Site icon Vistara News

Anju Love Story: ನಮ್ಮ ಪಾಲಿಗೆ ಅವಳು ಸತ್ತಂತೆ; ಪ್ರೀತಿಗಾಗಿ ಪಾಕ್‌ಗೆ ತೆರಳಿದ ಅಂಜು ತಂದೆಯ ಆಕ್ರೋಶ

Anju And Nusrullah Love Story

Anju Love Story: Anju Who Went To Pakistan For Nasrullah, Now Wants To Come Back India

ಜೈಪುರ: ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ, ಕೊನೆಗೆ ತನಗಿರುವ ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು, ಪ್ರಿಯತಮನನ್ನು ಅರಸಿ ಪಾಕಿಸ್ತಾನಕ್ಕೆ ಹೋದ ರಾಜಸ್ಥಾನದ ಭಿವಾಡಿ ಜಿಲ್ಲೆ ಮಹಿಳೆ ಅಂಜು (Anju Love Story) ಪ್ರೇಮ ಪ್ರಕರಣವೀಗ ದೇಶಾದ್ಯಂತ ಸುದ್ದಿಯಾಗಿದೆ. ಇಬ್ಬರು ಮಕ್ಕಳು ಹಾಗೂ ಪತಿಯನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಿರುವ ಮಗಳ ಕುರಿತು ಅಂಜು ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅವಳು ನಮ್ಮ ಪಾಲಿಗೆ ಸತ್ತಂತೆ” ಎಂದು ಅಂಜು ತಂದೆ ಹೇಳಿದ್ದಾರೆ.

“ನಮ್ಮ ಪಾಲಿಗೆ ಅವಳು ಸತ್ತುಹೋಗಿದ್ದಾಳೆ. ಅವಳ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ. ಅವಳ ಜತೆ ಒಂದು ವರ್ಷದಿಂದ ಮಾತನಾಡುವುದನ್ನೇ ಬಿಟ್ಟಿದ್ದೆ. ನನಗೆ ಅವಳ ಬಗ್ಗೆ ಏನೂ ಗೊತ್ತಿಲ್ಲ. ನಮ್ಮನ್ನು ಬಿಡಿ, ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಓಡಿಹೋದಾಕೆ ಬಗ್ಗೆ ನನಗೆ ಯಾವ ಕಾಳಜಿಯೂ ಇಲ್ಲ” ಎಂದು ಸುದ್ದಿಗಾರರಿಗೆ ಅಂಜು ತಂದೆ ಹೇಳಿದ್ದಾರೆ.

ನಸ್ರುಲ್ಲಾ ಜತೆ ಅಂಜು ಮದುವೆ

34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಅವರ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಅವರು 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾಗಿ ಪ್ರೀತಿಸಲು ಆರಂಭಿಸಿದ್ದಳು. ನಸ್ರುಲ್ಲಾ ಮತ್ತು ಅಂಜು ವಿವಾಹವನ್ನು ನಡೆಸಲಾಯಿತು. ಇಸ್ಲಾಂಗೆ ಮತಾಂತರಗೊಂಡ ನಂತರ ಸರಿಯಾದ ನಿಕಾಹ್ ನಡೆಸಲಾಯಿತು ಎಂದು ಅಪ್ಪರ್ ದಿರ್ ಜಿಲ್ಲೆಯ ಮೊಹರಾರ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮುಹಮ್ಮದ್ ವಹಾಬ್ ಪಿಟಿಐಗೆ ತಿಳಿಸಿದ್ದಾರೆ. ನಸ್ರುಲ್ಲಾ ಅವರ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ದಿರ್ ಬಾಲಾ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಿ ವೆಡ್ಡಿಂಗ್‌ ವಿಡಿಯೊ ವೈರಲ್

ಇದನ್ನೂ ಓದಿ: Cross Border Love : ಅಂಜು ಈಗ ಫಾತಿಮಾ; ಪಾಕಿಸ್ತಾನದ ಪ್ರೇಮಿಯನ್ನು ಲಗ್ನವಾದ ಭಾರತದ ಮಹಿಳೆ!

ಅಂಜು ಹಾಗೂ ನಸ್ರುಲ್ಲಾ ಮದುವೆಗೂ ಮುನ್ನ ಮಾಡಿಸಿದ ವಿಡಿಯೊ ಈಗ ವೈರಲ್‌ ಆಗಿದೆ. ಇಬ್ಬರೂ ಕೈ ಕೈ ಹಿಡಿದು ಪಾರ್ಕ್‌ನಲ್ಲಿ ತಿರುಗಾಡಿರುವುದು, ಖುಷಿಯಿಂದ ಕಾಣಿಸಿಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ವೀಸಾ ಹಾಗೂ ಪಾಸ್‌ಪೋರ್ಟ್‌ ಸಮೇತ ಪಾಕಿಸ್ತಾನಕ್ಕೆ ಅಂಜು ತೆರಳಿರುವುದರಿಂದ ಆಕೆಗೆ ಯಾವುದೇ ಸಮಸ್ಯೆಯಾಗಿಲ್ಲ ಹಾಗೂ ಪೊಲೀಸರು ನವ ದಂಪತಿಗೆ ಭದ್ರತೆ ಒದಗಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಆಕೆಯ ಹೆಸರೀಗ ಫಾತಿಮಾ ಆಗಿದೆ.

Exit mobile version