Site icon Vistara News

PM Modi US Visit: ಅಮೆರಿಕಕ್ಕೆ ಬಂದಿಳಿದ ಮೋದಿ; ಭರ್ಜರಿ ಸ್ವಾಗತ ನೀಡಿದ ಜನರು

PM modi in USA

ವಾಷಿಂಗ್ಟನ್, ಅಮೆರಿಕ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕ ಪ್ರವಾಸವನ್ನು (PM Modi US Visit) ವಿಧ್ಯುಕ್ತವಾಗಿ ಆರಂಭಿಸಿದ್ದಾರೆ. ಮಂಗಳವಾರ ಮಧ್ಯಾಹ್ನ(ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ರಾತ್ರಿ 10.30 ಗಂಟೆ) ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನ (New York) ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು. ಈ ವೇಳೆ, ಭಾರತೀಯ ಸಮುದಾಯವು ಹಾಜರಿದ್ದು, ಜನರು ಭರ್ಜರಿ ಸ್ವಾಗತ ಕೋರಿದರು. ಭಾರತೀಯರ ಜತೆ ಹಸ್ತಲಾಘವ ಕೂಡ ಪ್ರಧಾನಿ ಮೋದಿ ಮಾಡಿದರು.

ಅಮೆರಿಕದಲ್ಲಿ ಇಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ನ್ಯೂಯಾರ್ಕ್ ನಗರದಲ್ಲಿ ಬಂದಿಳಿದಿದ್ದೇನೆ. ಚಿಂತನಶೀಲ ನಾಯಕರೊಂದಿಗೆ ಸಂವಾದ ಮಾಡಲಿದ್ದೇನೆ ಮತ್ತು ನಾಳೆ ಜೂನ್ 21 ರಂದು ಯೋಗ ದಿನಾಚರಣೆ ಕಾರ್ಯಕ್ರಮ ಸೇರಿದಂತೆ ಇಲ್ಲಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಟ್ವೀಟ್

ಅಮೆರಿಕಕ್ಕೆ ಹೊರಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಮತ್ತು ಅಮೆರಿಕನಡುವಿನ “ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಸ್ವಾತಂತ್ರ್ಯದ ಹಂಚಿಕೆಯ ಮೌಲ್ಯಗಳ ಆಧಾರದ ಮೇಲೆ” ಎರಡೂ ದೇಶಗಳು “ಹಂಚಿಕೊಂಡ ಜಾಗತಿಕ ಸವಾಲುಗಳನ್ನು” ಎದುರಿಸಲು ಒಟ್ಟಿಗೆ ನಿಂತಿವೆ ಎಂದು ಹೇಳಿದ್ದರು.

ಅಮೆರಿಕದಲ್ಲಿ ಮೋದಿಗೆ ಭರ್ಜರಿ ಸ್ವಾಗತ

PM Modi US Visit: ನಾನು ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ- ಮೋದಿ

ನಾನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ. ಹೀಗಾಗಿ ನನ್ನ ಚಿಂತನೆ ಹಾಗೂ ನಡೆಗಳು ಭಾರತೀಯ ಸಂಪ್ರದಾಯದಿಂದ ಪ್ರೇರಿತವಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಗ ದಿನಾಚರಣೆ ಹಾಗೂ ಇತರ ದ್ವಿಪಕ್ಷೀಯ ಮಾತುಕತೆಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಪ್ರತಿಷ್ಠಿತ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಗೆ ಸಂದರ್ಶನ ನೀಡಿದ್ದು, ಅದರಲ್ಲಿ ಈ ವಿಚಾರ ಹೇಳಿದ್ದಾರೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತು ಅವರು ಮನಬಿಚ್ಚಿ ಮಾತನಾಡಿದ್ದಾರೆ.

ನಾನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ ಆಗಿರುವುದರಿಂದ, ನನ್ನ ಚಿಂತನಕ್ರಮ, ನನ್ನ ವರ್ತನೆಗಳು ಹಾಗೂ ಮಾತುಗಳು ಎಲ್ಲವೂ ನನ್ನ ದೇಶದ ಪರಂಪರೆ ಸಂಪ್ರದಾಯಗಳಿಂದ ಪ್ರಭಾವಿತಗೊಂಡಿವೆ. ನನಗೆ ಶಕ್ತಿ ತುಂಬುವುದೇ ಅದು. ನಾನು ನನ್ನ ದೇಶ ಹೇಗೆ ಇದೆಯೋ ಹಾಗೆ, ಮತ್ತು ನಾನು ಹೇಗಿದ್ದೇನೋ ಹಾಗೆ ಅದನ್ನು ಜಗತ್ತಿನ ಮುಂದೆ ಪ್ರತಿನಿಧಿಸುವವನು.

ಈ ಸುದ್ದಿಯನ್ನೂ ಓದಿ: PM Modi US Visit: ಯುಎಸ್​ಗೆ ಪ್ರಧಾನಿ ಮೋದಿ; ಚೀನಾ ಹೊಟ್ಟೆಗೆ ಬಿತ್ತು ಬೆಂಕಿ!

ಇಂದು ಭಾರತ ಹಾಗೂ ಅಮೆರಿಕದ ನಡುವೆ ಅಭೂತಪೂರ್ವವಾದ ನಂಬಿಕೆ-ವಿಶ್ವಾಸ ರೂಪುಗೊಂಡಿದೆ. ಜಾಗತಿಕ ವಲಯದಲ್ಲಿ ಭಾರತಕ್ಕೆ ಇನ್ನಷ್ಟು ಉನ್ನತವಾದ, ಆಳವಾದ ಹಾಗೂ ವಿಸ್ತಾರವಾದ ಪಾತ್ರ ಅಗತ್ಯವಿದೆ. ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ರಕ್ಷಣಾ ಸಹಕಾರ ನಮ್ಮ ಪ್ರಮುಖ ಆಧಾರಸ್ತಂಭ. ಇದು ವ್ಯಾಪಾರ, ತಂತ್ರಜ್ಞಾನ ಹಾಗೂ ಇಂಧನ ವಲಯಗಳಿಗೂ ವಿಸ್ತರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತವು ಬೇರೆ ಯಾವುದೇ ದೇಶಕ್ಕೆ ಪರ್ಯಾಯವಾಗಿ ಬರುತ್ತಿಲ್ಲ. ಭಾರತವು ವಿಶ್ವದಲ್ಲಿ ತನ್ನ ಸರಿಯಾದ ಸ್ಥಾನವನ್ನು ಪಡೆಯುತ್ತಿರುವಂತೆ ಈ ಪ್ರಕ್ರಿಯೆಯನ್ನು ನಾವು ನೋಡುತ್ತೇವೆ. ಇಂದು ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಸಂಬಂಧ ಹೊಂದಿದೆ ಮತ್ತು ಪರಸ್ಪರ ಅವಲಂಬಿತವಾಗಿದೆ. ಇನ್ನಷ್ಟು ಸ್ಥಿರತೆಗಾಗಿ ಪೂರೈಕೆ ಸರಪಳಿಗಳಲ್ಲಿ ಹೆಚ್ಚಿನ ವೈವಿಧ್ಯತೆ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version