ನವ ದೆಹಲಿ: ಉಕ್ರೇನ್‌ನಿಂದ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ರಷ್ಯಾವನ್ನು ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕುರಿತು ಮತದಾನ ನಡೆದಿದ್ದು, ಈ ಮತದಾನದಲ್ಲಿ ಭಾಗವಹಿಸದೆ ಭಾರತ ಆಚೆಗೆ ಉಳಿದಿದೆ.
ಉಕ್ರೇನ್‌ನ ಮೇಲೆ ರಷ್ಯಾ ಯುದ್ಧ ಸಾರಿ (Russia-Ukraine War) ಒಂದು ವರ್ಷವಾಗಿದೆ. ಅಸಂಖ್ಯ ಜೀವಹಾನಿಯಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಉಕ್ರೇನ್‌ನಿಂದ ಸೈನ್ಯ ಹಿಂದೆಗೆಯಲು ರಷ್ಯಾವನ್ನು ಆಗ್ರಹಿಸುವ ಗೊತ್ತುವಳಿಯನ್ನು 180 ಸದಸ್ಯ ರಾಷ್ಟ್ರಗಳಿರುವ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಮತಕ್ಕೆ ಹಾಕಿದಾಗ, 141 ದೇಶಗಳು ಅದನ್ನು ಬೆಂಬಲಿಸಿವೆ. ರಷ್ಯಾ ಸೇರಿದಂತೆ 7 ದೇಶಗಳು ವಿರೋಧಿಸಿವೆ. ಭಾರತ, ಚೀನಾ ಸೇರಿದಂತೆ 32 ದೇಶಗಳು ಈ ಮತದಾನದಿಂದ ಹೊರಗೆ ಉಳಿದಿವೆ.
ಆದರೆ, ಉಕ್ರೇನ್‌ನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಭಾರತಕ್ಕೆ ಕಳವಳವಿದೆ. ಅಸಂಖ್ಯ ಜೀವಹಾನಿ ಹಾಗೂ ನಿರಾಶ್ರಯಕ್ಕೆ ಕಾರಣವಾಗಿರುವ ಈ ಯುದ್ಧವನ್ನು ಆದಷ್ಟು ಬೇಗ ಕೈಬಿಟ್ಟು ಉಭಯ ದೇಶಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂಬುದರಲ್ಲಿ ಭಾರತ ವಿಶ್ವಾಸ ಹೊಂದಿದೆ. ಇಂದಿನ ನಿರ್ಣಯ ಈ ವಿಚಾರದಲ್ಲಿ ಸೀಮಿತವಾಗಿರುವುದರಿಂದ ಭಾರತ ಮತದಾನದಿಂದ ಆಚೆ ಉಳಿಯುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್ ಹೇಳಿದ್ದಾರೆ.
ಇದನ್ನೂ ಓದಿ: Russia-Ukraine War : ಯುದ್ಧದ ಭೀಕರತೆ ಹೇಗಿರುತ್ತವೆ ಎಂಬುದಕ್ಕೆ ರಷ್ಯಾ- ಉಕ್ರೇನ್ ಕದನ ಈ ಚಿತ್ರಗಳೇ ಸಾಕ್ಷಿ