಿಸಿ, ಬಂದ ಮೊತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವ ಅಂಕಿ.
ಹೀಗೆ ಲಭ್ಯವಾಗುವ ಕೋಟಾಗಿಂತ ಅಧಿಕ ಮತಗಳನ್ನು ಪಡೆದ ಅಭ್ಯರ್ಥಿ ವಿಜಯಿ ಎನಿಸಿಕೊಳ್ಳುತ್ತಾರೆ. ಒಂದು ವೇಳೆ ಯಾರಿಗೂ ಈ ಕೋಟಾಗಿಂತ ಹೆಚ್ಚು ಮತಗಳೇ ಸಿಕ್ಕಿಲ್ಲ ಎಂದಾದರೆ, ಅತೀ ಕಡಿಮೆ ಮತಗಳನ್ನು ಪಡೆದವರನ್ನು ಸ್ಪರ್ಧೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ.
ಪ್ರಸ್ತುತ ಲೆಕ್ಕಾಚಾರ ಹೇಗಿದೆ?
ಎನ್‌ಡಿಎಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಹುಮತವಿದೆ. ಆದರೆ ರಾಷ್ಟ್ರಪತಿಯನ್ನು ಗೆಲ್ಲಿಸಿಕೊಳ್ಳಲು ಅದೊಂದೇ ಸಾಲದು. ವಿಶೇಷವಾಗಿ, ಮಾರ್ಚ್ 10ರಂದು ಬಂದ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಚಿತ್ರಣ ತುಸು ಬದಲಾಗಿದೆ.
ಇಂದು 17 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿದೆ. 2017ರಿಂದೀಚೆಗೆ ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನಗಳಂಥವುಗಳನ್ನು ಬಿಜೆಪಿ ಕಳೆದುಕೊಂಡಿದೆ. ಆದರೆ ಕರ್ನಾಟಕ, ಮಧ್ಯಪ್ರದೇಶಗಳನ್ನು ಗೆದ್ದುಕೊಂಡಿದೆ. ಟಿಡಿಪಿ, ಶಿವಸೇನೆ, ಅಕಾಳಿ ದಳ ಮುಂತಾದ ಮಿತ್ರರನ್ನೂ ಕಳೆದುಕೊಂಡಿದೆ. ಆದರೆ ಜೆಡಿಯು ಮುಂತಾದ ಮಿತ್ರರು ಮರಳಿ ಬಂದಿದ್ದಾರೆ.
ಹೀಗಿದ್ದರೂ ಬಿಜೆಪಿಗೆ ರಾಷ್ಟ್ರಪತಿಯನ್ನು ಗೆಲ್ಲಿಸಿಕೊಳ್ಳಲು ಅಗತ್ಯವಾದ ಬಹುಮತವಿಲ್ಲ. ಲೋಕಸಭೆ, ರಾಜ್ಯಸಭೆ, ವಿಧಾನಸಭೆಗಳ ಒಟ್ಟಾರೆ ಮತಮೌಲ್ಯಗಳನ್ನು ಲೆಕ್ಕ ಹಾಕಿದರೆ ಬಿಜೆಪಿ ಮತ್ತು ಮಿತ್ರಪಕ್ಷಗಳ ಪಾಲಿನಲ್ಲಿ ಶೇ. 48.9ರಷ್ಟಿದೆ. ಆದರೆ ಉಳಿದೆಲ್ಲಾ ಪಕ್ಷಗಳ ಒಟ್ಟಾರೆ ಮತಮೌಲ್ಯ ಶೇ. 51.1ರಷ್ಟಿದೆ. ಅಂದರೆ ಇನ್ನೂ 1.1%ದಷ್ಟು ಬಲವನ್ನು (ಸುಮಾರು 11,990 ಪಾಯಿಂಟ್) ಬಿಜೆಪಿ ಒಗ್ಗೂಡಿಸಿಕೊಳ್ಳಬೇಕಿದೆ.
ಎನ್‌ಡಿಎ ಎದುರು ಎಲ್ಲ ಪಕ್ಷಗಳೂ ಒಗ್ಗೂಡಿದರೆ ಮಾತ್ರ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು. ಆದರೆ ಬಿಜೆಪಿ ದೈತ್ಯ ಶಕ್ತಿಯ ಎದುರು ಅದು ಸಾಧ್ಯವಿದೆಯೇ? ಅನುಮಾನವಿದೆ.
ಇತರ ಮತಗಳು
ಇಂಥ ಸಂದರ್ಭದಲ್ಲಿ ಬಿಜೆಪಿ ಕಡೆಯವರಿಗೂ ಕಾಂಗ್ರೆಸ್ ಕಡೆಯವರಿಗೂ ವರವಾಗಿ ಬರಬಹುದಾದವರು, ಅತ್ತ ಎನ್‌ಡಿಎಯಲ್ಲೂ ಸೇರಿಕೊಂಡಿಲ್ಲದ, ಇತ್ತ ಯುಪಿಎಯನ್ನೂ ಸೇರಿಕೊಂಡಿಲ್ಲದ, ಆದರೆ ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎನ್ನುವಂತಿರುವ ಸಣ್ಣ ಪಕ್ಷಗಳು. ಇವರ ಮತಪ್ರಮಾಣ 9.5%ದಷ್ಟಿದೆ. ಇವರಲ್ಲಿ ಒಂದೆರಡು ಪಕ್ಷಗಳನ್ನು ತನ್ನ ಕಡೆಗೆ ಎಳೆದುಕೊಂಡರೆ ಬಿಜೆಪಿಯ ಬೇಳೆ ಬೆಂದ ಹಾಗೆ.
ಅದಕ್ಕಾಗಿಯೇ ಬಿಜೆಪಿಯ ಮುಖಂಡರು ಈಗ ಜೆಡಿಯು ಹಾಗೂ ವೈಎಸ್‌ಆರ್ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಎರಡೂ ಪಕ್ಷಗಳೂ ಕಾಂಗ್ರೆಸ್ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ತೆಲಂಗಾಣದ ಟಿಆರೆಸ್ ಕೂಡ ಇದೇ ಸನ್ನಿವೇಶದಲ್ಲಿದೆ. ಸ್ವಲ್ಪ ಪ್ರಯತ್ನ ಪಟ್ಟರೆ ಈ ಮೂರೂ ಪಕ್ಷಗಳನ್ನೂ ಬಿಜೆಪಿ ಒಲಿಸಿಕೊಳ್ಳಬಹುದು. ಜೆಡಿಯು (ಮತಪ್ರಮಾಣ 2.9%), ವೈಎಸ್‌ಆರ್‌ಸಿಪಿ (4%) ಮತ್ತು ಟಿಆರೆಸ್ (2.2%) ಮತಗಳು ಬಿಜೆಪಿಗೆ ಖಂಡಿತಕ್ಕೂ ವರದಾನ.
ನಿರ್ಣಾಯಕ ಹಂತ
ಈ ಸಲದ ರಾಷ್ಟ್ರಪತಿ ಚುನಾವಣೆ ನಿಜವಾಗಿಯೂ ಭಾರತೀಯ ರಾಜಕಾರಣದಲ್ಲಿ ನಿರ್ಣಾಯಕ ಹಂತವೆನಿಸಲಿದೆ. ಆಡಳಿತ ಹಾಗೂ ಪ್ರತಿಪಕ್ಷಗಳ ಬಲಾಬಲದ ಪೈಪೋಟಿ ಇದನ್ನು ಇನ್ನಷ್ಟು ಕುತೂಹಲಕರಗೊಳಿಸಿದೆ. ಪುರಾತನ ಪಕ್ಷ ಕಾಂಗ್ರೆಸ್ ತನ್ನ ನೆಲೆಗಳನ್ನು ಕಳೆದುಕೊಳ್ಳುತ್ತಿದ್ದು, ಮತ್ತೆ ಪಡೆಯಬೇಕಾದ ಜರೂರಿನಲ್ಲಿದೆ. ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್, ಉದ್ಧವ ಠಾಕ್ರೆ, ಸ್ಟಾಲಿನ್‌ರಂಥ ಪ್ರಾದೇಶಿಕ ನಾಯಕರು ತಲೆ ಎತ್ತಿದ್ದು, ತಾವೇ ಕಿಂಗ್ ಆಗುವ ಬಯಕೆಯಲ್ಲಿದ್ದಾರೆ. ರಾಷ್ಟ್ರಪತಿ ಭವನದಂಥ ಅತ್ಯುನ್ನತ ಆಡಳಿತ ಸ್ಥಾನದಲ್ಲಿರುವ ವ್ಯಕ್ತಿ, ಕ್ಯಾಬಿನೆಟ್ ಮತ್ತು ಸಂಸತ್ತಿನ ತೀರ್ಮಾನಗಳಿಗೆ ತಮ್ಮದೇ ಆದ ರೀತಿಯಲ್ಲಿ ಕಡಿವಾಣ ಹಾಕಬಲ್ಲರು. ಆಡಳಿತ ಪಕ್ಷಕ್ಕೆ ಮುಜುಗರ ತರುವ ದೃಷ್ಟಿಯಿಂದಲಾದರೂ ತಮ್ಮ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ ಕೂರಿಸಲು ಪ್ರತಿಪಕ್ಷಗಳು ಕಟಿಬದ್ಧರಾಗುವ ಸಂಭವ ಹೆಚ್ಚು. ಇದು 2024ರ ಮಹಾಚುನಾವಣೆಯಲ್ಲಿ ಮತ್ತೊಂದು ನಿರ್ಣಾಯಕ ಅಂಶವೆನಿಸಲಿದೆ.
ಇದನ್ನೂ ಓದಿ: Explainer: ಹಿಮಾಚಲದಲ್ಲಿ ಖಲಿಸ್ತಾನ್ ಹೆಜ್ಜೆ: ಏನಿದರ ಹಕೀಕತ್?