Site icon Vistara News

ವಿಸ್ತಾರ Explainer | ಉಗ್ರರಿಗೆ ಹಣಕಾಸಿನ ನೆರವಿನ ವಿರುದ್ಧ ಭಾರತದ ಸಮರ! ನಿರೀಕ್ಷೆ, ಸವಾಲುಗಳೇನು?

Finance Support to Terror

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಯೋತ್ಪಾದನೆಯನ್ನು ತಡೆಗಟ್ಟಲು ಇರುವ ಅತ್ಯಂತ ಪ್ರಮುಖ ಕ್ರಮಗಳಲ್ಲಿ ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಯನ್ನು ತಡೆಯುವುದೂ ಪ್ರಮುಖವಾದದ್ದು. ಅಂತಾರಾಷ್ಟ್ರೀಯ ಸಮುದಾಯ ಇದರ ಪ್ರಾಮುಖ್ಯತೆಯನ್ನು ಸೆಪ್ಟೆಂಬರ್ 11, 2001ರ ಬಳಿಕ ಅರಿತುಕೊಂಡಿತು. ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್, ಅಥವಾ ಗ್ರೂಪ್ ಡಿ ಆ್ಯಕ್ಷನ್ ಫಿನಾನ್ಸಿರ್ ಎಂದು ಕರೆಯಲಾಗುವ ಇದೊಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಜಿ7 ಒಕ್ಕೂಟದಿಂದ 1989ರಲ್ಲಿ ಅಧಿಕೃತ ಹಣದ ಪೂರೈಕೆ ತಡೆಗಟ್ಟಲು ಆರಂಭಗೊಂಡಿತು. 2001ರಲ್ಲಿ ಸಂಸ್ಥೆಯ ಉದ್ದೇಶಗಳು ಇನ್ನಷ್ಟು ಹೆಚ್ಚಿ, ಭಯೋತ್ಪಾದನೆಗೆ ಹಣಕಾಸಿನ ನೆರವನ್ನು ತಡೆಯುವುದನ್ನು ಸೇರಿಸಲಾಯಿತು.

ನವೆಂಬರ್ 18 ಹಾಗೂ 19ರಂದು ಭಾರತ ‘ನೋ ಮನಿ ಫಾರ್ ಟೆರರ್’ (ಎನ್ಎಮ್ಎಫ್‌ಟಿ) ಸಮ್ಮೇಳನವನ್ನು ಆಯೋಜಿಸುತ್ತಿದೆ. ಈ ಸಮ್ಮೇಳನ ನಾಲ್ಕು ವಿಚಾರಗಳನ್ನು ಕುರಿತು ಚರ್ಚಿಸುತ್ತದೆ.
| ಅವೆಂದರೆ, “ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವಿನಲ್ಲಿ ಜಾಗತಿಕ ಪ್ರವೃತ್ತಿಗಳು”,
| “ಭಯೋತ್ಪಾದನೆಗೆ ಹಣಕಾಸು ಒದಗಿಸಲು ಔಪಚಾರಿಕ ಮತ್ತು ಅನೌಪಚಾರಿಕ ಮಾರ್ಗಗಳ ಬಳಕೆ”,
| “ನೂತನ ತಂತ್ರಜ್ಞಾನಗಳು ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ”,
| ” ಭಯೋತ್ಪಾದನೆಗೆ ಹಣಕಾಸು ತಡೆಯುವಲ್ಲಿನ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರ”

ಇದಲ್ಲದೆ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ಅವುಗಳಲ್ಲಿನ ನಿಯಂತ್ರಣದ ಕೊರತೆ, ಭಯೋತ್ಪಾದನೆಗೆ ಹಣ ಒದಗಿಸಲು ಕ್ರೌಡ್ ಫಂಡಿಂಗ್, ಹಣಕಾಸಿನ ನೆರವು ಪಡೆಯಲು ಡಾರ್ಕ್ ವೆಬ್ ಬಳಕೆ ಹಾಗೂ ಕ್ರಿಪ್ಟೊ ಕರೆನ್ಸಿಯ ಬಳಕೆಗಳೂ ಸಮ್ಮೇಳನದಲ್ಲಿ ಚರ್ಚೆಯಾಗುವ ಪ್ರಮುಖ ವಿಚಾರಗಳಾಗಿವೆ.

ಈ ಮೊದಲು ಏಪ್ರಿಲ್ 2018ರಲ್ಲಿ ಪ್ಯಾರಿಸ್‌ನಲ್ಲಿ ಹಾಗೂ ನವೆಂಬರ್ 2019ರಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಸಮ್ಮೇಳನಗಳ ಯಶಸ್ಸು ಹಾಗೂ ಪಾಠಗಳ ಆಧಾರದಲ್ಲಿ ಈ ಸಮ್ಮೇಳನವನ್ನು ನಡೆಸಲಾಗುತ್ತದೆ. ಸಮ್ಮೇಳನವು ಭಯೋತ್ಪಾದಕರಿಗೆ ಹಣಕಾಸಿನ ನೆರವು ಹಾಗೂ ಸುರಕ್ಷಿತ ತಾಣಗಳನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತು ಭಯೋತ್ಪಾದನೆಯನ್ನು ಎದುರಿಸಲು ಎಲ್ಲರನ್ನೂ ಒಳಗೊಂಡ ವಿಧಾನವನ್ನು ಅನುಸರಿಸಬೇಕು ಎಂದರು. ಕಳೆದ ಕೆಲವು ತಿಂಗಳಲ್ಲಿ ಭಾರತವು ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಸಮ್ಮೇಳನಗಳನ್ನು ಆಯೋಜಿಸಿದೆ. ಇವುಗಳಲ್ಲಿ 90ನೆಯ ಇಂಟರ್‌ಪೋಲ್ ಜನರಲ್ ಅಸೆಂಬ್ಲಿ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕೌಂಟರ್ ಟೆರರಿಸಂ ಸಮಿತಿಯ ಸಭೆ ಮುಂಬೈನಲ್ಲಿ ನಡೆದಿದೆ. ಎನ್ಎಮ್ಎಫ್‌ಟಿ ಮೂಲಕ ಭಾರತ ಜಾಗತಿಕವಾಗಿ ಭಯೋತ್ಪಾದನೆಗೆ ಹಣಕಾಸಿನ ನೆರವಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ ಎಂದರು.

ತನ್ನ ಭಾಷಣದಲ್ಲಿ ಪ್ರಧಾನಿ ಭಯೋತ್ಪಾದಕ ಮತ್ತು ಭಯೋತ್ಪಾದನಾ ಸಂಘಟನೆಗಳ ವ್ಯತ್ಯಾಸವನ್ನು ವಿವರಿಸಿದರು. ಭಯೋತ್ಪಾದನಾ ಸಂಘಟನೆಗಳು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು ಒದಗಿಸುವುದರಿಂದ ಅವುಗಳು ವೈಯಕ್ತಿಕ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಪೂರೈಸದಂತೆ ತಡೆಗಟ್ಟಬೇಕು ಎಂದರು.

ಭಯೋತ್ಪಾದನಾ ಹಣಕಾಸಿನ ವಿರುದ್ಧದ ಸಮರದಲ್ಲಿ ತಂತ್ರಜ್ಞಾನ ಸವಾಲೂ ಆಗಿದೆ ಮತ್ತು ಅವಕಾಶವೂ ಆಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ನಾವು ತಂತ್ರಜ್ಞಾನವನ್ನು ಬಳಸಿ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಿದೆ. ಡಾರ್ಕ್ ನೆಟ್ ಹಾಗೂ ಖಾಸಗಿ ಕರೆನ್ಸಿಗಳ ಮೂಲಕ ಭಯೋತ್ಪಾದನೆಗೆ ಹಣಕಾಸು ಒದಗಿಸಲಾಗುತ್ತಿದ್ದು, ಇನ್ನಷ್ಟು ತಂತ್ರಜ್ಞಾನಗಳು ರೂಪುಗೊಳ್ಳುತ್ತಿವೆ. ಇದನ್ನು ತಡೆಯುವ ಪ್ರಯತ್ನಗಳಲ್ಲಿ ಖಾಸಗಿ ವಲಯವೂ ಸಹಕರಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಅವರು ಇದಕ್ಕಾಗಿ ಒಂದು ಸಮಾನ ಅರ್ಥೈಸುವಿಕೆ, ನಿಯಮಾವಳಿಗಳು ಮೂಡಿಬರಬಹುದು ಎಂದು ಅಭಿಪ್ರಾಯ ಪಟ್ಟರು.

ನರೇಂದ್ರ ಮೋದಿಯವರು ದೇಶ ದೇಶಗಳ ಮಧ್ಯ ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿ, ಬೇರೆ ದೇಶಗಳಲ್ಲಿ ಭಯೋತ್ಪಾದಕರ ಕೃತ್ಯಗಳಲ್ಲಿನ ವಿಭಿನ್ನತೆಯ ಲಾಭ ಪಡೆದುಕೊಳ್ಳಲು ಬಿಡಬಾರದು ಎಂದರು.

ಭಯೋತ್ಪಾದನೆಗೆ ಹಣಕಾಸಿನ ನೆರವಿನ ವಿರುದ್ಧ ಭಾರತದ ಕಾರ್ಯತಂತ್ರಗಳು ಆರು ಸ್ತಂಭಗಳನ್ನು ಒಳಗೊಂಡಿವೆ. ಅವೆಂದರೆ ಶಾಸಕಾಂಗ ಮತ್ತು ತಾಂತ್ರಿಕತೆಗಳ ಬಲವರ್ಧನೆ, ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆಯ ರಚನೆ, ಗುಪ್ತಚರ ಮಾಹಿತಿಗಳ ಹಂಚಿಕೆ ವ್ಯವಸ್ಥೆ ಮತ್ತು ವಿಚಾರಣೆ ಹಾಗೂ ಪೊಲೀಸ್ ಕಾರ್ಯಾಚರಣೆಗಳ ಬಲವರ್ಧನೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ, ಕಾನೂನು ಘಟಕಗಳು ಹಾಗೂ ನೂತನ ತಂತ್ರಜ್ಞಾನಗಳ ದುರ್ಬಳಕೆಯ ತಡೆ, ಹಾಗೂ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮನ್ವಯದ ಸ್ಥಾಪನೆ ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ.

ಈ ವರ್ಷದ ಅಂತ್ಯದವರೆಗೆ ಕೌಂಟರ್ ಟೆರರಿಸಂ ಸಮಿತಿಯ ನಾಯಕತ್ವ ಭಾರತ ನಿರ್ವಹಿಸುತ್ತಿದೆ. ಸಮಿತಿಯ ಅಧ್ಯಕ್ಷರಾದ, ಭಾರತದ ರಾಯಭಾರಿ ರುಚಿರಾ ಕಾಂಬೋಜ್ ನ್ಯೂಯಾರ್ಕ್‌ನಲ್ಲಿ ಮಾಧ್ಯಮಗಳೊಡನೆ ಮಾತನಾಡುತ್ತಾ, ಉನ್ನತ ಹಂತದ ಚರ್ಚೆಗಳು ಪ್ರಸ್ತುತ ಘಟನೆಗಳನ್ನು ಅವಲೋಕಿಸಿ, ಭಯೋತ್ಪಾದನೆ ಮತ್ತು ತಂತ್ರಜ್ಞಾನದ ಬಳಕೆಯ ಕುರಿತು ಅಧ್ಯಯನ ನಡೆಸಲಿವೆ ಎಂದರು.

ಅದರೊಡನೆ, ಈ ಸಮ್ಮೇಳನದಲ್ಲಿ ತಂತ್ರಜ್ಞಾನದ ಬುದ್ಧಿವಂತ ಬಳಕೆದಾರರಾದ ಉಗ್ರರು ಹೇಗೆ ತಂತ್ರಜ್ಞಾನಗಳನ್ನು ಕ್ರೌಡ್ ಫಂಡಿಂಗ್, ಉತ್ಪನ್ನಗಳ ಮಾರಾಟ, ಸಾಮಾಜಿಕ ಜಾಲತಾಣಗಳಲ್ಲಿ ಹಣದ ನೆರವು ಪಡೆಯಲು, ಇತ್ಯಾದಿಗಳಿಗೆ ಬಳಸುತ್ತಾರೆ ಎಂಬ ಕುರಿತೂ ಬೆಳಕು ಚೆಲ್ಲಲಿದೆ.

ಕ್ರಿಮಿನಲ್ ಉದ್ದೇಶಕ್ಕಾಗಿ ತ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನದ ಬಳಕೆ, ರೊಬೋಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಮೆಷಿನ್ ಲರ್ನಿಂಗ್), ಅನ್ ಮ್ಯಾನ್ಡ್ ಏರಿಯಲ್ ಸಿಸ್ಟಮ್ಸ್ ಹಾಗೂ ಸಿಂತೆಟಿಕ್ ಬಯೋ ಟೆಕ್ನಾಲಜಿ ಬಳಕೆಯನ್ನೂ ವಿಚಾರಿಸಲಾಗುವುದು.

ಸಮಿತಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಯೋಜಕರಾದ ಜೆನ್ನಿಫರ್ ಬ್ರಾಮ್ಲೆಟ್ ಅವರು ಸದಸ್ಯ ರಾಷ್ಟ್ರಗಳು ಈಗಾಗಲೇ ಹೆಚ್ಚುತ್ತಿರುವ ಡ್ರೋನ್ ಬಳಕೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳುತ್ತಿವೆ ಎಂದಿದ್ದಾರೆ.

ವಿಮಾನ ನಿಲ್ದಾಣಗಳು ಹಾಗೂ ಪ್ರಮುಖ ಪ್ರದೇಶಗಳನ್ನು ಹಾರಾಟ ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಕಾರಣದಿಂದ ಡ್ರೋನ್ ಉತ್ಪಾದನಾ ಸಂಸ್ಥೆಗಳಿಗೆ ಜಿಯೋ ಲಾಕಿಂಗ್ ವ್ಯವಸ್ಥೆ ಅಳವಡಿಸುವ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ನಿರ್ಬಂಧಿತ ಪ್ರದೇಶಗಳ ಬಳಿ ಬಂದಾಗ ಡ್ರೋನ್‌ಗಳು ಸ್ವಯಂಚಾಲಿತವಾಗಿ ನಿಲುಗಡೆಗೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ. ಭವಿಷ್ಯದಲ್ಲಿ ಡ್ರೋನ್‌ಗಳನ್ನು ಹೇಗೆ ಮಾರಾಟ ಮಾಡಬಹುದು ಮತ್ತು ಅವುಗಳನ್ನು ಯಾರು ಖರೀದಿಸಬಹುದು ಎಂಬ ಕುರಿತೂ ಹಲವು ಚರ್ಚೆಗಳು ನಡೆಯುತ್ತಿವೆ ಎಂದರು.

ಡಾರ್ಕ್ ವೆಬ್ ಎಂದರೇನು?
ಪ್ರಸ್ತುತ ಉಪಯೋಗದಲ್ಲಿರುವ ವರ್ಲ್ಡ್ ವೈಡ್ ವೆಬ್ ಅನ್ನು (ಡಬ್ಲ್ಯು ಡಬ್ಲ್ಯು ಡಬ್ಲ್ಯು) ಸಾಮಾನ್ಯವಾಗಿ ಒಂದು ಮಂಜುಗಡ್ಡೆಗೆ ಹೋಲಿಸಲಾಗುತ್ತದೆ. ಈ ತೆರೆದ ಆವೃತ್ತಿಯ ವೆಬ್ ಬಹುತೇಕ ಎಲ್ಲರಿಗೂ ಲಭ್ಯವಿದೆ. ಆದರೆ ಡೀಪ್ ವೆಬ್ ಸಾಮಾನ್ಯ ಸರ್ಚ್ ಇಂಜಿನ್‌ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದನ್ನು ಸಾಮಾನ್ಯ ಜನರು ಬಳಸುವುದು ಕಷ್ಟಕರವಾಗುತ್ತದೆ. ಡೀಪ್ ವೆಬ್ ನಲ್ಲಿ ಲಭ್ಯವಿರುವ ಬಹುತೇಕ ಮಾಹಿತಿಗಳು ಅಕ್ರಮವಾಗಿದ್ದು, ಪಾಸ್‌ವರ್ಡ್ ಹೊಂದಿರುವ ಅಕೌಂಟ್‌ಗಳನ್ನು ಬಳಸಿ ಅವುಗಳ ವಿವಿಧ ಸೇವೆಗಳನ್ನು ಪಡೆಯಬೇಕು. ಡಾರ್ಕ್ ನೆಟ್ ಅಥವಾ ಡಾರ್ಕ್ ವೆಬ್ ಡೀಪ್ ವೆಬ್‌ನ ಅತ್ಯಂತ ಸಣ್ಣ ಭಾಗವಾಗಿದ್ದು, ಕೇವಲ 0.01% ಮಾತ್ರ ಹೊಂದಿದೆ. ಅದನ್ನು ಆನಿಯನ್ ರೂಟರ್ (ಟಾರ್ ಬ್ರೌಸರ್) ಅಥವಾ ಇನ್‌ವಿಸಿಬಲ್ ಇಂಟರ್‌ನೆಟ್ ಪ್ರಾಜೆಕ್ಟ್ (ಐ2ಪಿ) ಥರದ ಪ್ರತ್ಯೇಕ ಬ್ರೌಸರ್‌ಗಳನ್ನು ಬಳಸಿ ಉಪಯೋಗಿಸಬೇಕಾಗುತ್ತದೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿ, ಸ್ಥಳದ ಕುರಿತ ಮಾಹಿತಿಗಳನ್ನು ಸಿಗದಂತೆ ತಡೆಯುತ್ತದೆ. ಡಾರ್ಕ್ ವೆಬ್‌ನಲ್ಲಿ ಸಾವಿರಾರು ಜಾಲತಾಣಗಳಿದ್ದು, ಅನಾಮಧೇಯತೆ ತಂತ್ರಜ್ಞಾನಗಳನ್ನು ಬಳಸಿ, ಇಂಟರ್‌ನೆಟ್ ಪ್ರೊಟೋಕಾಲ್ (ಐಪಿ) ಅಡ್ರೆಸ್ ಬಚ್ಚಿಡಲು ನೆರವಾಗುತ್ತದೆ. ಇದರಲ್ಲಿರುವ ಬಹುತೇಕ ಮಾಹಿತಿಗಳು, ಸಂವಹನಗಳು ಕಾನೂನು ಬಾಹಿರ ಚಟುವಟಿಕೆಗಳಾದ ಡ್ರಗ್ಸ್ ಹಾಗೂ ಆಯುಧ ಸಾಗಣೆ, ನಕಲಿ ದಾಖಲೆ ಸೃಷ್ಟಿ, ಪೋರ್ನೋಗ್ರಫಿ, ಹಣಕಾಸು ಅವ್ಯವಹಾರ, ಭಯೋತ್ಪಾದನಾ ಸಂವಹನ ಹಾಗೂ ಉಗ್ರಗಾಮಿ ಯೋಜನೆಗಳಿಗೆ ಸಂಬಂಧಿಸಿವೆ.

ಕ್ರಿಪ್ಟೋ ಕರೆನ್ಸಿ ಎಂದರೇನು?
ಕ್ರಿಪ್ಟೋ ಕರೆನ್ಸಿಯನ್ನು ಅರ್ಥ ಮಾಡಿಕೊಳ್ಳುವ ಮೊದಲು ನಾವು ಸಾಂಪ್ರದಾಯಿಕ ಹಣವನ್ನು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಹಣ ಜಾರಿಗೆ ಬರುವ ಮೊದಲು ಜನರು ಬಾರ್ಟರ್ ವ್ಯವಸ್ಥೆ, ಅಂದರೆ ತಮ್ಮಲ್ಲಿರುವ ವಸ್ತು ಅಥವಾ ಸೇವೆಯ ಬದಲಿಗೆ ಇನ್ನೊಂದನ್ನು ಪಡೆದುಕೊಳ್ಳುತ್ತಿದ್ದರು. ಆದರೆ ವಸ್ತು ಮತ್ತು ಸೇವೆಗಳು, ಜನರು ಅಪಾರ ಸಂಖ್ಯೆಯಲ್ಲಿ ಇರುವುದರಿಂದ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲ.

ಆದರೆ ಹಣದ ಮೌಲ್ಯ ಒಂದೇ ಆಗಿರುತ್ತದೆ. ಮುಂದೆ ಅಗತ್ಯ ಬಿದ್ದಾಗ ಅದನ್ನು ನೀಡಿ, ಅದರ ಮೌಲ್ಯದ ವಸ್ತು ಅಥವಾ ಸೇವೆಗಳನ್ನು ಪಡೆದುಕೊಳ್ಳಬಹುದು. ಆದರೆ ಕೆಲವರು ಹಣವನ್ನೂ ನಕಲಿಯಾಗಿ ಮಾಡಲು ಆರಂಭಿಸಿದರು. ಆದರೆ ಜನರು ಅವರ ಸಮಯ ಮತ್ತು ಶ್ರಮವನ್ನು ಐಒಯುಗಳಾಗಿ ಪರಿವರ್ತಿಸಲು ಆರಂಭಿಸಿದಾಗ, ಒಂದಷ್ಟು ಜನ ಐಓಯುಗಳನ್ನು ಫೋರ್ಜ್ ಮಾಡತೊಡಗಿದರು. ಹಾಗೂ ಅದನ್ನು ನಕಲಿಯಾಗಿಸುವುದು ಹಾನಿಕರವಾಗಿತ್ತು.

ಈ ಕಾರಣಕ್ಕಾಗಿ ಹಣ ಜಗತ್ತಿನ ವಿರಳ ಅಥವಾ ಸೀಮಿತ ಸಂಪನ್ಮೂಲಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿತ್ತು. ಇದಕ್ಕೆ ಚಿನ್ನ ಒಂದು ಉದಾಹರಣೆಯಾಗಿದೆ. ಚಿನ್ನ ಒಂದು ವಿರಳ ಲೋಹವಾಗಿದ್ದು, ಪ್ರಕೃತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಲಭಿಸುತ್ತದೆ. ಆದ್ದರಿಂದ ಯಾರ ಬಳಿಯಾದರೂ ಚಿನ್ನ ಇದ್ದರೆ ಅದರಲ್ಲಿ ಎರಡೇ ಸಾಧ್ಯತೆಗಳಿರುತ್ತವೆ. ಒಂದು ಅವರು ಪ್ರಕೃತಿಯಿಂದ ಚಿನ್ನ ಪಡೆದುಕೊಂಡಿದ್ದಾರೆ. ಎರಡು, ನೇರವಾಗಿ ಪ್ರಕೃತಿಯಿಂದ ಚಿನ್ನ ಪಡೆದವರಿಂದ ತೆಗೆದುಕೊಂಡಿದ್ದಾರೆ.

ಈಗ ಸಾಕಷ್ಟು ಸಮಯ ಸರಿದು ಹೋಗಿದೆ. ಚಿನ್ನದ ಸ್ಟ್ಯಾಂಡರ್ಡ್ ನಿಂದ ಜನರು ಸಾಕಷ್ಟು ಮುಂದೆ ಸಾಗಿದ್ದಾರೆ. ಉದಾಹರಣೆಗೆ, ಅಮೆರಿಕಾದಲ್ಲಿ ನಗದು ಹಣ ಚಿನ್ನಕ್ಕೆ ಈಗ ಐಒಯು ಆಗಿ ಉಳಿದಿಲ್ಲ. ಅದರ ಬದಲಿಗೆ ನಗದೇ ಒಂದು ಸಂಪನ್ಮೂಲವಾಗಿದೆ. ಸರ್ಕಾರ ನಗದನ್ನು ಸೃಷ್ಟಿಸುತ್ತದೆ. ಆದ್ದರಿಂದ ಅದು ವಿರಳವಾಗಿದ್ದು, ನಕಲು ಮಾಡುವುದರಿಂದ ರಕ್ಷಿಸಲ್ಪಡುತ್ತದೆ. ಈ ವಿಶ್ವಾಸ ಮತ್ತು ಬೆಲೆಗಳೇ ಹಣಕ್ಕೆ ಇಷ್ಟು ಬೆಲೆ ತಂದಿವೆ.

ಕ್ರಿಪ್ಟೋ ಕರೆನ್ಸಿಗಳು ಮಹತ್ವ ಹೊಂದಿರುವ ಡಿಜಿಟಲ್ ಕರೆನ್ಸಿಯ ಒಂದು ಭಾಗವಾಗಿದೆ. ಈ ವಿಚಾರದಲ್ಲಿ ಪೂರ್ತಿ ನಕಲು ಮಾಡುವುದೇ ಪ್ರಮುಖ ಸವಾಲಾಗಿ ಚರ್ಚಿಸಲಾಗಿದೆ. ಅದಲ್ಲದೆ, ಯಾವುದೇ ವಸ್ತುವಿನ ಡಿಜಿಟಲ್ ನಕಲು ನಿರ್ಮಿಸುವುದು ಅತ್ಯಂತ ಸುಲಭವಾಗಿದೆ.

ಅದೇನೇ ಇದ್ದರೂ, ಕ್ರಿಪ್ಟೋ ಕರೆನ್ಸಿಗಳು ಜನರಿಗೆ ಅವರ ಶ್ರಮವನ್ನು ಡಿಜಿಟಲ್ ಟೋಕನ್ ವ್ಯವಸ್ಥೆಗೆ ಪರಿವರ್ತಿಸಲು ಸಾಧ್ಯವಾಗಿಸಿವೆ. ಈ ಟೋಕನ್‌ಗಳು ನಕಲು ಮಾಡದಂತೆ ಸುರಕ್ಷಿತವಾಗಿವೆ. ಸರಳವಾಗಿ ಹೇಳುವುದಾದರೆ, ಅವುಗಳು ಡಿಜಿಟಲ್ ಲೋಕದಲ್ಲಿ ಚಿನ್ನವಿದ್ದ ಹಾಗೇ. ನೈಜವಾಗಿ ಈ ಟೋಕನ್‌ಗಳು ವಿರಳವಾಗಿದ್ದು, ಚಿನ್ನದಂತೆಯೇ ಹಣದ ಅಂಶವನ್ನು ಹೊಂದಿವೆ. ಇಲ್ಲಿ “ಮೈನಿಂಗ್” ಎನ್ನುವುದು ಚಿನ್ನಕ್ಕೆ ಗಣಿಗಾರಿಕೆ ನಡೆಸುವಂತೆಯೇ. ಇದು ವ್ಯವಸ್ಥೆಗೆ ಹೊಸ ವಸ್ತುಗಳನ್ನು ಸೇರಿಸಲು ಇರುವ ಏಕೈಕ ಮಾರ್ಗವಾಗಿದೆ. ಬಳಿಕ ಅದನ್ನು ನಗದಿನ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಬಿಟ್ ಕಾಯಿನ್ನಿನ ವಿಚಾರದಲ್ಲಿ, ಮೈನಿಂಗ್ ಸಂಪೂರ್ಣ ವ್ಯವಸ್ಥೆಯನ್ನು ಸುರಕ್ಷಿತವಾಗಿ ಮತ್ತು ಕಾರ್ಯಾಚರಿಸುವಂತೆ ಮಾಡುತ್ತದೆ.

ಕ್ರಿಪ್ಟೋ ಕರೆನ್ಸಿಗಳು ಹೇಗೆ ಭಯೋತ್ಪಾದನೆಗೆ ನೆರವು ನೀಡುತ್ತವೆ?
ಕ್ರಿಪ್ಟೋ ಕರೆನ್ಸಿಯನ್ನು ಭಯೋತ್ಪಾದನೆಗೆ ಹೇಗೆ ಬಳಸಲಾಗುತ್ತದೆ ಎನ್ನುವುದಕ್ಕಿಂತ, ಭಯೋತ್ಪಾದನಾ ಸಂಘಟನೆಗಳು ಹಣವನ್ನು ಹೇಗೆ ಬಳಸುತ್ತವೆ ಎಂಬ ವಿಚಾರವನ್ನು ಗಮನಿಸಬೇಕಾಗುತ್ತದೆ.

ಭಯೋತ್ಪಾದಕ ಸಂಘಟನೆಗಳ ಹಣದ ಉಪಯೋಗವನ್ನು ಮೂರು ಭಾಗಗಳಲ್ಲಿ ಅಧ್ಯಯನ ಮಾಡಬಹುದು. ರಶೀದಿ, ನಿರ್ವಹಣೆ, ಹಾಗೂ ಖರ್ಚು. ಈ ಮೂರೂ ಭಾಗಗಳೂ ಭಯೋತ್ಪಾದನಾ ಸಂಘಟನೆಗಳಿಗೆ ಕ್ರಿಪ್ಟೋ ಕರೆನ್ಸಿಯ ಬಳಕೆಗೆ ಸಾಕಷ್ಟು ಅಡ್ಡಿಯನ್ನು ಉಂಟುಮಾಡುತ್ತವೆ. ದೊಡ್ಡ ಪ್ರಮಾಣದ ರಶೀದಿ ಹೊಂದಿರುವ ಮೊತ್ತವನ್ನು ಅನಾಮಧೇಯವಾಗಿ ನಿರ್ವಹಿಸುವುದಾಗಲಿ, ಖರ್ಚು ಮಾಡುವುದಾಗಲಿ ಅತ್ಯಂತ ಕಷ್ಟಕರವಾಗಿರುತ್ತದೆ. ಯಾಕೆಂದರೆ ಕ್ರಿಪ್ಟೋ ಕರೆನ್ಸಿಯ ನಿರ್ವಹಣೆ ಮತ್ತು ವೆಚ್ಚಕ್ಕೆ ಒಂದು ವ್ಯವಸ್ಥೆಯ ಅನಿವಾರ್ಯತೆ ಇದೆ. ಪ್ರಸ್ತುತ ಭಯೋತ್ಪಾದನಾ ಸಂಘಟನೆಗಳು ಕ್ರಿಪ್ಟೋ ಕರೆನ್ಸಿಯನ್ನು ಬಳಸುವ ಕುರಿತಾಗಲೀ, ಈ ಉದ್ದೇಶ ಹೊಂದಿರುವ ಕುರಿತಾಗಲಿ ಯಾವ ಸಾಕ್ಷಿಯೂ ಲಭ್ಯವಿಲ್ಲ. ಆದರೆ ಭಯೋತ್ಪಾದನೆಗೆ ಹಣದ ಪೂರೈಕೆ ತಡೆದ ಹಾಗೇ, ಕ್ರಿಪ್ಟೋ ಕರೆನ್ಸಿ ಅಭಿವೃದ್ಧಿ ಹೊಂದಿದಂತೆ ಈ ಪರಿಸ್ಥಿತಿ ಬದಲಾಗುವ ಸಾಧ್ಯತೆಗಳಿವೆ.

ಭಯೋತ್ಪಾದನಾ ಸಂಘಟನೆಗಳು ಕ್ರಿಪ್ಟೋ ಕರೆನ್ಸಿಯನ್ನು ಬಳಸುತ್ತವೆಯೇ ಇಲ್ಲವೇ ಎನ್ನುವುದು ಲಭ್ಯವಿರುವ ತಂತ್ರಜ್ಞಾನ ಮತ್ತು ಅದರ ಗುಣಗಳ ಮೇಲೆ ಆಧಾರಿತವಾಗಿದೆ. ನೂತನ ಕ್ರಿಪ್ಟೋ ಕರೆನ್ಸಿಗಳು ಬಂದಾಗ ಅವುಗಳಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಈಗ ಬಳಕೆಯಲ್ಲಿರುವ ಕ್ರಿಪ್ಟೋ ಕರೆನ್ಸಿಗಳಿಗಿಂತ ಹೆಚ್ಚು ಸೆಳೆಯುವ ಗುಣಗಳಿರಬಹುದು. ಒಂದು ವೇಳೆ ಭವಿಷ್ಯದ ಕ್ರಿಪ್ಟೋ ಕರೆನ್ಸಿ ಹೆಚ್ಚಿನ ಮೊತ್ತದ ವ್ಯವಹಾರದಲ್ಲಿ ಪ್ರಸ್ತುತ ಇರುವ ಬಿಟ್ ಕಾಯಿನ್‌ಗಿಂತ ಹೆಚ್ಚಿನ ಖಾಸಗಿತನವನ್ನು ಒದಗಿಸಲು ಸಾಧ್ಯ ಎಂದಾದರೆ ಭಯೋತ್ಪಾದಕ ಸಂಘಟನೆಗಳು ಅವುಗಳನ್ನು ಆಯ್ದ ಚಟುವಟಿಕೆಗಳಲ್ಲಿ ಬಳಸಲು ಹೆಚ್ಚು ಸಿದ್ಧವಾಗಬಲ್ಲವು ಮತ್ತು ಅದನ್ನು ಜ಼ೆಡ್ ಕ್ಯಾಷ್‌ಗಿಂತ ಹೆಚ್ಚಾಗಿ ಬಳಸಬಹುದು. ಅದರೊಡನೆ, ನಿರ್ದಿಷ್ಟ ಭಯೋತ್ಪಾದಕ ಸಂಘಟನೆಗಳು ಕ್ರಿಪ್ಟೋ ಕರೆನ್ಸಿಯಿಂದ ಏನನ್ನು ಬಯಸುತ್ತವೆ ಹಾಗೂ ಅವುಗಳನ್ನು ಲಭ್ಯವಿರುವ ಕ್ರಿಪ್ಟೋ ಕರೆನ್ಸಿಗಳ ಗುಣ ಲಕ್ಷಣಗಳೊಡನೆ ಹೋಲಿಸಿ ನೋಡಬೇಕಾಗುತ್ತದೆ.

ಎಫ್ಎಟಿಎಫ್ ಗ್ರೇ ಲಿಸ್ಟ್ ಎಂದರೇನು?
ನಾಲ್ಕು ವರ್ಷಗಳಿಗೂ ಹಿಂದೆ, ಪಾಕಿಸ್ತಾನ ತನ್ನಲ್ಲಿ ನಡೆಯುವ ಅಕ್ರಮ ಹಣ ವರ್ಗಾವಣೆಯ ಅಪಾಯವನ್ನು ತಡೆಯಲು ವಿಫಲವಾದ ಕಾರಣ ಎಫ್ಎಟಿಎಫ್ ಪಾಕಿಸ್ತಾನವನ್ನು ತನ್ನ ಬೂದು ಪಟ್ಟಿಗೆ ಸೇರಿಸಿತು. ಈ ಅಕ್ರಮ ಹಣ ವರ್ಗಾವಣೆ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವ ಸಾಧ್ಯತೆಗಳಿದ್ದವು. ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಬಿಳಿ ಪಟ್ಟಿಗೆ ಸೇರಿಸಲು 39ರಲ್ಲಿ 12 ಮತಗಳ ಅಗತ್ಯವಿದೆ. ಕಪ್ಪು ಪಟ್ಟಿಗೆ ಸೇರದಂತೆ ತಡೆಯಲು ಮೂರು ರಾಷ್ಟ್ರಗಳ ಮತ ಬೇಕಾಗುತ್ತದೆ. ಪಾಕಿಸ್ತಾನ ತಾನು ಕಪ್ಪು ಪಟ್ಟಿಗೆ ಸೇರಿದಂತೆ ತಡೆಯಲು ತನ್ನ ಮಿತ್ರ ರಾಷ್ಟ್ರಗಳಾದ ಚೀನಾ, ಟರ್ಕಿ ಹಾಗೂ ಮಲೇಷಿಯಾಗಳ ಬೆಂಬಲ ಪಡೆದಿದೆ.

ಒಂದು ವೇಳೆ ಯಾವುದಾದರೂ ರಾಷ್ಟ್ರ ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸುತ್ತದೆ ಎಂದರೆ ಅದನ್ನು ಎಫ್ಎಟಿಎಫ್ ಬೂದು ಪಟ್ಟಿಗೆ ಸೇರಿಸುತ್ತದೆ. ಈ ಪ್ರಕ್ರಿಯೆ ಆ ದೇಶದ ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣಕಾಸಿನ ನೆರವು ತಡೆಯುವ ಕಾನೂನುಗಳಲ್ಲಿ ವೈಫಲ್ಯವಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಈ ಪ್ರಕ್ರಿಯೆ ಅತ್ಯಂತ ತೀಕ್ಷ್ಣವಾದ ಕಪ್ಪು ಪಟ್ಟಿಗೆ ಸೇರದಂತೆ ಎಚ್ಚರ ವಹಿಸಲು ಆ ರಾಷ್ಟ್ರಕ್ಕೆ ಎಚ್ಚರಿಕೆಯ ಗಂಟೆಯಾಗಿರುತ್ತದೆ. ಎಫ್ಎಟಿಎಫ್ ಕಪ್ಪು ಪಟ್ಟಿಯಲ್ಲಿ ಉತ್ತರ ಕೊರಿಯಾ ಹಾಗೂ ಇರಾನ್ ಎರಡೇ ರಾಷ್ಟ್ರಗಳಿವೆ.

ಭವಿಷ್ಯದ ಮೇಲಿನ ಪರಿಣಾಮಗಳು
ಮುಂದಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿಯಂತಹ ಪರ್ಯಾಯ ಹಣದ ಬಳಕೆ ಹೆಚ್ಚಾಗುತ್ತವೆ. ಇದರೊಡನೆ ಇಂಟರ್‌ನೆಟ್ ಸೇವೆಗಳು ಅತ್ಯಂತ ವ್ಯಾಪಕವಾಗಿ ಲಭ್ಯವಾಗುವುದರಿಂದ, ಡಿಜಿಟಲ್‌ ವ್ಯವಹಾರಗಳ ಕಾನೂನುಬದ್ಧತೆಯನ್ನು ಗುರುತಿಸುವುದು ಹಾಗೂ ಖಚಿತಪಡಿಸುವುದು ಕಷ್ಟಕರವಾಗಲಿದೆ. ಆದ್ದರಿಂದ ಹಣಕಾಸಿನ ಮೋಸದ ಅಥವಾ ದುರುದ್ದೇಶಪೂರಿತ ವರ್ಗಾವಣೆಗಳು ನಡೆದರೆ, ಡಿಜಿಟಲ್ ವ್ಯವಹಾರದಲ್ಲಿರುವ ಬಳಕೆದಾರರ ಹೆಸರು ನೋಡಿ ಅದು ಓರ್ವ ನೈಜ ವ್ಯಕ್ತಿಯದೇ ಎಂದು ಹೇಳುವುದು ಕಷ್ಟಕರವಾಗಲಿದೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ಪೂರೈಕೆ ಯಾವಾಗಲೂ ಡ್ರಗ್ಸ್ ಪೂರೈಕೆಯಂತಹ ಕ್ರಿಮಿನಲ್ ಕಾರ್ಯಾಚರಣೆಗಳು ಹಾಗೂ ವ್ಯವಹಾರಗಳನ್ನು ಒಳಗೊಂಡಿರುತ್ತವೆ. ಮಾದಕ ದ್ರವ್ಯಗಳ ಸಾಗಾಣಿಕೆಗೆ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಗಳು ಚಿನ್ನದ ಹಾದಿ ಹಾಕಿಕೊಡುತ್ತಿವೆ. ಆ ದೇಶಗಳಲ್ಲಿ ಬೆಳೆದ ಮಾದಕ ವಸ್ತುಗಳನ್ನು ಭಯೋತ್ಪಾದಕರು ತಮ್ಮ ಗುರಿಯಾದ ಭಾರತದಂತಹ ರಾಷ್ಟ್ರಗಳಲ್ಲಿ ಹಂಚಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಅವರು ಭಾರತದಲ್ಲಿ ನಗದು ವ್ಯವಹಾರ ನಡೆಸಿ, ಯಾವುದೇ ಡಿಜಿಟಲ್ ವ್ಯವಹಾರದ ಸಾಕ್ಷಿ ಉಳಿಯದಂತೆ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ | ಭಯೋತ್ಪಾದನೆ ನಿಗ್ರಹಕ್ಕೆ ಚೀನಾ ಅಡ್ಡಗಾಲು; ಅಮೆರಿಕ-ಭಾರತ ಜಂಟಿ ಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಹಿನ್ನಡೆ

Exit mobile version