Site icon Vistara News

Explainer: ವಿವಾದದ ಕೇಂದ್ರದಲ್ಲಿ ಈಗ ಕಾಶಿ ಶೃಂಗಾರ ಗೌರಿ ದೇವಿ

Vistara Editorial, Gyanvapi mosque case must be end shortly

ನವದೆಹಲಿ: ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಅಂಟಿಕೊಂಡಿರುವ ಶೃಂಗಾರ ಗೌರಿ ದೇವಿ ದೇಗುಲದಲ್ಲಿ ನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂಬ ವಾದಕ್ಕೆ ಕೋರ್ಟ್‌ ಮನ್ನಣೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಸಮೀಕ್ಷೆ ನಡೆಸುವುದಕ್ಕಂತೂ ಕೋರ್ಟ್‌ ಅನುಮತಿ ನೀಡಿದೆ. ಅದನ್ನು ಯಾರೂ ತಡೆಯದಿರುವಂತೆಯೂ ಆದೇಶ ನೀಡಿದೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಶೃಂಗಾರ ಗೌರಿ ಮಂದಿರ- ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದ ವಿವಾದ ಹೊಸದೇನಲ್ಲ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಎನ್ನಲಾಗುವ ಕಟ್ಟಡ ಧ್ವಂಸಗೊಳ್ಳುವ ಮೊದಲೇ, 1991ರಲ್ಲೇ ಈ ವಿವಾದ ತಲೆ ಎತ್ತಿತ್ತು. 18 ವರ್ಷಗಳಿಂದ ಸುಪ್ತವಾಗಿ ಉಳಿದಿದ್ದ ಈ ವಿವಾದ, 2019ರಲ್ಲಿ ರಾಮಜನ್ಮಭೂಮಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ನಂತರ ಮತ್ತಷ್ಟು ಮಹತ್ವ ಪಡೆಯಿತು.

ಜ್ಞಾನವಾಪಿ ಮಸೀದಿಯ ವೀಡಿಯೋ ಪರಿಶೀಲನೆಯನ್ನು ಮುಂದುವರಿಸಲು ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಶೃಂಗಾರ ಗೌರಿ ದೇವಸ್ಥಾನ- ಜ್ಞಾನವಾಪಿ ಮಸೀದಿ ಸಂಕೀರ್ಣದ ಇತಿಹಾಸ, ಅರ್ಜಿದಾರರು ಏನು ಹಕ್ಕು ಸಾಧಿಸಿದ್ದಾರೆ, ಅವರ ಬೇಡಿಕೆಗಳೇನು ಎಂಬುದನ್ನು ಇಲ್ಲಿ ನೋಡೋಣ.

ಯಾರೀಕೆ ಶೃಂಗಾರ ಗೌರಿ?
ಶೈವ ದೇವಾಲಯಗಳು ಇರುವಲ್ಲಿ ಪ್ರತ್ಯೇಕವಾಗಿ ಆತನ ಪತ್ನಿ ಗೌರಿಯ ಪೂಜೆಗಾಗಿ ಒಂದು ಗುಡಿ ಇರುವುದು ವಾಡಿಕೆ. 8ನೇ ಶತಮಾನದಲ್ಲಿ ಶ್ರೀ ಶಂಕರಾಚಾರ್ಯರು ತಂದ ಪಂಚಾಯತನ ಪೂಜಾ ಪದ್ಧತಿಯ ಪ್ರಕಾರ ಶಿವ, ಗೌರಿ, ಗಣಪತಿ, ಸೂರ್ಯ ಹಾಗೂ ವಿಷ್ಣುವಿನ ಪೂಜೆಗಳು ಒಂದು ದೇವಾಲಯ ಪ್ರಾಕಾರದಲ್ಲಿ ನಡೆದುಕೊಂಡು ಬರುತ್ತವೆ. ಹೀಗೆ ನಿರ್ಮಾಣವಾದ ಗೌರಿಯ ಗುಡಿಯಿರಬೇಕು ಇದು. ಇಂದು ಈ ವಿಗ್ರಹ ಮಸೀದಿ ಇರುವ ಭಾಗದಲ್ಲಿದೆ.

ಕಾಶಿ ವಿಶ್ವನಾಥ ದೇವಾಲಯದ ಭಾಗ
ವಾರಾಣಸಿಯ ಕಾಶಿ ಶ್ರೀ ವಿಶ್ವನಾಥ ದೇವಾಲಯ ಇರುವ ಪ್ರದೇಶ, ಪುರಾತನ ಕಾಲದಲ್ಲಿ ಹತ್ತು ಹಲವಾರು ದೇವಾಲಯಗಳು ಇದ್ದ ದೊಡ್ಡದಾದ ಸಂಕೀರ್ಣ. ಇದರಲ್ಲಿ ಹೆಚ್ಚಿನ ದೇವಾಲಯಗಳನ್ನು, ಮುಖ್ಯವಾಗಿ ಅಪಾರ ಸಂಪತ್ತು ಸಂಗ್ರಹವಾಗುತ್ತಿದ್ದ ವಿಶ್ವನಾಥ ದೇವಾಲಯವನ್ನು 17ನೇ ಶತಮಾನದಲ್ಲಿ ಮೊಗಲ್‌ ದೊರೆ ಔರಂಗಜೇಬ ಒಡೆಸಿ ಹಾಕಿದ. ಹಿಂದೂಗಳ ಸಂಪತ್ತು ಅವನಿಗೆ ಬೇಕಿತ್ತು. ಹಿಂದೂಗಳು ಒಟ್ಟಾಗುವುದು ಬೇಕಿರಲಿಲ್ಲ.

ಇದನ್ನೂ ಓದಿ: ಕಾಶಿಯ ಗ್ಯಾನವಾಪಿ ಮಸೀದಿಯಲ್ಲಿ ಹಿಂದು ದೇವರ ವಿಗ್ರಹಕ್ಕಾಗಿ ವಿಡಿಯೋ ಪರಿಶೀಲನೆ

ವಿಶ್ವನಾಥ ದೇವಾಲಯ ಮರುನಿರ್ಮಾಣ
ಕಾಶಿ ವಿಶ್ವನಾಥ ದೇವಾಲಯವನ್ನು ಮಹಾರಾಜ ವಿಕ್ರಮಾದಿತ್ಯ ಸುಮಾರು 2,050 ವರ್ಷಗಳ ಹಿಂದೆ ನಿರ್ಮಿಸಿದ ಎಂದು ನಂಬಲಾಗುತ್ತದೆ. ಮಹಾರಾಜ ಮಾನ್‌ಸಿಂಗ್‌ ಕೂಡ ಇದನ್ನು ಮರುನಿರ್ಮಿಸಿದ್ದಾನೆ. ವಿಶ್ವನಾಥ ದೇವಾಲಯ ಇತಿಹಾಸದಲ್ಲಿ ಹಲವಾರು ಬಾರಿ ಕೆಡವಲ್ಪಟ್ಟಿದೆ ಮತ್ತು ಪುನರ್ನಿರ್ಮಾಣಗೊಂಡಿದೆ. ಇತಿಹಾಸಕಾರರ ಪ್ರಕಾರ, 1669ರಲ್ಲಿ ಔರಂಗಜೇಬ್ ಈ ಸ್ಥಳದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದ. ಈಗ ಇರುವ ವಿಶ್ವನಾಥ ದೇವಾಲಯವನ್ನು 18ನೇ ಶತಮಾನದಲ್ಲಿ ಮಾಳವ ಸಾಮ್ರಾಜ್ಯದ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಮರುನಿರ್ಮಾಣ ಮಾಡಿದರು. ಆಗ ಮಸೀದಿ ಪಕ್ಕದಲ್ಲೇ ಇತ್ತು. ಮಸೀದಿಯನ್ನು ಕೆಡವರು ಅವರು ಮುಂದಾಗಲಿಲ್ಲ. ಹೀಗಾಗಿ ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದೊಂದಿಗೆ ಗಡಿ ಗೋಡೆಯನ್ನು ಹಂಚಿಕೊಂಡಿದೆ. ಈಗಲೂ ದೇವಾಲಯ ಮತ್ತು ಮಸೀದಿ ಅಕ್ಕಪಕ್ಕದಲ್ಲಿವೆ. ಆದರೆ ಅವುಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ವಿವಿಧ ದಿಕ್ಕುಗಳಲ್ಲಿವೆ.

ಅಕ್ಬರ್‌ ನಿರ್ಮಿಸಿದನೇ?
ಮಸೀದಿಯ ಬಗ್ಗೆ ಇನ್ನೊಂದು ದೃಷ್ಟಿಕೋನವೂ ಇದೆ. ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಗಳೆರಡನ್ನೂ ಮೊಗಲ್‌ ದೊರೆ ಅಕ್ಬರ್ ತನ್ನ ದಿನ್-ಎ-ಇಲಾಹಿ ಪಂಥವವನ್ನು ಮುಂದುವರಿಸಲು ನಿರ್ಮಿಸಿದ ಎನ್ನುವ ಇತಿಹಾಸಕಾರರೂ ಇದ್ದಾರೆ. ಇಸ್ಲಾಂ ಮತ್ತು ಹಿಂದೂ ಧರ್ಮವನ್ನು ಒಂದು ನಂಬಿಕೆಯಾಗಿ ಸಂಯೋಜಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಜ್ಞಾನವಾಪಿ ಮಸೀದಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯು ಈ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ.

ಆದರೆ, ದೇವಾಲಯದ ಪಳೆಯುಳಿಕೆಗಳ ಮೇಲೆಯೇ ಮಸೀದಿ ನಿರ್ಮಾಣವಾಗಿದೆ ಎಂಬುದು ಹೆಚ್ಚು ಜನಪ್ರಿಯವಾದ ನಂಬಿಕೆ. ಯಾಕೆಂದರೆ ಮಸೀದಿಯ ಗೋಡೆಗಳ ಮೇಲೆ ಹಿಂದೂ ದೇವಾಲಯದ ಅವಶೇಷಗಳನ್ನು ಈಗಲೂ ಕಾಣಬಹುದು. ಮಸೀದಿಗೆ ಅಂಟಿಕೊಂಡಿರುವ, ಸಂಪೂರ್ಣ ಶಿಥಿಲವಾಗಿರುವ ಪಶ್ಚಿಮ ಭಾಗದ ಗೋಡೆಯು ಸಂಪೂರ್ಣವಾಗಿ ದೇವಾಲಯ ವಾಸ್ತುಶಿಲ್ಪವನ್ನು ಹೊಂದಿದೆ. ಇದಲ್ಲದೆ ಈ ಗೋಡೆಯಲ್ಲಿ ಶೇಷನಾಗನ ಚಿತ್ರಣವಿದೆ. ಮಸೀದಿಯ ಒಳಭಾಗದಲ್ಲಿ ನಂದಿ ಇದೆ. ಈ ನಂದಿ ಮಸೀದಿಯತ್ತ ನೋಡುತ್ತಿದೆ. ಅಂದರೆ ಆ ಕಡೆಯಲ್ಲಿ ಶಿವನ ವಿಗ್ರಹವಿತ್ತು ಎಂಬುದು ಸ್ಪಷ್ಟ. ವಾಪಿ ಎಂದರೆ ಸಂಸ್ಕೃತದಲ್ಲಿ ಬಾವಿ. ಶಿವದೇವಾಲಯದಲ್ಲಿ ಅಭಿಷೇಕದ ನೀರಿಗೆ ಈ ಬಾವಿಯ ನೀರನ್ನು ಬಳಸುವುದು ರೂಢಿ. ಇದರಿಂದಲೇ ಜ್ಞಾನವಾಪಿ ಎಂಬ ಹೆಸರು ಬಂದಿದೆ. ಶೃಂಗಾರಗೌರಿಯ ಪುರಾತನ ವಿಗ್ರಹವೂ ಇದೆ. ಇದೆಲ್ಲವೂ ಇದು ಹಿಂದೆ ದೇವಾಲಯವಾಗಿತ್ತು ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತವೆ.

ಇತಿಹಾಸಕಾರರು ಏನು ಹೇಳಿದ್ದಾರೆ?
“ಔರಂಗಜೇಬ್: ದಿ ಮ್ಯಾನ್ ಅಂಡ್ ದಿ ಮಿಥ್” ಎಂಬ ತನ್ನ ಪುಸ್ತಕದಲ್ಲಿ, ಇತಿಹಾಸಕಾರ ಆಡ್ರೆ ಟ್ರುಶ್ಕೆ ಹೀಗೆ ಹೇಳಿದ್ದಾಳೆ: “ನನ್ನ ತಿಳುವಳಿಕೆ ಏನೆಂದರೆ, ಜ್ಞಾನವಾಪಿ ಮಸೀದಿಯನ್ನು ಔರಂಗಜೇಬನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಮಸೀದಿಯು ಹಳೆಯ ವಿಶ್ವನಾಥ ದೇವಾಲಯದ ರಚನೆಯನ್ನು ಒಳಗೊಂಡಿದೆ. ಔರಂಗಜೇಬನ ಆದೇಶದ ಮೇರೆಗೆ ಅದನ್ನು ನಾಶಪಡಿಸಲಾಗಿತ್ತು. ಮಸೀದಿ ಕಟ್ಟಡದೊಳಗೆ ಪಾಳುಬಿದ್ದ ದೇವಾಲಯದ ಗೋಡೆಯ ಭಾಗವಿದೆ. ಮೊಗಲ್ ಅಧಿಕಾರವನ್ನು ವಿರೋಧಿಸುವವರ ಮೇಲೆ ಉಂಟಾಗುವ ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಲು ಈ ಗೋಡೆಯನ್ನು ಉಳಿಸಿಕೊಂಡಿರಬಹುದು..ʼʼ

ಕ್ಯಾಥರೀನ್ ಆಶರ್ ಅವರು ತಮ್ಮ “ಆರ್ಕಿಟೆಕ್ಚರ್ ಆಫ್ ಮೊಗಲ್ ಇಂಡಿಯಾ” ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ: “ಬನಾರಸ್‌ನಲ್ಲಿರುವ ರಾಜಾ ಮಾನ್‌ಸಿಂಗ್‌ನ ಪ್ರಸಿದ್ಧ ವಿಶ್ವನಾಥ ದೇವಾಲಯದ ಧ್ವಂಸವು ಹಿಂದೂಗಳನ್ನು ಶಿಕ್ಷಿಸಲು, ವಿಶೇಷವಾಗಿ ಮರಾಠ ಶಿವಾಜಿಯನ್ನು ಬೆಂಬಲಿಸುವ ಹಿಂದೂ ದೇಗುಲ ಪೋಷಕರಿಗೆ ಪಾಠ ಕಲಿಸಲು ಮಾಡಿದ್ದಾಗಿರಬಹುದು.”

ಹೊಸ ಪ್ರಕರಣವೇನು?
1669ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯ ಪುರೋಹಿತರ ಗುಂಪೊಂದು 1991ರಲ್ಲಿ ವಾರಣಾಸಿ ನ್ಯಾಯಾಲಯಕ್ಕೆ ತೆರಳಿತು. ಮಸೀದಿ ನಿರ್ಮಿಸಿರುವ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದರು. ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪೂಜೆ ಮಾಡಲು ಕಕ್ಷಿದಾರರು ಅನುಮತಿ ಕೋರಿದ್ದರು. ಈ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ಅಮಾನತುಗೊಳಿಸಿತು. ಬಾಬರಿ ಮಸೀದಿ- ರಾಮ ಜನ್ಮಭೂಮಿ ವಿವಾದದಲ್ಲಿ 2019ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಜ್ಞಾನವಾಪಿ ಪ್ರಕರಣವನ್ನು ಡಿಸೆಂಬರ್‌ನಲ್ಲಿ ಪುನರುಜ್ಜೀವನಗೊಳಿಸಲಾಯಿತು.

2019ರಲ್ಲಿ ವಕೀಲರೊಬ್ಬರು ಅಲಹಾಬಾದ್ ಹೈಕೋರ್ಟ್‌ಗೆ ತೆರಳಿ, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮೂಲಕ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. 2021ರಲ್ಲಿ, ದೆಹಲಿ ಮೂಲದ ಐವರು ಮಹಿಳೆಯರು (ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರ ಇಬ್ಬರು) ಪ್ರತಿನಿತ್ಯ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳನ್ನು ಪೂಜಿಸಲು ಅನುಮತಿ ಕೋರಿ ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಪ್ರಸ್ತುತ, ಚೈತ್ರ ನವರಾತ್ರಿಯ ನಾಲ್ಕನೇ ದಿನದಂದು ಮಾತ್ರ ಶೃಂಗಾರ ಗೌರಿಯನ್ನು ಪೂಜಿಸಲು ಭಕ್ತರಿಗೆ ಅವಕಾಶವಿದೆ. ತಮ್ಮ ಮನವಿಯಲ್ಲಿ, ಪ್ರತಿಕಕ್ಷಿಗಳು ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ತಡೆಯಲು ಅರ್ಜಿದಾರರು ಕೋರಿದ್ದಾರೆ.

2022ರ ಏಪ್ರಿಲ್ 26ರಂದು, ವಾರಣಾಸಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಅವರು ಮಸೀದಿ ಸಂಕೀರ್ಣದಲ್ಲಿ ಕಮಿಷನರ್‌ ಮೂಲಕ ಸಮೀಕ್ಷೆ ಮತ್ತು ವೀಡಿಯೊಗ್ರಫಿಗೆ ಆದೇಶಿಸಿದರು. ಆದರೆ ಸಮೀಕ್ಷೆಗೆ ಹೋದಾರು ಮುಸ್ಲಿಮರು ಗುಂಪುಗೂಡಿ ಇದನ್ನು ತಡೆದಿದ್ದರು. ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತಜಾಮಿಯಾ ಮಸೀದಿ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗಳು ಸಮೀಕ್ಷೆಯನ್ನು ವಿರೋಧಿಸಿದ್ದವು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ: ಸಮೀಕ್ಷೆ ವರದಿ ಸಲ್ಲಿಸಲು ಮೇ 17ರ ಗಡುವು, ಕಮಿಷನರ್ ಬದಲಾವಣೆ ಇಲ್ಲ

Exit mobile version