Site icon Vistara News

Hijab row | ಇಸ್ಲಾಮಿಕ್‌ ದೇಶಗಳಲ್ಲಿ 10 ಸಾವಿರ ಆತ್ಮಹತ್ಯೆ ದಾಳಿ, ನಮ್ಮಲ್ಲಿ ಒಂದು ಮಾತ್ರ: ಹಿಜಾಬ್‌ ಪರ ವಕೀಲರ ವಾದ

udupi hijab students

ನವ ದೆಹಲಿ: ಇಸ್ಲಾಮಿಕ್‌ ದೇಶಗಳಲ್ಲಿ ಇದುವರೆಗೂ ಹತ್ತು ಸಾವಿರ ಆತ್ಮಹತ್ಯಾ ದಾಳಿಗಳು ನಡೆದಿವೆ. ಆದರೆ ಭಾರತದಲ್ಲಿ ನಡೆದಿರುವುದು ಒಂದೇ ಒಂದು, ಪುಲ್ವಾಮ ದಾಳಿ ಮಾತ್ರ. ಇದು ಇಲ್ಲಿನ ಮುಸ್ಲಿಮರು ದೇಶದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಪರ ವಕೀಲರಾದ ಹಿರಿಯ ನ್ಯಾಯವಾದಿ ದುಶ್ಯಂತ ದವೆ ವಾದಿಸಿದ್ದಾರೆ.

ಮುಸ್ಲಿಂ ಯುವತಿಯರು ಹಿಜಾಬ್‌ ಧರಿಸುವುದು ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವುದಿಲ್ಲ. ಹಿಜಾಬ್‌ ಅವರ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಆದರೆ ಲವ್‌ ಜಿಹಾದ್‌ ಆರೋಪಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅವರು ಹಿಜಾಬ್‌ ಧರಿಸುವುದಕ್ಕೆ ನಿರಾಕರಣೆ ಇತ್ಯಾದಿಗಳು ಅಲ್ಪಸಂಖ್ಯಾತ ಸಮುದಾಯವನ್ನು ಅಂಚಿಗೆ ತಳ್ಳುವ ಮನೋಭಾವದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಿವೆ. ಭಾರತವು ಪ್ರಗತಿಪರ ಮನೋಧರ್ಮದಲ್ಲಿ ಬೆಳೆದುಬಂದಿದ್ದು, ವೈವಿಧ್ಯತೆಯೇ ಇಲ್ಲಿನ ಏಕತೆಯಾಗಿದೆ ಎಂದು ದವೆ ವಾದಿಸಿದರು.

ಪಾಶ್ಚಿಮಾತ್ಯ ದೇಶಗಳು ಹಿಜಾಬ್ ಧಾರಣೆಗೆ ಅವಕಾಶ ನೀಡಿವೆ. ಅಮೆರಿಕದ ಸೈನ್ಯದಲ್ಲೂ ಟರ್ಬನ್‌ಗಳಿಗೆ ಅವಕಾಶ ನೀಡಲಾಗಿದೆ. ಸಿಕ್ಖರು ಟರ್ಬನ್‌ ಧರಿಸುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಹಾಗೆಯೇ ಮುಸ್ಲಿಂ ಮಹಿಳೆಯರ ಹಿಜಾಬ್‌ಗೂ ಆಕ್ಷೇಪ ಇರಬಾರದು. ಕೆಲವು ತಿಲಕ ಇಡಲು, ಕೆಲವರು ಕ್ರಾಸ್‌ ಧರಿಸಲು ಇಷ್ಟಪಡಬಹುದು. ಹೀಗಿರುವಾಗ ಹಿಜಾಬ್‌ ಹೇಗೆ ದೇಶದ ಏಕತೆಗೆ ಧಕ್ಕೆಯಾಗುತ್ತದೆ ಎಂದು ದವೆ ಪ್ರಶ್ನಿಸಿದರು.

ನೀವು (ರಾಜ್ಯ ಸರ್ಕಾರ) ಸಮವಸ್ತ್ರದ ನೆವದಲ್ಲಿ ಹಿಜಾಬ್‌ ನಿಷೇಧದ ನಿರ್ಣಯ ನೀಡುತ್ತೀರಿ. ಆದರೆ ಅದರ ಮೂಲ ಉದ್ದೇಶವೇ ಬೇರೆಯಾಗಿದೆ. ನೀವು ನಿಮ್ಮ ನಂಬಿಕೆಗಳನ್ನು ಆಚರಿಸಲು ನಾವು ಬಿಡುವುದಿಲ್ಲ ಎನ್ನುವ ಮೂಲಕ, ನಾವು ಹೇಳಿದಂತೆ ನೀವು ಕೇಳಬೇಕು ಎನ್ನುವ ಸಂದೇಶ ರವಾನೆ ಮಾಡಲಾಗುತ್ತಿದೆ ಎಂದು ಅವರು ರಾಜ್ಯ ಸರ್ಕಾರವನ್ನು ಆಕ್ಷೇಪಿಸಿದರು.‌

ಇದನ್ನೂ ಓದಿ | Hijab Row | ಮೋದಿ ಪೇಟ, ಜೀನ್ಸ್‌, ನೆಹರು, ಇವು ಹಿಜಾಬ್‌ ವಿಚಾರಣೆ ವೇಳೆ ಪ್ರಸ್ತಾಪವಾದ ವಿಷಯಗಳು!

ನಮ್ಮ ಸಂವಿಧಾನ ಯಾವಾಗಲೂ ಮುಕ್ತತೆಯಿಂದ ನಡೆದುಕೊಂಡಿದೆ. ಹಿಜಾಬ್‌ ಧರಿಸಬಲ್ಲ ಹಕ್ಕು ಸಂವಿಧಾನದ ಆರ್ಟಿಕಲ್‌ 25ರ ಪ್ರಕಾರ ಪ್ರಜೆಗೆ ದತ್ತವಾಗಿದ್ದು, ಇದನ್ನು ಎಲ್ಲಿ ಬೇಕಿದ್ದರೂ ನಾವು ಆಚರಿಸಬಹುದಾಗಿದೆ. ನಮ್ಮ ಧಾರ್ಮಿಕ ನಂಬಿಕೆಗಳನ್ನು ಎಲ್ಲಿ ಬೇಕಿದ್ದರೂ ಮುಕ್ತವಾಗಿ ನಂಬುವುದು, ಆಚರಿಸುವುದು, ಪ್ರತಿಪಾದಿಸುವುದು ಆರ್ಟಿಕಲ್‌ 25ರ ಪ್ರಕಾರ ಸಾಧ್ಯ. ತರಗತಿಗಳಲ್ಲೂ ಇದನ್ನು ಮಾಡಬಹುದಾಗಿದೆ ಎಂದು ದವೆ ಪ್ರತಿಪಾದಿಸಿದರು.

ಹಿಜಾಬ್‌ ಧರಿಸುವುದು ತನ್ನ ಧಾರ್ಮಿಕ ಆಚರಣೆಗೆ ಅಗತ್ಯ ಎಂದು ಮುಸ್ಲಿಂ ಮಹಿಳೆ ಹೇಳಿದರೆ ಅದನ್ನು ಯಾವುದೇ ಕೋರ್ಟ್‌ ಅಥವಾ ಆಡಳಿತ ವ್ಯವಸ್ಥೆ ನಿರಾಕರಿಸುವಂತಿಲ್ಲ ಎಂದು ದವೆ ವಾದಿಸಿದ್ದಾರೆ.

ಉಡುಪಿಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ತರಗತಿಯೊಳಗೆ ಹಿಜಾಬ್ ಧರಿಸುವ ವಿಚಾರದಲ್ಲಿ ಎದ್ದ ವಿವಾದಕ್ಕೆ ಸಂಬಂಧಿಸಿ, ತರಗತಿಯಲ್ಲಿ ಹಿಜಾಬ್‌ ನಿಷೇಧಿಸಿ ಫೆಬ್ರವರಿ 5ರಂದು ಸರ್ಕಾರ ಆದೇಶಿಸಿತ್ತು. ಹಿಜಾಬ್‌ ಧಾರಣೆಗೆ ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ತಂಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಏಳು ದಿನಗಳಿಂದ ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರ ಪೀಠದ ಮುಂದೆ ವಿಚಾರಣೆ ನಡೆಯುತ್ತಿದ್ದು, ಮಂಗಳವಾರ ಮುಂದುವರಿಯಲಿದೆ.

ಇದನ್ನೂ ಓದಿ | ವಿಸ್ತಾರ Explainer | ಇರಾನ್‌ನಲ್ಲಿ ಹಿಜಾಬ್‌ ಕಟ್ಟಳೆ, ಹೊರಬರಲು ಆಗುವುದಿಲ್ಲವೇ ಮಹಿಳೆ?

Exit mobile version