ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ʼಕಾನೂನುಬಾಹಿರ ಸಂಘಟನೆʼ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ. ಈ ಸಂಘಟನೆಗೆ ಅಧಿಕೃತವಾಗಿ 16 ವರ್ಷಗಳ, ಅದಕ್ಕೂ ಹಿಂದೆ ಬೇರೆ ಹೆಸರಿನಲ್ಲಿ ನಡೆಸುತ್ತಿದ್ದ ದೇಶದ್ರೋಹಿ ಚಟುವಟಿಕೆಗಳ ಇತಿಹಾಸವಿದೆ. ೨೭ ಕೊಲೆಗಳ ಹಿಂದೆ ಇದರ ಸಂಘಟನೆಯ ಸಂಚು ಇದೆ ಎಂದು ಕೇರಳ ಸರ್ಕಾರದ ಅಫಿಡವಿಟ್ ಹೇಳಿದೆ.
ಭಯೋತ್ಪಾದನೆ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೆ.೨2ರಂದು ಬೆಳಗ್ಗೆ ರಾಷ್ಟ್ರವ್ಯಾಪಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿ ಹದಿನೈದಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿತ್ತು. ಬಳಿಕ ಸೆ.27ರಂದು ಗುಪ್ತಚರ ಇಲಾಖೆಗಳ ಸೂಚನೆಯಂತೆ ಸ್ಥಳೀಯ ಪೊಲೀಸರು ಪಿಎಫ್‌ಐ ಕಚೇರಿಗಳು ಹಾಗೂ ನಾಯಕರ ಮನೆಗಳಿಗೆ ದಾಳಿ ಮಾಡಿ 200ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದರು. ಇವರ ವಿಚಾರಣೆಯ ಸಂದರ್ಭದಲ್ಲಿ ಪಿಎಫ್‌ಐಯ ಕೆಲ ನಾಯಕರು ನಡೆಸಲು ಉದ್ದೇಶಿಸಿದ್ದ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯಗಳ ಹುನ್ನಾರ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಫ್‌ಐ ಬ್ಯಾನ್ ಆಗಬಹುದು ಎಂಬ ಸೂಚನೆ ಅದಾಗಲೇ ಸಿಕ್ಕಿತ್ತು. ಅದೀಗ ನಿಜವಾಗಿದೆ.
PFI ಎಂದರೇನು?
ದಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಫೆಡರೇಶನ್ ಆಫ್ ಇಂಡಿಯಾ (SIMI) ಎಂಬ ಸಂಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ 1977ರಲ್ಲಿ ರಚನೆಯಾಯಿತು. ʼʼಭಾರತವನ್ನು ಇಸ್ಲಾಮೀಕರಣಗೊಳಿಸುವುದು, ಹಿಂದೂ ಹಿಡಿತದಿಂದ ಮುಕ್ತಗೊಳಿಸುವುದುʼʼ ಸಿಮಿಯ ಘೋಷಿತ ಉದ್ದೇಶವಾಗಿತ್ತು. ಇದು ಭಾರತದ ವಿರುದ್ಧ ಜಿಹಾದ್ ಸಾರಿತ್ತು. 9/11 ಉಗ್ರ ದಾಳಿಯ ಬಳಿಕ 2001ರಲ್ಲಿ ಇದನ್ನು ಭಾರತ ಸರ್ಕಾರ ʼದೇಶವಿರೋಧಿ ಸಂಘಟನೆʼ ಎಂದು ಹೆಸರಿಸಿ ನಿಷೇಧಿಸಿತು.
ಇದಾಗಿ ಕೆಲವೇ ಸಮಯದಲ್ಲಿ, ಸಿಮಿಯಲ್ಲಿದ್ದ ನಾಯಕರು ಬೇರೆ ಹಲವಾರು ಸಂಘಟನೆಗಳ ಹೆಸರಿನಲ್ಲಿ ಒಟ್ಟಾಗತೊಡಗಿದರು. ದಕ್ಷಿಣ ಭಾರತದಲ್ಲಿ ಮೂರು ಮುಸ್ಲಿಂ ಸಂಘಟನೆಗಳು ಕ್ರಿಯಾಶೀಲವಾದವು. ಕೇರಳದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (NDF), ಕರ್ನಾಟಕದಲ್ಲಿ ಫೋರಂ ಫಾರ್ ಡಿಗ್ನಿಟಿ (FFD) ಮತ್ತು ತಮಿಳುನಾಡಿನ ಮನಿತಾ ನೀತಿ ಪಸರೈ. ಇವು ಮೂರೂ 2007ರಲ್ಲಿ ವಿಲೀನಗೊಂಡು PFI ಹುಟ್ಟಿಕೊಂಡಿತು. ನವೆಂಬರ್ 2006ರಲ್ಲಿ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದ ಸಭೆಯಲ್ಲಿ ಮೂರೂ ಸಂಘಟನೆಗಳನ್ನು ವಿಲೀನ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. 2007ರ ಫೆಬ್ರವರಿ 16ರಂದು “ಎಂಪವರ್ ಇಂಡಿಯಾ ಕಾನ್ಫರೆನ್ಸ್” ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆದ ರ್ಯಾಲಿಯಲ್ಲಿ PFI ರಚನೆಯನ್ನು ಔಪಚಾರಿಕವಾಗಿ ಘೋಷಿಸಲಾಯಿತು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ನಿಷೇಧದ ನಂತರ ಹೊರಹೊಮ್ಮಿದ ಪಿಎಫ್‌ಐ, ಅಲ್ಪಸಂಖ್ಯಾತರು, ದಲಿತರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯೆಂದು ತನ್ನನ್ನು ತಾನು ಬಿಂಬಿಸಿಕೊಂಡಿದೆ. ಕೇರಳದಲ್ಲಿ ಗಟ್ಟಿ ಅಸ್ತಿತ್ವವನ್ನು ಹೊಂದಿರುವ ಇದರ ಕೇಡರ್‌ಗಳು ಆಗಾಗ ಕರ್ನಾಟಕದಲ್ಲಿಯೂ ಕೋಲಾಹಲ ಎಬ್ಬಿಸಲು ಯತ್ನಿಸಿದ್ದಾರೆ. ಮುಸ್ಲಿಮರ ಬೆಂಬಲವನ್ನು ಸಂಗ್ರಹಿಸಲು ಯತ್ನಿಸಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ಹೆಚ್ಚು ಸಕ್ರಿಯವಾಗುತ್ತಾರೆ. ಪಿಎಫ್‌ಐ ಎಂದಿಗೂ ಚುನಾವಣೆಗೆ ಸ್ಪರ್ಧಿಸಿಲ್ಲ. ಮುಸ್ಲಿಮರಲ್ಲಿ ಸಾಮಾಜಿಕ ಮತ್ತು ಇಸ್ಲಾಮಿಕ್ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವ ಸಂಘಟನೆಯಂತೆ ಇದು ಗುರುತಿಸಿಕೊಂಡಿದೆ. PFI ತನ್ನ ಸದಸ್ಯರ ಕುರಿತು ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ. ಹೀಗಾಗಿ ಕಾರ್ಯಕರ್ತರ ಬಂಧನವಾದರೂ ಪಿಎಫ್‌ಐ ಬಗೆಗೆ ಇದುವರೆಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ.
ಕೇರಳದಲ್ಲಿ PFI ಹೆಜ್ಜೆಗುರುತು
ಕೇರಳದಲ್ಲಿ PFI ಹೆಚ್ಚು ಗಟ್ಟಿಯಾದ ಅಸ್ತಿತ್ವವನ್ನು ಹೊಂದಿದೆ. ಕೊಲೆ, ದಂಗೆ, ಬೆದರಿಕೆ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದ ಆರೋಪಗಳನ್ನು ಪದೇ ಪದೆ ಎದುರಿಸಿದೆ. 2012ರಲ್ಲಿ, ಕಾಂಗ್ರೆಸ್‌ನ ಉಮ್ಮನ್ ಚಾಂಡಿ ನೇತೃತ್ವದ ಕೇರಳ ಸರ್ಕಾರ ʼʼಪಿಎಫ್‌ಐ ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ಇನ್ನೊಂದು ರೂಪವಾಗಿದೆ” ಎಂದು ಹೈಕೋರ್ಟ್‌ಗೆ ತಿಳಿಸಿತ್ತು. ಪಿಎಫ್‌ಐ ಕಾರ್ಯಕರ್ತರು 27 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಹೆಚ್ಚಾಗಿ ಸಿಪಿಎಂ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಈ ಕೊಲೆಗಳ ಉದ್ದೇಶ ಸಮಾಜದಲ್ಲಿ ಕೋಮುದ್ವೇಷದ ವಾತಾವರಣ ಸೃಷ್ಟಿಸುವುದು ಎಂದು ಸರ್ಕಾರದ ಅಫಿಡವಿಟ್ ತಿಳಿಸಿದೆ.
ಎರಡು ವರ್ಷಗಳ ನಂತರ, ಕೇರಳ ಸರ್ಕಾರ ಮತ್ತೊಂದು ಅಫಿಡವಿಟ್ ಅನ್ನು ಹೈಕೋರ್ಟ್‌ಗೆ ಸಲ್ಲಿಸಿತು. ಅದರಲ್ಲಿ ʼʼಪಿಎಫ್‌ಐ ಸಮಾಜವನ್ನು ಇಸ್ಲಾಮೀಕರಣಗೊಳಿಸುವ ರಹಸ್ಯ ಕಾರ್ಯಸೂಚಿಯನ್ನು ಹೊಂದಿದೆ. ಇದಕ್ಕಾಗಿ ಯುವಕರ ನೇಮಕಾತಿಯಲ್ಲಿ ತೊಡಗಿದೆʼʼ ಎಂದು ಹೇಳಿತು. ʼʼಇಸ್ಲಾಮಿನ ಶತ್ರುಗಳಾಗಿರುವ ವ್ಯಕ್ತಿಗಳನ್ನು ಗುರುತಿಸಿ ನಿರ್ಮೂಲನೆ ಮಾಡುವುದುʼʼ ಅನ್ನು ಪಿಎಫ್‌ಐ ಕಾರ್ಯಕರ್ತರಿಗೆ ಬೋಧಿಸಲಾಗುತ್ತಿದೆ ಎಂದಿದೆ. ಕೇರಳದಲ್ಲಿ PFI ನ ಮುಖವಾಣಿ ಆಗಿರುವ ತೇಜಸ್ ಪತ್ರಿಕೆಗೆ ಮಾರ್ಚ್ 2013ರಿಂದ ಸರ್ಕಾರಿ ಜಾಹೀರಾತುಗಳನ್ನು ನಿರಾಕರಿಸಲಾಯಿತು. ಇದನ್ನು ಪ್ರಶ್ನಿಸಿ ಪಿಎಫ್‌ಐ ಅರ್ಜಿ ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ 2014ರ ಅಫಿಡವಿಟ್ ಕೊಡಲಾಗಿತ್ತು. ರಾಜ್ಯದಲ್ಲಿ 27 ಕೋಮುಪ್ರೇರಿತ ಕೊಲೆಗಳು, 86 ಕೊಲೆ ಯತ್ನ ಪ್ರಕರಣಗಳು ಮತ್ತು 106 ಕೋಮುವಾದಿ ಪ್ರಕರಣಗಳಲ್ಲಿ PFI ಮತ್ತು ಅದರ ಸಹಸಂಸ್ಥೆ ರಾಷ್ಟ್ರೀಯ ಅಭಿವೃದ್ಧಿ ಫ್ರಂಟ್ (NDF) ನ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಅಫಿಡವಿಟ್ ಪುನರುಚ್ಚರಿಸಿತು.
ಕಳೆದ ವರ್ಷ ಏಪ್ರಿಲ್‌ನಲ್ಲಿ, “ಕಳೆದ ಆರು ವರ್ಷಗಳಲ್ಲಿ, ಕೇರಳದಲ್ಲಿ 24 ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕೊಲ್ಲಲಾಗಿದೆ, ಅವರಲ್ಲಿ ಏಳು ಮಂದಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಕೊಲ್ಲಲ್ಪಟ್ಟಿದ್ದಾರೆ” ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದರು.
ಕರ್ನಾಟಕದಲ್ಲಿ PFI/SDPI ಹೆಜ್ಜೆಗುರುತು
SDPI ಎಂಬುದು ಒಂದು ರಾಜಕೀಯ ಸಂಘಟನೆ. ಇದು ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ. ಆದರೆ ಇದರ ಹಿಂದಿನ ಪ್ರೇರಣೆ ಮತ್ತದೇ ಪಿಎಫ್‌ಐ. PFI/SDPI ಪ್ರಮುಖವಾಗಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಪ್ರಭಾವವನ್ನು ಹೊಂದಿದೆ. ಎಸ್‌ಡಿಪಿಐ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಅಸ್ತಿತ್ವ ಹೊಂದಿದೆ. ಇಲ್ಲಿನ ಕೆಲವು ಗ್ರಾಮ, ಪಟ್ಟಣ ಮತ್ತು ನಗರಸಭೆಗಳ ಸ್ಥಳೀಯ ಚುನಾವಣೆಗಳಲ್ಲಿ ತುಸು ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದೆ.
2013ರವರೆಗೆ, ಎಸ್‌ಡಿಪಿಐ ಸ್ಥಳೀಯ ಚುನಾವಣೆಗಳಲ್ಲಿ ಮಾತ್ರ ಸ್ಪರ್ಧಿಸಿತ್ತು ಮತ್ತು ರಾಜ್ಯದಾದ್ಯಂತ 21 ಪೌರ ಕ್ಷೇತ್ರಗಳಲ್ಲಿ ಗೆದ್ದಿತ್ತು. 2018ರ ಹೊತ್ತಿಗೆ ಅದು 121 ಸ್ಥಳೀಯ ಸಂಸ್ಥೆ ಸ್ಥಾನಗಳನ್ನು ಗೆದ್ದಿದೆ. 2021ರಲ್ಲಿ ಉಡುಪಿ ಜಿಲ್ಲೆಯ ಮೂರು ಸ್ಥಳೀಯ ಮಂಡಳಿಗಳನ್ನು ವಶಪಡಿಸಿಕೊಂಡಿತು. 2013ರಿಂದ SDPI ಕರ್ನಾಟಕ ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. 2013ರ ರಾಜ್ಯ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಭಾಗವಾಗಿರುವ ನರಸಿಂಹರಾಜಪುರ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆಯಿತು. 2018ರಲ್ಲಿ, ನರಸಿಂಹರಾಜಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಎಸ್‌ಡಿಪಿಐ ಶೇಕಡಾ 20ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಮೂರನೇ ಸ್ಥಾನ ಗಳಿಸಿತು.
2007ರಿಂದ ಕರ್ನಾಟಕದಲ್ಲಿ ಪಿಎಫ್‌ಐ ವಿರುದ್ಧ ದಾಖಲಾದ 310ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಐದರಲ್ಲಿ ಮಾತ್ರ ಶಿಕ್ಷೆಯಾಗಿದೆ. 2013ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸದಸ್ಯರ ವಿರುದ್ಧದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿತು. ಬಿಜೆಪಿ ಸರ್ಕಾರ 2008-13ರ ಅವಧಿಯಲ್ಲಿ 1,600 ಪಿಎಫ್‌ಐ ಕಾರ್ಯಕರ್ತರ ವಿರುದ್ಧ ದಾಖಲು ಮಾಡಿದ್ದ ಒಟ್ಟು 176 ಪ್ರಕರಣಗಳನ್ನು ಕೈಬಿಡಲು ಸಿದ್ದರಾಮಯ್ಯನವರ ಸರ್ಕಾರ ಅನುಮೋದನೆ ನೀಡಿತು.