Site icon Vistara News

Vistara Explainer: ಇಸ್ಲಾಮಿಕ್ ದೇಶಗಳ ಅಧಿಕ ಪ್ರಸಂಗ!

nupur sharma protest

ಇಸ್ಲಾಮಿಕ್‌ ದೇಶಗಳ ಒಕ್ಕೂಟಕ್ಕೆ ಏನಾಗಿದೆ? ಬಿಜೆಪಿಯ ವಕ್ತಾರೆ Nupur sharma ಎಂಬೊಬ್ಬಳ ಹೇಳಿಕೆಯನ್ನು ಇಡೀ ದೇಶದ ಹೇಳಿಕೆ ಎಂಬಂತೆ ನೋಡ್ತಾ ಇದೆ ಇಸ್ಲಾಮಿಕ್‌ ಸಹಕಾರ ಸಂಘಟನೆ (ಒಐಸಿ)!

ಭಾರತದ ವಿರುದ್ಧ ಕಿಡಿ ಕಾರೋದಕ್ಕೆ ಈ ಸಂಘಟನೆಗೆ ಕಾರಣವಾಗಿದ್ದು ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಅವರ ಹೇಳಿಕೆ. ಆಕೆಯನ್ನು ಈಗಾಗಲೇ ಆ ಹುದ್ದೆಯಿಂದ ಪಕ್ಷ ವಜಾ ಮಾಡಿದೆ. ಆಕೆಯ ಹೇಳಿಕೆಗೂ ತಮಗೂ ಸಂಬಂಧ ಇಲ್ಲ ಎಂದು ಬಿಜೆಪಿ ಹೇಳಿದೆ. ಹಾಗಿದ್ದರೂ ಬಿಜೆಪಿಯನ್ನು ಮತ್ತು ಭಾರತ ಸರಕಾರವನ್ನು ಈ ಹೇಳಿಕೆಯ ಜೊತೆಗೆ ತಳುಕು ಹಾಕಲು ಪ್ರಯತ್ನ ಮಾಡ್ತಾ ಇರುವುದೇಕೆ ಒಐಸಿ? ಏನು ನಡೆಯುತ್ತಿದೆ ಇದರ ಹಿನ್ನೆಲೆಯಲ್ಲಿ? ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಈ ಸಂಘಟನೆ ಈ ಹಿಂದೆಯೂ ಹೀಗೆಯೇ ನಡೆದುಕೊಂಡಿದೆಯಾ? ಒಐಸಿ ಡಬಲ್‌ ಸ್ಟಾಂಡರ್ಡ್‌ ಮತ್ತು ಈಗ ನಡೆಯುತ್ತಿರುವ ವಿವಾದದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಬಿಜೆಪಿ ವಕ್ತಾರೆ ಹೇಳಿದ್ದೇನು?

ನೂಪುರ್‌ ಶರ್ಮಾ

ಈ ಎಲ್ಲ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ಆಗಿದ್ದ ನೂಪುರ್‌ ಶರ್ಮಾ ಎಂಬಾಕೆ ನೀಡಿದ ಒಂದು ಹೇಳಿಕೆ ಇದೆ. ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲಿ ನಡೆದ ಟಿವಿ ಡಿಬೇಟ್‌ನಲ್ಲಿ ಭಾಗವಹಿಸಿದ್ದ ನೂಪುರ್‌ ಶರ್ಮಾ, ಪ್ರವಾದಿ ಮೊಹಮ್ಮದ್‌ರನ್ನು ಟೀಕಿಸಿ ಮಾತುಗಳನ್ನಾಡಿದ್ದರು. ಆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೂಪುರ್‌ ಶರ್ಮಾರಿಗೆ ಜೀವ ಬೆದರಿಕೆಯೂ ಬಂದಿತ್ತು. ನಮ್ಮ ದೇಶದ ಮುಸ್ಲಿಂ ಸಂಘಟನೆಗಳಷ್ಟೇ ಅಲ್ಲ, ಪಾಕಿಸ್ತಾನದ ಮುಸ್ಲಿಂ ಮುಖಂಡರೂ ನೂಪುರ್‌ ಶರ್ಮಾ ಶಿರಚ್ಛೇದ ಮಾಡಲು ಕರೆಕೊಟ್ಟಿದ್ದರು. ಆಕೆಯನ್ನು ಯಾರು ಕೊಲ್ಲುತ್ತಾರೋ ಅವರಿಗೆ ಬಹುಮಾನ ಕೊಡುವುದಾಗಿಯೂ ಘೋಷಿಸಿದ್ದರು. ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬರುತ್ತಿರುವುದಾಗಿ ನೂಪುರ್‌ ಶರ್ಮಾ ಅವರೇ ಹೇಳಿಕೊಂಡಿದ್ದರು. ನೂಪುರ್‌ ಶರ್ಮಾ ಹೇಳಿಕೆಯಿಂದ ಕಾನ್ಪುರದಲ್ಲಿ ದೊಡ್ಡಮಟ್ಟದ ಗಲಾಟೆ, ಹಿಂಸಾಚಾರ ನಡೆದಿತ್ತು. ನೂಪುರ್‌ ಶರ್ಮಾ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಯೊಂದು ಕಾನ್ಪುರ ಬಂದ್‌ಗೆ ಕರೆ ನೀಡಿತ್ತು. ಆಗ ಎರಡೂ ಗುಂಪುಗಳ ಮಧ್ಯೆ ಘರ್ಷಣೆ- ಕಲ್ಲುತೂರಾಟ ನಡೆದಿದ್ದು, ಗಲಾಟೆ ತಾರಕಕ್ಕೇರಿತ್ತು.

ಅಂತರ ಕಾಯ್ದುಕೊಂಡ ಬಿಜೆಪಿ

ನವೀನ್‌ ಕುಮಾರ್‌ ಜಿಂದಾಲ್

ಇದೆಲ್ಲದರ ಮಧ್ಯೆ ನೂಪುರ್‌ ಶರ್ಮಾರಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು. ಯಾವುದೇ ಧರ್ಮ, ಪಂಥ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ-ಅವಹೇಳನ ಮಾಡುವ ಸಿದ್ಧಾಂತ ಬಿಜೆಪಿಯದ್ದಲ್ಲ. ಅದನ್ನು ಬಿಜೆಪಿ ವಿರೋಧಿಸುತ್ತದೆ. ಪ್ರತಿಯೊಬ್ಬರಿಗೂ ಅವರು ನಂಬಿದ ಧರ್ಮವನ್ನು ಅನುಸರಿಸುವ ಹಕ್ಕಿದೆ ಎಂದು ನಮ್ಮ ಸಂವಿಧಾನವೇ ಹೇಳಿದೆ ಎಂದು ಪ್ರಕಟಣೆ ಹೊರಡಿಸಿತ್ತು. ಬಿಜೆಪಿಯಿಂದ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ನೂಪುರ್‌ ಶರ್ಮಾ ಮತ್ತು ಅವರನ್ನು ಟಿವಿ ಡಿಬೇಟ್‌ಗೆ ಕಳಿಸಿದ ಮಾಧ್ಯಮ ಉಸ್ತುವಾರಿ ನವೀನ್‌ ಕುಮಾರ್‌ ಜಿಂದಾಲ್‌ ಇಬ್ಬರೂ ಅಮಾನತುಗೊಂಡಿದ್ದಾರೆ.

ಆದರೆ, ಭಾರತ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿರುವುದು ಇಸ್ಲಾಮಿಕ್‌ ದೇಶಗಳ ಒಕ್ಕೂಟದ ನಡೆ. ಇಸ್ಲಾಮಿಕ್‌ ಸಹಕಾರ ಸಂಘಟನೆಯೆಂಬುದು 57 ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾಗಿದ್ದು, ವಿಶ್ವಸಂಸ್ಥೆಯ ನಂತರದ ದೊಡ್ಡ ಒಕ್ಕೂಟ. ಈ ಸಂಘಟನೆ ನೂಪುರ್‌ ಶರ್ಮಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿತ್ತು. ʼʼಪ್ರವಾದಿ ಮೊಹಮ್ಮದರ ಬಗ್ಗೆ ಕೇಳಿ ಬಂದ ಟೀಕೆಗಳು ದುರುದ್ದೇಶಪೂರಿತವಾಗಿದೆ. ಭಾರತದಲ್ಲಿ ಇಸ್ಲಾಂ ವಿರುದ್ಧ ದ್ವೇಷ ಬಿತ್ತುವ ಪ್ರವೃತ್ತಿ ಹೆಚ್ಚುತ್ತಿದೆ. ಮುಸ್ಲಿಮರನ್ನು ನಿಂದಿಸಲಾಗುತ್ತಿದೆ ಮತ್ತು ಅವರನ್ನು ಹತ್ತಿಕ್ಕಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗುತ್ತಿದೆ. ಆದಷ್ಟು ಬೇಗ ವಿಶ್ವ ಸಂಸ್ಥೆ ಹಸ್ತಕ್ಷೇಪ ಮಾಡಿ ಬಗೆಹರಿಸಬೇಕುʼʼ ಎಂದು ಹೇಳಿತ್ತು.

ಒಐಸಿ ಮಾಡಿದ್ದೇನು?

ಬಿಜೆಪಿ ವಕ್ತಾರೆಯ ಹೇಳಿಕೆ ಕುರಿತು ಕತಾರ್‌, ಕುವೈತ್‌, ಇರಾನ್‌, ಪಾಕಿಸ್ತಾನ ಮುಂತಾದ ಮುಸ್ಲಿಂ ದೇಶಗಳು ಗರಂ ಆಗಿವೆ. ಭಾರತೀಯ ರಾಯಭಾರ ಸಿಬ್ಬಂದಿಗೆ ಇವು ಸಮನ್ಸ್‌ ನೀಡಿ ವಿವರಣೆ ಕೇಳಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ವಿದೇಶಾಂಗ ಅಧಿಕಾರಿಗಳು ʼʼಇದು ಭಾರತದ ನಿಲುವಲ್ಲ. ಈ ವ್ಯಕ್ತಿಗಳ ಟ್ವೀಟ್‌ಗಳು ಯಾವುದೇ ಕಾರಣಕ್ಕೂ ಭಾರತ ಸರಕಾರದ ಅಥವಾ ಆಡಳಿತ ಪಕ್ಷದ ನಿಲುವನ್ನು ವ್ಯಕ್ತಪಡಿಸುವುದಿಲ್ಲ. ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆʼʼ ಎಂದು ಭರವಸೆ ನೀಡಿದ್ದಾರೆ. ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿರುವುದು ನಿಜ. ಕತಾರ್‌, ಇರಾನ್‌ ಮುಂತಾದ ಕೆಲವು ಕಡೆಗಳಲ್ಲಿ ʼಬಾಯ್ಕಾಟ್‌ ಇಂಡಿಯನ್‌ ಪ್ರಾಡಕ್ಟ್ಸ್‌ʼ ಅಥವಾ ʼಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿʼ ಅಭಿಯಾನ ಕೂಡಾ ಆರಂಭವಾಗಿದೆ. ಗಲ್ಫ್‌ ದೇಶಗಳ ದೊಡ್ಡ ಮಾಲ್‌ಗಳಲ್ಲಿ ಮುಸ್ಲಿಮ ಆಕ್ರೋಶದ ಆತಂಕದಿಂದಾಗಿ ಭಾರತೀಯ ಉತ್ಪನ್ನಗಳನ್ನು ಶೆಲ್ಫ್‌ನಿಂದ ತೆಗೆಯಲಾಗುತ್ತಿದೆ.

ಭಾರತದ ಖಡಕ್‌ ಪ್ರತ್ಯುತ್ತರ
ಅವರ ಹೇಳಿಕೆಯನ್ನು ನಾವು ಯಾವ ಅರ್ಥದಲ್ಲಿ ತಗೋಬೇಕು? ಭಾರತ ಸರಕಾರ ಈ ಸಂಸ್ಥೆಯ ಹೇಳಿಕೆಗೆ ಕಟುವಾಗಿಯೇ ತಿರುಗೇಟು ನೀಡಿದೆ. ʼʼಒಐಸಿಯಿಂದ ಭಾರತದ ಬಗ್ಗೆ ಬಂದ ಹೇಳಿಕೆ ತುಂಬ ಸಂಕುಚಿತ ಮನೋಭಾವದ್ದಾಗಿದೆ. ಅನಗತ್ಯವಾದ ಈ ಹೇಳಿಕೆಯನ್ನು ನಾವು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಭಾರತ ಸರ್ಕಾರ ಪ್ರತಿ ಧರ್ಮವನ್ನೂ ಗೌರವಿಸುತ್ತದೆʼʼ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ʼʼಯಾರೋ ಅವರ ವೈಯಕ್ತಿಕ ದೃಷ್ಟಿಕೋನದಲ್ಲಿ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದಾಕ್ಷಣ, ಅವರು ಇಡೀ ಕೇಂದ್ರ ಸರ್ಕಾರ, ಇಡೀ ಭಾರತವನ್ನೇ ಪ್ರತಿನಿಧಿಸುತ್ತಿದ್ದಾರೆ ಎಂದು ಭಾವಿಸಬಾರದು. ಅನುಚಿತ ಹೇಳಿಕೆ ನೀಡಿದವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಾಗಿದೆʼʼ ಎಂದು ಹೇಳಿದೆ.

ʼʼಇಸ್ಲಾಮಿಕ್‌ ಸಹಕಾರ ಸಂಘಟನೆ ಮತ್ತೆ ತನ್ನ ವಿಭಜಕ ನೀತಿಯನ್ನು ಪ್ರದರ್ಶಿಸಿದೆ. ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವಕ್ಕೆ ಒಳಗಾಗಿ ಇಂಥ ದುರುದ್ದೇಶಪೂರಿತ ಮತ್ತು ಜನರನ್ನು ತಪ್ಪು ದಾರಿಗೆ ಎಳೆಯುವ ಕಮೆಂಟ್‌ಗಳನ್ನು ಕೊಡುತ್ತಿದೆ. ಆದರೆ ಹಾಗೆ ಮಾಡಬೇಡಿ, ನಿಮ್ಮ ಕೋಮು ವಿಭಜಕ ಮನೋಭಾವನೆಯನ್ನು ಪ್ರದರ್ಶಿಸಬೇಡಿ. ಎಲ್ಲ ಧರ್ಮ ಮತ್ತು ಎಲ್ಲರ ಧಾರ್ಮಿಕ ನಂಬಿಕೆಗಳನ್ನೂ ಗೌರವಿಸಿ ಎಂದು ನಾವು ಒತ್ತಾಯಿಸುತ್ತೇವೆʼʼ ಎಂದು ಸಚಿವಾಲಯ ಖಡಕ್‌ ಪ್ರಕಟಣೆ ಹೊರಡಿಸಿದೆ.

ಮತ್ತಷ್ಟು ಓದಿಗಾಗಿ: ಪ್ರವಾದಿ ಮೊಹಮ್ಮದ್‌ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್‌ ಶರ್ಮಾ ಬಿಜೆಪಿಯಿಂದ ಅಮಾನತು

ಇವರ ಉದ್ಧಟತನ ಇದೇ ಮೊದಲಲ್ಲ…
ಈ ಪ್ರಕರಣದ ವಿಷಯ ಹಾಗಿರಲಿ. ಇದೊಂದೇ ಬಾರಿ ಅಲ್ಲ ಇಸ್ಲಾಮಿಕ್‌ ದೇಶಗಳು ಭಾರತದ ವಿರುದ್ಧ ಹೀಗೆ ಮಾತಾಡ್ತಾ ಇರುವುದು. ಈ ಹಿಂದಿನ ಹಲವು ಘಟನೆಗಳನ್ನೂ ನಾವು ನೋಡಬಹುದು.

ಉದಾಹರಣೆಗೆ, ಕಾಶ್ಮೀರದಲ್ಲಿ ಸಂವಿಧಾನದ ಆರ್ಟಿಕಲ್‌ 370 ಅನ್ನು ರದ್ದುಪಡಿಸಿದ ಸಂದರ್ಭ. ಜಮ್ಮು- ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್‌ 370ನ್ನು 2019ರಲ್ಲಿ ಕೇಂದ್ರ ಸರಕಾರ ಸಂವಿಧಾನ ಬದ್ಧವಾಗಿಯೇ ರದ್ದುಗೊಳಿಸಿ, ಕಾಶ್ಮೀರವನ್ನು ಎರಡಾಗಿ ವಿಭಜಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಿತು. ಆದರೆ ಈ ವಿಚಾರ, ಪಕ್ಕದ ದೇಶ ಪಾಕಿಸ್ತಾನಕ್ಕೆ ಸಹಿಸೋಕೆ ಆಗಲಿಲ್ಲ. ಯಕೆಂದರೆ ಸದಾ ತನ್ನ ಬೇಳೆಯನ್ನು ಕಾಶ್ಮೀರದಲ್ಲಿ ಬೇಯಿಸಿಕೊಳ್ಳಲು ಪ್ರಯತ್ನಿಸುವ ದೇಶ ಪಾಕಿಸ್ತಾನ. ಅದು ವಿಶ್ವಸಂಸ್ಥೆಯಲ್ಲಿ ಗದ್ದಲ ಎಬ್ಬಿಸಲು ಯತ್ನಿಸಿತು. ತನ್ನ ಬೆಂಬಲಕ್ಕೆ ಇತರ ಗಲ್ಫ್‌ ದೇಶಗಳನ್ನೂ ಕರೆಯಿತು. ʼʼಕಾಶ್ಮೀರದ ಮುಸ್ಲಿಮರ ವಿಷಯದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳಬೇಕುʼʼ ಎಂದು ಭಾರತಕ್ಕೆ ಇರಾನ್ ಉಪದೇಶ ಮಾಡಿತು. ಕಾಶ್ಮೀರದ ಹಿಂದೂಗಳ ಬಗ್ಗೆ ನ್ಯಾಯಯುತವಾಗಿ ನಡೆದುಕೊಳ್ಳುವುದೇ ಬೇಡವೇ ಹಾಗಾದರೆ? ಈ ಪ್ರಶ್ನೆಯನ್ನು ಇರಾನ್‌ ಕೇಳಿಕೊಂಡಿದ್ದರೆ ಚೆನ್ನಾಗಿತ್ತು. ಈ ಸಂದರ್ಭದಲ್ಲಿ ಇದೇ ಇಸ್ಲಾಮಿಕ್‌ ಸಹಕಾರ ಒಕ್ಕೂಟ ಅಥವಾ ಒಐಸಿ, ತಾನು ನಡೆಸಿದ ಒಂದು ಸಮ್ಮೇಳನದಲ್ಲಿ, ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಭಾರತ ಸರಕಾರ ತಡೆಗಟ್ಟಬೇಕು ಎಂದು ಉಪದೇಶ ನೀಡಿತು. ಕಾಶ್ಮೀರದಲ್ಲಿ ಏನು ಮಾಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ, ನಿಮ್ಮ ಉಪದೇಶ ನಮಗೆ ಅಗತ್ಯವಿಲ್ಲ ಎಂದೇ ಭಾರತ ಆಗಲೂ ಹೇಳಿತ್ತು. ಆದರೂ ಹೀಗೆ ಆಗಾಗ ಉಪದೇಶ ನೀಡುವ, ಟೀಕಿಸುವ ತನ್ನ ಚಾಳಿಯನ್ನು ಒಐಸಿ ಬಿಟ್ಟಿಲ್ಲ.

ಹಾಗಾದರೆ ಯಾವುದು ಈ ಒಐಸಿ?

IOC ದೇಶಗಳ ಧ್ವಜಗಳು

ಇದು ಇಸ್ಲಾಮಿಕ್‌ ಆಡಳಿತ ಹೊಂದಿರುವ, ಅಥವಾ ಮುಸ್ಲಿಂ ಬಹುಸಂಖ್ಯಾತರು ಇರುವ ದೇಶಗಳ ಒಂದು ಸಹಕಾರ ಒಕ್ಕೂಟ> ಈ ಒಕ್ಕೂಟದಲ್ಲ ಸೌದಿ ಅರೇಬಿಯಾ, ಇರಾನ್‌, ಕತಾರ್‌, ಯುಎಇ, ಪಾಕಿಸ್ತಾನ, ಅಫಘಾನಿಸ್ತಾನ ಸೇರಿದಂತೆ ಒಟ್ಟಾರೆ 57 ದೇಶಗಳಿವೆ. ಒಟ್ಟಾರೆ ಜಗತ್ತಿನ ಮುಸ್ಲಿಮರ ಹಿತ ತನ್ನ ಗುರಿ ಎಂದು ಈ ಸಂಘಟನೆ ಹೇಳಿಕೊಳ್ಳುತ್ತದೆ. 1969ರಲ್ಲಿ ಈ ಸಂಘಟನೆ ಹುಟ್ಟಿಕೊಂಡಿತು. ವಿಶ್ವಸಂಸ್ಥೆಯ ಬಳಿಕ ಜಗತ್ತಿನ ಅತಿ ದೊಡ್ಡ ರಾಷ್ಟ್ರಗಳ ಒಕ್ಕೂಟವಿದು ಎಂಬ ಹೆಗ್ಗಳಿಕೆ ಇದಕ್ಕಿದೆ. ʼಜಗತ್ತಿನ ಎಲ್ಲೆಡೆಯೂ ಇರುವ ಮುಸ್ಲಿಮರ ಸಂಘಟಿತ ಧ್ವನಿ ತಾನುʼ ಎಂದು ಈ ಸಂಘಟನೆ ಹೇಳಿಕೊಳ್ಳುತ್ತದೆ.

ಹುಟ್ಟುವಾಗಲೇ ಭಾರತಕ್ಕೆ ಅವಮಾನ!

1969ರಲ್ಲಿ ಈ ಸಂಘಟನೆಯ ಉದ್ಘಾಟನೆ ನಡೆದಾಗಲೇ ಭಾರತಕ್ಕೆ ಕಹಿ ಅನುಭವವಾಗಿತ್ತು. ರಬಾತ್‌ನಲ್ಲಿ ಈ ಸಂಘಟನೆಯ ಉದ್ಘಾಟನೆಗೆ ಭಾರತವನ್ನೂ ಆಹ್ವಾನಿಸಲಾಗಿತ್ತು. ಆದರೆ ಪಾಕಿಸ್ತಾನದ ತೀವ್ರ ಒತ್ತಡದಿಂದಾಗಿ ಆಹ್ವಾನಿತರ ಪಟ್ಟಿಯಿಂದ ಭಾರತವನ್ನು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿತ್ತು. ಕಾರ್ಯಕ್ರಮಕ್ಕಾಗಿ ಭಾರತದಿಂದ ಹೊರಟು ಮೊರೊಕ್ಕೋದ ವರೆಗೆ ಆಗಮಿಸಿದ ಭಾರತದ ಆಗಿನ ಕೃಷಿ ಸಚಿವ ಫಕ್ರುದ್ದೀಲ್‌ ಅಲಿ ಅಹ್ಮದ್‌ ಅವರನ್ನು ಮರಳಿ ಕಳಿಸಲಾಗಿತ್ತು. ಇದು ಇಸ್ಲಾಮಿಕ್‌ ಸಂಘಟನೆ ಭಾರತವನ್ನು ಅಂದು ನಡೆಸಿಕೊಂಡ ಅವಮಾನಕಾರಿ ರೀತಿ. ಭಾರತಕ್ಕೆ ಈ ಸಂಘಟನೆ ಮಾಡುತ್ತಿರುವ ಅವಮಾನ ಈಗಲೂ ಮುಂದುವರಿದಿದೆ ಎನ್ನಬಹುದು. ಇದಕ್ಕೆ ಕಾರಣ ಪಾಕಿಸ್ತಾನ. ಈ ಸಂಘಟನೆಯ ಸದಸ್ಯ ರಾಷ್ಟ್ರಗಳಲ್ಲೆಲ್ಲಾ ನ್ಯೂಕ್ಲಿಯರ್‌ ವೆಪನ್‌ ಹೊಂದಿರುವ ಏಕೈಕ ಮುಸ್ಲಿಂ ದೇಶ ಎಂದರೆ ಪಾಕಿಸ್ತಾನ ಮಾತ್ರ. ಹೀಗಾಗಿ ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದ್ದರೂ, ಇಂದೂ ಸಹ, ಒಐಸಿ ಸಂಘಟನೆಯನ್ನು ತನ್ನ ಪ್ರಭಾವವನ್ನು ಹೊಂದಿದೆ. ಹೀಗಾಗಿಯೇ ಭಾರತ ತನ್ನ ಪ್ರತ್ಯುತ್ತರದಲ್ಲಿ ʼʼಯಾವುದೋ ಹಿತಾಸಕ್ತಿಗಳ ಮಾತು ಕೇಳಿ ಒಐಸಿ ಇಂಥ ಹೇಳಿಕೆ ನೀಡಬಾರದುʼʼ ಎಂದಿದೆ.

ಒಐಸಿ ಮುಸ್ಲಿಮರ ರಕ್ಷಿಸುತ್ತಿದೆಯಾ?

ಅದಿರಲಿ, ಒಐಸಿ ಜಗತ್ತಿನ ಎಲ್ಲಾ ಕಡೆಯ ಮುಸ್ಲಿಮರಿಗೂ ಸರಿಯಾದ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆಯಾ ಅಂತ ನೋಡೋಣ. ಪರಿಶೀಲಿಸಿ ನೋಡಿದರೆ, ಖಂಡಿತಾ ಇಲ್ಲ ಎಂಬುದು ನಿಮಗೆ ಗೊತ್ತಾಗುತ್ತದೆ. ಉದಾಹರಣೆಗೆ, ಚೀನಾದಲ್ಲಿ ಉಯಿಗುರ್‌ ಮುಸ್ಲಿಮರ ಮೇಲೆ ತೀವ್ರ ದೌರ್ಜನ್ಯ ಅಲ್ಲಿನ ಕಮ್ಯುನಿಸ್ಟ್‌ ಪಕ್ಷದಿಂದ ನಡೆಯುತ್ತಿದೆ. ಆದರೆ ಒಐಸಿ ಇದುವರೆಗೂ ಒಂದು ಮಾತನ್ನೂ ಆಡಿಲ್ಲ. ಯಾಕೆಂದರೆ ಚೀನಾದ ಜೊತೆಗೆ ಈ ದೇಶಗಳಿಗೆ ಬಹಳಷ್ಟು ವಾಣಿಜ್ಯ ಹಿತಾಸಕ್ತಿಗಳಿವೆ. ಚೀನಾದ ಜೊತೆಗಿನ ವ್ಯಾಪಾರ ಕಳೆದುಕೊಳ್ಳೋಕೆ ಇವುಗಳಿಗೆ ಇಷ್ಟವಿಲ್ಲ. ಇನ್ನು ಮುಸ್ಲಿಮರೇ ನಡೆಸಿದ ನರಮೇಧಗಳ ಬಗ್ಗೆ ಈ ಸಂಘಟನೆ ಯಾವ ಮಾತನ್ನೂ ಆಡಿಲ್ಲ. ಉದಾಹರಣೆಗೆ, ಯುರೋಪಿನ ನಾನಾ ಕಡೆಗಳಲ್ಲಿ ನಡೆಯುತ್ತಿರುವ ಮುಸ್ಲಿಂ ಮತಾಂಧರ ದಾಳಿಗಳಾಗಲೀ, ಐಸಿಸ್‌ ಎಂಬ ನರಹಂತಕರ ಸಂಘಟನೆ ಸಿರಿಯಾ ಮುಂತಾದ ಕಡೆಗಳಲ್ಲಿ ನಡೆಸುತ್ತಿರುವ ವ್ಯವಸ್ಥಿತ ನರಮೇಧಗಳಾಗಲೀ- ಈ ಸಂಘಟನೆಯ ವಿವೇಚನೆಯ ರೇಡಾರ್‌ನ ಅಡಿಯಲ್ಲಿ ಬಂದೇ ಇಲ್ಲ. ಇನ್ನು ಶೆರಿಯಾ ಆಡಳಿತದ ಹೆಸರಿನಲ್ಲಿ ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಭಯೋತ್ಪಾದಕ ಸಂಘಟನೆ ನಡೆಸುತ್ತಿರುವ ದೌರ್ಜನ್ಯಪೂರಿತವಾದ ಆಡಳಿತ, ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಅವರು ತೋರುತ್ತಿರುವ ಕಠಿಣ ಕ್ರಮಗಳು, ಶಾಲೆಗಳ ಮುಚ್ಚುವಿಕೆ, ಮುಂತಾದವುಗಳ ಬಗ್ಗೆ ಒಐಸಿ ಕಿವಿ ಕಣ್ಣುಗಳೆರಡನ್ನೂ ಮುಚ್ಚಿಕೊಂಡು ಕೂತಿದೆ.

ಇದನ್ನೂ ಓದಿ: ಯಾರೀಕೆ ಇಸ್ಲಾಮಿಕ್‌ ದೇಶಗಳ ಕಣ್ಣು ಕೆಂಪಾಗಿಸಿದ ನೂಪುರ್ ಶರ್ಮಾ?

ಮುಸ್ಲಿಂ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ

ಇನ್ನು ಇಸ್ಲಾಮಿಕ್‌ ದೇಶಗಳಲ್ಲಿ ಅಥವಾ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯ ಅಥವಾ ಅಲ್ಲಿನ ಸರಕಾರದ ನೆರವಿನಿಂದಲೇ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಈ ಸಂಘಟನೆ ಏನನ್ನೂ ಹೇಳುವುದಿಲ್ಲ. ಉದಾಹರಣೆಗೆ ಪಾಕಿಸ್ತಾನದಲ್ಲಿ ಮತ್ತು ಬಾಂಗ್ಲಾದಲ್ಲಿ ಬದುಕುತ್ತಿರುವ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರ ಸ್ಥಿತಿಗತಿಯ ಬಗ್ಗೆ ನೋಡಬಹುದು. ಇವರೆಲ್ಲ ಅಲ್ಲಿ ಅಲ್ಪಸಂಖ್ಯಾತರು. ಇವರಿಗೆ ಅಲ್ಲಿ ಸೂಕ್ತ ಕಾನೂನಾತ್ಮಕ ರಕ್ಷಣೆಗಳಿಲ್ಲ. ಇತ್ತೀಚಿನವರೆಗೂ ಬಾಂಗ್ಲಾದಲ್ಲಿ, ಅಲ್ಲಿನ ಯಾವುದೇ ಹಿಂದೂವಿನ ಆಸ್ತಿಯನ್ನು ಬಲವಂತರಾದ ಮುಸ್ಲಿಂ ಒಳಹಾಕಿಕೊಳ್ಳಬಹುದಾಗಿತ್ತು. ಅದನ್ನು ಪ್ರಶ್ನಿಸಲು ಹಿಂದೂವಿಗೆ ಸಾಧ್ಯವಿರಲಿಲ್ಲ. ಆದರೆ ಇಂಥ ತಾರತಮ್ಯದ ಕಾನೂನಿನ ಬಗ್ಗೆ ಒಐಸಿ ಏನೂ ಮಾತನಾಡಿಲ್ಲ.

ಒಐಸಿಯ ಜಾಣ ಕುರುಡು!

ಹಾಗೇ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಭಾರಿ ಪ್ರಮಾಣದ ತಾರತಮ್ಯ ನಡೆದಿದೆ. ಅಲ್ಲಿ ಹಿಂದೂಗಳನ್ನು ಮಟ್ಟಹಾಕಲು ಬ್ಲಾಸ್ಫೆಮಿ ಅಥವಾ ಧರ್ಮನಿಂದನೆ ಎಂಬ ಅಸ್ತ್ರವನ್ನು ಪ್ರಯೋಗಿಸಲಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ಆಸಿಯಾ ಬಿಬಿ ಎಂಬ ಕ್ರೈಸ್ತ ಮಹಿಳೆಯ ಕತೆಯನ್ನು ನೋಡಬಹುದು. ಈಕೆ ಮುಸ್ಲಿಮರಿಗೆ ಮೀಸಲಾಗಿದ್ದ ಬಾವಿಯಿಂದ ನೀರು ಕುಡಿದಳು ಎಂಬ ಕಾರಣದಿಂದ ಈಕೆಯ ಮೇಲೆ ದ್ವೇಷ ಸಾಧಿಸುತ್ತಿದ್ದ ಪಕ್ಕದ ಮನೆಯಾಕೆ, ಈಕೆ ಪ್ರವಾದಿಗಳನ್ನು ನಿಂದಿಸಿದಳು ಎಂದು ಸುಳ್ಳು ದೂರು ಕೊಟ್ಟಳು. ಈ ದೂರಿನ ಮೇಲೆ ಕೋರ್ಟ್‌ ವಿಚಾರಣೆಯೂ ನಡೆದು, ಈಕೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಆಸಿಯಾ ಬಿಬಿ ಹಾಗೂ ಆಕೆಯ ಗಂಡನನ್ನು ಮಾರಣಾಂತಿಕವಾಗಿ ಥಳಿಸಲಾಯಿತು. ಮುಂದೆ ಈಕೆಯ ಪರವಾಗಿ ನಿಂತ ಪಂಜಾಬ್‌ ಗವರ್ನರ್‌ ಸಲ್ಮಾನ್‌ ತಸೀರ್‌ ಹಾಗೂ ಪಾಕಿಸ್ತಾನ ಸಚಿವ ಸಂಪುಟದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಶಾಬಾಝ್‌ ಭಟ್ಟಿ ಅವರನ್ನು ಮತಾಂಧರು ಗುಂಡಿಕ್ಕಿ ಕೊಂದರು. ಆದರೆ ಈ ಯಾವ ಘಟನೆಗಳಿಗೂ ಒಐಸಿ ಸ್ಪಂದಿಸಿದ್ದಾಗಲೀ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಪ್ಪೆಂದು ಹೇಳಿದ್ದಾಗಲೀ ದಾಖಲೆ ಇಲ್ಲ. ಹಾಗೇ ಅಫಘಾನಿಸ್ತಾನದ ಬಾಮಿಯಾನ್‌ನಲ್ಲಿ ಇದ್ದ ಬೌದ್ಧ ಸಂಸ್ಕೃತಿಯ ಹೆಗ್ಗುರುತಾದ ಬೃಹತ್‌ ಬೌದ್ಧ ಪ್ರತಿಮೆಗಳನ್ನು ತಾಲಿಬಾನಿಗಳು ಧ್ವಂಸ ಮಾಡಿದ್ದನ್ನೂ ಒಐಸಿ ಖಂಡಿಸಿಲ್ಲ.‌

ಇದನ್ನೂ ಓದಿ: ನೂಪುರ್‌ ಶರ್ಮಾ ಅಮಾನತಿಗೆ ಬಿಜೆಪಿ ಬಳಸಿದ್ದು ನಿಯಮ 10 ಎ, ಹಾಗಿದ್ದರೆ ಏನಿದೆ ಅದರಲ್ಲಿ?

ಇಸ್ಲಾಮಿಕ್ ಒಕ್ಕೂಟದ ದ್ವಿಮುಖ ನೀತಿ
ಇಸ್ಲಾಮಿಕ್‌ ಸಹಕಾರ ಒಕ್ಕೂಟದ ಇಂಥ ಡಬಲ್‌ ಸ್ಟಾಂಡರ್ಡ್‌ ಅಥವಾ ದ್ವಿಮುಖ ನೀತಿಯಿಂದಾಗಿಯೇ ಅದು ತನ್ನ ಮಾತಿನ ಮೇಲಿನ ಗೌರವವನ್ನು ಕಳೆದುಕೊಂಡಿದೆ. ಇಂಥ ಒಕ್ಕೂಟದಿಂದ ಟೀಕೆಗೆ ಒಳಗಾದರೆ ಭಾರತವೇನೂ ಅಂಜಬೇಕಿಲ್ಲ. ಆದರೆ ಬಹುತೇಕ ಅರಬ್‌ ದೇಶಗಳ ಜೊತೆಗೆ ಭಾರತ ಸುಮಧುರವಾದ ವಾಣಿಜ್ಯ ವಹಿವಾಟುಗಳನ್ನು ಹೊಂದಿದೆ. ಪೆಟ್ರೋಲಿಯಂ ತೈಲಗಳನ್ನು ಈ ದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗೆಯೇ ಭಾರತದ ಬೃಹತ್‌ ಮಾರುಕಟ್ಟೆ ಕೂಡ ಈ ದೇಶಗಳಿಗೆ ಅಗತ್ಯವಾಗಿದೆ. ಆದರೆ ಈ ನೂಪುರ್‌ ಶರ್ಮಾ ಪ್ರಕರಣ ಈ ಸಂಬಂಧವನ್ನು ಎಲ್ಲಿಯವರೆಗೆ ಒಯ್ಯುತ್ತದೆ ಎಂಬ ಎಂದು ನೋಡಬೇಕಿದೆ.

Exit mobile version