ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಮಾಡಲಾಗಿದ್ದು(Kannada in signboards mandatory), ಇದನ್ನು ಅಳವಡಿಸಲು ಫೆ.28 ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಕೆಲವು ಬೆಳವಣಿಗೆಗಳು ನಡೆದಿವೆ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿ ಬಳಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ(Karnataka Government). ಇದು ಮೊದಲು ಬೆಂಗಳೂರಿನಲ್ಲಿ ಜಾರಿಗೆ ಬರಬೇಕು, ಮುಂದೆ ಶೀಘ್ರವೇ ಗಡಿಜಿಲ್ಲೆ ಹಾಗೂ ಎಲ್ಲಾ ಪಾಲಿಕೆ ವ್ಯಾಪ್ತಿಯಲ್ಲಿ ಸಭೆ ಮಾಡಲಾಗುವುದು ಎಂದಿದ್ದಾರೆ(Vistara Editorial).
ಈ ನಡುವೆ ಕನ್ನಡ ನಾಮಫಲಕದ ವಿಚಾರದಲ್ಲಿ ರಾಜ್ಯದೊಂದಿಗೆ ತಗಾದೆ ತೆಗೆಯಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕರ್ನಾಟಕದ ನಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ವಿಧಾನ ಪರಿಷತ್ತು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ- 2024 ಅನ್ನು ಅಂಗೀಕರಿಸಿದ ಒಂದು ದಿನದ ನಂತರ, ಮಹಾರಾಷ್ಟ್ರ ಸರ್ಕಾರ ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಹೊರಟಿದೆ. ಕರ್ನಾಟಕ- ಮಹಾರಾಷ್ಟ್ರ ಅಂತಾರಾಜ್ಯ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ, ವಿವಾದಿತ ಪ್ರದೇಶಗಳಲ್ಲಿ, ಮುಖ್ಯವಾಗಿ ಕರ್ನಾಟಕದ ನಾಲ್ಕು ಗಡಿ ಜಿಲ್ಲೆಗಳಲ್ಲಿ ಈ ಕಾಯಿದೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದು ಮಹಾರಾಷ್ಟ್ರ ಸರ್ಕಾರ ಮತ್ತು ಎಂಇಎಸ್‌ನ ವಾದವಾಗಿದೆ. ʻʻನಮ್ಮ ರಾಜ್ಯದಲ್ಲಿ ಬೋರ್ಡ್ ಹಾಕುವುದಕ್ಕೆ ಇವರ ಅಪ್ಪಣೆ ಯಾಕೆ ಬೇಕು? ನಾವು ಬೋರ್ಡ್ ಅಳವಡಿಕೆಯಲ್ಲಿ ಕನ್ನಡ ಕಡ್ಡಾಯ ಮಾಡಿರುವುದು ಕರ್ನಾಟಕದಲ್ಲಿ ಮಾತ್ರ. ಇದಕ್ಕೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧ ಇಲ್ಲʼʼ ಎಂದು ಸಚಿವ ಶಿವರಾಜ ತಂಗಡಗಿ ಕಿಡಿ ಕಾರಿದ್ದಾರೆ.
ನಿಜ, ಈ ನಿಟ್ಟಿನಲ್ಲಿ ನಾವು ದಿಟ್ಟವಾಗಿ ನಮ್ಮ ನಿಲುಮೆಯನ್ನು ಪ್ರದರ್ಶಿಸಬೇಕಾದ ಅಗತ್ಯ ಇದೆ. ಮಹಾರಾಷ್ಟ್ರ ಹೇಳುತ್ತಿರುವ ನಾಲ್ಕು ಗಡಿ ಜಿಲ್ಲೆಗಳು ʼವಿವಾದಿತʼ ಎನಿಸಿರುವುದು ಮಹಾರಾಷ್ಟ್ರದ ಮೊಂಡು ಹಠದಿಂದಾಗಿಯೇ ಹೊರತು, ಇವು ಕರ್ನಾಟಕಕ್ಕೆ ಸೇರಿದವು ಎಂಬುದರಲ್ಲಿ ನಮಗೆ ಯಾವ ಅನುಮಾನವೂ ಇಲ್ಲ. ಮಹಾರಾಷ್ಟ್ರ ಸರ್ಕಾರ ಬೇಕಿದ್ದರೆ ತನ್ನಲ್ಲೂ 60:40 ಅನುಪಾತದಲ್ಲಿ ಮರಾಠಿ ಹಾಗೂ ಇಂಗ್ಲಿಷ್ ನಾಮಫಲಕ ಅಳವಡಿಸುವ ವಿಚಾರ ಚರ್ಚಿಸಲಿ. ತಮ್ಮ ರಾಜ್ಯದಲ್ಲಿ ಅವರು ಮರಾಠಿ ಬಗ್ಗೆ ಮಾತನಾಡಲಿ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಇಲ್ಲಿ ಕನ್ನಡ ಭಾಷೆ ಬಳಕೆಯ ಬಗ್ಗೆ ಇತರರು ಆಕ್ಷೇಪಿಸುವ ಅವಶ್ಯಕತೆ ಇಲ್ಲ. ಮರಾಠಿಗರನ್ನು ಕೇಳಿ ನಾವು ತೀರ್ಮಾನ ಮಾಡುವ ಅಗತ್ಯವೂ ಇಲ್ಲ.
ಮಹಾರಾಷ್ಟ್ರ ನವನಿರ್ಮಾಣ ಸೇನೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಇತ್ಯಾದಿ ಸಂಘಟನೆಗಳು ಕದಡಿದ ನೀರಿನಲ್ಲಿ ಮೀನು ಹಿಡಿಯಲು ಹವಣಿಸುತ್ತಿರುವ ಸಂಸ್ಥೆಗಳು. ಬೆಳಗಾವಿಯಲ್ಲಿ ಮರಾಠಿಗರು ಬಹುಸಂಖ್ಯಾತರಾಗಿದ್ದಾರೆ, ಆದ್ದರಿಂದ ಈ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಇವುಗಳ ಮೊಂಡುವಾದ. ಆದರೆ ರಾಜ್ಯಗಳ ಗಡಿಭಾಗಗಳಲ್ಲಿ ಎರಡೂ ಕಡೆಯ ಭಾಷಿಕರಿರುವುದು ಸಾಮಾನ್ಯ. ಬೆಳಗಾವಿ ಯಾರಿಗೆ ಸೇರಬೇಕು ಎಂಬುದು 1957ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗಲೇ ತೀರ್ಮಾನವಾಗಿದೆ. ಅಲ್ಲಿಂದೀಚೆಗೆ ಬೆಳಗಾವಿಯಲ್ಲಿ ಕನ್ನಡವನ್ನು ಕುಂದಿಸಲು, ಮರಾಠಿಯನ್ನು ಬೆಳೆಸಲು ಮರಾಠಿ ರಾಜಕಾರಣಿಗಳು ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಯಶಸ್ವಿಯಾಗಿಲ್ಲ. ಬೆಳಗಾವಿಯವರು ಕನ್ನಡವನ್ನು ಅಪ್ಪಿಕೊಂಡಿದ್ದಾರೆ.
ಅದಕ್ಕೆ ಸಾಕ್ಷಿ ಎಂದರೆ, ಕಳೆದ ವರ್ಷ, ತಮ್ಮನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಬೇಕು ಎಂದು ಮಹಾರಾಷ್ಟ್ರದ ಹಲವು ಗಡಿ ಗ್ರಾಮಗಳು ತೆಗೆದುಕೊಂಡ ನಿರ್ಣಯ. ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ 10 ಗ್ರಾಮ ಪಂಚಾಯಿತಿಗಳು ತಮ್ಮ ಗ್ರಾಮಗಳನ್ನು ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂಬುದಾಗಿ ನಿರ್ಣಯ ತೆಗೆದುಕೊಂಡಿವೆ. ಜತೆಗೆ, ಸಾಂಗ್ಲಿ ಜಿಲ್ಲೆಯ ಜಾಟ್, ಸೋಲಾಪುರ ಜಿಲ್ಲೆಯ ಅಕ್ಕಲಕೋಟೆ, ಲಾತೂರ್ ಜಿಲ್ಲೆಯ 10 ಗ್ರಾಮಗಳು ಕೂಡ ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂದು ಪಟ್ಟು ಹಿಡಿದಿವೆ. ಇಲ್ಲೆಲ್ಲ ಮರಾಠಿ ಜೊತೆಗೆ ಕನ್ನಡ ಮಾತನಾಡುವವರ ಸಂಖ್ಯೆಯೂ ಜಾಸ್ತಿ ಇದೆ. ಕನ್ನಡ ಮಾತನಾಡುವವರ ಸಂಖ್ಯೆ ಜಾಸ್ತಿ ಇರುವ ಕಡೆ ಮಹಾರಾಷ್ಟ್ರ ಸರ್ಕಾರವು ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಈ ಪ್ರದೇಶಗಳ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ. ಹೀಗೆ ಮೂಲಸೌಕರ್ಯಗಳಲ್ಲಿ ವಂಚನೆ ಮಾಡುವ ಸರ್ಕಾರದ ಜೊತೆ ಈ ಗ್ರಾಮಸ್ಥರಿಗೆ ಸಹಾನುಭೂತಿ ಏಕಿರಬೇಕು? ಹಾಗಾಗಿ, ಈ ಭಾಗಗಳ ಜನರು ಕರ್ನಾಟಕದ ಜತೆ ತಮ್ಮ ಗ್ರಾಮಗಳು ವಿಲೀನಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಮಹಾರಾಷ್ಟ್ರ ಇದರಿಂದ ಪಾಠ ಕಲಿಯಬೇಕು. ಮೊದಲು ಅದು ತನ್ನ ಭಾಗದ ಗಡಿ ಪ್ರದೇಶಗಳಲ್ಲಿ ಎಲ್ಲರಿಗೂ ಒಳ್ಳೆಯ ಮೂಲಸೌಕರ್ಯ ನೀಡುವ ಪ್ರಯತ್ನ ಮಾಡಲಿ. ಭಾಷೆಯ ವಿಚಾರ ನಂತರ ಮಾತನಾಡಲಿ. ಭಾಷೆ ಯಾವತ್ತಿಗೂ ಭಾವನಾತ್ಮಕ ಸಂಗತಿ. ಬೆಳಗಾವಿಯಲ್ಲಿ ಕನ್ನಡದ ಜೊತೆಗೆ ಮರಾಠಿಯೂ ಇರಲಿ ಎಂದು ಸಹಬಾಳ್ವೆಯನ್ನು ಇಷ್ಟಪಡುವ ಕನ್ನಡಿಗರಾದ ನಾವು ಹೊಂದಿಕೊಂಡುಬಿಟ್ಟಿದ್ದೇವೆ. ಈಗ ಕನ್ನಡ ನಾಮಫಲಕ ಅಳವಡಿಸಲು ನಾವು ಮುಂದಾದರೆ ತಗಾದೆ ತೆಗೆಯುವುದು ಆರೋಗ್ಯಕರ ಮನಸ್ಥಿತಿ ಅಲ್ಲ. ಇದನ್ನು ಕನ್ನಡಿಗರು ಸಹಿಸುವುದೂ ಇಲ್ಲ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ನಾಡಗೀತೆ, ಕವಿವಾಕ್ಯಕ್ಕೆ ಅಪಚಾರ ಆಗದಿರಲಿ