ಸುಪ್ರೀಂ ಕೋರ್ಟ್ ಮೂಲಕ ಗುರುವಾರ ಜೈಲಿನಿಂದ ಬಿಡುಗಡೆ ಪಡೆದ ತಮಿಳುನಾಡಿನ ಪೆರಾರಿವೇಲನ್ ರೋಚಕ ಜೀವನಯಾನ ಇಲ್ಲಿದೆ. ಇದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ತನಿಖೆಯಲ್ಲಿರೋ ಲೋಪದೋಷಗಳ ಕತೇನೂ ಹೌದು! ಮಾಡದ ತಪ್ಪಿಗಾಗಿ ಮೂವತ್ತು ವರ್ಷ ಕಾಲ ಜೈಲಿನಲ್ಲಿ ಇದ್ದವನ ಕತೆಯೂ ಹೌದು.
ಈ ಹತ್ಯೆಯ ಸಂಚು ರೂಪುಗೊಂಡದ್ದು ಶ್ರೀಲಂಕಾದಲ್ಲಿ. ಶ್ರೀಲಂಕಾದ ಭಯೋತ್ಪಾದಕ ಸಂಘಟನೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಮುಖ್ಯಸ್ಥನಾಗಿದ್ದ ಪ್ರಭಾಕರನ್‌ನ ತಲೆಯಲ್ಲಿ. ಅದಕ್ಕೆ ರೂಪು ಕೊಟ್ಟವನು ಎಲ್‌ಟಿಟಿಇಯ ಸೆಕೆಂಡ್ ಬಾಸ್ ಪೊಟ್ಟು ಅಮ್ಮನ್. ಪೊಟ್ಟು ಅಮ್ಮನ್‌ನ ಸಹಚರನಾಗಿದ್ದ ಶಿವರಾಸನ್‌ನನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಶ್ರೀಲಂಕಾದಲ್ಲಿ ಎಲ್‌ಟಿಟಿಇ ಕಾರ್ಯಾಚರಣೆಯನ್ನು ಹತ್ತಿಕ್ಕಲು ಭಾರತದ ಸೈನ್ಯವನ್ನು ಕಳಿಸಿದ್ದೇ ಅವರ ಸಿಟ್ಟಿಗೆ ಕಾರಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ರಾಜೀವ್ ಗಾಂಧಿ ಗೆದ್ದು ಬಂದರೆ ಮತ್ತೆ ಸೈನ್ಯವನ್ನು ಕಳಿಸಬಹುದು ಎಂಬ ಆತಂಕವೇ ರಾಜೀವ್ ಅವರನ್ನು ಹತ್ಯೆ ಮಾಡಲು ಕಾರಣವಾಗಿತ್ತು.
1990ರ ಸೆಪ್ಟೆಂಬರ್‌ನಲ್ಲಿ ಶಿವರಾಸನ್ ಮತ್ತು ಇನ್ನಿತರ ಎಲ್‌ಟಿಟಿಇ ಸಂಚುಕೋರರನ್ನು ಹೊತ್ತುಕೊಂಡ ಬೋಟ್ ಶ್ರೀಲಂಕಾದಿಂದ ತಮಿಳುನಾಡಿಗೆ ಬಂದು ಇಳೀತು. 1991ರ ಮೇ ತಿಂಗಳ ಆರಂಭದಲ್ಲಿ ಸೂಸೈಡ್ ಬಾಂಬರ್ ಧನು ಕೂಡ ಬಂದಿಳಿದಳು. ಚೆನ್ನೈಯಲ್ಲಿ ನಡೆದ ಆಗಿನ ಪ್ರಧಾನಿ ವಿ.ಪಿ.ಸಿಂಗ್ ಅವರ ಒಂದು ರ್ಯಾಲಿಯಲ್ಲಿ ಇವರು ಸೂಸೈಡ್ ಬಾಂಬ್ ದಾಳಿಯ ರಿಹರ್ಸಲ್ ಕೂಡ ಮಾಡಿದರು. ಮೇ 21ರಂದು ರ್ಯಾಲಿಯಲ್ಲಿ ರಾಜೀವ್ ಗಾಂಧಿ ಅವರು ಬಂದಾಗ, ಅವರಿಗೆ ಬಗ್ಗಿ ನಮಸ್ಕಾರ ಮಾಡುವ ನೆಪದಲ್ಲಿ ಧನು ತನ್ನ ಸೊಂಟಕ್ಕೆ ಕಟ್ಟಿಕೊಂಡ ಬಾಂಬ್ ಸ್ಫೋಟಿಸಿಕೊಂಡಳು. ಧನು ಮತ್ತು ರಾಜೀವ್ ಗಾಂಧಿ ಸೇರಿ 16 ಮಂದಿ ಛಿದ್ರ ಛಿದ್ರವಾಗಿ ಹೋದರು.
ಎಲ್‌ಟಿಟಿಇಗೆ ಸೇರಿದ ಉಗ್ರರು ಈ ಕೃತ್ಯ ಮಾಡಿದ್ದಾರೆ ಅಂತ ಸಿಬಿಐಗೆ ತಿಳಿದುಹೋಯ್ತು. ಹರಿಬಾಬು ಎಂಬ ಫೋಟೊಗ್ರಾಫರ್‌ನ ಕ್ಯಾಮೆರಾದಲ್ಲಿ ದಾಖಲಾಗಿದ್ದ ಚಿತ್ರಗಳ ಮೂಲಕ ಸುಳಿವು ಸಿಕ್ಕಿತು. ಸಂಚಿನ ಬೆನ್ನು ಹತ್ತಿ ಹೋದ ತನಿಖಾ ತಂಡ ಒಬ್ಬೊಬ್ಬರನ್ನೇ ಬೆನ್ನು ಹತ್ತಿ ಬಂಧಿಸಲು ಆರಂಭಿಸಿತು. ಶಿವರಾಸನ್ ಮತ್ತು ಅನುಚರರು ಬೆಂಗಳೂರಿನಲ್ಲಿದ್ದ ಸುಳಿವು ಸಿಕ್ಕಿ ಅವರ ಬೆನ್ನು ಹತ್ತಿದ ತನಿಖಾ ತಂಡಕ್ಕೆ ಕೋಣನಕುಂಟೆ ಕ್ರಾಸ್‌ನಲ್ಲಿದ್ದ ಮನೆಯಲ್ಲಿ ಸಿಕ್ಕಿದ್ದು ಸಯನೈಡ್ ವಿಷ ಸೇವಿಸಿ ಸತ್ತ ಅವರ ಹೆಣಗಳು ಮಾತ್ರ.
ಕವಿಯ ಮಗ ಪೆರಾರಿವೇಲನ್
ಹೀಗೆ ತನಿಖೆಯ ಹಂತದಲ್ಲಿ ಬಂಧಿಸಲಾದ ನೂರಾರು ಮಂದಿಯಲ್ಲಿ ಒಬ್ಬನಾಗಿ ಸಿಕ್ಕಿದವನು ಪೆರಾರಿವೇಲನ್. ಆಗ ಅವನಿಗೆ ಕೇವಲ 19 ವರ್ಷ. ಆತ್ಮಹತ್ಯಾ ದಾಳಿಯ ಬಾಂಬ್ ಕ್ರಿಯೇಟ್ ಮಾಡಲು ಬ್ಯಾಟರಿಗಾಗಿ ಹುಡುಕಾಡುತ್ತಿದ್ದ ಶಿವರಾಸನ್‌ಗೆ ಸಿಕ್ಕಿದವನು ಈ ಪೆರಾರಿವೇಲನ್. ಪೆರಾರಿವೇಲನ್‌ನ ತಂದೆ ಒಬ್ಬರು ತಮಿಳು ಕವಿ. ಅವರ ಹೆಸರು ಕುಯಿಲ್‌ದಾಸನ್. ತಮಿಳುನಾಡಿನ ಜೋರಾಪೇಟೆಯಲ್ಲಿ 1971ರಲ್ಲಿ ಜನಿಸಿದ ಪೆರಾರಿವೇಲನ್‌ನ ತಂದೆ ತಾಯಿ, ತಮಿಳುನಾಡಿನ ಪೆರಿಯಾರ್ ಚಳುವಳಿಯಲ್ಲಿ ಸಕ್ರಿಯರಾಗಿದ್ದವರು. ಪೆರಾರಿವೇಲನ್‌ಗೆ ಮುದ್ದಿನಿಂದ ʼಅರಿವುʼ ಅಂತಾನೂ ಕರೀತಿದ್ದರು. ಈ ಅರಿವು ಆಗ ತಾನೇ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್‌ನಲ್ಲಿ ಡಿಪ್ಲೊಮಾ ಮುಗಿಸಿದ್ದ. ಇನ್ನೂ ಉದ್ಯೋಗ ಹುಡುಕುತ್ತಿದ್ದ.
ಆದ್ರೆ ಇವನ ಕುಟುಂಬ ಎಲ್‌ಟಿಟಿಇ ಚಳುವಳಿಯ ಬಗ್ಗೆ ಸಹಾನುಭೂತಿ ಹೊಂದಿತ್ತು ಅಂತ ಹೇಳಲಾಗ್ತಿದೆ. ಹೀಗಿದ್ದ ಪೆರಾರಿವೇಲನ್ ಅನ್ನು ಶಿವರಾಸನ್ ಸಂಪರ್ಕಿಸಿ, ತನಗೆ ಎರಡು ಬ್ಯಾಟರಿಗಳನ್ನು ಕೊಡಿಸೋಕೆ ಹೇಳಿದ. ಹಾಗೆ ಅರಿವು ತನಗೆ ಪರಿಚಯದವರ ಅಂಗಡಿಯಿಂದ 9 ವೋಲ್ಟ್‌ನ ಎರಡು ಗೋಲ್ಡನ್ ಪವರ್ ಬ್ಯಾಟರಿ ಸೆಲ್‌ಗಳನ್ನು ಖರೀದಿಸಿ ಅದನ್ನು ಶಿವರಾಸನ್‌ಗೆ ಕೊಡಿಸಿದ.
ಆದ್ರೆ ಅದನ್ನು ಬಾಂಬ್ ತಯಾರಿಗೆ ಬಳಕೆ ಮಾಡ್ತಾರೆ ಅನ್ನುವುದು ಪೆರಾರಿವೇಲನ್‌ಗೆ ಗೊತ್ತಿರಲಿಲ್ವಾ? ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಪೆರಾರಿವೇಲನ್‌ಗೆ ಏನೂ ತಿಳಿದಿರಲಿಲ್ವಾ?
ಇದನ್ನೂ ಓದಿ: ರಾಜೀವ್ ಹತ್ಯೆ: ಬ್ಯಾಟರಿ ತಂದುಕೊಟ್ಟಿದ್ದ ಪೆರಾರಿವಾಲನ್ 32 ವರ್ಷ ಬಳಿಕ ಬಂಧಮುಕ್ತ
ತಪ್ಪೊಪ್ಪಿಗೆ
ರಾಜೀವ್ ಗಾಂಧಿ ಹತ್ಯೆಯ ತನಿಖೆ ನಡೆಸಿದ ಸಿಬಿಐ ತಂಡ, ಎಲ್ಲ ಅಪರಾಧಿಗಳ ತಪ್ಪೊಪ್ಪಿಗೆ ಹೇಳಿಕೆಯನ್ನೂ ದಾಖಲಿಸಿಕೊಂಡಿದೆ. ಅದರಲ್ಲಿ ಪೆರಾರಿವೇಲನ್ ಹೇಳಿಕೆಯೂ ಇದೆ. ಅದರಲ್ಲಿ ʼʼನಾನು ಬ್ಯಾಟರಿಗಳನ್ನು ಶಿವರಾಸನ್‌ಗೆ ಕೊಟ್ಟೆ. ಅವನು ಅದನ್ನು ಬಾಂಬ್ ಸ್ಫೋಟಗೊಳ್ಳೋ ಹಾಗೆ ಮಾಡೋದಕ್ಕೆ ಬಳಕೆ ಮಾಡ್ತಿದ್ದ..ʼʼ ಅಂತ ಹೇಳಿದ್ದಾನೆ. ಅವನ ಈ ತಪ್ಪೊಪ್ಪಿಗೆ ಆಧರಿಸಿ, ಹತ್ಯೆ ಸಂಚಿನಲ್ಲಿ ಈತ ಪಾಲ್ಗೊಂಡಿದ್ದಾನೆ ಎಂದು ಪ್ರಾಸಿಕ್ಯೂಶನ್ ಸಾಬೀತುಪಡಿಸಿತು. 1998ರಲ್ಲಿ ಟ್ರಯಲ್ ಕೋರ್ಟ್ ಇತರ 25 ಅಪರಾಧಿಗಳ ಜೊತೆಗೆ ಪೆರಾರಿವೇಲನ್‌ಗೂ ಮರಣದಂಡನೆ ವಿಧಿಸಿತು.
ಇಲ್ಲಿಂದ ಕೇಸ್ ಸುಪ್ರೀಂ ಕೋರ್ಟ್‌ಗೆ ಹೋಯ್ತು. ಅಲ್ಲಿ ನಡೆದ ವಿಚಾರಣೆಯಲ್ಲಿ 19 ಮಂದಿಯನ್ನು ದೋಷಮುಕ್ತಗೊಳಿಸಲಾಯಿತು. ಆದರೆ ಪೆರಾರಿವೇಲನ್‌ಗೆ ಮುಕ್ತಿ ಸಿಗಲಿಲ್ಲ. ಪೆರಾರಿವೇಲನ್, ನಳಿನಿ, ಮುರುಗನ್, ಸಂತಾನ್ ಮುಂತಾದವರ ಮರಣದಂಡನೆಯನ್ನು ಕಾಯಂಗೊಳಿಸಿತು. ಪೆರಾರಿವೇಲನ್ ಮತ್ತಿತರರು ಕ್ಷಮಾದಾನ ಅರ್ಜಿ ಸಲ್ಲಿಸಿದರು. ಮದ್ರಾಸ್ ಹೈಕೋರ್ಟ್ ಅದನ್ನು ಪುರಸ್ಕರಿಸಲಿಲ್ಲ.
ಪೊಲೀಸ್ ಅಧಿಕಾರಿ ಉಲ್ಟಾ
ಇದರ ನಡುವೆ ಇನ್ನೊಂದು ಘಟನೆ ನಡೀತು. ಸಿಬಿಐ ತನಿಖಾ ತಂಡದ ಭಾಗವಾಗಿದ್ದ, ಅಪರಾಧಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ಎಸ್‌ಪಿ ವಿ.ತ್ಯಾಗರಾಜನ್ ಎಂಬ ಒಬ್ಬ ಅಧಿಕಾರಿ, ಪೆರಾರಿವೇಲನ್‌ನ ಹೇಳಿಕೆಯಲ್ಲಿ ತಾನು ಬದಲಾವಣೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡರು. ಪೆರಾರಿವೇಲನ್‌ನ ಹೇಳಿಕೆಯನ್ನು ತಾನು ಸರಿಯಾಗಿ ಬರೆದಿಲ್ಲ. ಹತ್ಯೆ ಸಂಚಿನ ಬಗ್ಗೆ ತನಗೆ ಏನೂ ಗೊತ್ತಿರಲಿಲ್ಲ. ಬ್ಯಾಟರಿಗಳನ್ನು ಬಾಂಬ್ ತಯಾರಿಕೆಗೆ ಬಳಸ್ತಾರೆ ಅಂತ ತನಗೆ ತಿಳಿದಿರಲಿಲ್ಲ ಎಂದು ಪೆರಾರಿವೇಲನ್ ಹೇಳಿದ್ದ; ಆದ್ರೆ ತಾನು ಅದನ್ನು ದಾಖಲಿಸಿಕೊಂಡಿರಲಿಲ್ಲ- ಎಂದು ತ್ಯಾಗರಾಜನ್ ಹೇಳಿದರಲ್ಲದೆ, ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅಫಿದವಿಟ್ ಕೂಡ ಸಲ್ಲಿಸಿದರು. ಇದು ಬಹುದೊಡ್ಡ ಪ್ರಮಾದ ಆಗಿತ್ತು. ಇದು ಪೂರ್ತಿ ನಿಜವೇ ಆಗಿದ್ರೆ, ಪೆರಾರಿವೇಲನ್ ಅನ್ಯಾಯವಾಗಿ ಶಿಕ್ಷೆಗೊಳಗಾಗಿದ್ದ ಎಂದು ಹೇಳ್ಲೇಬೇಕು.
ಈ ಅಫಿಡವಿಟ್ ಜೊತೆಗೆ ಪೆರಾರಿವೇಲನ್ ಮತ್ತೆ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ತನ್ನನ್ನು ದೋಷಮುಕ್ತ ಮಾಡಬೇಕು ಎಂದು ಕೋರಿದ. 2014ರಲ್ಲಿ ಸುಪ್ರೀಂ ಕೋರ್ಟ್, ಇದರ ತನಿಖೆ ನಡೆಸಿತು. ಪೆರಾರಿವೇಲನ್ ಸೇರಿದಂತೆ ಎಲ್ಲ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು. ಮರುವರ್ಷವೇ ಈತ ತಮಿಳುನಾಡು ರಾಜ್ಯಪಾಲರ ಮುಂದೆ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿದ. 2014ರ ಫೆಬ್ರವರಿಯಲ್ಲಿ ಆಗ ಆಡಳಿತದಲ್ಲಿದ್ದ ಜಯಲಲಿತಾ ಅವರ ಎಐಎಡಿಎಂಕೆ ಸರಕಾರ, ಎಲ್ಲ ಹತ್ಯೆ ಆರೋಪಿಗಳನ್ನು ಸೆಕ್ಷನ್ 432ರ ಅಡಿ ಬಿಡುಗಡೆ ಮಾಡಿತು. ಆದರೆ ಕೂಡ್ಲೇ ಸುಪ್ರೀಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿತು.
2017ರ ಮಾರ್ಚ್‌ನಲ್ಲಿ ಪೆರಾರಿವೇಲನ್‌ನ ತಾಯಿ ಸುಪ್ರೀಂ ಕೋರ್ಟ್‌ಗೆ ಹೋದರು. ತಮಿಳುನಾಡು ಸರಕಾರ ಇವರ ಜೀವಾವಧಿ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಕಳಿಸಿತು. 2017ರ ಆಗಸ್ಟ್‌ನಲ್ಲಿ ಕಾಯಿಲೆಬಿದ್ದ ತಂದೆಯನ್ನು ನೋಡಿ ಬರೋದಕ್ಕಾಗಿ ಪೆರಾರಿವೇಲನ್‌ಗೆ ಪೆರೋಲ್ ನೀಡಲಾಯಿತು.
ಈ ನಡುವೆ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳ ಶಿಕ್ಷೆಯ ವಿಚಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಪ್ರತಿಷ್ಠೆಯ ವಿಷಯ ಆಗಿಬಿಟ್ಟಿತು. ಅಪರಾಧಿಗಳನ್ನು ಬಿಡುಗಡೆ ಮಾಡಿಸಬೇಕು ಎಂದು ಹಠಕ್ಕೆ ತಮಿಳುನಾಡು ಸರಕಾರ ಬಿದ್ದುಬಿಟ್ಟಿತ್ತು. ಶ್ರೀಲಂಕಾ ತಮಿಳರ ಪರ ಸಹಾನುಭೂತಿ ಹೊಂದಿರುವ ತಮಿಳು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದಕ್ಕೆ ರಾಜ್ಯ ಸರಕಾರಕ್ಕೆ ಇದು ಒಂದು ಆಯುಧವಾಗಿತ್ತು. ಆದರೆ 2018 ಏಪ್ರಿಲ್‌ನಲ್ಲಿ ತಮಿಳುನಾಡು ಸರಕಾರದ ಮನವಿಯನ್ನು ಕೇಂದ್ರ ಸರಕಾರ ರಿಜೆಕ್ಟ್ ಮಾಡಿತು. ಸೆಪ್ಟೆಂಬರ್‌ನಲ್ಲಿ, ತಮಿಳುನಾಡಿನ ಎಲ್ಲ ಪಕ್ಷಗಳೂ ಸೇರಿ, ಎಲ್ಲ 7 ಅಪರಾಧಿಗಳನ್ನು ರಿಲೀಸ್ ಮಾಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿದವು. ಅದನ್ನು ಕೇಂದ್ರ ಸರಕಾರಕ್ಕೆ ಕಳಿಸಲಾಯಿತು.
ಈ ನಡುವೆ ಸುಪ್ರೀಂ ಕೋರ್ಟ್, ಆರೋಪಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದಕ್ಕೆ ರಾಜ್ಯಪಾಲರಿಗೆ ಒಂದು ವಾರದ ಗಡುವು ನೀಡಿತು. ಆದರೆ ರಾಜ್ಯಪಾಲರು, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ರಾಷ್ಟ್ರಪತಿಗಳು ಸೂಕ್ತ ಅಧಿಕಾರ ಹೊಂದಿದವರು ಎಂದು ಹೇಳಿದರು. ಇದರ ಮೇಲಿನಿಂದ, ಸುಪ್ರೀಂ ಕೋರ್ಟ್ ತನಗಿರುವ ಒಂದು ವಿಶಿಷ್ಟ ಅಧಿಕಾರ ಬಳಸಿ, ಪೆರಾರಿವೇಲನ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿತು.
ಹಾಗಿದ್ರೆ ಆ ವಿಶೇಷ ಅಧಿಕಾರ ಏನು?
ಅದು ಸಂವಿಧಾನದ 142ನೇ ಆರ್ಟಿಕಲ್. ಈ ಆರ್ಟಿಕಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಒಂದು ವಿಶೇಷ ಅಧಿಕಾರ ಪ್ರಾಪ್ತವಾಗಿದೆ. ಅದೇನು ಅಂದ್ರೆ, ತನ್ನ ಮುಂದಿರುವ ಯಾವುದೇ ಕೇಸ್‌ಗೆ ಸಂಬಂಧಿಸಿದಂತೆ, ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಲು, ಈಗ ಇರುವ ಯಾವುದೇ ಕಾನೂನಿನಿಂದಲೂ ಸಾಧ್ಯವಾಗದೇ ಹೋದರೆ, ಈ ಅಧಿಕಾರವನ್ನು ಕೋರ್ಟ್ ಬಳಸಬಹುದು. ಕ್ಷಮಾದಾನದ ಕುರಿತ ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಕೆ ರಾಜ್ಯಪಾಲರು ತುಂಬಾ ಸಮಯ ತೆಗೆದುಕೊಂಡಿದ್ದಾರೆ. ಈಗಾಗಲೇ ಪೆರಾರಿವೇಲನ್ 30 ವರ್ಷಗಳನ್ನು ಜೈಲಿನಲ್ಲಿ ವಿನಾಕಾರಣ ಕಳೆದಿದ್ದಾನೆ. ಇನ್ನಷ್ಟು ಸಮಯ ಇದೊಂದೇ ಪ್ರಕರಣದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನೆಷ್ಟು ವರ್ಷ ಜಾಮೀನು ನೀಡುತ್ತಾ ಇರಲು ಸಾಧ್ಯ- ಎಂದು ಕೋರ್ಟ್ ಪ್ರಶ್ನಿಸಿದೆ.
ಇದನ್ನೂ ಓದಿ : ಸದ್ಯ ಬಗೆಹರಿಯಲ್ಲ TAJ MAHAL ಮುಚ್ಚಿದ ಕೋಣೆಗಳ ರಹಸ್ಯ, ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಈ ಹಿಂದೆಯೂ ಈ ವಿಶೇಷ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬಳಸಿದ ಉದಾಹರಣೆ ಇದೆ. ಉದಾಹರಣೆಗೆ ಅಯೋಧ್ಯೆ ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ಕೋರ್ಟ್ ಇದನ್ನು ಬಳಸಿತ್ತು.