ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ (CM Siddaramaiah) ರಾಜಿನಾಮೆಗೆ ಒತ್ತಾಯಿಸಿದರು. ಬಿಜೆಪಿ ಪಕ್ಷ ಕಳೆದ ಕೆಲ ತಿಂಗಳಿಂದ ಭ್ರಷ್ಟ ಕಾಂಗ್ರೆಸ್ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ವಾಲ್ಮೀಕಿ ನಿಗಮದ ಹಗರಣ ನಂತರ ಮುಡಾ ಹಗರಣವನ್ನು (MUDA Scam) ಕೈಗೆತ್ತಿಕೊಂಡೆವು. ಸ್ವತಃ ಸಿದ್ದರಾಮಯ್ಯ ಕುಟುಂಬವೇ ನೇರವಾಗಿ ಭಾಗಿಯಾಗಿತ್ತು. ಕಾನೂನಿನಲ್ಲಿ ಎಲ್ಲರೂ ಒಂದೇ ಎಂದು ಕೋರ್ಟ್ ತೀರ್ಪು ನೀಡಿದೆ. ರಾಜ್ಯಪಾಲರ ಮೇಲೆ ಆರೋಪ ಬಿಟ್ಟು, ಹೈಕೋರ್ಟ್ ತೀರ್ಪು ಅನ್ನು ಗೌರವಿಸಬೇಕು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ, ಭ್ರಷ್ಟಾಚಾರ ಕಳಂಕ ಹೊತ್ತ ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕು.
ವಾಲ್ಮೀಕಿ ನಿಗಮದ ಹಗರಣ ಆದಾಗ ಭ್ರಷ್ಟಾಚಾರ ಆಗಿಲ್ಲ ಅಂದಿದ್ದರು. ಬಳಿಕ ಸದನದಲ್ಲಿ ಸಿಎಂ ಅವರೇ ಹಗರಣ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮುಡಾ ವಿಚಾರದಲ್ಲಿ ಕೂಡ ನಮ್ಮ ಕುಟುಂಬದ ಪಾತ್ರ ಇಲ್ಲ ಅಂದಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ, ಅವರ ಮೇಲೆ ಆರೋಪ ಮಾಡಿದರು. ರಾಜ್ಯಪಾಲರು ಕೊಟ್ಟ ತನಿಖೆ ಮಾಡುವ ಪ್ರಕರಣ ಸರಿ ಇದೆ ಎಂದರು.
ಸತ್ಯಕ್ಕೆ ಜಯ ಖಂಡಿತ – ಆರ್ ಅಶೋಕ್
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಲಿ ಎಂದು ಆರ್.ಅಶೋಕ್ ಒತ್ತಾಯಿಸಿದರು. ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಜಾಗೊಳಿಸಿದ್ದು, ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಆರ್. ಅಶೋಕ್, ಸತ್ಯಮೇವ ಜಯತೆ.. ಸತ್ಯಕ್ಕೆ ಯಾವತ್ತು ಜಯ ಸಿಗುತ್ತೆ. ಇದರ ವಿರುದ್ಧ ವಿಧಾನ ಸಭೆಯಲ್ಲಿ ಅಹೋರಾತ್ರಿ ಧರಣಿ ಮಾಡಿದ್ದೇವೆ. ನಿಲುವಳಿ ಪ್ರಸ್ತಾವನೆ ಮಾಡಲು ಅವಕಾಶ ಕೊಡಲಿಲ್ಲ. ತಪ್ಪಾಗಿದೆ ಅನ್ನೋದು ಅವತ್ತೆ ಸ್ಪಷ್ಟವಾಗಿತ್ತು. ವಿಧಾನ ಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡ್ದೆ ಓಡಿದ್ರು. ಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿರುವುದು ಸ್ವಾಗತರ್ಹ. ಸಿದ್ದರಾಮಯ್ಯ ರಾಮಕೃಷ್ಟ ಹೆಗ್ಡೆ ಅವರನ್ನು ಪಾಲನೆ ಮಾಡುವುದಾದರೆ ರಾಜೀನಾಮೆ ಕೊಡಲಿ ಎಂದು ಕಿಡಿಕಾರಿದರು.
ಲಾಬಿ ಶುರು
ಮುಡಾ ಹಗರಣದ ಬಗ್ಗೆ ಮಾತನಾಡಲು ಸದನದಲ್ಲಿ ಅವಕಾಶ ಕೊಟ್ಟಿದ್ದರೆ ಅಂದೇ ಎಲ್ಲವೂ ಬಯಲಾಗುತ್ತಿತ್ತು. ವಾಲ್ಮೀಕಿ ನಿಗಮದ ಹಗರಣದ ಸಚಿವರ ರಾಜೀನಾಮೆ ಆಗಿ ಒಂದು ವಿಕೆಟ್ ಬಿದ್ದಿದೆ. ಈಗ ಮತ್ತೊಂದು ವಿಕೆಟ್ ಬೀಳಬೇಕಿದೆ. ಈ ಕ್ಷಣದಿಂದ ಐದಾರು ಜನರು ಎಚ್ಚರಗೊಂಡು ದೆಹಲಿಗೆ ಹೋಗುತ್ತಾರೆ. ಸಿಎಂ ಆಗಲು ಲಾಬಿ ಶುರುವಾಗಲಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿಯಲ್ಲಿ ದಾಖಲೆಗಳನ್ನು ಹೊರತೆಗೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ದಾಖಲೆ ತೆಗೆದಿದ್ದು ಯಾರು ಎಂಬುದು ಅರ್ಥವೇ ಆಗಲಿಲ್ಲ. ಸರ್ಕಾರ ಇದ್ದಾಗ, ಆ ಸರ್ಕಾರದಲ್ಲಿರುವವರಿಗೆ ಮಾತ್ರ ಬೇಗ ದಾಖಲೆಗಳು ದೊರೆಯುತ್ತದೆ. ಲಿಂಗಾಯತರು, ಒಕ್ಕಲಿಗರು ಎಂದು ಹೇಳಿಕೊಂಡು ಸಿಎಂ ಆಗಲು ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಹೊಸ ಮುಖ್ಯಮಂತ್ರಿ ಕಾಂಗ್ರೆಸ್‌ನಲ್ಲೇ ತಯಾರಾಗುತ್ತಿದ್ದಾರೆ. ನಾವು ಈ ಸರ್ಕಾರವನ್ನು ಬೀಳಿಸಲ್ಲ, ದುರಾಡಳಿತದಿಂದ ಸರ್ಕಾರವೇ ಬೀಳಲಿದೆ ಎಂದು ನಾನು ಹೇಳಿದ್ದೆ. ಅದು ಈಗ ನಿಜವಾಗುತ್ತಿದೆ ಎಂದರು.
ಭಷ್ಟಚಾರ ಮುಚ್ಚಿಕೊಳ್ಳಲು ಸಿಎಂ ಕುತಂತ್ರ-ಜೆಡಿಎಸ್
ಮೂಡಾದಲ್ಲಿ ಅಕ್ರಮವಾಗಿ 14 ಸೈಟುಗಳನ್ನು ಕಬಳಿಸಿದ್ದ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿರುವುದು ಸ್ವಾಗತಾರ್ಹ. ಅಧಿಕಾರ ದುರ್ಬಳಕೆ, ಸ್ವಜನಪಕ್ಷಪಾತ ಎಸಗಿ ಮೂಡಾದಲ್ಲಿನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ನಡೆಸಿದ್ದ ಕುತಂತ್ರಗಳಿಗೆ ಹೈಕೋರ್ಟ್ ಆದೇಶ ಕಪಾಳಮೋಕ್ಷ ಮಾಡಿದೆ ಎಂದು ಟ್ವೀಟ್ ಮಾಡಿ ಹೈ ಕೋರ್ಟ್ ತೀರ್ಪುನ್ನು ಜೆಡಿಎಸ್ ಸ್ವಾಗತಿಸಿದೆ. ಮೂಡಾ ಹಗರಣದ ವಿರುದ್ಧ NDA ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ನಡೆಸಿದ್ದ “ಮೈಸೂರು ಚಲೋ” ಹೋರಾಟಕ್ಕೆ ಜಯ ಸಿಕ್ಕಿದೆ.
“ಕಪ್ಪು ಚುಕ್ಕೆ”ಯಿಂದ ಬೆತ್ತಲಾದ “ವೈಟ್ನರ್ ರಾಮಯ್ಯ”
ಮುಡಾದಲ್ಲಿ ಹಗರಣ ನಡೆದೇ ಇಲ್ಲ, ನನ್ನ ಮೇಲೆ ಕಪ್ಪು ಚುಕ್ಕು ಇಲ್ಲ ಎಂದು ಸ್ವಯಂ ಸರ್ಟಿಫಿಕೇಟ್ ಪಡೆದಿದ್ದ ಸಿದ್ದರಾಮಯ್ಯ ಅವರೇ, ನಿಮಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಗೌರವ ಉಳಿಸಿಕೊಳ್ಳಿ ಎಂದು ಟ್ವೀಟ್ ಮೂಲಕವೇ ಜೆಡಿಎಸ್ ಕಾಲೆಳೆದಿದೆ.