Site icon Vistara News

Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ!, ಯೋಧರ ಸಾಹಸ ರೋಚಕ…

Kargil War

1999ರ ಕಾರ್ಗಿಲ್ ಯುದ್ಧದಲ್ಲಿ (Kargil War) ಮಡಿದ ಯೋಧರನ್ನು ಸ್ಮರಿಸಲು ಪ್ರತಿ ವರ್ಷವೂ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಆಚರಣೆ ಮಾಡಲಾಗುತ್ತದೆ. ಯುದ್ಧ ನಡೆದು ಈಗ 24 ವರ್ಷಗಳಾದವು. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(LoC)ಗುಂಟ 1999ರ ಮೇ ತಿಂಗಳಿಂದ ಜುಲೈವರೆಗೂ ಅಂದರೆ ಎರಡು ತಿಂಗಳು ಪಾಕಿಸ್ತಾನದ (Pakistan) ಜತೆ ಭಾರತವು (India) ಯುದ್ಧ ನಡೆಸಿತು. ಭಾರತದ ಗಡಿಯೊಳಗೇ ನುಸುಳಿದ್ದ ಪಾಕಿಸ್ತಾನದ ಯೋಧರನ್ನು, ಭಾರತೀಯ ಸೇನೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಈ ಯುದ್ಧದಲ್ಲಿ ನೂರಾರು ಯೋಧರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದರು. ಅವರ ಸಾಹಸ, ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸುವುದಕ್ಕಾಗಿ ಇಡೀ ಭಾರತವು ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡುತ್ತದೆ.

1999ರ ಮೇ ತಿಂಗಳಲ್ಲಿ ಪಾಕಿಸ್ತಾನವು ತನ್ನ ಸೈನಿಕರನ್ನು ನುಸುಳುಕೋರರ ವೇಷದಲ್ಲಿ ಭಾರತದ ಗಡಿಯೊಳಗೆ ಕಳುಹಿಸಿತ್ತು. ಈ ಪಾಕ್ ಯೋಧರು ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಎಲ್ಒಸಿ ಗುಡಿಗುಂಟ ಅಡಗಿ ಕುಳಿತುಕೊಂಡಿದ್ದರು. ಭಾರತದ ಗಡಿಯಲ್ಲಿ ಸಂಘರ್ಷ ಸೃಷ್ಟಿಸುವುದಕ್ಕಾಗಿ ಲಡಾಕ್ ಮತ್ತು ಕಾಶ್ಮೀರ ನಡುವಿನ ಸಂಪರ್ಕ ಕಡಿತ ಮಾಡುವುದು ಪಾಕ್ ಯೋಧರ ಉದ್ದೇಶವಾಗಿತ್ತು. ಈ ವೇಳೆ, ಪಾಕ್ ಸೈನಿಕರು ಪರ್ವತಗಳ ತುದಿಯಲ್ಲಿದ್ದರೆ ಭಾರತದ ಯೋಧರು ಪರ್ವತದ ತಪ್ಪಲಿನಲ್ಲಿದ್ದರು. ಹಾಗಾಗಿ, ಭಾರತೀಯ ಸೇನೆಯ ಮೇಲೆ ಪಾಕ್ ಸೈನಿಕರ ದಾಳಿ ನಡೆಸುವುದು ಬಹಳ ಸುಲಭವಾಗಿತ್ತು. ಅಂತಿಮವಾಗಿ ಎರಡೂ ಕಡೆಯಿಂದಲೂ ಯುದ್ಧ ಘೋಷಣೆಯಾಯಿತು. ಪಾಕಿಸ್ತಾನದ ಯೋಧರು ಎಲ್ಒಸಿಯನ್ನು ದಾಟಿ ಭಾರತದ ಗಡಿಯೊಳಗೇ ನುಗ್ಗಿದರು.

ಆಪರೇಷನ್ ವಿಜಯ್ ಆರಂಭ

1999 ಮೇ 3ರಂದು ಕಾರ್ಗಿಲ್ ಯುದ್ಧವನ್ನು ಪಾಕಿಸ್ತಾನವು ಆರಂಭಿಸಿತು. ಕಾರ್ಗಿಲ್ ಜಿಲ್ಲೆಯ ಬಂಡೆಗಳಿಂದ ಕೂಡಿರುವ ಪರ್ವತಗಳಲ್ಲಿ ಪಾಕಿಸ್ತಾನದ ಸುಮಾರು 50000ಕ್ಕೂ ಅಧಿಕ ಸೈನಿಕರು ಅಡಗಿಕೊಂಡಿದ್ದರು ಮತ್ತು ಆ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಯಾವಾಗ ಈ ಮಾಹಿತಿ ದೊರೆಯಿತೋ ಭಾರತೀಯ ಸೇನೆಯ ಆಪರೇಷನ್ ವಿಜಯ್ ಆರಂಭಿಸಿತು. ಭಾರತದ ಗಡಿಯೊಳಗೇ ನುಗ್ಗಿದ್ದ ಅಷ್ಟೂ ಪಾಕಿಸ್ತಾನ ಸೈನಿಕರನ್ನು ವಾಪಸ್ ಪಾಕಿಸ್ತಾನಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತು.

ಭಾರೀ ಸಿದ್ಧತೆ ಮಾಡಿಕೊಂಡಿದ್ದ ಪಾಕ್

1998-1999ರ ಚಳಿಗಾಲದಲ್ಲಿ ಪಾಕಿಸ್ತಾನಿ ಸೇನೆಯು ಸಿಯಾಚಿನ್ ಗ್ಲೇಸಿಯರ್ ಮೇಲೆ ಹಿಡಿತ ಸಾಧಿಸುವ ಗುರಿಯೊಂದಿಗೆ ಪ್ರದೇಶದಲ್ಲಿ ಪ್ರಾಬಲ್ಯ ಮೆರೆಯಲು ಕಾರ್ಗಿಲ್ ಬಳಿ ರಹಸ್ಯವಾಗಿ ತನ್ನ ಯೋಧರಿಗೆ ತರಬೇತಿ ನೀಡಿತ್ತು. ಅಲ್ಲದೇ ಸೇನೆಯನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಆರಂಭಿಸಿತ್ತು. ಈ ಕುರಿತು ಪ್ರಶ್ನಿಸಿದಾಗ, ಅವರು ಪಾಕಿಸ್ತಾನದ ಯೋಧರಲ್ಲ, ಇಂಡಿಯನ್ ಮುಜಾಹಿದ್ದೀನ್ ಉಗ್ರರು ಎಂದು ಸಮಜಾಯಿಸಿ ನೀಡಿತ್ತು. ಪಾಕಿಸ್ತಾನದ ಉದ್ದೇಶವೇ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ತನ್ನತ್ತ ಸೆಳೆಯುವುದಾಗಿತ್ತು. ಆ ಮೂಲಕ ಭಾರತೀಯ ಸೇನೆಯ ಮೇಲೆ ಒತ್ತಡ ತಂದು, ಸಿಯಾಚಿನ್ ಪ್ರದೇಶದಿಂದ ಯೋಧರನ್ನ ಭಾರತವು ವಾಪಸ್ ಕರೆಯಿಸಿಕೊಳ್ಳುವ ಹುನ್ನಾರವನ್ನು ಪಾಕಿಸ್ತಾನ ಮಾಡಿತ್ತು. ಅಲ್ಲದೇ, ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಭಾರತದ ಮೇಲೆ ಒತ್ತಡ ತರುವುದು ಉದ್ದೇಶವಾಗಿತ್ತು.

1971ರ ಇಂಡೋ-ಪಾಕ್ ಯುದ್ಧದ ಬಳಿಕ ಉಭಯ ರಾಷ್ಟ್ರಗಳ ನಡುವೆ ಅನೇಕ ಸೇನಾ ಸಂಘರ್ಷಗಳು ಸಂಭವಿಸಿವೆ. ಎರಡೂ ರಾಷ್ಟ್ರಗಳು ಪರಮಾಣು ಅಸ್ತ್ರಗಳನ್ನು ಪರೀಕ್ಷಿಸಿವೆ. 1999 ಫೆಬ್ರವರಿಯಲ್ಲಿ ಪಾಕಿಸ್ತಾನ ಮತ್ತು ಭಾರತಗಳೆರಡೂ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಅನ್ವಯ ಕಾಶ್ಮೀರ ಸಂಘರ್ಷವನ್ನು ದ್ವಿಪಕ್ಷೀಯ ಹಾಗೂ ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದಾಗಿತ್ತು.

ಆಪರೇಷನ್ ಭದ್ರ್

ಭಾರತದ ಗಡಿಯೊಳಗೆ ನುಗ್ಗಿ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಈ ಕ್ರಿಯೆಗೆ ಪಾಕಿಸ್ತಾನವು ಆಪರೇಷನ್ ಭದ್ರ್ ಎಂದು ಹೆಸರಿಟ್ಟಿತ್ತು. ಇದರ ಮುಖ್ಯ ಉದ್ದೇಶವೇ ಲಡಾಕ್ ಮತ್ತು ಕಾಶ್ಮೀರದ ನಡುವಿನ ಸಂಪರ್ಕವನ್ನು ಕಡಿತಗೊಳಿಸುವುದು ಮತ್ತು ಸಿಯಾಚಿನ್ ಪ್ರದೇಶದಿಂದ ಭಾರತೀಯ ಸೇನೆ ವಾಪಸ್ ಹೋಗುವಂತೆ ಮಾಡುವುದಾಗಿತ್ತು. ಅಲ್ಲದೇ, ಈ ಪ್ರದೇಶದಲ್ಲಿ ಉದ್ಭವವಾಗುವ ಯಾವುದೇ ಕದಲಿಕೆಯು ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಿತ್ತು. ಅದೇ ಉದ್ದೇಶದಿಂದ ಪಾಕಿಸ್ತಾನವು ಭಾರತದ ಗಡಿಯೊಳಗೇ ತನ್ನ ಸೈನಿಕರನ್ನು ಕಳುಹಿಸಿತ್ತು. ಆದರೆ, ಭಾರತೀಯ ಸೇನೆಯು ಈ ಎಲ್ಲ ಸೈನಿಕರನ್ನು ಸದೆ ಬಡಿಯಿತು. ಅಲ್ಲದೇ ಪಾಕಿಸ್ತಾನದ ಹುನ್ನಾರವನ್ನು ಜಗಜ್ಜಾಹೀರು ಮಾಡಿತು.

ವಾಯುಪಡೆಯ ಪಾತ್ರ

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಪಾತ್ರ ನಿರ್ವಹಿಸಿತು. ಮಿಗ್-2ಐ, ಮಿಗ್-23ಸ್, ಮಿಗ್-27ಎಸ್, ಜಾಗ್ವಾರ್ ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ಪರಿಣಾಮಕಾರಿಯಾಗಿ ಬಳಸಲಾಯಿತು. ಮಿಗ್ 21 ಮತ್ತು ಮಿಗ್ 23 ಹಾಗೂ ಮಿಗ್ 27 ಮೂಲಕ ಪಾಕಿಸ್ತಾನದ ಅನೇಕ ಟಾರ್ಗೆಟ್‌ಗಳನ್ನು ನಾಶ ಮಾಡಲಾಯಿತು. ಹಾಗಾಗಿ, ಯುದ್ಧದ ವೇಳೆ ಆಪರೇಷನ್ ಸುರಕ್ಷಿತ್ ಸಾಗರಕ್ಕಾಗಿ ವಾಯುಪಡೆಯು ಮಿಗ್ 21 ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು.

ಘನ ಘೋರ ಯುದ್ಧ

ಕಾರ್ಗಿಲ್ ಯುದ್ಧದ ವೇಳೆ ರಾಕೆಟ್ಸ್, ಬಾಂಬ್‌ಗಳನ್ನು ಬಳಸಲಾಯಿತು. ಎರಡೂವರೆ ಲಕ್ಷ ಶೆಲ್, ಬಾಂಬ್ ಮತ್ತು ರಾಕೆಟ್‌ಗಳ ಮೂಲಕ ದಾಳಿ ನಡೆಸಲಾಯಿತು. ಸರಿಸುಮಾರು 5,000 ಫಿರಂಗಿ ಶೆಲ್‌ಗಳು, ಮಾರ್ಟರ್ ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಪ್ರತಿದಿನ 300 ಬಂದೂಕುಗಳು, ಮಾರ್ಟರ್‌ಗಳು ಮತ್ತು ಎಂಬಿಆರ್‌ಎಲ್‌ಗಳಿಂದ ಹಾರಿಸಲಾಯಿತು ಮತ್ತು ಟೈಗರ್ ಹಿಲ್ ಅನ್ನು ಮರಳಿ ಪಡೆದ ದಿನ 9,000 ಶೆಲ್‌ಗಳನ್ನು ಹಾರಿಸಲಾಯಿತು.

ಯೋಧರ ಬಲಿದಾನ

ಕಾರ್ಗಿಲ್ ಯುದ್ಧ ವೇಳೆ 527 ಯೋಧರು ಬಲಿದಾನ ಮಾಡಿದರು. 1300ಕ್ಕೂ ಅಧಿಕ ಯೋಧರು ಗಾಯಗೊಂಡರು. ಸಾಕಷ್ಟು ಸಾವು ನೋವು ಸಂಭವಿಸಿತು. ಆದರೂ, ನಮ್ಮ ಗಡಿಯನ್ನು ರಕ್ಷಿಸಿಕೊಳ್ಳಲು ಭಾರತೀಯ ಹೆಮ್ಮೆಯ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕಾದಾಡಿದರು. ಪಾಕಿಸ್ತಾನದ ಸೇನೆಗೆ ಸರಿಯಾದ ಪಾಠವನ್ನು ಕಲಿಸಿದರು.

ಅಮ್ಮಾ‌, ಗೆದ್ದರೆ ತಿರಂಗಾ ಅರಳಿಸಿ ಬರುತ್ತೇನೆ; ಸೋತರೆ ಹೊದ್ದು ಬರುತ್ತೇನೆ ಅಂದಿದ್ದ ಆ ಸೈನಿಕ!

1999ರ ಮೇ ತಿಂಗಳಿನಲ್ಲಿ ಕಾರ್ಗಿಲ್ ಯುದ್ದದ ನಿರ್ಧಾರ ಆದಾಗ ಎಲ್ಲ ಸೈನಿಕರಿಗೂ ʻಎಲ್ಲಿದ್ದರೂ ಬನ್ನಿʼ ಎಂಬ ಆದೇಶ ನೀಡಲಾಗಿತ್ತು. ಆಗ ಭಾರತೀಯ ಸೇನೆ ಬಹುತೇಕ ರಜೆಯ ಮೂಡಿನಲ್ಲಿ ಇತ್ತು. ಕ್ಯಾಪ್ಟನ್ ವಿಕ್ರಂ ಬಾತ್ರಾ ಕೂಡ ರಜೆಯಲ್ಲಿ ಊರಿಗೆ ಬಂದು ಅಮ್ಮನ ಮುಂದೆ ಕೂತಿದ್ದರು. ಅವರ ಅಮ್ಮ ಒಬ್ಬರು ಶಿಕ್ಷಕಿ ಆಗಿದ್ದರು. ಅವರದ್ದು ಹಿಮಾಚಲ ಪ್ರದೇಶದ ಒಂದು ಪುಟ್ಟ ಹಳ್ಳಿ. ತನ್ನ ಸ್ವಂತ ಇಚ್ಛೆಯಿಂದ ಮಗ ಕಂಬೈನ್ ಡಿಫೆನ್ಸ್ ಪರೀಕ್ಷೆ ಬರೆದು ಸೈನಿಕನಾಗಿ ಸೇರಿದ್ದ.

ಅಮ್ಮನಿಗೆ ಮಗ ಅಪರೂಪಕ್ಕೆ ಊರಿಗೆ ಬಂದಿದ್ದಾನೆ, ಸ್ವಲ್ಪ ದಿನ ಜೊತೆಗೆ ಇದ್ದರೆ ಚೆನ್ನಾಗಿತ್ತು ಅಂತ ಆಸೆ ಇತ್ತು. ಆದರೆ ಯುದ್ಧಕ್ಕೆ ಕರೆಬಂದಾಗ ಭಾರತೀಯ ಸೈನಿಕ ಹೊರಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಹಾಗೆ ಕ್ಯಾಪ್ಟನ್ ವಿಕ್ರಂ ಬಾತ್ರಾ ಹೊರಟು ನಿಂತಿದ್ದ ತನ್ನ ಎದೆಯನ್ನು ಕಲ್ಲು ಮಾಡಿಕೊಂಡು! ಅಮ್ಮನಿಗೆ ಕಣ್ಣೀರು ತಡೆದುಕೊಳ್ಳಲು ಆಗಲೇ ಇಲ್ಲ. ಆಗ ಮಗ ಅಮ್ಮನಿಗೆ ಧೈರ್ಯ ತುಂಬುತ್ತಾ, “ಅಳಬೇಡ ಅಮ್ಮ. ನೀನು ವೀರ ಸೈನಿಕನ ತಾಯಿ. ನಾನು ಖಂಡಿತ ಹಿಂದೆ ಬರುತ್ತೇನೆ. ಯುದ್ಧವನ್ನು ಗೆದ್ದರೆ ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ. ಅಥವಾ ತ್ರಿವರ್ಣ ಧ್ವಜವನ್ನು ಹೊದ್ದು ಹಿಂದೆ ಬರುತ್ತೇನೆ!” ಅಮ್ಮನಿಗೆ ಎಷ್ಟು ಅರ್ಥ ಆಯಿತೋ ಗೊತ್ತಿಲ್ಲ. ಅವನಿಗೆ ಆರತಿ ಎತ್ತಿ ಆಶೀರ್ವಾದ ಮಾಡಿ ಕಳುಹಿಸಿದರು.

ಈ ಸುದ್ದಿಯನ್ನೂ ಓದಿ: Pervez Musharraf Death: ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದ ಮುಷರಫ್, ಆಗ್ರಾ ಮಾತುಕತೆ ಮುರಿದರು

1999ರ ಮೇ ತಿಂಗಳಿನಲ್ಲಿ ಆರಂಭ ಆದ ಕಾರ್ಗಿಲ್ ಯುದ್ಧವು ಎರಡು ತಿಂಗಳ ಕಾಲ ಮುಂದುವರಿಯಿತು. ಅದರಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರಿಗೆ ತುಂಬಾ ಕ್ಲಿಷ್ಟಕರವಾದ ಟಾಸ್ಕ್ ನೀಡಲಾಯಿತು. ಏಳು ಸಾವಿರ ಅಡಿ ಎತ್ತರದ ಹಿಮ ಪರ್ವತದ ಶಿಖರ (ಅದರ ಹೆಸರು ಪಾಯಿಂಟ್ 5140)ವನ್ನು ಆಕ್ರಮಿಸಿಕೊಂಡ ಪಾಕ್ ಸೈನಿಕರಿಂದ ಮತ್ತೆ ಭಾರತದ ವಶಕ್ಕೆ ಪಡೆಯುವ ಟಾಸ್ಕ್ ಅದು. ಕ್ಯಾಪ್ಟನ್ ಬಾತ್ರಾ ಅವರು ತನ್ನ ಜೊತೆಗೆ ಇದ್ದ ಐವರು ಸೈನಿಕರಿಗೆ ಧೈರ್ಯ ಹೇಳಿ ‘ಯೇ ದಿಲ್ ಮಾಂಗೇ ಮೋರ್’ ಎಂಬ ಘೋಷಣೆಯನ್ನು ಕೊಡುತ್ತಾರೆ. ಆ ಶಿಖರವನ್ನು ಮುಂಭಾಗದಿಂದ ಏರಿ ಅದನ್ನು ವಶಪಡಿಸಿಕೊಳ್ಳುತ್ತಾರೆ. ನಿರಂತರ ಬಾಂಬ್, ಗ್ರಾನೈಡ್ ಮತ್ತು ಕ್ಷಿಪಣಿ ದಾಳಿಗಳ ನಡುವೆ, ದುರ್ಗಮ ಹಾದಿಯಲ್ಲಿ ಸಾಗಿ ಆ ಶಿಖರವನ್ನು ಏರಿ ಅದನ್ನು ಗೆದ್ದದ್ದು ಅಸಾಮಾನ್ಯ ಸಾಹಸವೇ ಆಗಿತ್ತು.

ಅದನ್ನು ಮುಗಿಸಿ ಇನ್ನೊಂದು ಶಿಖರವನ್ನು (ಪಾಯಿಂಟ್ 4875) ವಶ ಮಾಡಲು ಹೊರಟಾಗ ಕ್ಷಿಪಣಿ ದಾಳಿಗೆ ತುತ್ತಾಗಿ ಕ್ಯಾಪ್ಟನ್ ವಿಕ್ರಂ ಬಾತ್ರಾ ತಮ್ಮ ಪ್ರಾಣವನ್ನು ಕಳೆದುಕೊಂಡರು. ಅವರಿಗೆ ಮರಣೋತ್ತರ ಆಗಿ ಸೈನಿಕನಿಗೆ ನೀಡುವ ಪರಮೋಚ್ಚ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ಈ ರೀತಿ ಹುತಾತ್ಮರಾದ 527 ಭಾರತೀಯ ಸೈನಿಕರ ಬಲಿದಾನದ ಫಲವಾಗಿ ಭಾರತವು ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಆ ಸೈನಿಕರ ಗೌರವದ ದಿನ ಇಂದು ಕಾರ್ಗಿಲ್ ವಿಜಯ ದಿವಸ್. ಆ ಮಹಾನ್ ಸೈನಿಕರಿಗೆ ನಮ್ಮ ಶೃದ್ಧಾಂಜಲಿ ಇರಲಿ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version