Site icon Vistara News

40 ವರ್ಷದ ಬಳಿಕ ಭಾರತ-ಶ್ರೀಲಂಕಾ ಮಧ್ಯೆ ಫೆರಿ ಸೇವೆ! ಟಿಕೆಟ್ ರೇಟ್ ಎಷ್ಟು?

Ferry service between India and Sri Lanka after 40 years

ಚೆನ್ನೈ, ತಮಿಳುನಾಡು: ಸುಮಾರು 40 ವರ್ಷಗಳ ಬಳಿಕ ಭಾರತ ಮತ್ತು ದ್ವೀಪ ರಾಷ್ಟ್ರ ಶ್ರೀಲಂಕಾ (India – Sri Lanka) ಮಧ್ಯೆ ಫೆರಿ ಸೇವೆ (Ferry Service) ಆರಂಭವಾಗಿದೆ. ಹೈಸ್ಪೀಡ್ ದೋಣಿ ಎರಡು ನೆರೆ ಹೊರೆ ರಾಷ್ಟ್ರಗಳನ್ನು ಸಂಪರ್ಕಿಸಲಿದೆ. ಕೇಂದ್ರ ಹಡಗು ಮತ್ತು ಜಲಸಾರಿಗೆ, ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ್ (Union Minister Sarbananda Sonowal) ಅವರು, ತಮಿಳುನಾಡಿನ (Tamil Nadu) ನಾಗಪಟ್ಟಿಣಂ (nagapattinam) ಮತ್ತು ಶ್ರೀಲಂಕಾದ ಉತ್ತರ ಪ್ರಾಂತ್ಯದ ಕಂಕಸಂತುರೈ (Kankesanthurai) ಸಂಪರ್ಕಿಸುವ ಚೆರಿಯಪಾಣಿಗೆ (Cheriyapani) ಚಾಲನೆ ನೀಡಿದರು.

ಶನಿವಾರ ಬೆಳಿಗ್ಗೆ 8 ಗಂಟೆ 15 ನಿಮಿಷಕ್ಕೆ ಚೆರಿಯಪಾಣಿ (ಫೆರಿ) ಕ್ಯಾಪ್ಟನ್ ಬಿಜು ಜಾರ್ಜ್ ನೇತೃತ್ವದಲ್ಲಿ 50 ಪ್ರಯಾಣಿಕರು ಮತ್ತು 12 ಸಿಬ್ಬಂದಿಯೊಂದಿಗೆ ನಾಗಪಟ್ಟಿಣಂ ಬಂದರಿನಿಂದ ಕಂಕಸಂತುರೈ ಕಡೆಗೆ ಹೊರಟಿತು. ಈ ಫೆರಿ ಮೂರು ಗಂಟೆಯಲ್ಲಿ ಶ್ರೀಲಂಕವನ್ನು ತಲುಪಲಿದೆ. ಪ್ರಯಾಣಿಕರ ದೋಣಿ ಸೇವೆಯನ್ನು ಪುನರಾರಂಭಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು. ವೀಡಿಯೊ ಭಾಷಣದಲ್ಲಿ ಅವರು, ನಾವು ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ. ನಾಗಪಟ್ಟಣಂ ಮತ್ತು ಕಂಕೆಸಂತುರೈ ನಡುವೆ ದೋಣಿ ಸೇವೆಯನ್ನು ಪ್ರಾರಂಭಿಸುವುದು ನಮ್ಮ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ತಿಳಿಸಿದ್ದಾರೆ.

ನಾಗಪಟ್ಟಣಂ ಶಿಪ್ಪಿಂಗ್ ಹಾರ್ಬರ್ ಇಲಾಖೆಯ ಅಧಿಕಾರಿಗಳು ಅಕ್ಟೋಬರ್ 14 ಕ್ಕೆ ಒಂದು ದಿನದ ಪ್ರಚಾರದ ಕೊಡುಗೆಯಾಗಿ 2,375 ರೂ. ಮತ್ತು ಶೇ.18 ರಷ್ಟು ತೆರಿಗೆ ಸೇರಿದಂತೆ 2,800 ರೂ. ವಿಶೇಷ ಪ್ರಯಾಣವನ್ನು ಪರಿಚಯಿಸಿದ್ದಾರೆ. ವಾಸ್ತವದಲ್ಲಿ ಈ ಟಿಕೆಟ್ ಮೂಲ ದರವು 6,500 ರೂ. ಇದ್ದು ಶೇ.18 ತೆರಿಗೆ ಸೇರಿ 7670 ರೂ. ಇರಲಿದೆ. ಆದರೆ, ಆರಂಭದ ಕೊಡುಗೆಯಾಗಿ ಶೇ.75ರಷ್ಟು ರಿಯಾಯ್ತಿಯನ್ನು ನೀಡಲಾಗಿದೆ.

ಈ ಫೆರಿ ಸೇವೆಯನ್ನು ಅಕ್ಟೋಬರ್ 10ರಂದೇ ಆರಂಭಿಸಲು ಯೋಜಿಸಲಾಗಿತ್ತು. ಆದರೆ, ಕೆಲವು ಆಡಳಿತಾತ್ಮಕ ತೊಂದರೆಗಳಿಂದಾಗಿ ತಡವಾಯಿತು. ಅಕ್ಟೋಬರ್ 10ರ ಬದಲಿಗೆ 12ಕ್ಕೆ ನಿಗದಿ ಮಾಡಲಾಯಿತು. ಮತ್ತೆ ಅ.12ರ ಬದಲಿಗೆ ಅಕ್ಟೋಬರ್ 14ಕ್ಕೆ ಚಾಲನೆ ನೀಡಲಾಯಿತು.

ಈ ಸುದ್ದಿಯನ್ನೂ ಓದಿ: ಪ್ರಧಾನಿ ಮೋದಿ ಲೇಖನ: ಭಾರತದ ಆಧುನಿಕ, ಪ್ರಗತಿಪರ ಕೃಷಿಗೆ ಎಂ ಎಸ್ ಸ್ವಾಮಿನಾಥನ್ ಅಡಿಪಾಯ

ಭಾರತ ಮತ್ತು ಶ್ರೀಲಂಕ ಜಂಟಿ ಸಮಿತಿಯ ಅಡಿಯಲ್ಲಿ ಈ ಯೋಜನೆಯು ಪ್ರಾದೇಶಿಕ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಮತ್ತು ಬಲವಾದ ಜನರ-ಜನರ ಸಂಬಂಧಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು 1900ರ ದಶಕದ ಆರಂಭದಿಂದಲೂ ಎರಡು ದೇಶಗಳ ನಡುವೆ ಅಸ್ತಿತ್ವದಲ್ಲಿದ್ದ ಐತಿಹಾಸಿಕ ಸಮುದ್ರ ಸಂಬಂಧಗಳನ್ನು ಮತ್ತೆ ಪುನರಾರಂಭಿಸುತ್ತದೆ ಎಂದು ಹೇಳಲಾಗುತ್ತಿದೆ.

ನಾಲ್ಕು ದಶಕಗಳ ಹಿಂದೆ ಭಾರತ ಮತ್ತು ಶ್ರೀಲಂಕಾ ಮಧ್ಯೆ ಇಂಡೋ-ಸಿಲೋನ್ ಎಕ್ಸ್‌ಪ್ರೆಸ್ ಫೆರಿ ಕಾರ್ಯಾಚರಣೆ ಮಾಡುತ್ತಿತ್ತು. ಈ ಫೆರಿ ಚೆನ್ನೈ ಮೂಲಕ ಬಂದರು ನಗರ ಥೂಥುಕೂಡಿ ಮತ್ತು ಕೊಲೊಂಬ ನಡುವೆ ಸಂಚರಿಸುತ್ತಿತ್ತು. ಆದರೆ, ಶ್ರೀಲಂಕಾದಲ್ಲಿ ನಾಗರಿಕ ಯುದ್ಧ ಶುರುವಾದ ಬಳಿಕ 1982ರಲ್ಲಿ ಈ ಫೆರಿಯನ್ನು ಸ್ಥಗಿತಗೊಳಿಸಲಾಯಿತು. ಎರಡು ದೇಶಗಳು ಪ್ರಯಾಣಿಕರ ಸಾರಿಗೆ ಒಪ್ಪಂದಕ್ಕೆ ಸಹಿ ಹಾಕಿದ ಎರಡು ವರ್ಷಗಳ ನಂತರ ದೋಣಿ ಸೇವೆಯನ್ನು ಮರುಪರಿಚಯಿಸಲಾಯಿತು. ಆದರೂ ಮುಂದುವರಿಯಲಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version