Site icon Vistara News

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

Vistara editorial, Let's take precautions for pneumonia infection

ಕೋವಿಡ್ ಬಳಿಕ ಚೀನಾದಲ್ಲಿ ಕೋಲಾಹಲ ಸೃಷ್ಟಿಸಿರುವ ನ್ಯುಮೋನಿಯಾ ರೀತಿಯ ಸೋಂಕು (Pneumonia Outbreak) ಇದೀಗ ಭಾರತಕ್ಕೂ ಹರಡಿರುವುದು ಖಚಿತವಾಗಿದೆ. ದೆಹಲಿಯ ಏಮ್ಸ್ (AIIMS Delhi) ಆಸ್ಪತ್ರೆಯಲ್ಲಿ ಇದರ 7 ಪ್ರಕರಣ ಪತ್ತೆಯಾಗಿದೆ. ದಿಲ್ಲಿಯಲ್ಲಿ ಕಾಣಿಸಿಕೊಂಡಿರುವುದು ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಬ್ಯಾಕ್ಟೀರಿಯಾ (Pneumonia Outbreak) ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್‌ ಘೋಷಿಸಿದ ಭಾರತ ತೀವ್ರ ಮುನ್ನೆಚ್ಚರಿಕೆ ವಹಿಸಿತ್ತು. ಒಟ್ಟು 67 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಮಾದರಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. 2023ರ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಕೆಲವೇ ದಿನಗಳ ಹಿಂದೆ ಈ ಬಗ್ಗೆ ಆಸ್ಪತ್ರೆಗಳ ಸನ್ನದ್ಧತೆ ಪರಿಶೀಲಿಸುವಂತೆ ಭಾರತದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿತ್ತು. ಈ ಬಗ್ಗೆ ಇನ್ನಷ್ಟು ಎಚ್ಚರ ವಹಿಸುವುದು ಸೂಕ್ತವಾಗಿದೆ(Vistara editorial).

ಚೀನಾದಲ್ಲಿ ಈ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯಗಳ ಆಸ್ಪತ್ರೆಗಳು ಭರ್ತಿಯಾಗಿವೆ. ಆ ಮೂಲಕ ಕೋವಿಡ್‌ ನಂತರ ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಪಸರಿಸಲಿದೆಯೇ ಎಂಬ ಆತಂಕ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಆತಂಕ ಹುಟ್ಟಿಸಿದ ಈ ಸೋಂಕಿನಿಂದಾಗಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ ಮತ್ತೆ ಜಾರಿ ಮಾಡಲಾಗಿದೆ. ಈ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಭಾರತಕ್ಕೂ ಮೊದಲು ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್ ರಾಜ್ಯದ 3-14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರಿ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದೆ. ವೈದ್ಯಕೀಯ ಇಲಾಖೆ ಇದನ್ನು ಸೋಂಕು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ನಮ್ಮಲ್ಲಿ ಕರ್ನಾಟಕ ಸೇರಿ ಆರು ರಾಜ್ಯಗಳು ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಅಲರ್ಟ್ ಮೋಡ್‌ನಲ್ಲಿ ಇಡಲು ಮುಂದಾಗಿವೆ. ಉಸಿರಾಟದ ಸಮಸ್ಯೆಗಳು ಕಂಡುಬಂದ ರೋಗಿಗಳನ್ನು ನಿಭಾಯಿಸಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಳಿಕೊಂಡಿವೆ.

ಭಾರತದಲ್ಲಿ ಪತ್ತೆಯಾದ ನ್ಯುಮೋನಿಯಾ ಬ್ಯಾಕ್ಟೀರಿಯಾವು (pneumonia bacteria) ಕೊರೋನಾವೈರಸ್‌ನಂತೆ (‌Corona Virus) ಪಸರಿಸುವ ಸಾಧ್ಯತೆ ಕಡಿಮೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೊರೊನಾ ವೈರಸ್‌ ಕಾಲಿಟ್ಟ ಆರಂಭ ಕಾಲದಲ್ಲೂ ತಜ್ಞರು ಹೀಗೇ ಹೇಳಿದ್ದರು ಎಂಬುದನ್ನು ನೆನಪಿಡಬೇಕು. ಮುಂದೆ ಅದು ಎಷ್ಟು ಅನಾಹುತ ಮಾಡಿತು ಎಂಬುದನ್ನು ಹೇಳಬೇಕಿಲ್ಲ. ಕೋವಿಡ್‌ ಬಂದಾಗ, ಉಸಿರಾಟದ ಸಮಸ್ಯೆಯು ಮಾರಣಾಂತಿಕವಾಗಬಹುದು ಎಂಬ ಅರಿವು ಯಾರಿಗೂ ಇರಲಿಲ್ಲ. ನ್ಯುಮೋನಿಯಾದ ಮುಂದುವರಿದ ಹಂತದಲ್ಲೂ ಉಸಿರಾಟದ ತೊಂದರೆಯು ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಜ್ವರ, ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಸದ್ಯ ಈ ಸೋಂಕಿನ ಲಕ್ಷಣಗಳಾಗಿವೆ. ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಆದರೆ ಮಕ್ಕಳಲ್ಲಿ ಈ ಜ್ವರ ಕಂಡುಬಂದರೆ ಹೆತ್ತವರ ಜಂಘಾಬಲ ಉಡುಗುವುದು ಸ್ವಾಭಾವಿಕ.

ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ವರದಿಗಳ ಪ್ರಕಾರ, ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಈ ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಶ್ವಾಸಕೋಶದ ಉರಿಯೂತ ಮತ್ತು ಹೆಚ್ಚಿನ ಜ್ವರ ಉಂಟುಮಾಡುತ್ತದೆ. ಆದರೆ ಕೆಮ್ಮಿನಂತಹ ಇತರ ಲಕ್ಷಣಗಳು ಕಾಣೆಯಾಗಿವೆ. ಉಸಿರಾಟದ ಕಾಯಿಲೆಗಳ ಪೀಕ್ ಸೀಸನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಈ ʼನಿಗೂಢ ನ್ಯುಮೋನಿಯಾ’ ಪ್ರಕರಣಗಳ ಉಲ್ಬಣ ಉಂಟಾಗಿದೆ. ಇದು ಪ್ರತಿರೋಧಕ ಶಕ್ತಿಯ ಕೊರತೆಯಿಂದ ಕಾಣಿಸಕೊಂಡಿರಬಹುದು ಎಂಬುದು ತಜ್ಞರ ಅನುಮಾನ. ಇದು ಹೊಸ ವೈರಸ್‌ ಅಲ್ಲ, ಮೊದಲು ಅಸ್ತಿತ್ವದಲ್ಲಿರುವುದೇ ಎಂದು ಗೊತ್ತಾಗಿದೆ.

ಅದೇನೇ ಇರಲಿ, ನಮ್ಮ ಮುನ್ನೆಚ್ಚರಿಕೆ ನಾವು ವಹಿಸೋಣ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು, ಸಾಬೂನು ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು, ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವುದು, ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಮಾಸ್ಕ್ ಬಳಸುವುದು, ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ನಿದ್ರೆ ಮಾಡುವುದು ಹಾಗೂ ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಇದರ ಮುನ್ನೆಚ್ಚರಿಕೆಗಳಾಗಿವೆ. ಇವು ವೈಯಕ್ತಿಕ ಮುನ್ನೆಚ್ಚರಿಕೆಗಳಾದರೆ, ಸರ್ಕಾರವೂ ಸಾಕಷ್ಟು ಎಚ್ಚರ ತೆಗೆದುಕೊಂಡು ಆರೋಗ್ಯ ಸೇವೆಯನ್ನು ಸನ್ನದ್ಧತೆಯಲ್ಲಿಡಬೇಕಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರಿ ಪಂಡಿತರ ಅಳಲು ಕೊನೆಯಾಗಲು ಹೊಸ ವಿಧೇಯಕ ನೆರವಾಗಲಿ

Exit mobile version