ಮಥುರಾ: ಅತ್ತ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಅಂಟಿಕೊಂಡಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಲು ಕೋರ್ಟ್ ಆದೇಶ ನೀಡಿದ ಕೆಲವೇ ದಿನಗಳಲ್ಲಿ, ಇತ್ತ ಇನ್ನೊಂದು ವಿವಾದಿತ ತಾಣವಾಗಿರುವ ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೂ ಆದೇಶಿಸಬೇಕು ಎಂದು ಕೆಲವರು ಕೋರ್ಟ್‌ಗೆ ಹೋಗಿದ್ದಾರೆ.
ಅರ್ಜಿದಾರರು ಮಥುರಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ʼʼಜ್ಞಾನವಾಪಿ ಮಸೀದಿಯಂತೆಯೇʼ ಇಲ್ಲೂ ಕಮಿಷನರ್ ಸಮೀಕ್ಷೆ ನಡೆಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ʼಹಿಂದೂ ಸಾಂಪ್ರದಾಯಿಕ ಕಲಾಕೃತಿಗಳು, ಪುರಾತನ ಧಾರ್ಮಿಕ ರಚನೆಗಳ ಪತ್ತೆಗಾಗಿʼ ಈ ಸಮೀಕ್ಷೆ ನಡೆಸಬೇಕು ಎಂದು ಕೋರಲಾಗಿದೆ. ಮನೀಶ್ ಯಾದವ್ ಎಂಬವರು ಈ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೆ ಒಂದು ದಿನ ಮೊದಲು, ಶ್ರೀಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ಮುಂದಿನ ನಾಲ್ಕು ತಿಂಗಳ ಒಳಗೆ ಇತ್ಯರ್ಥಪಡಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಅಧೀನ ನ್ಯಾಯಾಲಯಗಳಿಗೆ ಆದೇಶಿಸಿತ್ತು.
ಮಥುರಾ ಪರಿಸ್ಥಿತಿ ಹೇಗಿದೆ?
ಶ್ರೀಕೃಷ್ಣಜನ್ಮಭೂಮಿಯ ಸನ್ನಿವೇಶ ಅಯೋಧ್ಯೆಯಷ್ಟು ಜಟಿಲವಾಗಿಲ್ಲ. ಆದರೆ ತುಂಬಾ ಸರಳವೂ ಆಗಿಲ್ಲ. ʼಕತ್ರಾ ದಿಬ್ಬʼ ಅಥವಾ ʼಕತ್ರಾ ಕೇಶವದಾಸ್ʼ ಎಂದು ಕರೆಯಲಾಗುವ ಸುಮಾರು 13.39 ಎಕರೆ ವಿಸ್ತೀರ್ಣದ ದಿಬ್ಬದ ಮೇಲೆ ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣ ನಿಂತಿದೆ. ಈ ದೇವಾಲಯದ ಪಕ್ಕದಲ್ಲಿ ಶಾಹಿ ಈದ್ಗಾ ಮಸೀದಿ ಇದೆ. ಮೊದಲು ಇದ್ದ ಕೇಶವದಾಸ ದೇವಾಲಯವನ್ನು ನಾಶ ಮಾಡಿ ಇದನ್ನು ಕ್ರಿಸ್ತಶಕ 1670ರಲ್ಲಿ ಮೊಗಲ್ ದೊರೆ ಔರಂಗಜೇಬ್ ನಿರ್ಮಿಸಿದ್ದ.
ಧಾರ್ಮಿಕ ಕ್ರಿಯೆಗಳಿಗಾಗಿ ಇರುವ ಮಂಟಪದ ಮೇಲೆ ಈದ್ಗಾ ನಿರ್ಮಿಸಲಾಗಿದೆ. ಆದರೆ ಶ್ರೀಕೃಷ್ಣನ ಜನ್ಮದ ಸ್ಥಳ ಎಂದು ನಂಬಲಾಗಿರುವ, ಮೊದಲು ಇದ್ದ ಗರ್ಭಗುಡಿ ಹಾಗೆಯೇ ಇದ್ದು, ಇಂದೂ ಅಲ್ಲಿಯೇ ಪೂಜೆ ಸಲ್ಲಿಸಲಾಗುತ್ತಿದೆ. ಈ ಗರ್ಭಗುಡಿ ಈದ್ಗಾದ ಗೋಡೆಗೆ ಒತ್ತಿಕೊಂಡು ಇದೆ.
1950ರಲ್ಲಿ ಉದ್ಯಮಿಗಳಾದ ರಾಮಕೃಷ್ಣ ದಾಲ್ಮಿಯಾ, ಹನುಮಾನ್ ಪ್ರಸಾದ್ ಪೋದ್ದಾರ್ ಮತ್ತು ಜುಗಲ್ ಕಿಶೋರ್ ಬಿರ್ಲಾ ಅವರು ಈ ಜಾಗವನ್ನು ಖರೀದಿಸಿ, ಇಲ್ಲಿ ಭವ್ಯವಾದ ಕೇಶವದಾಸ ದೇವಾಲಯವನ್ನು ನಿರ್ಮಿಸಿದರು. ನಿರ್ವಹಣೆಗಾಗಿ ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್ ರಚಿಸಿದರು. ಪಕ್ಕದ ಈದ್ಗಾ ಮಸೀದಿಯ ಜೊತೆಗೆ ಇದ್ದ ತಗಾದೆಗಳನ್ನು ಕೋರ್ಟ್ ಜೊತೆಗೆ ಪರಿಹರಿಸಿಕೊಂಡರು. 1968ರಲ್ಲಿ ಮಾಡಿಕೊಂಡ ಒಪ್ಪಂದ ಸ್ಪಷ್ಟವಾಗಿ ಹೇಳುವಂತೆ, ಶ್ರೀಕೃಷ್ಣ ಜನ್ಮಸ್ಥಾನ ಹಾಗೂ ಶಾಹಿ ಈದ್ಗಾ ಮಸೀದಿಯ ಜಾಗದ ನಡುವೆ ಜಮೀನು ತಗಾದೆ ಇಲ್ಲ.
ಪ್ರಸ್ತುತ ಎದ್ದಿರುವ ವಿವಾದ ಜಮೀನಿಗೆ ಸಂಬಂಧಿಸಿದ್ದಲ್ಲ. ಅದು ಸಂಪೂರ್ಣ ಧಾರ್ಮಿಕ- ರಾಜಕೀಯ ಹಿನ್ನೆಲೆಯದು.
ಶ್ರೀಕೃಷ್ಣ ಜನ್ಮಭೂಮಿಯ ಇತಿಹಾಸ
ಭಾರತದಲ್ಲಿ ಶ್ರೀಕೃಷ್ಣ ಆರಾಧನೆಗೆ ಸಂಬಂಧಿಸಿ ಸುಮಾರು 2000 ವರ್ಷಗಳ ಹಿನ್ನೆಲೆಯಿದೆ. ಕೃಷ್ಣನ ಉಲ್ಲೇಖಗಳು ಪುರಾತನ ಋಷಿಗಳಾದ ಪತಂಜಲಿ, ಪಾಣಿನಿ ಮುಂತಾದವರ ಕೃತಿಗಳನ್ನು ಕಂಡುಬರುತ್ತವೆ. ಪಾಶ್ಚಿಮಾತ್ಯ ವಿದ್ವಾಂಸರಾದ, ಗ್ರೀಕ್‌ನ ಮೆಗಾಸ್ತನೀಸ್ (ಕ್ರಿಸ್ತಪೂರ್ವ 3ನೇ ಶತಮಾನ) ಹಾಗೂ ಅರಿಯನ್ (ಕ್ರಿಸ್ತಪೂರ್ವ 2ನೇ ಶತಮಾನ) ಅವರ ಕೃತಿಗಳಲ್ಲೂ ಇವು ಕಂಡುಬರುತ್ತದೆ. ಕುಶಾನ ರಾಜರ ಕಾಲದಲ್ಲಿ ಭಾಗವತ ಪ್ರಸಿದ್ಧವಾಯಿತು. ಹಾಗೂ ಕೃಷ್ಣನ ಜನಪ್ರಿಯತೆ ಹೆಚ್ಚಿತು. ಮಥುರಾ ಹಾಗೂ ಸುತ್ತಮುತ್ತ ಭಾಗತವತದ ಕೃಷ್ಣನ ಜೀವನದ ಘಟನಾವಳಿಗಳು ನಡೆದುದಕ್ಕೆ ಪ್ರಾಕ್ತನ ಸಾಕ್ಷಿಗಳು ದೊರೆಯುತ್ತವೆ. ಮಥುರಾದ ದೇವಸ್ಥಾನದ ಬಗ್ಗೆಯೂ ಉಲ್ಲೇಖಗಳು ಸಿಗುತ್ತವೆ.
ಔರಂಗಜೇಬ ಈ ದೇವಸ್ಥಾನವನ್ನು ನಾಶ ಮಾಡಲು ಆದೇಶಿಸುವ ಕೇವಲ 20 ವರ್ಷಗಳ ಮೊದಲು ಜೀನ್ ಬ್ಯಾಪ್ಟಿಸ್ಟ್ ಟಾವೆರ್ನಿಯರ್ ಎಂಬ ಫ್ರೆಂಚ್ ವ್ಯಾಪಾರಿ ಮಥುರಾಗೆ ಭೇಟಿ ನೀಡಿದ. ತನ್ನ ಪ್ರವಾಸ ಕಥನ ʼʼಲೆ ಸಿಕ್ಸ್ ವಾಯೇಜಸ್ ಡಿ ಜೀನ್ ಬ್ಯಾಪ್ಟಿಸ್ಟ್ ಟಾವೆರ್ನಿಯರ್ʼ ಎಂಬ ಕೃತಿಯಲ್ಲಿ ಮಥುರಾ ದೇವಾಲಯದ ಬಗ್ಗೆ ಅವನು ಬರೆಯುವುದು ಹೀಗೆ- ʼʼಪುರಿ ಜಗನ್ನಾಥ ಹಾಗೂ ಬನಾರಸ್ ಬಳಿಕ ಅತ್ಯಂತ ಪ್ರಮುಖವಾದ ದೇವಾಲಯ ಎಂದರೆ ಮಥುರಾ. ಇದು ಆಗ್ರಾದಿಂದ ದಿಲ್ಲಿಗೆ ಹೋಗುವ ದಾರಿಯಲ್ಲಿದೆ. ಇದು ಇಡೀ ಇಂಡಿಯಾದಲ್ಲಿ ಅತ್ಯಂತ ಶ್ರೀಮಂತ ಕಟ್ಟಡ. ಅತೀ ಹೆಚ್ಚು ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಎಷ್ಟು ದೊಡ್ಡದು ಎಂದರೆ, ಹತ್ತಾರು ಕಿಲೋಮೀಟರ್ ದೂರದಿಂದಲೇ ಇದನ್ನು ನೀವು ನೋಡಬಹುದು. ಆಗ್ರಾ ಸಮೀಪದ ದೊಡ್ಡ ಕ್ವಾರಿಯಿಂದ ತಂದ ಕೆಂಪು ಬಣ್ಣದ ಕಲ್ಲುಗಳಿಂದ ಇದನ್ನು ಕಟ್ಟಲಾಗಿದೆ. ಪಗೋಡಾಗೆ ಒಂದೇ ದ್ವಾರವಿದೆ. ಹತ್ತಾರು ಬೃಹತ್ ಸ್ತಂಭಗಳಿವೆ. ಗೋಡೆಯಲ್ಲಿ ಮನುಷ್ಯರ ಹಾಗೂ ಪ್ರಾಣಿಗಳ ಕೆತ್ತನೆಗಳಿವೆ…ʼʼ
ಮುಖ್ಯ ಮೂರ್ತಿಯನ್ನು ಹೀಗೆ ಬಣ್ಣಿಸುತ್ತಾನೆ : ಮೂರ್ತಿಯ ತಲೆ ಮಾತ್ರ ಕಾಣುತ್ತದೆ. ಕಪ್ಪು ಕಲ್ಲಿನಿಂದ ತಯಾರಿಸಲಾದ ಈ ಮೂರ್ತಿಯಲ್ಲಿ ಹವಳದಂತೆ ಹೊಳೆಯುವ ಕಣ್ಣುಗಳಿವೆ. ಕತ್ತಿನಿಂದ ಮುಡಿಯವರೆಗೂ ಕೆಂಪು ವೆಲ್ವೆಟ್ ಬಟ್ಟೆ, ಆಭರಣಗಳು ಮುಂತಾದವುಗಳಿಂದ ಮುಚ್ಚಿಹೋಗಿದೆ..ʼʼ
1670ರಲ್ಲಿ ಔರಂಗಜೇಬ ಇಡೀ ದೇವಸ್ಥಾನದ ನಾಶಕ್ಕೆ ಆಜ್ಞೆ ಮಾಡಿದ. ಇದಕ್ಕೆ ಒಂದು ವರ್ಷ ಮೊದಲು ಅವನು ಕಾಶಿ ವಿಶ್ವನಾಥ ದೇವಾಲಯದ ನಾಶಕ್ಕೆ ಆದೇಶಿಸಿದ್ದ. ಹಿಂದೂ ದೇವಾಲಯದ ನಾಶ ಎಂಬ ಮತಾಂಧತೆಯ ಜೊತೆಗೆ, ಕಂದಾಯ ನೀಡಲು ನಿರಾಕರಿಸಿದ ಇಲ್ಲಿನ ಬಹುಸಂಖ್ಯಾತರ ಜಾಟ್ ರಜಪೂತರ ಮೇಲೆ ಸೇಡು ತೀರಿಸಿಕೊಳ್ಳುವುದೂ ಅವನ ಉದ್ದೇಶವಾಗಿತ್ತು. ಗೋಕುಲ ಎಂಬ ಹಿಂದೂ ನಾಯಕನನ್ನು ಕೊಂದುಹಾಕಿದ ನಂತರ, ದೇವಾಲಯವನ್ನು ನಾಶ ಮಾಡಿ, ಅದು ಇದ್ದಲ್ಲಿ ಶಾಹಿ ಈದ್ಗಾ ಮಸೀದಿ ಕಟ್ಟಲು ಆದೇಶಿಸಿದ. ಈದ್ಗಾ ಎಂಬುದು ನಿತ್ಯ ಪ್ರಾರ್ಥನೆಯ ಮಸೀದಿ ಆಗಿರದೆ, ಈದ್ ಮುಂತಾದ ಹಬ್ಬದ ಸಮಯದಲ್ಲಿ ಪ್ರಾರ್ಥಿಸುವ ಮಂದಿರವಾಗಿತ್ತು.
1707ರಲ್ಲಿ ಔರಂಗಜೇಬನ ಮರಣಾನಂತರ, ಮೊಗಲ್ ಸಾಮ್ರಾಜ್ಯ ಕುಸಿಯಲಾರಂಭಿಸಿತು. ಎರಡನೇ ಆಂಗ್ಲೋ- ಮರಾಠ ಯುದ್ಧದ ಬಳಿಕ, ಮಥುರೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಡಿ ಬಂತು. ಕತ್ರಾ ಮತ್ತು ಸುತ್ತಮುತ್ತಲಿನ ಜಮೀನನ್ನು ಬ್ರಿಟಿಷರು ಹರಾಜು ಹಾಕಿದರು. ಇದನ್ನು ಬನಾರಸ್‌ನ ರಾಜಾ ಪತ್ನಿಮಲ್ ಎಂಬವನು 1410 ರೂಪಾಯಿಗೆ ಕೊಂಡುಕೊಂಡ. ಈತನೊಬ್ಬ ಶ್ರೀಮಂತ ಬ್ಯಾಂಕರ್. ಇಲ್ಲಿ ಕೃಷ್ಣ ದೇವಾಲಯ ಕಟ್ಟುವುದು ಅವನ ಉದ್ದೇಶವಾಗಿತ್ತು. ಆದರೆ ಆತನ ಜೀವಮಾನ ಕಾಲದಲ್ಲಿ ಈ ಆಸೆ ಪೂರ್ತಿಯಾಗಲಿಲ್ಲ.
1920ರಲ್ಲಿ ಒಂದು ವಿವಾದ ಹುಟ್ಟಿತು. ರಾಜಾ ಪತ್ನಿಮಲ್ ಬ್ರಿಟಿಷರಿಂದ ಖರೀದಿಸಿದ ಜಾಗದಲ್ಲಿ ಶಾಹಿ ಈದ್ಗಾದ ನೆಲವೂ ಸೇರಿದೆಯೇ ಇಲ್ಲವೇ ಎಂಬುದು ವಿವಾದದ ಮೂಲ. ಆದರೆ ಇದನ್ನು ಸ್ಪಷ್ಟವಾಗಿ ಸಾರುವ, 1804ರಷ್ಟು ಹಳೆಯ ಆಸ್ತಿ ಖರೀದಿ ಪತ್ರಗಳು ಲಭ್ಯವಿರಲಿಲ್ಲ.
ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?
1944ರಲ್ಲಿ ಖ್ಯಾತ ಉದ್ಯಮಿ ಜುಗಲ್ ಕಿಶೋರ್ ಬಿರ್ಲಾ ಅವರು ಈ ಕತ್ರಾ ಜಮೀನನ್ನು ರಾಜಾ ಪತ್ನಿಮಲ್ ಅವರ ವಂಶಸ್ಥರಿಂದ 13,400 ರೂಪಾಯಿಗಳಿಗೆ ಖರೀದಿಸಿದರು. 1951ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್ ರಚಿಸಿ, ಜಮೀನನ್ನು ಅದರ ಸುಪರ್ದಿಗೆ ನೀಡಲಾಯಿತು. ಉದ್ಯಮಿಗಳ ಹಣದಿಂದ, ಈದ್ಗಾ ಪಕ್ಕದಲ್ಲಿ ದೇವಾಲಯವನ್ನೂ ರಚಿಸಲಾಯಿತು.
ಸದ್ಯ ಇರುವ ವಿವಾದ ಎಂದರೆ, ಜುಗಲ್ ಕಿಶೋರ್ ಬಿರ್ಲಾ ಅವರು ಖರೀದಿಸಿದ ಜಮೀನಿನಲ್ಲಿ ಈದ್ಗಾದ ಜಾಗವೂ ಸೇರಿದಯೇ ಇಲ್ಲವೇ, ಎಂಬುದು. ಆದರೆ ಇದನ್ನು ತೀರ್ಮಾನಿಸಲು ಅಗತ್ಯವಾದ ದಾಖಲೆಗಳು ಇಲ್ಲ ಸದ್ಯ ಇರುವ ದಾಖಲೆ ಎಂದರೆ 1968ರಲ್ಲಿ ಶಾಹಿ ಈದ್ಗಾ ಟ್ರಸ್ಟ್ ಹಾಗೂ ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್‌ಗಳು ಮಾಡಿಕೊಂಡ ಒಪ್ಪಂದ. ಆ ಒಪ್ಪಂದದಲ್ಲಿ ಉತ್ತರ ಹಾಗೂ ದಕ್ಷಿಣ ಗೋಡೆಗಳ ಹೊರಗಿನ ಜಾಗ ಮಸೀದಿಗೆ ಸೇರಿದ್ದೆಂದೂ, ಅದರ ಒಳಗಿನ ಜಾಗ ದೇವಾಲಯಕ್ಕೆ ಸೇರಿದ್ದು ಎಂದೂ ಉಭಯ ಕಡೆಗಳವರೂ ಒಪ್ಪಿಕೊಂಡಿದ್ದಾರೆ.
ಆದರೆ ಈ ಒಪ್ಪಂದವೇ ಕಾನೂನುಬಾಹಿರವಾದದ್ದು; ಇದನ್ನು ಅಸಿಂಧುಗೊಳಿಸಬೇಕು ಹಾಗೂ ಮಸೀದಿ ಇರುವ ಜಾಗವನ್ನು ದೇವಾಲಯದ ಜಾಗ ಎಂದು ಘೋಷಿಸಬೇಕು ಎಂದೂ ಕಕ್ಷಿದಾರರ ವಾದ. ಆದರೆ ಇದನ್ನು ಸಾಧಿಸಲು 1991ರ ಪೂಜಾಸ್ಥಳಗಳ ನಿಯಂತ್ರಣ ಕಾಯಿದೆ ಅಡ್ಡಿಯಾಗಿದೆ.
ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ಕೊಳದಲ್ಲಿ ಶಿವಲಿಂಗ, ಮಂದಿರ ಪರ ಇನ್ನೊಂದು ಪುರಾವೆ?