ನವದೆಹಲಿ : ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಿದೆ. ಜಿಯೋ ಕ್ಲೌಡ್ ಪಿಸಿ (Jio Cloud PC) ಹೆಸರಿನ ಈ ತಂತ್ರಜ್ಞಾನವು ಕೇವಲ ನೂರು ರೂಪಾಯಿಗಳಿಗೆ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಇದಕ್ಕೆ ಬೇಕಾಗಿರುವುದು ಇಂಟರ್ ನೆಟ್ ಸಂಪರ್ಕ, ಸ್ಮಾರ್ಟ್ ಟಿವಿ, ಟೈಪಿಂಗ್ ಕೀಬೋರ್ಡ್, ಮೌಸ್ ಮತ್ತು ಜಿಯೋ ಕ್ಲೌಡ್ ಪಿಸಿ ಅಪ್ಲಿಕೇಷನ್. ಟಿವಿಗಳು ಸ್ಮಾರ್ಟ್ ಅಲ್ಲದಿದ್ದಲ್ಲಿ ಸಾಮಾನ್ಯ ಟಿವಿಗಳು ಸಹ ಜಿಯೋಫೈಬರ್ (JioFiber) ಅಥವಾ ಜಿಯೋಏರ್ ಫೈಬರ್ (JioAirFiber) ಜತೆಗೆ ಬರುವ ಸೆಟ್-ಟಾಪ್ ಬಾಕ್ಸ್ ಮೂಲಕ ಕಂಪ್ಯೂಟರ್ ಆಗಬಹುದು.
ಜಿಯೋ ಕ್ಲೌಡ್ ಪಿಸಿ ಎಂಬುದು ತಂತ್ರಜ್ಞಾನವಾಗಿದ್ದು, ಯಾವುದೇ ಟಿವಿಯು ಇಂಟರ್ ನೆಟ್ ಮೂಲಕ ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಬಳಸುವುದಕ್ಕೆ ಸಹ ಸುಲಭ. ಆದರೆ ಗ್ರಾಹಕರು ಅಪ್ಲಿಕೇಷನ್‌ಗೆ ಲಾಗಿನ್ ಮಾಡಬೇಕಾಗುತ್ತದೆ ಮತ್ತು ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಎಲ್ಲ ಡೇಟಾ ಟಿವಿಯಲ್ಲಿ ಕಾಣಿಸುತ್ತದೆ. ಇಮೇಲ್, ಸಂದೇಶ ಕಳುಹಿಸುವುದು, ಸಾಮಾಜಿಕ ನೆಟ್‌ವರ್ಕಿಂಗ್, ಇಂಟರ್ ನೆಟ್ ಸರ್ಫಿಂಗ್, ಶಾಲಾ ಪ್ರಾಜೆಕ್ಟ್ ಗಳು, ಕಚೇರಿ ಪ್ರಸೆಂಟೇಷನ್ ಮುಂತಾದ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಮನೆಯ ಟಿವಿಯಲ್ಲಿ ಮಾಡಬಹುದು. ಸರಳವಾಗಿ ಹೇಳುವುದಾದರೆ, ಎಲ್ಲ ಡೇಟಾವು ಕ್ಲೌಡ್‌ನಲ್ಲಿರುತ್ತದೆ ಮತ್ತು ಸರ್ವರ್, ಸ್ಟೋರೇಜ್, ಡೇಟಾಬೇಸ್, ನೆಟ್‌ವರ್ಕಿಂಗ್, ಸಾಫ್ಟ್‌ವೇರ್ ಮತ್ತು ಅನಲಿಟಿಕ್ಸ್ ಥರದ ಸೇವೆಗಳನ್ನು ಟಿವಿ ಮೂಲಕ ಬಳಕೆ ಮಾಡಬಹುದು.
ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್‌ಗೆ ಸಂಪರ್ಕ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನ ವರದಾನವಿದ್ದಂತೆ. ಏಕೆಂದರೆ ಕ್ಲೌಡ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದು ಸುರಕ್ಷಿತ ಮಾತ್ರವಲ್ಲ, ಡೇಟಾ ಮರುಪಡೆಯುವಿಕೆ ಸಹ ಸಾಮಾನ್ಯ ಕಂಪ್ಯೂಟರ್ ಅನ್ನು ಬಳಸುವುದಕ್ಕಿಂತ ಸುಲಭವಾಗಿದೆ. ಟಿವಿ ಜೊತೆಗೆ ಮೊಬೈಲ್ ನಲ್ಲೂ ಬಳಸಬಹುದು. ಕಂಪನಿಯು ಈ ಅಪ್ಲಿಕೇಷನ್ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ ಮುಂದಿನ ಕೆಲವು ತಿಂಗಳಲ್ಲಿ ಇದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು.
ಭಾರತದ ಡೇಟಾವು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಬೇಕು: ಆಕಾಶ್ ಅಂಬಾನಿ
ಭಾರತದ ಡೇಟಾವನ್ನು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಿಸಬೇಕು ಎಂದು ರಿಲಯನ್ಸ್ ಜಿಯೋದ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು ಪ್ರತಿಪಾದನೆ ಮಾಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್- 2024ರಲ್ಲಿ ಭಾಗವಹಿಸಿದ್ದ ಅವರು ಈ ಅಭಿಪ್ರಾಯ ಪಟ್ಟರು. ಭಾರತದಲ್ಲಿ ಡೇಟಾ ಉತ್ಪಾದನೆ ಪ್ರಮಾಣ ಹಾಗೂ ವೇಗ ಎರಡೂ ತೀವ್ರವಾಗಿ ಹೆಚ್ಚಾಗಿದೆ. ಇನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನೊಂದಿಗೆ (ಕೃತಕ ಬುದ್ಧಿಮತ್ತೆ) ಇದು ಇನ್ನಷ್ಟು ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದ ದೇಶದಲ್ಲಿಯೇ ಎಐ ಹಾಗೂ ಮಶೀನ್ ಲರ್ನಿಂಗ್ ಡೇಟಾ ಸೆಂಟರ್ ಗಳನ್ನು ಸ್ಥಾಪಿಸುವ ಅಗತ್ಯವಿದೆ. ಇದಕ್ಕಾಗಿ ಭಾರತೀಯ ಕಂಪನಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ದತ್ತಾಂಶ ಕೇಂದ್ರ ನೀತಿ- 2020ರ ಕರಡನ್ನು ಶೀಘ್ರದಲ್ಲಿಯೇ ನವೀಕರಿಸಬೇಕು ಎಂದು ಅವರು ಸರ್ಕಾರನ್ನು ಮನವಿ ಮಾಡಿದರು.
ಆಕಾಶ್ ಅಂಬಾನಿ ಅವರು ಮಾತು ಮುಂದುವರಿಸಿ, “ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಕೃತಕ ಬುದ್ಧಿಮತ್ತೆ (AI) ಅತ್ಯಂತ ಮುಖ್ಯವಾಗಿದೆ. ಮತ್ತು ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಪ್ರತಿ ಭಾರತೀಯರಿಗೂ ತಲುಪಿಸಲು ಜಿಯೋ ಪ್ರಯತ್ನಗಳನ್ನು ಆರಂಭಿಸಿದೆ. ನಾವು ಮೊಬೈಲ್ ಬ್ರಾಡ್‌ಬ್ಯಾಂಡ್‌ನೊಂದಿಗೆ ಮಾಡಿದಂತೆಯೇ ಕೈಗೆಟುಕುವ ಬೆಲೆಯಲ್ಲಿ ಶಕ್ತಿಯುತವಾದ ಎಐ ಮಾದರಿಗಳು ಮತ್ತು ಸೇವೆಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಇದಕ್ಕಾಗಿ, ನಾವು ರಾಷ್ಟ್ರೀಯ ಎಐ ಮೂಲಸೌಕರ್ಯದ ಆಧಾರ ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ ಆಕಾಶ್ ಅಂಬಾನಿ, “ಇಂದು ಭಾರತೀಯ ಮೊಬೈಲ್ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಿಂದಾಗಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಜಗತ್ತಿಗೆ ಎಐ ಸಲ್ಯೂಷನ್ ಗಳನ್ನು ಒದಗಿಸಬಹುದು. ಸರ್ಕಾರವು ಉದ್ಯಮ ಮತ್ತು ನಾವೀನ್ಯತೆಗೆ ಹೆಚ್ಚು ಪ್ರೋತ್ಸಾಹ- ಉತ್ತೇಜನ ನೀಡುವುದರಿಂದ ಭಾರತದಲ್ಲಿ ಅತಿದೊಡ್ಡ ಡಿಜಿಟಲ್ ಕ್ರಾಂತಿ ಸಂಭವಿಸಿದೆ. ನವ ಭಾರತದಲ್ಲಿ ಈಗ ವ್ಯಾಪಾರ ಸಂಪೂರ್ಣ ಬದಲಾಗಿದೆ. 145 ಕೋಟಿ ಭಾರತೀಯರ ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಪೂರೈಸಲು ಸರ್ಕಾರ ಮತ್ತು ಉದ್ಯಮವು ಉತ್ತಮ ಬಾಂಧವ್ಯದಲ್ಲಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.
ಭಾರತವು ಮೊಬೈಲ್ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುತ್ತದೆ. ಆದರೆ ನಾವು ಸಂಪರ್ಕಿತ (ಕನೆಕ್ಟೆಡ್), ಬುದ್ಧಿವಂತ (ಇಂಟೆಲಿಜೆಂಟ್) ಭವಿಷ್ಯಕ್ಕಾಗಿ ಎಐ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಅಳವಡಿಕೆ ಸಮಯದಲ್ಲಿ ಆದಂತೆಯೇ ಇದರಿಂದಲೂ ಉದ್ಯೋಗವೂ ಹೆಚ್ಚಾಗುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.
ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ 16,563 ಕೋಟಿ ರೂಪಾಯಿ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಸೋಮವಾರ (ಅಕ್ಟೋಬರ್ 14) ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಘೋಷಣೆ ಮಾಡಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭವು ಶೇಕಡಾ 9.4ರಷ್ಟು ಏರಿಕೆಯಾಗಿ 16,563 ಕೋಟಿ ರೂಪಾಯಿ ತಲುಪಿದೆ. ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್, ಪ್ರಸಕ್ತ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕ ಗಳಿಸಿರುವ ಆದಾಯವು 2.35 ಲಕ್ಷ ಕೋಟಿಗಳಾಗಿದ್ದು, ಕಳೆದ ತ್ರೈಮಾಸಿಕದಲ್ಲಿ ಆದಾಯವು 2.36 ಲಕ್ಷ ಕೋಟಿ ರೂಪಾಯಿಗಳಿತ್ತು.
ಜಿಯೋ ಪ್ಲಾಟ್ ಫಾರ್ಮ್
ರಿಲಯನ್ಸ್ ಕಂಪನಿಯ ಡಿಜಿಟಲ್ ಸೇವೆ ವ್ಯವಹಾರದ ಅಂಗವಾದ ಜಿಯೋ ಪ್ಲಾಟ್ ಫಾರ್ಮ್ಸ್ ಜುಲೈನಿಂದ ಸೆಪ್ಟೆಂಬರ್ ಕೊನೆ ತನಕದ ತ್ರೈಮಾಸಿಕದಲ್ಲಿ ದಾಖಲೆಯ 6,536 ಕೋಟಿ ರೂಪಾಯಿ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 23.2ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಯೋ 5,058 ಕೋಟಿ ರೂಪಾಯಿ ವರದಿ ಮಾಡಿತ್ತು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ 14.5ರಷ್ಟು ಏಇಕೆ ಕಂಡು, 28,338 ಕೋಟಿ ರೂಪಾಯಿ ತಲುಪಿದೆ. “ಡಿಜಿಟಲ್ ಸೇವೆಯಲ್ಲಿನ ಬೆಳವಣಿಗೆಗೆ ಮುಖ್ಯ ಕಾರಣ ನೋಡುವುದಾದರೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯದಲ್ಲಿನ ಹೆಚ್ಚಳ ಹಾಗೂ ಗ್ರಾಹಕರು ತೊಡಗಿಕೊಳ್ಳುವ ಪ್ರಮಾಣದಲ್ಲಿನ ಸುಧಾರಣೆಯಿಂದ ನಮ್ಮ ಸೇವೆಗಳಲ್ಲಿ ಪ್ರಬಲವಾದ ಮೌಲ್ಯ ಸೇರ್ಪಡೆಯಾಗಿದೆ,” ಎಂದು ಕಂಪನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.
ಜಿಯೋದ ತಿಂಗಳ ಎಆರ್ ಪಿಯು (ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯ) ವರ್ಷದಿಂದ ವರ್ಷಕ್ಕೆ ಶೇಕಡಾ 7.4ರಷ್ಟು ಏರಿಕೆಯಾಗಿ, 195.1 ರೂಪಾಯಿ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸರಾಸರಿ ಆದಾಯವು 181.70 ರೂಪಾಯಿ ಇತ್ತು. ಇನ್ನು ಮುಂದಿನ ಎರಡು- ಮೂರು ತ್ರೈಮಾಸಿಕದಲ್ಲಿ ದರ ಏರಿಕೆಯ ಪೂರ್ಣ ಪ್ರಮಾಣದ ಪ್ರಭಾವ ತಿಳಿಯಲಿದೆ ಎಂದು ಕಂಪನಿ ಹೇಳಿದೆ. 5ಜಿ ಸೇವೆಯ ವಿಚಾರದಲ್ಲಿ ಮಾರುಕಟ್ಟೆಯಲ್ಲಿ ಜಿಯೋ ನಾಯಕತ್ವದ ಸ್ಥಾನದಲ್ಲಿದೆ. ಒಟ್ಟಾರೆ ಜಿಯೋ 5ಜಿ ಬಳಕೆದಾರರ ಸಂಖ್ಯೆ 14.8 ಕೋಟಿ ತಲುಪಿದೆ. ರಿಲಯನ್ಸ್ ಜಿಯೋದ ಒಟ್ಟಾರೆ ವೈರ್ ಲೆಸ್ ಡೇಟಾ ದಟ್ಟಣೆಯ ಶೇಕಡಾ 34ರಷ್ಟು ಈ ಸೆಗ್ಮೆಂಟ್ ನಿಂದ ಬಂದಿದೆ. ಇನ್ನು ಸದ್ಯದಲ್ಲೆ ಜಿಯೋಕ್ಲೌಡ್ ಬೀಟಾ ಜಿಯೋದಿಂದ ಆರಂಭವಾಗಲಿದೆ.
“ಜಿಯೋದ ವ್ಯಾಪಕ ಶ್ರೇಣಿ ಕೊಡುಗೆಗಳು ಭಾರತದ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಡಿಜಿಟಲ್ ಆಗಿ ಸಶಕ್ತಗೊಳಿಸಲು, ಹಾಗೆಯೇ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಸಹ ಸಕ್ರಿಯಗೊಳಿಸುತ್ತದೆ. ಡಿಜಿಟಲ್ ಸೇವೆಗಳ ವ್ಯವಹಾರವು ರಾಷ್ಟ್ರೀಯ ಮಟ್ಟದಲ್ಲಿ ನವೀನ ಡೀಪ್-ಟೆಕ್ ಸಲ್ಯೂಷನ್ ಗಳ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸಿದೆ ಮತ್ತು ಎಲ್ಲ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪ್ರಯೋಜನಗಳನ್ನು ತಲುಪಿಸುವ ಹಾದಿಯಲ್ಲಿದೆ,” ಎಂದು ಮುಕೇಶ್ ಅಂಬಾನಿ ಹೇಳಿದರು.
ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷ ಕಿರಣ್ ಥಾಮಸ್ ಮಾತನಾಡಿ, ಕಂಪನಿಯ ಗೃಹ ಬಳಕೆಯ ಬ್ರಾಡ್‌ಬ್ಯಾಂಡ್ ವಿಭಾಗವು ಗಮನಾರ್ಹ ಬೆಳವಣಿಗೆ ದರವನ್ನು ಕಂಡಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದರು. ಪ್ರತಿ ತಿಂಗಳು ತಮ್ಮ ಬ್ರಾಡ್‌ಬ್ಯಾಂಡ್ ಸೇವೆಗೆ 1 ಮಿಲಿಯನ್, ಅಂದರೆ ಹತ್ತು ಲಕ್ಷ ಹೊಸ ಮನೆಗಳನ್ನು ತಲುಪುವುದು ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
ರೀಟೇಲ್ ವೆಂಚರ್ಸ್
ರಿಲಯನ್ಸ್ ರೀಟೇಲ್ ವೆಂಚರ್ಸ್ ತೆರಿಗೆ ನಂತರದ ಲಾಭವು 2,935 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಶೇ 20ರಷ್ಟಕ್ಕೆ ಹತ್ತಿರವಾಗುತ್ತದೆ. ಈ ರೀಟೇಲ್ ಘಟಕದ ಕಾರ್ಯಾಚರಣೆ ಮೂಲಕದ ಆದಾಯವು 66,502 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕದಲ್ಲಿ ಇದು 66,260 ಕೋಟಿ ರೂಪಾಯಿ ಬಂದಿತ್ತು. “ರೀಟೇಲ್ ಸೆಗ್ಮೆಂಟ್ ತನ್ನ ಗ್ರಾಹಕರ ನೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಆನ್ ಲೈನ್ ಅಥವಾ ಆಫ್ ಲೈನ್ ಹೀಗೆ ಎಲ್ಲ ಚಾನೆಲ್ ಗಳಲ್ಲೂ ಪರಿಣಾಮಕಾರಿಯಾಗಿ ಗ್ರಾಹಕರನ್ನು ತಲುಪಿ, ಅವರ ಅಗತ್ಯಗಳ ಎಲ್ಲ ಮಾದರಿ ಉತ್ಪನ್ನಗಳನ್ನು ತಲುಪಿಸಲಾಗುತ್ತಿದೆ,” ಎಂದು ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತೈಲ ಹಾಗೂ ಅನಿಲ
ರಿಲಯನ್ಸ್ ಇಂಡಸ್ಟ್ರೀಸ್ ತೈಲ ಹಾಗೂ ಅನಿಲ ವ್ಯವಹಾರದಲ್ಲಿ ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇಕಡಾ 11ರಷ್ಟು ಹೆಚ್ಚಳವಾಗಿ 5290 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷ ಇಬಿಐಟಿಡಿಎ 4760 ಕೋಟಿ ರೂಪಾಯಿ ಇತ್ತು. ಇನ್ನೂ ಮುಖ್ಯ ಸಂಗತಿ ಏನೆಂದರೆ, ವರ್ಷದಿಂದ ವರ್ಷಕ್ಕೆ ಇಬಿಐಟಿಡಿಎ ಮಾರ್ಜಿನ್ ಶೇ 72ರಿಂದ ಶೇ 85ಕ್ಕೆ ತಲುಪಿದೆ.
ಕಂಪನಿಯ ನ್ಯೂ ಎನರ್ಜಿ ಗಿಗಾ-ಫ್ಯಾಕ್ಟರಿಗಳ ಪ್ರಗತಿಯ ಬಗ್ಗೆ ಮುಕೇಶ್ ಅಂಬಾನಿ ಗಮನ ಸೆಳೆದರು. “ನಮ್ಮ ಮೊದಲ ನ್ಯೂ ಎನರ್ಜಿ ಗಿಗಾ-ಕಾರ್ಖಾನೆಗಳು ಈ ವರ್ಷದ ಅಂತ್ಯದ ವೇಳೆಗೆ ಸೌರ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವ ಹಾದಿಯಲ್ಲಿದೆ. ನವೀಕರಿಸಬಹುದಾದ ಸಮಗ್ರ ಶ್ರೇಣಿಯೊಂದಿಗೆ ಸೌರಶಕ್ತಿ, ಇಂಧನ ಶೇಖರಣಾ ವ್ಯವಸ್ಥೆಗಳು, ಹಸಿರು ಜಲಜನಕ, ಜೈವಿಕ ಶಕ್ತಿ ಮತ್ತು ಪವನ ಸೇರಿದಂತೆ ಸಲ್ಯೂಷನ್ ಗಳು, ನ್ಯೂ ಎನರ್ಜಿ ವ್ಯವಹಾರವು ಜಾಗತಿಕ ಸ್ವಚ್ಛ ಇಂಧನ ಪರಿವರ್ತನೆಗೆ ಗಮನಾರ್ಹ ಕೊಡುಗೆ ನೀಡಲು ಸಿದ್ಧವಾಗಿದೆ,” ಎಂದು ಅವರು ಹೇಳಿದರು.
ಇನ್ನು ಒಟ್ಟಾರೆ ಹಣಕಾಸು ಫಲಿತಾಂಶದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ನ ವೈವಿಧ್ಯಮಯವಾದ ವ್ಯವಹಾರಗಳ ಪೋರ್ಟ್ ಫೋಲಿಯೋಗೆ ಇರುವಂಥ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದರು.