Site icon Vistara News

ದೇಶಾದ್ಯಂತ ಹಿಂಸೆ, ಹಿಂದೂ ಮುಖಂಡರ ಹತ್ಯೆ ಸಂಚು | ಪೊಲೀಸ್‌ ದಾಳಿ, 200ಕ್ಕೂ ಹೆಚ್ಚು PFI ಮುಖಂಡರ ಸೆರೆ

pfi raid

ನವ ದೆಹಲಿ: ದೇಶಾದ್ಯಂತ ಮಂಗಳವಾರ ಮುಂಜಾನೆ 200ಕ್ಕೂ ಹೆಚ್ಚು ಕಡೆ ದಾಳಿ ನಡೆಸಿರುವ ಪೊಲೀಸರು, 250ಕ್ಕೂ ಹೆಚ್ಚು ಪಿಎಫ್‌ಐ- ಎಸ್‌ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ವಾರ ರಾಷ್ಟ್ರೀಯ ತನಿಖಾ ದಳದಿಂದ ತಮ್ಮ ಮುಖಂಡರ ಬಂಧನ ಪ್ರತಿಭಟಿಸಿ ರಾಷ್ಟ್ರಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ಪಿಎಫ್‌ಐ ಸಂಚು ಹೂಡಿದೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

7 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಅಸ್ಸಾಂ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಆಯಾ ರಾಜ್ಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಪಿಎಫ್‌ಐ ಹಿಂಸಾತ್ಮಕ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ. ಎನ್‌ಐಎ, ಇಡಿ, ಪೊಲೀಸ್‌ ಅಧಿಕಾರಿಗಳು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಪ್ರಮುಖ ಮುಖಂಡರ ಮೇಲೆ ದಾಳಿಗೆ ಪಿಎಫ್‌ಐ ಸಂಚು ನಡೆಸಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ಮಾಹಿತಿ ನೀಡಿದ್ದವು.

ಸಾರ್ವಜನಿಕ ಶಾಂತಿಗೆ ಗಂಭೀರ ಪ್ರಮಾಣದ ಧಕ್ಕೆ ಉಂಟುಮಾಡಲು ಪಿಎಫ್‌ಐ ಸಂಚು ನಡೆಸುತ್ತಿದೆ. ತಮ್ಮ ಮುಖಂಡರನ್ನು ಕಲೆದ ವಾರ ಬಂಧಿಸಿದ್ದು ಹಾಗೂ ಅವರನ್ನು ತಿಹಾರ್‌ ಜೈಲಿನಲ್ಲಿ ಇಟ್ಟಿರುವ ಕ್ರಮ ಪಿಎಫ್‌ಐ ಅನ್ನು ವ್ಯಗ್ರಗೊಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತೀಕಾರ ದಾಖಲಿಸಲು ಪಿಎಫ್‌ಐ ಮುಂದಾಗಿದೆ. ಇದಕ್ಕಾಗಿ ʼಬಯಾತೀಸ್‌ʼಗಳನ್ನು ನಿಯೋಜಿಸಲು ಪಿಎಫ್‌ಐ ಮುಂದಾಗಿದೆ. ಬಯಾತೀಸ್‌ ಎಂದರೆ ಅರೇಬಿಕ್‌ ಭಾಷೆಯಲ್ಲಿ ʼಸಾವಿನ ದೂತರುʼ ಅಥವಾ “ಫಿದಾಯೀನ್‌ʼ (ಹುತಾತ್ಮರಾಗಲು ಸಜ್ಜಾದವರು) ಎಂದರ್ಥ. ಇವರು ಕೊಲ್ಲುವ ಅಥವಾ ಸಾಯುವ ವಚನವನ್ನು ಅಮೀರರಿಗೆ (ಚೀಫ್)‌ ನೀಡಿರುತ್ತಾರೆ. ಎನ್‌ಐಎ- ಇಡಿ- ಪೊಲೀಸ್ ಅಧಿಕಾರಿಗಳನ್ನು ಈ ಬಯಾತೀಸ್‌ಗಳು ಗುರಿ ಮಾಡಿದ್ದಾರೆ ಎಂದಿದೆ ವರದಿ.

ಇದನ್ನೂ ಓದಿ | 7 ರಾಜ್ಯಗಳಲ್ಲಿ PFI ಕಾರ್ಯಕರ್ತರ ಮೇಲೆ ಪೊಲೀಸ್‌ ದಾಳಿ, 170 ಬಂಧನ, ರಾಜ್ಯದಲ್ಲಿ 45 ಮಂದಿ ವಶಕ್ಕೆ

ಜನತೆಯ ನಡುವೆ ದ್ವೇಷಭಾವ ಪ್ರಚೋದಿಸಲು, ಸಮಾಜದಲ್ಲಿ ಕೋಮುದ್ವೇಷ ಹರಡಲು ಹಿಂದೂ ಸಂಘಟನೆ ಮುಖಂಡರ ಮೇಲೆ ದಾಳಿ ನಡೆಸುವುದು ಕೂಡ ಬಯಾತೀಸ್‌ಗಳ ಉದ್ದೇಶವಾಗಿದೆ. ಆರ್‌ಎಸ್‌ಎಸ್‌- ಬಿಜೆಪಿಯ ಹಲವು ಪ್ರಮುಖ ಮುಖಂಡರನ್ನು ಅಪಾಯದಲ್ಲಿರುವವರೆಂದು ಗುರುತಿಸಲಾಗಿದ್ದು, ಇವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಆರ್‌ಎಸ್‌ಎಸ್‌ನ ಕೆಲವು ಶಾಖೆಗಳನ್ನೂ ಗುರುತಿಸಲಾಗಿದ್ದು, ಅಲ್ಲೂ ಭದ್ರತೆ ಹೆಚ್ಚಿಸಲಾಗಿದೆ.

ಈ ಹಿಂದೆ ಕೇರಳದಲ್ಲೂ ಹಲವು ಬಿಜೆಪಿ- ಆರ್‌ಎಸ್ಎಸ್‌ ಮುಖಂಡರನ್ನು ಹತ್ಯೆ ಮಾಡಿದ ಆರೋಪ ಪಿಎಫ್‌ಐ ಮೇಲಿದ್ದು, ಈ ಆರೋಪವನ್ನು ಪಿಎಫ್‌ಐ ನಿರಾಕರಿಸಿದೆ. ಕೇರಳದಲ್ಲಿ 2006ರಲ್ಲಿ ಸೃಷ್ಟಿಯಾದ ಪಿಎಫ್‌ಐ, ಸಮಾಜದ ಅಂಚಿನಲ್ಲಿರುವ ಮುಸ್ಲಿಂ ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದೇನೆಂದು ಹೇಳಿಕೊಳ್ಳುತ್ತದೆ. ಕಾನೂನುಬಾಹಿರ ಕೆಲಸಗಳಿಗಾಗಿ SIMI (ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ) ಸಂಘಟನೆಯನ್ನು ನಿಷೇಧಿಸಿದ ಕೂಡಲೇ ಪಿಎಫ್‌ಐ ಹುಟ್ಟಿಕೊಂಡಿತ್ತು.

ಕಳೆದ ಕೆಲ ತಿಂಗಳುಗಳಲ್ಲಿ ಹಲವಾರು ವಿವಾದಗಳಲ್ಲಿ ಪಿಎಫ್‌ಐ ಸಿಲುಕಿಕೊಂಡಿದೆ. ಕರ್ನಾಟಕದ ಹಿಜಾಬ್‌ ಪ್ರಕರಣ, ಹಾಥರಸ್‌ ರೇಪ್‌ ಮತ್ತು ಕೊಲೆ ಪ್ರಕರಣ ಮತ್ತು ಸಿಎಎ ಪ್ರತಿಭಟನೆಗಳು, ಬಿಹಾರದ ಫುಲ್ವಾರಿ ಶರೀಫ್‌ನಲ್ಲಿ ಮೋದಿ ಭೇಟಿಗೆ ಮುನ್ನ ನಡೆದ ಹತ್ಯೆ ಸಂಚು, 2047ರೊಳಗೆ ದೇಶವನ್ನು ಇಸ್ಲಾಮಿಕ್‌ ದೇಶ ಮಾಡುವ ಯೋಜನೆ ಇವೆಲ್ಲವೂ ಪಿಎಫ್‌ಐ ಜತೆಗೆ ತಳುಕು ಹಾಕಿಕೊಂಡಿವೆ.

ಇದನ್ನೂ ಓದಿ | ರಾಜ್ಯಾದ್ಯಂತ ಹಲವೆಡೆ ಪೊಲೀಸ್‌ ದಾಳಿ, 40ಕ್ಕೂ ಹೆಚ್ಚು PFI ಮುಖಂಡರು ವಶಕ್ಕೆ

Exit mobile version