Site icon Vistara News

Yoga Day 2023: ವಿಶ್ವವನ್ನೇ ಬೆರಗುಗೊಳಿಸುತ್ತಿರುವ ಯೋಗದ ಇತಿಹಾಸ, ಥೀಮ್, ಆಚರಣೆಯ ಹಿನ್ನೆಲೆ ಏನು?

Malaika Arora Yoga pose

ಯೋಗ (Yoga Day 2023) ಇಂದು ವಿಶ್ವವ್ಯಾಪಿ, ಸರ್ವವ್ಯಾಪಿಯಾಗಿದೆ. 2015ರಿಂದ ಇಡೀ ಜಗತ್ತೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿಕೊಂಡ ಬರುತ್ತದೆ. ಆ ಮೂಲಕ ಇಡೀ ಜಗತ್ತಿಗೆ ಭಾರತ (India) ನೀಡಿದ ಅದ್ಭುತ ಯೋಗ ಕಲೆಯಾಗಿದೆ. ಇದು ಕೇವಲ ದೇಹವನ್ನು ಸುಸ್ಥಿತಿಯಲ್ಲಿಡುವುದು ಮಾತ್ರವಲ್ಲದೇ ನಮ್ಮ ಮನಸ್ಸನ್ನೂ ಪ್ರಫುಲ್ಲಗೊಳಿಸುತ್ತದೆ. ಯೋಗದಿಂದ ಸಾಕಷ್ಟು ಪ್ರಯೋಜನಗಳಿರುವುದರಿಂದಲೇ ಇಂದು ಯಾವುದೇ ಭೇದ ಭಾವ ಇಲ್ಲದೇ ಎಲ್ಲರೂ ಅಪ್ಪಿಕೊಂಡಿದ್ದಾರೆ. ಇದು ಭಾರತೀಯರಾದ ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ನಾಳೆ ಅಂದರೆ, ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯೋಗ ಎಂದರೇನು (Whats is Yoga?), ಅದರ ಹಿನ್ನೆಲೆ, ಪ್ರಯೋಜನಗಳು, ಈ ವರ್ಷದ ಥೀಮ್ (Yoga Day 2023 Theme), ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪಾತ್ರ ಇತ್ಯಾದಿ ಮಾಹಿತಿಗಳು ನಿಮಗಾಗಿ ಇಲ್ಲಿ ನೀಡಲಾಗಿದೆ(Vistara Explainer).

ಯೋಗ ಎಂದರೇನು?

ಯೋಗವೆಂದರೆ ಆಸನಗಳು ಮಾತ್ರವಲ್ಲ; ಆದರೆ ಆಸನಗಳೂ ಹೌದು! ಕಳೆದ ಕೆಲವು ದಶಕಗಳಿಂದ ಇದ್ದಕ್ಕಿದ್ದಂತೆ ಏರಿರುವ, ಎಂದಾದರೂ ಇಳಿಯಬಹುದಾದ, ಜನಪ್ರಿಯ ಅಲೆಯಲ್ಲವಿದು. ಹಲವು ಸಹಸ್ರಮಾನಗಳಿಂದ ಚಾಲ್ತಿಯಲ್ಲಿರುವ ಸರಳ ಜೀವನಾಭ್ಯಾಸವಿದು. ಹಾಗೆಂದೇ ಜಗತ್ತಿನ ಮೂಲೆಮೂಲೆಗಳಿಂದ ಆಸಕ್ತರು ಈ ಅಭ್ಯಾಸದೆಡೆಗೆ ಉತ್ಸುಕರಾಗಿದ್ದಾರೆ. ಆದರೂ ಯೋಗವೆಂದರೇನು ಎಂಬುದು ಸ್ಪಷ್ಟವಾಗಲಿಲ್ಲ ಅಲ್ಲವೇ? ಸಂಸ್ಕೃತದ ʻಯುಜ್‌ʼ ಎಂಬ ಪದದಿಂದ ಹುಟ್ಟಿದ್ದು ಯೋಗ. ಯುಜ್‌ ಎಂದರೆ ಸೇರುವುದು, ಜೊತೆಯಾಗುವುದು ಎಂದರ್ಥ. ಅಂದರೆ, ಭಂಗಿಗಳಲ್ಲಿ ಬಗ್ಗುವಾಗ ಮಂಡಿಯನ್ನು ಮೂಗು ತಾಗುವಂಥ ಭೌತಿಕ ಸೇರುವಿಕೆಯ ಬಗ್ಗೆ ಅಲ್ಲ ಇಲ್ಲಿ ಹೇಳುತ್ತಿರುವುದು! ದೇಹ ಮತ್ತು ಮನಸ್ಸುಗಳು ಒಂದಾಗುವ ಬಗ್ಗೆ, ಅಭ್ಯಾಸಿಗಳು ತಮ್ಮ ಸುತ್ತಲಿನ ಪರಿಸರದಲ್ಲಿ ಲೀನವಾಗುವ ಬಗ್ಗೆ, ವ್ಯಕ್ತಿಗತ ಪ್ರಜ್ಞೆಯು ವಿಶ್ವ ಪ್ರಜ್ಞೆಯಲ್ಲಿ ಸಂಗಮಿಸುವ ಬಗ್ಗೆ ಈ ʻಯುಜ್‌ʼ ಎನ್ನುವ ಶಬ್ದ ಸೂಚಿಸುತ್ತದೆ.

ಯೋಗ ಪಿತಾಮಹ ಮಹರ್ಷಿ ಪತಂಜಲಿ

ಮಹರ್ಷಿ ಪತಂಜಲಿಯನ್ನು ಯೋಗ ಪಿತಾಮಹ ಎಂದು ಕರೆಯಲಾಗುತ್ತದೆ. ಯೋಗದ ಅಭ್ಯಾಸಕ್ಕೆ ರೂಪರೇಷೆಗಳನ್ನು ಒದಗಿಸಿದ್ದು ಮಹರ್ಷಿ ಪತಂಜಲಿ, ಅದೂ ಕ್ರಿ.ಪೂ. ಎರಡನೇ ಶತಮಾನದಲ್ಲಿ. ಯೋಗದಲ್ಲಿ ಹುದುಗಿರುವ ಜ್ಞಾನವನ್ನು ಆತ ʻಯೋಗಸೂತ್ರʼದ ಮೂಲಕ ಲೋಕಕ್ಕೆ ತಿಳಿಸಿದ್ದರು. ಇದನ್ನು ರಾಜಯೋಗ ಎನ್ನಲಾಗುತ್ತದೆ. ಮಾತ್ರವಲ್ಲ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಗ್ರಹ, ಧಾರಣ, ಧ್ಯಾನ ಮತ್ತು ಸಮಾಧಿಯೆಂಬ ಅಷ್ಟಾಂಗ ಯೋಗಗಳನ್ನೂ ರಚಿಸಿದ್ದಾರೆ. ಪತಂಜಲಿ ಯೋಗದ ಕೆಲವು ಅಂಶಗಳನ್ನು ನಾಟ್ಯಶಾಸ್ತ್ರದಲ್ಲೂ ಬಳಸಲಾಗುತ್ತದೆ. ಕರಾಟೆಯಂಥ ಸಾಹಸ ಕಲೆಗಳಲ್ಲೂ ಇದು ಬಳಕೆಯಲ್ಲಿದೆ.

ವಿಶ್ವ ಸಂಸ್ಥೆಯಿಂದಲೇ ಆಚರಣೆ

ಯೋಗ ಖ್ಯಾತಿ ಈಗ ವಿಶ್ವವಿಖ್ಯಾತವಾಗಿದೆ. ಯೋಗವನ್ನು ವಿಶ್ವಸಂಸ್ಥೆಯೇ ಒಪ್ಪಿಕೊಂಡಿದೆ. ಮೈ-ಮನಸಿಗೆ ಮುದ-ಆರೋಗ್ಯ ಕೊಡುವ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕು ಎಂದು 2015ರಲ್ಲಿ ಭಾರತ ವಿಶ್ವಸಂಸ್ಥೆಯಲ್ಲಿ ಕರಡು ಪ್ರಸ್ತಾಪವನ್ನು ಇಟ್ಟಾಗ ಅದಕ್ಕೆ ವಿಶ್ವಸಂಸ್ಥೆಯ 175 ರಾಷ್ಟ್ರಗಳು ಅನುಮೋದನೆ ಕೊಟ್ಟವು (ಸದ್ಯ ಯೋಗ ದಿನವನ್ನು 177 ರಾಷ್ಟ್ರಗಳು ಅನುಮೋದಿಸಿವೆ) ಅದಾದ ಮೇಲೆ ಅದೇ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು, 44 ಮುಸ್ಲಿಂ ರಾಷ್ಟ್ರಗಳು ಸೇರಿ ಒಟ್ಟು 192 ರಾಷ್ಟ್ರಗಳು ಯೋಗ ದಿನವನ್ನು ಆಚರಿಸಿದವು. ಅಂದಮೇಲೆ ಭಾರತದ ಸಂಪ್ರದಾಯಕ್ಕೆ, ಪದ್ಧತಿಗೆ ಸಿಕ್ಕಿದ್ದು ಅಭೂತಪೂರ್ವ ಸ್ಪಂದನೆಯೇ ಅಲ್ಲವೇ?

ವಿದೇಶಗಳಲ್ಲೂ ಇತ್ತು ಯೋಗ!

ಯೋಗದ ಜನಕ ಭಾರತವೇ ಆದರೂ, ಚೀನಾ, ಜಪಾನ್​, ಅಮೆರಿಕ ಸೇರಿ ಒಂದಷ್ಟು ದೇಶಗಳಲ್ಲಿ ಕೂಡ ತುಂಬ ಹಿಂದಿನಿಂದಲೇ ಯೋಗಾಭ್ಯಾಸ ಪದ್ಧತಿ ಇತ್ತು. ಸೀಮಿತ ವರ್ಗದ ಜನರು ಯೋಗವನ್ನು ಮಾಡುತ್ತಿದ್ದರು. ಆದರೆ ಅದಕ್ಕೊಂದು ರೂಪುರೇಷೆ ಇರಲಿಲ್ಲ. ಚೌಕಟ್ಟು ಇರಲಿಲ್ಲ. ಭಾರತದಲ್ಲಿ ಯೋಗ ಪ್ರಸಿದ್ಧಿಯಾದಷ್ಟು, ಇಲ್ಲಿ ಸಿಕ್ಕಷ್ಟು ಮನ್ನಣೆ ಉಳಿದ ದೇಶಗಳಲ್ಲಿ ಯೋಗಾಭ್ಯಾಸಕ್ಕೆ ಸಿಕ್ಕಿರಲಿಲ್ಲ. ಯೋಗದಿಂದ ಇರುವ ಆರೋಗ್ಯ ಪ್ರಯೋಜನಗಳು, ಮಾನಸಿಕ ಆರೋಗ್ಯದ ಮಹತ್ವ ಮತ್ತು ಅದಕ್ಕಿರುವ ಅಧ್ಯಾತ್ಮಿಕ ಪ್ರಾಮುಖ್ಯತೆಯ ಪರಿಕಲ್ಪನೆ ಯಾವುದೇ ದೇಶಕ್ಕೂ ಇರಲಿಲ್ಲ. ಯೋಗವನ್ನು ಅನುಸರಿಸಿ, ಅಳವಡಿಸಿಕೊಂಡವರ ವರ್ಗ ಸಣ್ಣದಿತ್ತು. ಆದರೆ 2015ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಯೋಗವನ್ನು ದೊಡ್ಡದಾಗಿ ಆಚರಿಸಲಾಗುತ್ತಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಟರ್ಕಿ, ಇರಾನ್, ಇಂಡೋನೇಷಿಯಾ, ಯುನೈಟೆಡ್​ ಅರಬ್​ ಎಮಿರೇಟ್ಸ್​, ಕತಾರ್ ಮತ್ತು ಓಮನ್ ಸೇರಿ 46 ಮುಸ್ಲಿಂ ದೇಶಗಳು ಕೂಡ 2015ರಲ್ಲಿಯೇ ಯೋಗವನ್ನು ಒಪ್ಪಿಕೊಂಡು, ಆಚರಿಸಿದ್ದವು. 2017ರಲ್ಲಿ ಸೌದಿ ಅರೇಬಿಯಾ ಕೂಡ ಅಪ್ಪಿಕೊಂಡಿತು. ಇನ್ನು ಅಮೆರಿಕ, ಕೆನಡಾ, ಸಿಂಗಾಪುರ, ಚೀನಾ, ಜಪಾನ್ ಮತ್ತಿತರ ರಾಷ್ಟ್ರಗಳಲ್ಲಿ ಕೂಡ ಯೋಗ ದಿನಾಚರಣೆಯನ್ನು ಅತ್ಯುತ್ಸಾಹದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಬರೀ ಜೂ.21ರ ಯೋಗ ದಿನಾಚರಣೆ ದಿನವಷ್ಟೇ ಅಲ್ಲ, ಉಳಿದ ದಿನಗಳಲ್ಲೂ ಅಲ್ಲೆಲ್ಲ ಯೋಗ್ಯಾಭ್ಯಾಸ ನಡೆಯುತ್ತಲೇ ಇರುತ್ತದೆ.

ಯೋಗ ದಿನ ಆಚರಣೆಯಲ್ಲಿ ಮೋದಿ ಪಾತ್ರ

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2014ರಲ್ಲಿ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು, ಯೋಗ ಮಹತ್ವ ಸಾರಲು ತೀರ್ಮಾನಿಸಿ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಕುರಿತು ನಿರ್ಣಯ ಮಂಡಿಸಿತ್ತು. ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಮೋದಿ, ಯೋಗ ದಿನಾಚರಣೆ ಕುರಿತು ಪ್ರಸ್ತಾಪಿಸಿದ್ದರು. ವಿಶ್ವದ ಸುಮಾರು 175 ರಾಷ್ಟ್ರಗಳು ಭಾರತದ ನಿರ್ಣಯಕ್ಕೆ ಅಂಗೀಕಾರ ನೀಡಿದ ಬಳಿಕ ಪ್ರತಿ ವರ್ಷ ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ತೀರ್ಮಾನಿಸಲಾಯಿತು. 2015ರ ಜೂನ್‌ 21ರಿಂದ ಪ್ರತಿ ವರ್ಷ ಯೋಗ ದಿನ ಆಚರಣೆ ಮಾಡಲಾಗುತ್ತದೆ. ಯೋಗ, ಆಯುರ್ವೇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಚಿವಾಲಯವನ್ನು ಸ್ಥಾಪಿಸಿದೆ. ಆಯುರ್ವೇದ, ಯೋಗ & ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ (AYUSH) ಸಚಿವಾಲಯದ ಮೂಲಕ ಯೋಗಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಇನ್ನು, ದೇಶದ ಯೋಗ ಮಾರುಕಟ್ಟೆಯ ಮೌಲ್ಯವು ಜಾಗತಿಕವಾಗಿ 2027ರ ವೇಳೆಗೆ 66.2 ದಶಲಕ್ಷ ಡಾಲರ್‌ ಆಗಲಿದೆ ಎಂದು Allied Market Research ವರದಿ ತಿಳಿಸಿದೆ. 2019ರಲ್ಲಿ ವಿಶ್ವದ ಯೋಗ ಮಾರುಕಟ್ಟೆಯ ಮೌಲ್ಯವು 37 ದಶಲಕ್ಷ ಡಾಲರ್‌ ಇತ್ತು. ಉತ್ತರ ಅಮೆರಿಕವು ಯೋಗಕ್ಕೆ ಬೃಹತ್‌ ಮಾರುಕಟ್ಟೆಯಾಗಿದೆ.

ವಿಶ್ವ ಸಂಸ್ಥೆ ಕಚೇರಿಯಲ್ಲಿ ಮೋದಿ ಯೋಗ

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಯೋಗ ಮಾಡಲಿದ್ದಾರೆ. ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಯೋಗ ದಿನ ಆಚರಿಸಲಾಗುತ್ತದೆ. ಭಾರತದಲ್ಲಂತೂ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಬಾಲಿವುಡ್‌ ನಟಿಯರಿಂದ ಹಿಡಿದು ಕ್ರಿಕೆಟಿಗರವರೆಗೆ ಬಹುತೇಕ ಸೆಲೆಬ್ರಿಟಿಗಳು ಯೋಗ ದಿನ ಆಚರಿಸುತ್ತಾರೆ. ಹೀಗೆ, ಜಗತ್ತೇ ಭಾರತದ ವ್ಯಾಯಾಮ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಯೋಗದಾನ ನಿರ್ಣಾಯಕವಾಗಿದೆ.

ಈ ಸುದ್ದಿಯನ್ನೂ ಓದಿ: Yoga Day 2023: ಇದು ಯೋಗಾಭ್ಯಾಸದ ಸುಯೋಗ; ಫೋಟೊ-ವಿಡಿಯೊ ಮಾಡಿ ವಿಸ್ತಾರ ನ್ಯೂಸ್‌ಗೆ ಕಳುಹಿಸಿ

2023ರ ಯೋಗ ಥೀಮ್ ಏನು?

2023ರ ಜಿ20 ಅಧ್ಯಕ್ಷೀಯ ಸ್ಥಾನವನ್ನು ಭಾರತವೇ ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಜಿ20 ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗೆಯೇ, ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ಗೂ ಇದೇ ಪ್ರೇರಣೆಯಾದಂತಿದೆ. ಯಾಕೆಂದರೆ, ಈ ವರ್ಷದ ಯೋಗ ಥೀಮ್. ‘ಯೋಗ ಫಾರ್ ವಸುದೈವ ಕುಟುಂಬಕಂ’. ಅಂದರೆ, ಜಗತ್ತೇ ಕುಟುಂಬಕ್ಕೆ ಯೋಗ ಎಂದರ್ಥ. ಇಡೀ ವಿಶ್ವವನ್ನು ಯೋಗ ಒಳಗೊಳ್ಳಲಿದೆ ಎಂಬರ್ಥದಲ್ಲಿ ಈ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಆರೋಗ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version