ಇಸ್ಲಾಮಾಬಾದ್: ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ, ಕೊನೆಗೆ ತನಗಿರುವ ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು, ಪ್ರಿಯತಮನನ್ನು ಅರಸಿ ಪಾಕಿಸ್ತಾನಕ್ಕೆ ಹೋದ ರಾಜಸ್ಥಾನದ ಭಿವಾಡಿ ಜಿಲ್ಲೆ ಮಹಿಳೆ ಅಂಜು (Anju Love Story) ಪ್ರೇಮ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಪಾಕಿಸ್ತಾನದ ಪ್ರಿಯತಮ ನಸ್ರುಲ್ಲಾನಿಗಾಗಿ ಪಾಕಿಸ್ತಾನಕ್ಕೆ ತೆರಳಿರುವ ಅಂಜು ಈಗ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆಕೆಯ ಹೆಸರೀಗ ಫಾತಿಮಾ ಆಗಿದೆ. ಹೀಗೆ, ಭಾರತದಿಂದ ಬಂದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಅಂಜುಗೆ ಪಾಕಿಸ್ತಾನದ ಉದ್ಯಮಿಯೊಬ್ಬರು ಭರ್ಜರಿ ಉಡುಗೊರೆ ನೀಡಿದ್ದಾರೆ.
ಹೌದು, ಫಾತಿಮಾ ಆಗಿ ಬದಲಾದ ಅಂಜುಗೆ ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಯ ಸಿಇಒ ಆಗಿರುವ ಮೊಹ್ಸಿನ್ ಖಾನ್ ಅಬ್ಬಾಸಿ ಎಂಬುವರು 50 ಸಾವಿರ ರೂಪಾಯಿ ಹಾಗೂ ನಿವೇಶನ ನೀಡಿದ್ದಾರೆ. “ಪಾಕಿಸ್ತಾನಕ್ಕೆ ಬಂದ ಮಹಿಳೆಗೆ ಇಲ್ಲಿ ಯಾವುದೇ ತೊಂದರೆಯಾಗಬಾರದು. ಆಕೆಗೆ ಪಾಕಿಸ್ತಾನವು ತಮ್ಮ ಮನೆಯಂತೆ ಅನಿಸಬೇಕು ಎಂಬ ಕಾರಣಕ್ಕಾಗಿ ಕಂಪನಿಯು 272 ಚದರ ಅಡಿ ನಿವೇಶನ ನೀಡಲು ತೀರ್ಮಾನಿಸಿದೆ. ಮಹಿಳೆಯು ಮನೆ ಕಟ್ಟಿಕೊಂಡು ಸುಖವಾಗಿರಲಿ ಎಂಬ ಕಾರಣಕ್ಕಾಗಿ ಉಡುಗೊರೆ ನೀಡಲಾಗಿದೆ” ಎಂದು ಅಬ್ಬಾಸಿ ತಿಳಿಸಿದ್ದಾರೆ. ಅಲ್ಲದೆ, ನೂತನ ದಂಪತಿಗೆ ಬೇರೆ ಉದ್ಯಮಿಗಳೂ ನೆರವು ನೀಡಿ ಎಂದು ಮನವಿ ಮಾಡಿದ್ದಾರೆ.
ಉಡುಗೊರೆ ನೀಡಿದ ಅಬ್ಬಾಸಿ
ಇದನ್ನೂ ಓದಿ: Cross Border Love : ಅಂಜು ಈಗ ಫಾತಿಮಾ; ಪಾಕಿಸ್ತಾನದ ಪ್ರೇಮಿಯನ್ನು ಲಗ್ನವಾದ ಭಾರತದ ಮಹಿಳೆ!
34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಅವರ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಅವರು 2019ರಲ್ಲಿ ಫೇಸ್ಬುಕ್ ಮೂಲಕ ಪರಿಚಿತರಾಗಿ ಪ್ರೀತಿಸಲು ಆರಂಭಿಸಿದ್ದರು. ನಸ್ರುಲ್ಲಾ ಮತ್ತು ಫಾತಿಮಾ ವಿವಾಹ ಕೂಡ ನಡೆದಿದ್ದು, ಪ್ರಿ ವೆಡ್ಡಿಂಗ್ ವಿಡಿಯೊ ಭಾರಿ ವೈರಲ್ ಆಗಿತ್ತು. ಅಂಜು ಇಸ್ಲಾಂಗೆ ಮತಾಂತರಗೊಂಡ ಬಳಿಕವೇ ಇಬ್ಬರ ಮದುವೆ ನೆರವೇರಿದೆ. ಅಲ್ಲದೆ, ಫಾತಿಮಾಗೆ ಪಾಕಿಸ್ತಾನದಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.
ನಮ್ಮ ಪಾಲಿಗೆ ಸತ್ತಂತೆ ಎಂದ ಪೋಷಕರು
ಗಂಡ-ಮಕ್ಕಳಿದ್ದರೂ ಪ್ರೀತಿಗಾಗಿ ಪಾಕಿಸ್ತಾನಕ್ಕೆ ಪರಾರಿಯಾದ ಅಂಜುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಪಾಲಿಗೆ ಅವಳು ಸತ್ತುಹೋಗಿದ್ದಾಳೆ. ಅವಳ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ. ಅವಳ ಜತೆ ಒಂದು ವರ್ಷದಿಂದ ಮಾತನಾಡುವುದನ್ನೇ ಬಿಟ್ಟಿದ್ದೆ. ನನಗೆ ಅವಳ ಬಗ್ಗೆ ಏನೂ ಗೊತ್ತಿಲ್ಲ. ನಮ್ಮನ್ನು ಬಿಡಿ, ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಓಡಿಹೋದಾಕೆ ಬಗ್ಗೆ ನನಗೆ ಯಾವ ಕಾಳಜಿಯೂ ಇಲ್ಲ” ಎಂದು ಸುದ್ದಿಗಾರರಿಗೆ ಅಂಜು ತಂದೆ ಹೇಳಿದ್ದಾರೆ.