ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಕುರಿತು ಕರ್ನಾಟಕದಲ್ಲಿ ಹುಟ್ಟಿಕೊಂಡ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೊನೆಗೊಳಿಸಿದ್ದು, ಇಂದು ತೀರ್ಪು ನೀಡುತ್ತಿದೆ. ಈ ತೀರ್ಪಿನ ದೂರಗಾಮಿ ಪರಿಣಾಮ ದೇಶಾದ್ಯಂತ ಉಂಟಾಗಲಿದೆ.
ಕರ್ನಾಟಕ ಸರ್ಕಾರವು ಫೆಬ್ರವರಿ 5ರಂದು ಆದೇಶ ಹೊರಡಿಸಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸತತವಾಗಿ ವಿಚಾರಣೆ ನಡೆಸಿತ್ತು. ಸರ್ವೋಚ್ಚ ನ್ಯಾಯಾಲಯದ ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶ ಧುಲಿಯಾ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ.
ಹಿಜಾಬ್ ಪರ ಕಕ್ಷಿದಾರರ ಕಡೆಯಿಂದ ದುಷ್ಯಂತ್ ದವೆ, ರಾಜೀವ್ ಧವನ್, ದೇವದತ್ ಕಾಮತ್, ಸಲ್ಮಾನ್ ಖುರ್ಷಿದ್, ಮೀನಾಕ್ಷಿ ಅರೋರಾ ಸೇರಿದಂತೆ 21 ವಕೀಲರು ವಾದಿಸಿದ್ದರು. ಕರ್ನಾಟಕ ಸರ್ಕಾರದ ಕಡೆಯಿಂದ ಸಾಲಿಟಿಸರ್ ಜನರಲ್ ತುಷಾರ್ ಮೆಹ್ತಾ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ವಾದಿಸಿದ್ದರು.
ಹಿಜಾಬ್ ಪರ ವಕೀಲರ ವಾದಗಳು:
- ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನವೇ ನೀಡಿದೆ. ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ನಂಬುಗೆಯ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ. ಆರ್ಟಿಕಲ್ 26 ಎಲ್ಲಾ ಪಂಗಡಗಳಿಗೆ ಧರ್ಮದ ವಿಷಯಗಳಲ್ಲಿ ತಮ್ಮದೇ ಆದ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕನ್ನು ನೀಡುತ್ತದೆ.
- ಶಿಕ್ಷಣ ಸಂಸ್ಥೆಗಳಲ್ಲಿ ಇದುವರೆಗೂ ಹಿಜಾಬ್ ಧಾರಣೆಯ ಕುರಿತು ಯಾವುದೇ ಸ್ಪಷ್ಟ ನಿರ್ದೇಶನ ಇರಲಿಲ್ಲ. ವಿವಾದ ಸೃಷ್ಟಿ ಮಾಡಿದ ಬಳಿಕ, ತರಾತುರಿಯಲ್ಲಿ ನಿರ್ಣಯ ತೆಗೆದುಕೊಂಡು ನಿರ್ಬಂಧದ ಆದೇಶ ನೀಡಲಾಗಿದೆ.
- ಹಿಂದೂಗಳು ಶಾಲೆ ಕಾಲೇಜುಗಳಲ್ಲಿ ತಿಲಕ, ಬಳೆ, ಹೂವು ಮುಂತಾದವನ್ನು ಧರಿಸುವುದಕ್ಕೆ ಆಸ್ಪದವಿದೆ. ಸಿಕ್ಖರು ಕೃಪಾಣ್ ಹಾಗೂ ಪೇಟ ಧರಿಸಿ ಹಾಜರಾಗಬಹುದು. ಇವೂ ಕೂಡ ಧಾರ್ಮಿಕ ಸಂಕೇತಗಳೇ ಆಗಿವೆ. ಇವು ಆಗಬಹುದು ಎಂದಾದರೆ, ಮುಸ್ಲಿಂ ಮಹಿಳೆಯರೇಕೆ ಹಿಜಾಬ್ ಧರಿಸಬಾರದು?
- ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಿದರೆ ಮುಸ್ಲಿಂ ಬಾಲಕಿಯರ ಶಿಕ್ಷಣಕ್ಕೇ ಹೊಡೆತ ಬೀಳುತ್ತದೆ. ಹೆಚ್ಚಿನ ಮುಸ್ಲಿಂ ಪೋಷಕರು ಸಾಂಪ್ರದಾಯಿಕರಾಗಿದ್ದು, ಹಿಜಾಬ್ ಇಲ್ಲದೇ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಒಪ್ಪಲಾರರು. ಇದರಿಂದ ಎಲ್ಲರಿಗೂ ಶಿಕ್ಷಣ ಹಕ್ಕಿನ ಅನ್ವಯಕ್ಕೂ ಧಕ್ಕೆ ಉಂಟಾಗುತ್ತದೆ.
- ಇಸ್ಲಾಮಿಕ್ ದೇಶಗಳಲ್ಲಿ ಇದುವರೆಗೂ ಹತ್ತು ಸಾವಿರ ಆತ್ಮಹತ್ಯಾ ದಾಳಿಗಳು ನಡೆದಿವೆ. ಆದರೆ ಭಾರತದಲ್ಲಿ ನಡೆದಿರುವುದು ಒಂದೇ ಒಂದು, ಪುಲ್ವಾಮ ದಾಳಿ ಮಾತ್ರ. ಇದು ಇಲ್ಲಿನ ಮುಸ್ಲಿಮರು ದೇಶದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ.
- ಮುಸ್ಲಿಂ ಯುವತಿಯರು ಹಿಜಾಬ್ ಧರಿಸುವುದು ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವುದಿಲ್ಲ. ಹಿಜಾಬ್ ಅವರ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಆದರೆ ಲವ್ ಜಿಹಾದ್ ಆರೋಪಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅವರು ಹಿಜಾಬ್ ಧರಿಸುವುದಕ್ಕೆ ನಿರಾಕರಣೆ ಇತ್ಯಾದಿಗಳು ಅಲ್ಪಸಂಖ್ಯಾತ ಸಮುದಾಯವನ್ನು ಅಂಚಿಗೆ ತಳ್ಳುವ ಮನೋಭಾವದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಿವೆ.
- ಪಾಶ್ಚಿಮಾತ್ಯ ದೇಶಗಳು ಹಿಜಾಬ್ ಧಾರಣೆಗೆ ಅವಕಾಶ ನೀಡಿವೆ. ಅಮೆರಿಕದ ಸೈನ್ಯದಲ್ಲೂ ಟರ್ಬನ್ಗಳಿಗೆ ಅವಕಾಶ ನೀಡಲಾಗಿದೆ. ಸಿಕ್ಖರು ಟರ್ಬನ್ ಧರಿಸುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಹಾಗೆಯೇ ಮುಸ್ಲಿಂ ಮಹಿಳೆಯರ ಹಿಜಾಬ್ಗೂ ಆಕ್ಷೇಪ ಇರಬಾರದು. ಕೆಲವರು ತಿಲಕ ಇಡಲು, ಕೆಲವರು ಕ್ರಾಸ್ ಧರಿಸಲು ಇಷ್ಟಪಡಬಹುದು. ಹೀಗಿರುವಾಗ ಹಿಜಾಬ್ ಹೇಗೆ ದೇಶದ ಏಕತೆಗೆ ಧಕ್ಕೆಯಾಗುತ್ತದೆ?
ಕರ್ನಾಟಕ ಸರ್ಕಾರದ ವಾದಗಳು:
- ಭಾರತೀಯ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವು ಸ್ವಯಂಪೂರ್ಣ ಅಲ್ಲ. ಅದು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಸಾರ್ವಜನಿಕ ಹಿತ, ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಇತ್ಯಾದಿಗಳನ್ನು ಪರಿಗಣಿಸಿ ಸರ್ಕಾರ ಇದದಕ್ಕೆ ಸಂಬಂಧಿಸಿ ಸೂಕ್ತ ನಿಬಂಧನೆಗಳನ್ನು ವಿಧಿಸಬಹುದಾಗಿದೆ.
- ಶಿಕ್ಷಣ ಸಂಸ್ಥೆಯು ಜಾತ್ಯತೀತ ಸ್ಥಳವಾಗಿದೆ. ಅಲ್ಲಿ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಸಮವಸ್ತ್ರದ ಕುರಿತು ಸ್ಥಳೀಯ ಶಾಲಾ ನಿಯಮಗಳೂ ಇವೆ, ಸ್ಥೂಲವಾಗಿ ರಾಜ್ಯ ಸರ್ಕಾರಿ ನಿಯಮಗಳೂ ಇವೆ. ಸೂಚಿತ ಸಮವಸ್ತ್ರ ಹೊರತುಪಡಿಸಿ ಇತರ ವಸ್ತ್ರಗಳನ್ನು ಧರಿಸಲು ಅವಕಾಶವಿಲ್ಲ. ಇಂದು ಹಿಜಾಬ್ ಧಾರಣೆ ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಬರಲು ಆರಂಭಿಸಿದ್ದಾರೆ. ಈ ವಿವಾದ ಮುಂದುವರಿಯಬಹುದು, ಇದನ್ನು ನಿಲ್ಲಿಸಲು ಸೂಕ್ತ ಕ್ರಮವನ್ನು ಸರ್ಕಾರವೇ ಕೈಗೊಳ್ಳಬೇಕಾಗುತ್ತದೆ.
- ಸರ್ಕಾರದ ಆದೇಶವು ಕೇವಲ ಹಿಜಾಬ್ ಅನ್ನು ನಿಷೇಧಿಸಿದ್ದಲ್ಲ. ಅದು ಎಲ್ಲ ಬಗೆಯ ಧಾರ್ಮಿಕ ಸಂಕೇತಗಳನ್ನೂ ಶಾಲೆ- ಕಾಲೇಜು ಆವರಣದ ಒಳಗೆ ನಿಷೇಧಿಸಿದೆ. ಕ್ಯಾಂಪಸ್ನಲ್ಲಿ ಸಮವಸ್ತ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
- ಹಿಂದೂಗಳು ಧರಿಸುವ ತಿಲಕ, ಹೂವು, ಬಳೆ ಇತ್ಯಾದಿಗಳು ಸಮವಸ್ತ್ರದ ವ್ಯಾಪ್ತಿಯಲ್ಲಿ ತರಲಾಗುವುದಿಲ್ಲ. ಅವು ಕಡ್ಡಾಯ ಧಾರ್ಮಿಕ ಆಚರಣೆಗಳಲ್ಲ. ಸ್ಥಳೀಯ ಶಾಲಾಡಳಿತಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
- ಹಿಜಾಬ್ ಪ್ರಕರಣ ತೀವ್ರವಾಗುವುದರ ಹಿಂದೆ, ವಿದ್ಯಾರ್ಥಿಗಳು ಕಾಲೇಜು ತರಗತಿ ಬಹಿಷ್ಕರಿಸಿ ಹೊರಗಡೆ ಗೇಟ್ಗಳ ಮುಂದೆಯೇ ನಿಲ್ಲುವುದರ ಹಿಂದೆ ಪಿಎಫ್ಐ ಪ್ರಚೋದನೆ ಇದೆ. ಇದು ಕಾನೂನುಬಾಹಿರ ಶಕ್ತಿಗಳ ಪ್ರಚೋದನೆ. (ಇದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಕೋರ್ಟ್ ಆದೇಶಿಸಿತ್ತು.)
ಪೀಠದ ಟಿಪ್ಪಣಿಗಳು :
- ಸಿಖ್ಖರು ಧರಿಸುವ ಪೇಟ ಹಾಗೂ ಕೃಪಾಣ (ಸಿಖ್ಖರು ಇಟ್ಟುಕೊಳ್ಳುವ ಸಾಂಪ್ರದಾಯಿಕ ಸಣ್ಣ ಕತ್ತಿ) ಜತೆ ಹಿಜಾಬ್ ಅನ್ನು (Hijab Row) ಹೋಲಿಸುವುದು ಸರಿಯಲ್ಲ. ಸಿಖ್ಖರು ಧರಿಸುವ ಪೇಟ ಹಾಗೂ ಕೃಪಾಣಗಳು ಆ ಧರ್ಮದ ಐದು ಕಡ್ಡಾಯ ಅಂಶಗಳ ಭಾಗವಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆ. ಹಾಗಾಗಿ, ಆ ಧರ್ಮೀಯರ ಟರ್ಬನ್ ಹಾಗೂ ಕೃಪಾಣದ ಜತೆ ಹೋಲಿಸುವುದು ಸಮಂಜಸವಲ್ಲ.
- ಸಿಖ್ ಧರ್ಮವು ಭಾರತದ ಸಂಸ್ಕೃತಿಯಲ್ಲಿ ಮೇಳೈಸಿದೆ. ಅವರ ಧಾರ್ಮಿಕ ಆಚರಣೆಗಳನ್ನು ಸಂವಿಧಾನವೇ ಮಾನ್ಯ ಮಾಡಿದೆ. ಅಷ್ಟಕ್ಕೂ, ನಮಗೆ ಫ್ರಾನ್ಸ್ ಹಾಗೂ ಆಸ್ಟ್ರಿಯಾದ ಉದಾಹರಣೆಗಳು ಬೇಕಿಲ್ಲ. ಅಲ್ಲಿನ ಆಚರಣೆಗಳಿಗೂ ನಮ್ಮ ಆಚರಣೆಗಳಿಗೂ ಹೋಲಿಕೆ ಮಾಡುವುದು ಸಮಂಜಸ ಎನಿಸುವುದಿಲ್ಲ.