Site icon Vistara News

PM Narendra Modi Interview: ಜಾಗತಿಕ ನಾಯಕತ್ವ ವಹಿಸಲು ಭಾರತ ಸಿದ್ಧ: ಫ್ರಾನ್ಸ್‌ ಪತ್ರಿಕೆಗೆ ನರೇಂದ್ರ ಮೋದಿ ವಿಶೇಷ ಸಂದರ್ಶನ

Uttarkashi Tunnel rescue success makes us emotional says PM Narendra Modi

ಹೊಸದಿಲ್ಲಿ: ಬದಲಾಗುತ್ತಿರುವ ಜಗತ್ತಿನಲ್ಲಿ ದೊಡ್ಡ ಪ್ರಜಾಪ್ರಭುತ್ವವಾಗಿ, ಹೆಚ್ಚು ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿರುವ ಭಾರತಕ್ಕೆ ಹೆಚ್ಚಿನ ಸ್ಥಾನಮಾನ, ಹೊಣೆಗಾರಿಕೆ ಸಿಗಬೇಕಾಗಿದೆ. ಜಾಗತಿಕ ದಕ್ಷಿಣ ಹಾಗೂ ಉತ್ತರದ ನಡುವೆ ಸೇತುವೆಯಾಗಿ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ನಾಳೆ (ಜುಲೈ 14) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದಾರೆ. ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ದಿನಾಚರಣೆ (Bastille Day) ಯಲ್ಲಿ ಭಾಗವಹಿಸುವಂತೆ ಅಲ್ಲಿನ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್‌ (Emmanuel Macron) ಅವರು ಮೋದಿಯವರಿಗೆ ಆಹ್ವಾನ ನೀಡಿದ್ದು, ಈ ಆಮಂತ್ರಣವನ್ನು ಮನ್ನಿಸಿ ಮೋದಿ ಅಲ್ಲಿಗೆ ತೆರಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ʼಲೆಸ್‌ ಇಕೊʼ (Les Echos) ಪತ್ರಿಕೆಗೆ ನರೇಂದ್ರ ಮೋದಿ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಭಾರತ- ಫ್ರಾನ್ಸ್‌ಗಳ ದ್ವಿಪಕ್ಷೀಯ ಸಂಬಂಧ, ಇಂಡೋ- ಪೆಸಿಫಿಕ್‌ನ ವ್ಯೂಹಾತ್ಮಕ ಭಾಗೀದಾರಿಕೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನಮಾನ ನೀಡಬೇಕಾದ ಅಗತ್ಯ, ಚೀನಾದ ಆರ್ಥಿಕ ಆತಂಕ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದಿಂದ ಆಯ್ದ ಭಾಗಗಳು ಇಲ್ಲಿವೆ.

ಜಾಗತಿಕವಾಗಿ ಭಾರತದ ಸ್ಥಾನಮಾನ

ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಶ್ರೀಮಂತ ನಾಗರಿಕತೆ. ಇಂದು ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರ ಕೂಡ. ಭಾರತದ ಪ್ರಬಲ ಆಸ್ತಿ ಯುವಜನ. ಮುಂಬರುವ ದಶಕಗಳಲ್ಲಿ ಪ್ರಪಂಚದ ಅನೇಕ ದೇಶಗಳಿಗೆ ವಯಸ್ಸಾಗುವಾಗ ಮತ್ತು ಅವುಗಳ ಜನಸಂಖ್ಯೆ ಕುಗ್ಗುವಾಗ, ಭಾರತದ ಯುವ ಮತ್ತು ನುರಿತ ಉದ್ಯೋಗಿಗಳು ಪ್ರಪಂಚಕ್ಕೆ ಆಸ್ತಿಯಾಗಿರುತ್ತಾರೆ. ಭಾರತೀಯರ ವಿಶೇಷತೆಯೆಂದರೆ ಅವರ ಮುಕ್ತತೆ. ಇವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ಸುಕರು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿರುತ್ತಾರೆ. ಇಂದಿಗೂ ʼಭಾರತೀಯ ವೇದಿಕೆʼ ಎಲ್ಲೇ ಇದ್ದರೂ ಅಲ್ಲಿಗೆ ತಮ್ಮ ಕೊಡುಗೆ ನೀಡುತ್ತಾರೆ. ತಾವು ನೆಲೆಸಿದ ನಾಡಿನ ಜತೆಗೆ ತಾಯ್ನಾಡಿನ ಸಮೃದ್ಧಿಯತ್ತಲೂ ಚಿಂತಿಸುತ್ತಾರೆ. ಭಾರತದಲ್ಲಿ ಮನುಕುಲದ ಆರನೇ ಒಂದು ಭಾಗವಿದ್ದು, ಇದು ಜಗತ್ತಿಗೆ ಹೆಚ್ಚು ಸುಸ್ಥಿರ ಭವಿಷ್ಯವನ್ನು ನೀಡುತ್ತದೆ. ಭಾರತ ಸಾಟಿಯಿಲ್ಲದ ಸಾಮಾಜಿಕ ಮತ್ತು ಆರ್ಥಿಕತೆಯೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಈ ನಾಡು ವೈವಿಧ್ಯತೆಯ ನಡುವೆ ಸಾಮರಸ್ಯ ಅಸ್ತಿತ್ವದಲ್ಲಿರಲು ಸಾಧ್ಯ ಎಂದು ತೋರಿಸಿದೆ. ಹಾಗೆಯೇ ಈ ಬೃಹತ್‌ ದೇಶ ಜಾಗತಿಕವಾಗಿ ತಕ್ಕ ಸ್ಥಾನಮಾನ ಪಡೆಯುವ ನಿರೀಕ್ಷೆಯಲ್ಲಿದೆ.

ಜನಸಂಖ್ಯೆ ನಮ್ಮ ಶಕ್ತಿ

ಅನಾದಿ ಕಾಲದಿಂದಲೂ ಜಾಗತಿಕ ಆರ್ಥಿಕ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ಮಾನವ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಇಂದು ಪ್ರಪಂಚದಾದ್ಯಂತ ಬಹಳಷ್ಟು ಸಮಸ್ಯೆ ಮತ್ತು ಸವಾಲುಗಳಿವೆ. ಆರ್ಥಿಕ ಹಿಂಜರಿತ, ಆಹಾರ ಭದ್ರತೆಯ ಕೊರತೆ, ಹಣದುಬ್ಬರ, ಸಾಮಾಜಿಕ ಉದ್ವಿಗ್ನತೆ ಇತ್ಯಾದಿ. ಇಂತಹ ಜಾಗತಿಕ ವಾತಾವರಣದ ಹಿನ್ನೆಲೆಯಲ್ಲಿಯೂ ನಾವು ಇಲ್ಲಿನ ಜನರಲ್ಲಿ ವಿಶ್ವಾಸ, ಭವಿಷ್ಯದ ಬಗ್ಗೆ ಆಶಾವಾದ ಮತ್ತು ಜಗತ್ತಿನಲ್ಲಿ ತನ್ನ ಸರಿಯಾದ ಸ್ಥಾನ ಪಡೆಯುವ ಉತ್ಸುಕತೆಯನ್ನು ಕಾಣಬಹುದು.

ನಮ್ಮ ಜನಸಂಖ್ಯಾ ಬಂಡವಾಳ, ಪ್ರಜಾಪ್ರಭುತ್ವದಲ್ಲಿ ನಮ್ಮ ಆಳವಾದ ಬೇರುಗಳು ಮತ್ತು ನಮ್ಮ ನಾಗರಿಕತೆಯು ನಮ್ಮ ಭವಿಷ್ಯದ ಕಡೆಗೆ ಸಾಗುವ ದಾರಿಯನ್ನು ತೋರಿಸಲಿದೆ. ಜಾಗತಿಕ ಸವಾಲುಗಳನ್ನು ಎದುರಿಸುವ, ಸುಸಂಘಟಿತ ಜಗತ್ತನ್ನು ನಿರ್ಮಿಸಲು ಕೊಡುಗೆ ನೀಡುವ, ದುರ್ಬಲರ ಆಕಾಂಕ್ಷೆಗಳಿಗೆ ಧ್ವನಿ ನೀಡುವ ನಮ್ಮ ಜವಾಬ್ದಾರಿಯನ್ನು ನಾವು ಗುರುತಿಸಿಕೊಂಡಿದ್ದೇವೆ. ಭಾರತ ಯಾವಾಗಲೂ ಶಾಂತಿಯ ಪರವಾಗಿ ನಿಂತಿದೆ. ಸಮಗ್ರ ಆರ್ಥಿಕ ವ್ಯವಸ್ಥೆ ಮತ್ತು ದುರ್ಬಲ ರಾಷ್ಟ್ರಗಳ ಪರವಾಗಿ ನಾವು ಯಾವಾಗಲೂ ಕಾಳಜಿ ಹೊಂದಿದ್ದು ದನಿ ಎತ್ತುತ್ತಿದ್ದೇವೆ.

ದಕ್ಷಿಣದಲ್ಲಿ ಭಾರತದ ನಾಯಕತ್ವ

ಸಮಗ್ರ ಪ್ರಯತ್ನದಲ್ಲಿ ಭಾರತದ ಆಳವಾದ ನಂಬಿಕೆಯಿದೆ. ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟ, ವಿಪತ್ತು ತಡೆ ಮೂಲಸೌಕರ್ಯಕ್ಕಾಗಿ ಒಕ್ಕೂಟ, ʼಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ʼ ಉಪಕ್ರಮ, ಇಂಡೋ- ಪೆಸಿಫಿಕ್ ಸಾಗರಗಳ ಉಪಕ್ರಮ ಇವೆಲ್ಲ ಭಾರತದ ಪ್ರಯತ್ನಗಳಿಗೆ ಉದಾಹರಣೆಗಳು. 100ಕ್ಕೂ ಹೆಚ್ಚು ದೇಶಗಳಿಗೆ ನಮ್ಮ ಕೋವಿಡ್ ಲಸಿಕೆ ಪೂರೈಕೆಯಾಗಿದೆ. ನಮ್ಮ ಓಪನ್ ಸೋರ್ಸ್ ಡಿಜಿಟಲ್ ಪ್ಲಾಟ್‌ಫಾರ್ಮ್ CoWin ಅನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದೇವೆ. ಪ್ರಪಂಚದಲ್ಲಿ ಪ್ರಕ್ಷುಬ್ಧತೆ ಮತ್ತು ವಿಘಟನೆಯ ಅಪಾಯಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಜಾಗತಿಕ ಏಕತೆ, ಒಗ್ಗಟ್ಟು, ಶಾಂತಿ ಮತ್ತು ಸಮೃದ್ಧಿಗೆ ಭಾರತದ ಒಳಿತಿನ ಶಕ್ತಿಯ ಕೊಡುಗೆ ಅನಿವಾರ್ಯ ಎಂಬ ಭಾವನೆ ಹೆಚ್ಚಿದೆ. ನಮ್ಮ ಸಂಘಟಿತ ಪ್ರಯತ್ನ ಮಾನವತೆಯ ಸಮಗ್ರ ಒಳಿತಿಗಾಗಿಯೇ ಹೊರತು ಇತರರಿಗೆ ಸವಾಲು ಎಸೆಯುವುದಕ್ಕಾಗಿ ಅಲ್ಲ.

ಭಾರತದ ಸಾಫ್ಟ್‌ ಪವರ್‌ನ ಆಧಾರಸ್ತಂಭಗಳು

ನಮ್ಮ ನಾಗರಿಕತೆಯ ನೀತಿ ಮತ್ತು ಪರಂಪರೆಯೇ ಭಾರತದ ಸಾಫ್ಟ್‌ ಪವರ್‌ನ ಆಧಾರಸ್ತಂಭಗಳು. ಇದನ್ನು ನಾವು ಹೇರಳವಾಗಿ ಹೊಂದಿದ್ದೇವೆ. ನಮ್ಮ ರಫ್ತು ಯಾವಾಗಲೂ ಯೋಗ, ಆಯುರ್ವೇದ, ಆಧ್ಯಾತ್ಮಿಕತೆ, ವಿಜ್ಞಾನ, ಗಣಿತ, ಜ್ಯೋತಿರ್ವಿಜ್ಞಾನ ಇಂಥವೇ ಹೊರತು ಯುದ್ಧ, ದೌರ್ಜನ್ಯಗಳಲ್ಲ.

ನಾವು ಪ್ರಗತಿ ಹೊಂದುತ್ತಿರುವಾಗಲೂ ನಮ್ಮ ಹಿಂದಿನ ಹೆಮ್ಮೆ ಮತ್ತು ಸ್ಫೂರ್ತಿಗಳನ್ನು ಮುಂದಕ್ಕೆ ಒಯ್ಯಬೇಕು ಎಂದು ನಂಬುತ್ತೇವೆ. ಇದರಿಂದ ಮಾತ್ರ ನಾವು ಪ್ರಗತಿ ಹೊಂದಬಹುದು. ಯೋಗ ಇಂದು ಮನೆಮಾತಾಗಿದೆ. ನಮ್ಮ ಸಾಂಪ್ರದಾಯಿಕ ಆಯುರ್ವೇದ ಔಷಧ ಪದ್ಧತಿ ಸ್ವೀಕೃತವಾಗುತ್ತಿದೆ. ಭಾರತೀಯ ಸಿನಿಮಾ, ತಿನಿಸು, ಸಂಗೀತ ಮತ್ತು ನೃತ್ಯ ಪ್ರಪಂಚದಾದ್ಯಂತ ಪ್ರೀತಿಸಲ್ಪಡುತ್ತಿದೆ. ಪ್ರಕೃತಿಯೊಂದಿಗೆ ನಮ್ಮ ಸಹಬಾಳ್ವೆಯ ಕ್ರಮ, ಸುಸ್ಥಿರ ಜೀವನಶೈಲಿಗೆ ಹೊಂದಿಕೊಂಡಿದೆ. ಪ್ರಜಾಪ್ರಭುತ್ವದ ಆದರ್ಶಗಳಲ್ಲಿ ನಮ್ಮ ಸಹಜ ನಂಬಿಕೆ ಮತ್ತು ಹೆಚ್ಚು ಜವಾಬ್ದಾರಿಯುತ, ಒಳಗೊಳ್ಳುವ ಕ್ರಮಗಳು ಹೆಚ್ಚಿನವರಿಗೆ ಸ್ಫೂರ್ತಿಯಾಗಿವೆ. ಶಾಂತಿ, ಮುಕ್ತತೆ, ಸಾಮರಸ್ಯ, ಸಹಬಾಳ್ವೆ, ಪ್ರಜಾಪ್ರಭುತ್ವ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮತ್ತು ತತ್ವಶಾಸ್ತ್ರ, ನ್ಯಾಯಪರತೆ, ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧತೆ ಮತ್ತು ಶಾಂತಿಗಳು ಭಾರತೀಯರ ಶಕ್ತಿಯ ಆಧಾರಸ್ತಂಭಗಳು.

ಭಾರತ- ಅಮೆರಿಕ ಸಂಬಂಧ

ಉಭಯ ದೇಶಗಳ ನಡುವಿನ ಸಂಬಂಧ ಇತ್ತೀಚೆಗೆ ಸಕಾರಾತ್ಮಕವಾಗಿ ಬೆಳೆಯುತ್ತಿದೆ ಎಂಬುದು ನಿಜ. ಕಳೆದ ಒಂಬತ್ತು ವರ್ಷಗಳಲ್ಲಿ ಇದು ವೇಗ ಪಡೆದಿದೆ. ಹೊಸ ಎತ್ತರ ತಲುಪಿದೆ. ಇಲ್ಲಿನ ಸರ್ಕಾರ, ಸಂಸತ್ತು, ಉದ್ಯಮ, ಅಕಾಡೆಮಿಗಳು ಮತ್ತು ಜನರು ಸೇರಿ ಎಲ್ಲರಿಂದಲೂ ನಮ್ಮ ಸಂಬಂಧಗಳನ್ನು ಗಾಢವಾಗಿಸಲು ವ್ಯಾಪಕ ಬೆಂಬಲವಿದೆ. ಅಮೆರಿಕ ಕಾಂಗ್ರೆಸ್ ಸತತವಾಗಿ ನಮ್ಮ ಸಂಬಂಧ ವೃದ್ಧಿಗೆ ಗಾಢ ಬೆಂಬಲ ನೀಡಿದೆ. ಅಮೆರಿಕದ ಆಡಳಿತ ವ್ಯತ್ಯಾಸ ಆಗಿದ್ದರೂ ನಾನು ವೈಯಕ್ತಿಕವಾಗಿ ಅಮೆರಿಕ ನಾಯಕತ್ವದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದೇನೆ. ಕಳೆದ ಅಮೆರಿಕ ಭೇಟಿಯ ಸಮಯದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ನಾನು ಅತ್ಯುತ್ತಮ ಸ್ನೇಹ ಹಂಚಿಕೊಂಡೆವು. ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಜನ ನಮ್ಮ ಅಸಾಧಾರಣ ಬೆಂಬಲ. ನಮ್ಮ ಸ್ನೇಹದ ಆಸಕ್ತಿಗಳು, ದೃಷ್ಟಿ, ಬದ್ಧತೆಗಳು ಪೂರ್ಣ ಮುಕ್ತವಾಗಿವೆ. ಮತ್ತು ನಮ್ಮ ಕಾಲದ ಸವಾಲುಗಳನ್ನು ಎದುರಿಸಲು ಇದು ಮಹತ್ವದ ಮಾರ್ಗವಾಗಿದೆ.

ಅಂತಾರಾಷ್ಟ್ರೀಯ ಸವಾಲುಗಳು ಬೆಳೆದಂತೆ, ನಮ್ಮ ಪಾಲುದಾರಿಕೆ ಹೆಚ್ಚಿನ ತುರ್ತಿನಿಂದ ಪ್ರತಿಕ್ರಿಯಿಸಿದೆ. ನಂಬಿಕೆ, ಪರಸ್ಪರ ವಿಶ್ವಾಸ ಮತ್ತು ಸಂಬಂಧದಲ್ಲಿನ ನಂಬಿಕೆಯು ಇಲ್ಲಿ ಪ್ರಮುಖ ಅಂಶಗಳು. ಸಮತೋಲಿತ ಇಂಡೋ- ಪೆಸಿಫಿಕ್ ಪ್ರದೇಶ ನಮ್ಮ ಸಮಾನ ಆಶಯ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಹಸಿರು ಶಕ್ತಿ, ಪ್ರಮುಖ ವಲಯಗಳಲ್ಲಿ ಉತ್ಪಾದನೆಯ ವೇಗವರ್ಧನೆ, ದೃಢವಾದ ರಕ್ಷಣಾ ಕೈಗಾರಿಕಾ ಪಾಲುದಾರಿಕೆ ಇತ್ಯಾದಿಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ.

ಭಾರತ ʼದಕ್ಷಿಣ ಜಗತ್ತಿʼನ ನಾಯಕನೇ?

ʼನಾಯಕʼ ಎಂಬ ಪದ ತುಂಬ ತೂಕದ್ದು. ಹಾಗೆ ಭಾರತ ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ ಅಥವಾ ತಾನಾಗಿಯೇ ಹಾಗೆ ತಿಳಿದುಕೊಳ್ಳುವುದಿಲ್ಲ. ನಾನು ಅಪೇಕ್ಷಿಸುವುದೇನೆಂದರೆ, ಜಾಗತಿಕ ಹಿತಕ್ಕಾಗಿ ದಕ್ಷಿಣ ಜಗತ್ತಿಗೆ ಒಂದು ಸಮಗ್ರ ನಾಯಕತ್ವ ಬೇಕಿದೆ. ಭಾರತ ಅದರ ಧ್ವನಿ ಆಗಬಹುದು. ಆದರೆ ತಾನು ನಾಯಕ ಎಂದು ಭಾವಿಸಬೇಕಿಲ್ಲ.

ಜಾಗತಿಕ ದಕ್ಷಿಣ ಭಾಗದ ಹಕ್ಕುಗಳನ್ನು ದೀರ್ಘಕಾಲದಿಂದ ನಿರಾಕರಿಸಲಾಗಿದೆ ಎಂಬುದಂತೂ ನಿಜ. ಪರಿಣಾಮವಾಗಿ, ಗ್ಲೋಬಲ್ ಸೌತ್‌ನಲ್ಲಿ ಅಸಮಾಧಾನದ ಭಾವನೆ ಇದೆ. ಕ್ರಿಯೆಗಳಲ್ಲಿ ಜಾಗತಿಕ ದಕ್ಷಿಣವನ್ನು ಒಳಗೊಳ್ಳಿಸಲಾಗಿದೆ; ಆದರೆ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ಧ್ವನಿಯನ್ನು ಕೇಳಿಸಿಕೊಂಡಿಲ್ಲ. ಈ ಕುರಿತು ಪ್ರಜಾಪ್ರಭುತ್ವದ ನಿಜವಾದ ಚೈತನ್ಯವನ್ನು ಗೌರವಿಸಲಾಗಿಲ್ಲ. ಪ್ರಜಾಪ್ರಭುತ್ವದ ನೈಜ ಉತ್ಸಾಹದಲ್ಲಿ ಕೆಲಸ ಮಾಡಿ, ಅದೇ ಗೌರವ, ಅದೇ ಹಕ್ಕುಗಳನ್ನು ನೀಡಿದರೆ ಜಾಗತಿಕ ದಕ್ಷಿಣ ಜಗತ್ತಿಗೆ ಇನ್ನಷ್ಟು ಬಲವಾದ ಕೊಡುಗೆ ನೀಡುವ ಸಮುದಾಯವಾಗಲಿದೆ. ನಾವು ನಮ್ಮ ಜಾಗತಿಕ ಸಂಸ್ಥೆಗಳನ್ನು ಚೇತರಿಸಿಕೊಳ್ಳುವಂತೆ ಮಾಡುತ್ತೇವೆ. ಭಾರತ ಆ ಭಾರವನ್ನು ಹೊರುವ ಬಲಿಷ್ಠ ಹೆಗಲಾಗಬಲ್ಲದು. ಜಾಗತಿಕ ಉತ್ತರದೊಂದಿಗೆ ಸಂಬಂಧ ಬೆಸೆಯುವ ಸೇತುವೆಯೂ ಭಾರತ ಆಗಬಲ್ಲದು.

ಜಾಗತಿಕ ದಕ್ಷಿಣವನ್ನು ಬಲಿಷ್ಠಗೊಳಿಸಲು ಭಾರತದ ಯತ್ನ

ಜನವರಿ 2023ರಲ್ಲಿ, ನಮ್ಮ G20 ಅಧ್ಯಕ್ಷತೆಯ ಪ್ರಾರಂಭದಲ್ಲಿ, ನಾವು ಶೃಂಗಸಭೆಯನ್ನು ಸಂಘಟಿಸಿದೆವು. ಜಾಗತಿಕ ದಕ್ಷಿಣದ 125 ದೇಶಗಳು ಭಾಗವಹಿಸಿದ್ದವು. ಭಾರತ ಇನ್ನಷ್ಟು ಬಲಿಷ್ಠವಾದ ಮುನ್ನೆಲೆ ತೆಗೆದುಕೊಳ್ಳಬೇಕು ಎಂದು ಏಕಾಭಿಪ್ರಾಯ ವ್ಯಕ್ತವಾಯಿತು. ನಮ್ಮ G20 ಅಧ್ಯಕ್ಷತೆಯ ಅವಧಿಯಲ್ಲಿ, ʼಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼಕ್ಕಾಗಿ ದಕ್ಷಿಣದ ಧ್ವನಿಯಾಗಲು ಭಾರತ ಮುಂದೆ ಬಂದಿದೆ. ಜಾಗತಿಕ ದಕ್ಷಿಣದ ಆದ್ಯತೆಗಳು ಮತ್ತು ಆಸಕ್ತಿಗಳನ್ನು ಕೇಂದ್ರಕ್ಕೆ ತರಲು ನಾವು ಪ್ರಯತ್ನಿಸಿದ್ದೇವೆ. G20 ಚರ್ಚೆಗಳಲ್ಲಿ ನಾನು ಆಫ್ರಿಕ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ ನೀಡಲು ಆಗ್ರಹಿಸಿದೆ. ಇದು ʼಜಾಗತಿಕ ಉತ್ತರʼಕ್ಕೆ ವಿರುದ್ಧಾರ್ಥಕವಲ್ಲ. ಒಂದೇ ಜಗತ್ತು ಆಗಬೇಕು ಎಂಬ ಆಶಯ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಸದಸ್ಯತ್ವ

ಇದು ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯಲ್ಲ. ಎರಡನೇ ವಿಶ್ವಯುದ್ಧದ ಬಳಿಕ ನಾವು ತಂದುಕೊಂಡ ಬಹು ರಾಷ್ಟ್ರೀಯ ಆಡಳಿತದ ಬಗೆಗೆ ನಾವು ಯೋಚಿಸಬೇಕಿದೆ. ಇಂದು ಸಮಯ ಬದಲಾಗಿದೆ. ರಾಷ್ಟ್ರಗಳ ಸಂಖ್ಯೆ ನಾಲ್ಕು ಪಟ್ಟು ಆಗಿದೆ. ನೂತನ ತಂತ್ರಜ್ಞಾನದ ಯುಗದಲ್ಲಿ ಬಾಳುತ್ತಿದ್ದೇವೆ. ಹೊಸ ಶಕ್ತಿಗಳು ಜಾಗತಿಕ ಅಧಿಕಾರದ ತಕ್ಕಡಿಯಲ್ಲಿ ಏರುಪೇರು ಉಂಟುಮಾಡಿವೆ. ಹೊಸ ಸವಾಲುಗಳು ಬಂದಿವೆ. ಹವಾಮಾನ ವೈಪರೀತ್ಯ, ಸೈಬರ್‌ ಭದ್ರತೆ,, ಭಯೋತ್ಪಾದನೆ, ಬಾಹ್ಯಾಕಾಶ ಭದ್ರತೆ, ಸಾಂಕ್ರಾಮಿಕಗಳು ಇವೆಲ್ಲವೂ ಬಂದಿವೆ. ಈ ಎಲ್ಲ ಅಂಶಗಳನ್ನೂ ಇಂದಿನ ವಿಶ್ವ ಆಡಳಿತದಲ್ಲಿ ಮುನ್ನೆಲೆಗೆ ತರುವ, ಎಲ್ಲರಿಗೂ ಪ್ರಾತಿನಿಧ್ಯವನ್ನು ನೀಡುವ ಕೆಲಸ ಆಗಿಲ್ಲ. ಇಂದಿನ ಭದ್ರತಾ ಮಂಡಳಿಯೂ ಈ ಬಗ್ಗೆ ಅಪಶ್ರುತಿಯನ್ನು ಕೇಳಿಸಿಕೊಳ್ಳಬೇಕಿದೆ. ಇಡೀ ಲ್ಯಾಟಿನ್‌ ಅಮೆರಿಕ ಅಥವಾ ಆಫ್ರಿಕವನ್ನು ಕಡೆಗಣಿಸಿ ಒಂದು ಜಾಗತಿಕ ಸಂಘಟನೆ ಹೇಗಿರಲು ಸಾಧ್ಯ? ಅತಿ ಹೆಚ್ಚು ಜನಸಂಖ್ಯೆಯ, ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಆಚೆಗಿಟ್ಟರೆ ಅದು ಜಾಗತಿಕ ದನಿಯಾಗಿರಲು ಸಾಧ್ಯವೇ? ಭಾರತದ ಸ್ಥಾನಮಾನಕ್ಕೆ ಸಂಬಂಧಿಸಿ ಹೆಚ್ಚಿನ ದೇಶಗಳು ಸ್ಪಷ್ಟವಾಗಿವೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಫ್ರಾನ್ಸ್‌ನ ಬೆಂಬಲವನ್ನು ಸ್ಮರಿಸುತ್ತೇನೆ.

2047ರ ಜಗತ್ತಿಗೆ ಮೋದಿ ಗುರಿ

2047, ಭಾರತದ ಸ್ವಾತಂತ್ರ್ಯದ 100ನೇ ವರ್ಷ. ಭಾರತ ಆಗ ಅಭಿವೃದ್ಧಿ ಹೊಂದಿದ ದೇಶವಾಗಿರಲಿದೆ ಎಂಬುದು ನಮ್ಮ ಆಶಯ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಅವಕಾಶಗಳು ಎಲ್ಲವೂ ಸೇರಿದ ಒಂದು ಬಲಿಷ್ಠ ಆರ್ಥಿಕತೆಯಾಗಿರಲಿದೆ. ಎಲ್ಲ ಪ್ರಜೆಗಳೂ ತಮ್ಮ ಹಕ್ಕುಗಳ ಅರಿವು ಹೊಂದಿರುವ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ. ಸುಸ್ಥಿರ ಜೀವನಶೈಲಿ, ಸ್ವಚ್ಛ ನದಿಗಳು, ಜೀವವೈವಿಧ್ಯ ಹೊಂದಿದ ಅರಣ್ಯ, ಕೌಶಲಗಳು ಮತ್ತು ಪ್ರತಿಭೆ ಹೊಂದಿದೆ ಭಾರತ ದೇಶ.

ದೇಶದ ಆರ್ಥಿಕ ಸುಧಾರಣೆಗಳು

ಜನತೆಯನ್ನು ಕೇಂದ್ರವಾಗಿ ಹೊಂದಿದ ಅಭೂತಪೂರ್ವ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ನಾವು ಸಾಧಿಸಿದ್ದೇವೆ. ಪ್ರತಿ ಪ್ರಜೆಯನ್ನೂ, ಪ್ರತಿ ಮನೆಯನ್ನೂ ತಲುಪುವ ಯತ್ನ ಸಫಲವಾಗಿದೆ. ಇಲ್ಲಿಯವರೆಗೆ, ನಾವು 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದೇವೆ. ನೈರ್ಮಲ್ಯಕ್ಕಾಗಿ 11 ಕೋಟಿ ಶೌಚಾಲಯಗಳು, 50 ಕೋಟಿ ಮಂದಿಗೆ ಬ್ಯಾಂಕ್‌ ಖಾತೆಗಳು, 40 ಕೋಟಿ ಕಿರು ಸಾಲಗಳು, 9 ಕೋಟಿ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ, 50 ಕೋಟಿ ಜನರಿಗೆ ಉಚಿತ ಆರೋಗ್ಯ ವಿಮಾ ರಕ್ಷಣೆ ಒದಗಿಸಿದ್ದೇವೆ. ಡಿಜಿಟಲ್ ತಂತ್ರಜ್ಞಾನದ ಬಳಕೆ ಮತ್ತು ಮೂಲಸೌಕರ್ಯದಲ್ಲಿ ಭಾರತದಲ್ಲಿ ಕ್ರಾಂತಿಯಾಗಿದೆ. 80 ಕೋಟಿ ಮಂದಿಗೆ ಕೋವಿಡ್‌ ಸಮಯದಲ್ಲಿ ನೇರ ಆಹಾರ ಒದಗಿಸಿದೆ. ಇಂದು ಜಾಗತಿಕ ಡಿಜಿಟಲ್ ಪಾವತಿಗಳಲ್ಲಿ 46% ಭಾರತದಲ್ಲಿ ನಡೆಯುತ್ತಿದೆ. ಪ್ರತಿಯೊಬ್ಬ ಭಾರತೀಯನಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದ್ದೇವೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಹಬ್‌ ಆಗಿದೆ.

ಚೀನಾದ ಆರ್ಥಿಕ ಬೆದರಿಕೆ

ಇಂಡೋ- ಪೆಸಿಫಿಕ್‌ ಪ್ರಾಂತ್ಯದಲ್ಲಿ ನಮ್ಮ ಹಿತಾಸಕ್ತಿ ತುಂಬ ಆಳವಾದುದು. ʼಸಾಗರʼ ಅಂದರೆ ಈ ಪ್ರಾಂತ್ಯದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ ನಮ್ಮ ಗುರಿ. ಉತ್ತಮ ಭವಿಷ್ಯಕ್ಕಾಗಿ ಇಲ್ಲಿ ಶಾಂತಿ ಅತ್ಯಗತ್ಯ. ಮಾತುಕತೆ ಹಾಗೂ ರಾಜನೀತಿಯ ಮೂಲಕ ಶಾಂತಿಯುತ ಪರಿಹಾರಗಳತ್ತ ನಮ್ಮ ಚಿತ್ತ ಇದೆ. ಎಲ್ಲ ದೇಶಗಳು ಪರಸ್ಪರರ ಸಾರ್ವಭೌಮತೆ, ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸಿ ನಡೆದುಕೊಳ್ಳಬೇಕಿದೆ.

ಇದನ್ನೂ ಓದಿ: Vistara Top 10 News: ಮೋದಿ ಫ್ರಾನ್ಸ್ ಪ್ರವಾಸದಿಂದ, ಟೊಮ್ಯಾಟೊಗೆ Z+ ಸೆಕ್ಯುರಿಟಿವರೆಗಿನ ಪ್ರಮುಖ ಸುದ್ದಿಗಳಿವು

ಚೀನಾದ ಬೆದರಿಕೆ ಹಿನ್ನೆಲೆಯಲ್ಲಿ ಫ್ರಾನ್ಸ್‌ ಬೆಂಬಲ

ಭಾರತ ಹಾಗೂ ಫ್ರಾನ್ಸ್‌ ಅತಿ ಉತ್ತಮವಾದ, ವಿಶಾಲ ಹಾಗೂ ಗಾಢವಾದ ವ್ಯೂಹಾತ್ಮಕ ಸಂಬಂಧ ಹೊಂದಿವೆ. ವಾಣೀಜ್ಯ, ಮಾನವೀಯ, ಸುಸ್ಥಿರ ಬೆಳವಣಿಗೆಯ ವಿಷಯಗಳಲ್ಲೂ ನಿಕಟ ಸಂಪರ್ಕ ಹೊಂದಿವೆ. ಇಂಡೋ- ಪೆಸಿಫಿಕ್‌ ಪ್ರಾಂತ್ಯದಲ್ಲಿ ನಮ್ಮ ಸ್ನೇಹವು ಗಾಢವಾಗಿದೆ; ಇದು ಯಾವ ದೇಶದ ವಿರುದ್ಧವೂ ಅಲ್ಲ. ನಮ್ಮ ವಾಣಿಜ್ಯ ಮತ್ತು ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವುದು ಇದರ ಉದ್ದೇಶ.

ಫ್ರಾನ್ಸ್‌ ಜತೆಗೆ ಸ್ನೇಹ ಸಂಬಂಧ

ಮೊದಲನೆಯದಾಗಿ 140 ಕೋಟಿ ಭಾರತೀಯರ ಪರವಾಗಿ ಫ್ರಾನ್ಸ್‌ಗೆ ನನ್ನ ಹೃತ್ಪೂರ್ವಕ ಕೃತಜ್ಞತೆ. ಜುಲೈ 14ರ ಫ್ರಾನ್ಸ್‌ನ ರಾಷ್ಟ್ರೀಯ ದಿನಾಚರಣೆಗೆ ಗೌರವ ಅತಿಥಿಯಾಗಿ ಭಾರತವನ್ನು ಆಹ್ವಾನಿಸಿರುವುದು ವಿಶಿಷ್ಟ ಗೌರವವಾಗಿದೆ. ಈ ಸಂದರ್ಭದಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಲು ಸಂತಸವೆನಿಸಿದೆ. ನಮ್ಮ ವ್ಯೂಹಾತ್ಮಕ ಸಂಬಂಧ 25ನೇ ವರ್ಷಕ್ಕೆ ಕಾಲಿಡುತ್ತಿರುವುದು ವಿಶೇಷ. ಇದೀಗ ಬದಲಾವಣೆಯ ಸಮಯವೂ ಹೌದು. ನಾವು ಸಾಂಕ್ರಾಮಿಕ ನಂತರದ ಜಾಗತಿಕ ಕ್ರಮವನ್ನು ಎದುರುಗೊಳ್ಳುತ್ತಿದ್ದೇವೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಸಕಾರಾತ್ಮಕವಾಗಿದೆ. ನಮ್ಮ ಸ್ನೇಹ ಸಂಬಂಧ, ರಾಜನೈತಿಕ ಮೈತ್ರಿ, ವ್ಯೂಹಾತ್ಮಕ ಪಾಲುದಾರಿಕೆಗಳು ಬಲವಾಗಿ, ವಿಶ್ವಾಸಾರ್ಹವಾಗಿ, ಸ್ಥಿರವಾಗಿವೆ.

2014ರ ಬಳಿಕ ನಮ್ಮ ವ್ಯಾಪಾರ ಸಂಬಂಧ ದುಪ್ಪಟ್ಟಾಗಿದೆ. ಈ ವರ್ಷ ಭಾರತದ ಎರಡು ಏರ್‌ ಕ್ಯಾರಿಯರ್‌ಗಳು ಫ್ರಾನ್ಸ್‌ನಿಂದ 750 ಏರ್‌ಬಸ್‌ಗಳಿಗೆ ಬೇಡಿಕೆ ಇಟ್ಟಿವೆ. ಡಿಜಿಟಲ್‌ ಮೂಲಸೌಕರ್ಯದಲ್ಲಿ, ಸ್ವಚ್ಛ ಇಂಧನದಲ್ಲಿ ನಾವು ತುಂಬಾ ಹಂಚಿಕೊಳ್ಳುವುದಿದೆ. ಔದ್ಯಮಿಕ ಭಾಗೀದಾರಿಕೆ ವೃದ್ಧಿಸಲಿದೆ. ರಕ್ಷಣಾ ಪಾಲುದಾರಿಕೆಯಲ್ಲಿ ಒಂದಾಗಲಿದ್ದೇವೆ. ನಾವು ಒಟ್ಟಾಗಿ ಸೋಲಾರ್‌ ಒಕ್ಕೂಟ ಮಾಡಿದ್ದೇವೆ. ವಿಶ್ವಸಂಸ್ಥೆಯಲ್ಲಿ ನಮ್ಮ ಜತೆಗಾರಿಕೆ ಗಟ್ಟಿಯಾಗಿದೆ.

ಇದನ್ನೂ ಓದಿ: PM Modi France Visit: ಸಿಂಗಾಪುರ ಬಳಿಕ ಫ್ರಾನ್ಸ್‌ಗೂ ಭಾರತದ ಯುಪಿಐ ವಿಸ್ತರಣೆ; ಮೋದಿ ಭೇಟಿ ವೇಳೆ ಚಾಲನೆ

Exit mobile version