ನವದೆಹಲಿ: ಏಷ್ಯಾದಲ್ಲಿ ಅವ್ಯವಸ್ಥೆ ಉಂಟಾದಾಗ, ಅಫ್ಘಾನಿಸ್ತಾನದಲ್ಲಿ ನಾಗರಿಕ ಸಮಾಜ ಅಪ್ಪಚ್ಚಿಯಾದಾಗ, ಭಾರತದ ಕಾಳಜಿಗಳನ್ನು ಅರ್ಥ ಮಾಡಿಕೊಳ್ಳದೆ ಯುರೋಪಿಯನ್ನರು ಬೆನ್ನು ತಿರುಗಿಸಿದ್ದರು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟೀಕಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ರೈಸಿನಾ ಮಾತುಕತೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಭೆಯಲ್ಲಿ ಯುರೋಪ್ ದೇಶಗಳಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಉಕ್ರೇನ್‌ನಂತೆಯೇ ಏಷ್ಯಾದ ಇತರ ಕಡೆಯಲ್ಲೂ ದಿಕ್ಕುಗೆಡಿಸುವ ಅನೇಕ ವಿಚಾರಗಳು ಇವೆ. ಏಷ್ಯಾದಲ್ಲಿ ಕ್ಷೋಭೆ ಉಂಟಾದಾಗ, ನಮಗೆ ʼಇನ್ನಷ್ಟು ವ್ಯಾಪಾರ ಮಾಡಿರಿʼ ಎಂಬ ಬೋಧನೆ ಮಾಡಲಾಯಿತು. ನಾವೇನೂ ಇಂದು ನಿಮಗೆ ಹಾಗೆ ಹೇಳುತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ಸಮಸ್ಯೆ ಸೃಷ್ಟಿಯಾದಾಗ, ಯಾವ ಅಂತಾರಾಷ್ಟ್ರೀಯ ಕಾನೂನು ಅದನ್ನು ಕಾಪಾಡಿತು ಎಂಬುದನ್ನು ಹೇಳಿ ಎಂದು ಯುರೋಪ್ ದೇಶಗಳನ್ನು ಜೈಶಂಕರ್ ಟೀಕಿಸಿದರು.
ನಾವ್ಯಾರೂ ಯುದ್ಧವನ್ನು ಬಯಸುತ್ತಿಲ್ಲ. ಎಲ್ಲರೂ ಮಾತುಕತೆ, ರಾಜತಾಂತ್ರಿಕ ಸಂಬಂಧಗಳ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಬಯಸುತ್ತೇವೆ. ಯಾವ ದೇಶವೂ ದುಬಾರಿ ಇಂಧನ ಬೆಲೆಗಳು, ಆಹಾರದ ಹಣದುಬ್ಬರ ಮತ್ತಿತರ ಸಂಕಷ್ಟಗಳನ್ನು ಬಯಸುವುದಿಲ್ಲ. ಈ ಯುದ್ಧ ನಿಲ್ಲಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಚೀನಾದ ಹೆಸರನ್ನು ಉಲ್ಲೇಖಿಸದೇ ಅವರು ಚೀನಾದ ವರ್ತನೆಯಿಂದ ಏಷ್ಯಾದಲ್ಲಿ ಭಾರತಕ್ಕೆ ಉಂಟಾದ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಭಾರತಕ್ಕೆ ಭದ್ರತೆಯ ಸಮಸ್ಯೆ ಉಂಟಾದಾಗ ಯುರೋಪ್ ಆ ವಿಚಾರದಲ್ಲಿ ಸ್ಪಂದನರಹಿತವಾಗಿತ್ತು. ಏಷ್ಯಾದಲ್ಲಿ ಈ ಸಮಸ್ಯೆ 10 ವರ್ಷಗಳಿಂದಲೂ ಇದೆ. ಆದರೆ ಯುರೋಪ್ ಅದನ್ನು ಗಮನಿಸಿಯೇ ಇಲ್ಲ. ಪ್ರಸ್ತುತ ಬೆಳವಣಿಗೆ ಯುರೋಪ್‌ಗೆ ಒಂದು ಎಚ್ಚರಿಕೆ ಪಾಠ. ಏಷ್ಯಾಗೂ ಕೂಡ ಅದು ಎಚ್ಚರಿಕೆಯೇ ಎಂದರು.
ಉಕ್ರೇನ್ ಸಂಕಷ್ಟದಿಂದ ಉದ್ಭವಿಸಿರುವ ಜಾಗತಿಕ ಆಹಾರ ಕೊರತೆಯನ್ನು ನೀಗಿಸಲು ಹೆಚ್ಚುವರಿ ಆಹಾರ ಉತ್ಪನ್ನ, ಮುಖ್ಯವಾಗಿ ಗೋಧಿಯನ್ನು ಕಳಿಸಲು ಭಾರತ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ: ಬಿಜೆಪಿಯೇತರ ಸರ್ಕಾರಗಳಿಂದ ಜನರಿಗೆ ಅನ್ಯಾಯ: ಇಂಧನ ತೆರಿಗೆ ಇಳಿಸಿದ ಬೊಮ್ಮಾಯಿ ಸರ್ಕಾರಕ್ಕೆ ಮೋದಿ ಶ್ಲಾಘನೆ