Site icon Vistara News

CM Siddaramaiah : ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್; ಸೆ.9ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

CM Siddaramaiah

ಬೆಂಗಳೂರು: ಮುಂದಿನ ಸೋಮವಾರದವರೆಗೂ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ಸೆ.9ಕ್ಕೆ ಮುಂದೂಡಿಕೆಯಾಗಿದೆ. ಕಳೆದ ವಿಚಾರಣೆಯಲ್ಲಿ ರಾಜ್ಯಪಾಲರ ಪರವಾಗಿ ವಕೀಲ ತುಷಾರ ಮೆಹ್ತಾ , ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ಹಾಗೂ ಪ್ರದೀಪ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು. ಸುದೀರ್ಘ ವಾದ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ (ಸೆ.2) ಮಧ್ಯಾಹ್ನಕ್ಕೆ ಮುಂದೂಡಿತ್ತು.

ಇಂದು ಸೋಮವಾರ (ಸೆ.2) ಮತ್ತೆ ಪ್ರತಿವಾದಿಗಳ ಪರ ಕೆಲ ವಕೀಲರಿಂದ ವಾದ ಮಂಡನೆ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ಆಗಮಿಸಿದ್ದರು. ದೂರದಾರ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್‌ ವಾದ ಆರಂಭಿಸಿದ್ದರು. 17A ಸಂಬಂಧಿಸಿದಂತೆ ಅನುಮತಿ ಬೇಕೋ, ಬೇಡವೋ ಎಂಬುದರ ಬಗ್ಗೆ ಹಿರಿಯ ವಕೀಲ ಕೆ.ಜಿ ರಾಘವನ್‌ ವಾದ ಮಂಡನೆ ಮಾಡಿದರು. 17-A ಮೇಲೆ ಪ್ರಾಸಿಕ್ಯೂಷನ್‌ಗೆ ಕೊಡುವಾಗ ಪ್ರಕರಣದ ಗಂಭೀರತೆ ಮತ್ತು ದಾಖಲೆ ಇದ್ದರೆ ಸಾಕು, ಪೊಲೀಸ್‌ ಅಧಿಕಾರಿಗಳು ಯಾವುದೇ ಮನವಿ ಕೂಡಾ ಸಲ್ಲಿಸುವ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ಕೆಲ ತಪ್ಪುಗಳು ಆಗಿವೆ.

ಅಂತಹ ಸಂದರ್ಭವನ್ನು ಸಹ 17-a ಅಡಿಯಲ್ಲಿ ಕೊಡಬಹುದು. The procedures is improper ಹೀಗಾಗಿ ತನಿಖೆ ಆಗಬೇಕು. ಖಾಸಗಿ ದೂರುದಾರ ನೇರವಾಗಿ ಯಾವಾಗ ಹೋಗಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ತನಿಖೆಯ ಅಗತ್ಯವಿದೆ. ನೇರವಾಗಿ ಸಂಬಂಧ ಹೊಂದಿಲ್ಲದಿದ್ದರೂ ಸಾರ್ವಜನಿಕ ಸೇವಕರಾಗಿ ಪ್ರಭಾವ ಬೀರಿದರೆ ಅದು ಸೆಕ್ಷನ್‌ 17A ಅಡಿ ಬರುತ್ತದೆ. ಸಿಎಂ ಮಾಡದಿದ್ದರೂ ಅವರ ಪ್ರಭಾವದಿಂದ ಆಗಿದ್ದರೂ ಈ ಕಾಯಿದೆ ಅಡಿಯಲ್ಲಿ ಬರುತ್ತೆ. ಅಧಿಕಾರಿಯನ್ನು ಉಪಯೋಗಿಸಿಕೊಂಡು ಆಗಿದ್ದರೂ ಅದು ಅಧಿಕಾರ ದುರುಪಯೋಗ ಆಗುತ್ತದೆ ಎಂದು ರಾಘವನ್ ವಾದಿಸಿದ್ದರು.

ಒಬ್ಬ ಸಚಿವ ತನ್ನ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅದು ಅಪರಾಧವೇ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಈ ಕಾಯ್ದೆ ರಚಿಸಲಾಗಿದೆ. 17-a ಇರುವುದೇ ಆಡಳಿತದಲ್ಲಿ ಭ್ರಷ್ಟಾಚಾರ ತಡೆಯುವುದಕ್ಕೆ, ಹೀಗಾಗಿ ಇದನ್ನು ನಾವು ಸಣ್ಣ ವಿಚಾರ ಎಂದು ನೋಡಬಾರದು. ಇದನ್ನು ನಾವು ವಿವರವಾಗಿ ವಿಸ್ತಾರವಾಗಿ ಅರ್ಥ ಮಾಡಿಕೊಳ್ಳಬೇಕು.

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಬಳಿಕ ನ್ಯಾಯಾಧೀಶರ ತನಿಖೆ ಆಗಬೇಕು. ಇಲ್ಲದಿದ್ದರೆ ಇಂತಹ ವರದಿಗಳು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುತ್ತಾರೆ. ಈ ವೇಳೆ ನೀವು ಕಮೀಷನರ್ ತನಿಖೆಗೆ ಸಮ್ಮತಿ ನೀಡುತ್ತೀರಾ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದಾಗ ಸಾರ್ವಜನಿಕ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಪ್ರಕರಣವನ್ನು ನೋಡಬೇಕು. ಸರ್ಕಾರ ನ್ಯಾಯಾಂಗ ಆಯೋಗ ರಚಿಸಿರುವುದೇ ತನಿಖೆ ನಡೆಸಬೇಕೆಂದು. ನ್ಯಾಯಾಲಯವು ತನಿಖೆ ನಡೆಸಬೇಕು ಎಂಬುದರ ಪರವಾಗಿರಬೇಕು. ಏಕೆಂದರೆ ಸಾರ್ವಜನಿಕ ಶುಚಿತ್ವ ಕಾಪಾಡುವುದು ಇಲ್ಲಿ ಅಗತ್ಯಇದೆ. ಇಲ್ಲಿ ಕ್ಲೀನ್‌ಚಿಟ್‌ ನೀಡಬಹುದು ಎಂದು ರಾಘವನ್‌ ವಾದಿಸಿದರು.

ಡಿಸಿಎಂ ಆಗಿದ್ದ ವೇಳೆ ಹಗರಣ

ಅರ್ಜಿದಾರರು (ಸಿದ್ದರಾಮಯ್ಯ) ಡಿಸಿಎಂ ಆಗಿದ್ದ ವೇಳೆ ಈ ಹಗರಣ ನಡೆದಿದೆ. ಕೆಸರೆ ಗ್ರಾಮದಲ್ಲಿದ್ದ ಲ್ಯಾಂಡ್‌ ಲಿಂಗ ಎಂಬಾತನಿಗೆ ಸೇರಿದ್ದು, ಅವರಿಗೆ ಮಲ್ಲಯ್ಯ, ಮೈಲರಾಯ್ಯ ಹಾಗೂ ದೇವರಾಜು ಎಂಬುವವರು ಮೂವರು ಮಕ್ಕಳಿದ್ದಾರೆ. ಮೈಲಾರಯ್ಯ ಅವರಿಗೆ ದೇವರಾಜ ಮತ್ತು ಮಲ್ಲಯ್ಯ ಜಮೀನನ್ನು ಮಾರಾಟ ಮಾಡಿದ್ದರು. ಇದರಲ್ಲಿ ಹಕ್ಕು ಖುಲಾಸೆಯೂ ಆಗಿದೆ. ಮೈಲಾರಯ್ಯ 3.16 ಎಕರೆ ಭೂಮಿಯ ಮಾಲೀಕರಾಗಿದ್ದರು. ಇಲ್ಲಿ ದೇವರಾಜು ಆಕ್ಷೇಪಾರ್ಹವಾದ ಭೂಮಿಯ ಡಿನೋಟಿಫಿಕೇಶನ್‌ ಕೋರಿದ್ದಾರೆ. ಭೂ ಪರಿವರ್ತನೆ ಮಾಡಲು ಮಲ್ಲಿಕಾರ್ಜುನಯ್ಯ ಎಂಬುವರು ಸಲ್ಲಿಸಿದ ಅರ್ಜಿ ವಕೀಲ ರಾಘವನ್ ಓದಿ ಹೇಳಿದರು.

ದೇವರಾಜು ಭೂ ಮಾಲೀಕರಾಗಿರಲ್ಲಿಲ್ಲ. ಆದರೆ 2004ರಲ್ಲಿ ಸಿದ್ದರಾಮಯ್ಯ ಅವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜು ಭೂಮಿ ಮಾರಾಟ ಮಾಡಿದ್ದಾರೆ. ದೇವರಾಜ ಹೆಸರಿಗೆ ಡಿನೋಟಿಫಿಕೇಷನ್ ಕೇಳಿದ್ದರು. ಆದರೆ ಇದು ಮೈಲಾರಯ್ಯ ಹೆಸರಲ್ಲಿ ಜಮೀನು ಇದೆ. 1999 ನೋಟಿಫಿಕೇಷನ್ ಆದ ಜಮೀನಿಗೆ ಪರಿಹಾರ ಕೊಟ್ಟರು. ಇವರಿಗೆ ಮಾತ್ರ ಡಿನೋಟಿಫಿಕೇಷನ್ ಆಯಿತು ಎಂದು ದೇವನೂರು ಬಡವಾಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಉಲ್ಲೇಖಿಸಿದರು.

ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ರಾಘವನ್ ಮನವಿ

ಸರ್ಕಾರವೇ ಈ ಪ್ರಕರಣ ಸಂಬಂಧ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚಿಸಿದೆ. ಹೀಗಾಗಿ ರಾಜ್ಯಪಾಲರು 17 A ಅಡಿ ಅನುಮತಿ ನೀಡಿರುವುದು ಸರಿಯಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ರಾಘವನ್ ಮನವಿ ಮಾಡಿದ್ದರು. ಮೂರು ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4800 ಚದರಡಿ ಪರಿಹಾರ ನೀಡಬೇಕು. 1994ರ ನಿಯಮದ ಪ್ರಕಾರ ಎರಡು ಸೈಟಿಗಷ್ಟೇ ಅವಕಾಶವಿದೆ. ಮುಡಾ ವಶಪಡಿಸಿಕೊಂಡ ಮೇಲೆ ದೇವರಾಜು ಹೇಗೆ ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಾಟ ಮಾಡುತ್ತಾರೆ? ಸರಳವಾದ ತನಿಖೆ ನಡೆಯಬೇಕಾದ ಈ ಪ್ರಕರಣಕ್ಕೆ ನ್ಯಾಯಾಲಯದ ಇಷ್ಟು ಸಮಯ ತೆಗೆದುಕೊಳ್ಳುವ ಅಗತ್ಯವೇನಿದೆ? ತನಿಖೆ ಆದ ಮೇಲೆ ಆಗಿದೀಯಾ, ಇಲ್ಲವೋ ಗೊತ್ತಾಗಲಿದೆ. ಈ ಪ್ರಕರಣವನ್ನು ಕಾಂಪ್ಲಿಕೇಟ್ ಮಾಡಿದ್ದೇವೆ.

2003 ರಲ್ಲಿ ಮತ್ತೆ ಡಿನೋಟಿಫಿಕೇಷನ್ ಆಗುತ್ತದೆ. 2005ರಲ್ಲಿ ದೇವರಾಜ ಅವರು ಮಲ್ಲಿಕಾರ್ಜುನಯ್ಯಗೆ ಜಮೀನು ಮಾರಾಟ ಮಾಡುತ್ತಾರೆ. ಬಳಿಕ ಮಲ್ಲಿಕಾರ್ಜುನಯ್ಯ ಸಹೋದರಿ ಪಾವರ್ತಮ್ಮರಿಗೆ ಗಿಫ್ಟ್ ಕೊಡುತ್ತಾರೆ. ಪಾರ್ವತಮ್ಮ ನನಗೆ ಪರ್ಯಾಯ ನಿವೇಶನ ಕೊಡಿ ಎಂದು ಮನವಿ ಮಾಡಿದ್ದಾರೆ. ಇಲ್ಲಿ ಅರ್ಜಿದಾರರ ಬಾಮೈದನಿಂದ ಸಿಎಂ ಪತ್ನಿ ಪಾರ್ವತಿ ಹೆಸರಿಗೆ ದಾನ ಪತ್ರ ರಿಜಿಸ್ಟರ್ ಆಗಿದೆ. ಅದಕ್ಕೆ ಸಂಬಂಧಿಸಿದಂತೆ ಪರಿಹಾರ ಕೇಳುತ್ತಾರೆ. ಸಾಮಾನ್ಯ ಅರ್ಜಿದಾರರಂತೆ ಅರ್ಜಿ ಹಾಕಿದ್ದಾರೆ. 2015ರಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆದಿದೆ. ಸಿಎಂ ಪತ್ನಿ ಅಲ್ಲದೇ ಬೇರೆ ಯಾರಾದರೂ ಈ ಸ್ಥಾನದಲ್ಲಿದ್ದರೆ ಕೋರ್ಟ್ ಆದೇಶ ಪಡೆದು ಮುಡಾ ಸಂಪರ್ಕಿಸಬೇಕಿತ್ತು. ಇಲ್ಲಿ ಪಾರ್ವತಿ ಅವರು ಸಿಎಂ ಪತ್ನಿ ಆಗಿರುವುದರಿಂದ ಅದ್ಯಾವುದೂ ನಡೆದಿಲ್ಲ. ಮಾಲೀಕರೇ ಅಲ್ಲದವರಿಗೆ ಯಾವ ರೀತಿ ನಿವೇಶನ ಕೊಟ್ಟರು. ಈ ಪ್ರಕರಣದಲ್ಲಿ ಆಗಿರುವ ಎಲ್ಲ ವ್ಯವಹಾರಗಳು ದುರುದ್ದೇಶ ಪೂರಕವಾಗಿವೆ ಎಂದು ರಾಘವನ್‌ ಲಾ ಪಾಯಿಂಟ್‌ ಹಾಕಿದರು.

ಮಾಲೀಕನೇ ಅಲ್ಲದವನಿಂದ ಡಿನೋಟಿಫಿಕೇಷನ್‌ಗೆ ಅರ್ಜಿ ಸಲ್ಲಿಕೆ

ಡಿನೋಟಿಫಿಕೇಷನ್ ಕೇಳಿ ಅರ್ಜಿ ಸಲ್ಲಿಸಿದ್ದು ದೇವರಾಜು, ಆದರೆ ದೇವರಾಜು ಆಗ ಜಮೀನಿನ ಮಾಲೀಕನೇ ಅಲ್ಲ. 20.08.1997 ರಂದು ಅಂತಿಮ ಭೂಸ್ವಾಧೀನ ಅಧಿಸೂಚನೆಯಾಯಿತು. 30.03.1998 ರಂದು ಜಮೀನಿಗೆ ಪರಿಹಾರವೂ ನಿಗದಿಯಾಯಿತು. 18.05.1998 ರಂದು 3.16 ಎಕರೆ ಜಮೀನು ಡಿನೋಟಿಫೈ ಮಾಡಲಾಯಿತು. 25.08.2004 ರಂದು ದೇವರಾಜು ಈ ಜಮೀನನ್ನು ಬಿ.ಎಂ.ಮಲ್ಲಿಕಾರ್ಜುನ್ ಗೆ ಮಾರಾಟ ಮಾಡಿದ್ದರು. ನಂತರ ಭೂಪರಿವರ್ತನೆಗೂ ಮುನ್ನ ನಿವೇಶನ ಸ್ಥಳ ತನಿಖೆ ಮಾಡಲಾಯಿತು. ಭೂಪರಿವರ್ತನೆ ವೇಳೆಗಾಗಲೇ ಭೂಸ್ವಾಧೀನಗೊಂಡು ಸೈಟ್ ಹಂಚಲಾಗಿತ್ತು. ಈ ಅಕ್ರಮಗಳ ಬಗ್ಗೆ ತನಿಖೆಯ ಅಗತ್ಯವಿದೆ. ತನಿಖೆಯನ್ನು ತಡೆಹಿಡಿಯಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇಕೆ ಎಂಬುದೇ ಅಚ್ಚರಿ. ಸಾಮಾನ್ಯ ದೂರು ಬಂದರೂ ಇಂತಹ ವಿಚಾರದಲ್ಲಿ ತನಿಖೆ ಆಗಬೇಕು ಎಂದು ರಾಘವನ್ ವಾದ ಮಂಡಿಸಿದ್ದರು.

40-60 ಫಾರ್ಮುಲಾ ಸೆಟಲ್ಮೆಂಟ್‌ಗೆ ಒಪ್ಪದ ಪಾರ್ವತಮ್ಮ

ಮುಡಾ ಪ್ರಾಧಿಕಾರದ 40-60 ಫಾರ್ಮುಲಾ ಸೆಟಲ್ಮೆಂಟ್‌ಗೆ ಒಪ್ಪದ ಪಾರ್ವತಮ್ಮ (ಸಿದ್ದರಾಮಯ್ಯ ಪತ್ನಿ) ಜಮೀನು ಕೊಡಿಸುಂತೆ ಪತ್ರ ಕೊಟ್ಟಿದ್ದರು. ಲೇಔಟ್ ಅಭಿವೃದ್ಧಿ ಪಡಿಸಿರುವುದರಿಂದ ಅವರಿಗೆ ಬದಲಿ ನಿವೇಶನ ಕೊಡಲು ಒಪ್ಪಿಗೆ ಸೂಚಿಸಿದ್ದರು. ಒಂದು ಕಡೆ ಪರಿಹಾರ ಕೊಟ್ಟಿದ್ದಾರೆ, ಮತ್ತೊಂದು ಕಡೆ 14 ನಿವೇಶನಗಳನ್ನು ಪಡೆದಿದ್ದಾರೆ. ಕಡಿಮೆ ಬೆಲೆಯ ಜಮೀನು ಕೊಟ್ಟು, ಹೆಚ್ಚು ಬೆಲೆ ಬಾಳುವ ಜಮೀನು ಪಡೆಯಲು ಮುಂದಾಗಿದ್ದಾರೆ. ಕೆಸರೆ ಜಮೀನು ಕೊಟ್ಟು ವಿಜಯನಗರ ನಿವೇಶನ ಪಡೆಯಲು ಮನವಿ ನೀಡಿದ್ದಾರೆ. ಅಧಿಕಾರಿಗಳು ಸಹ ಇದಕ್ಕೆ ಮೌನ ವಹಿಸಿದ್ದಾರೆ. ಇದರಲ್ಲಿ ಎಲ್ಲವೂ ಅನುಮಾನಕ್ಕೆ ಕಾರಣವಾಗಿವೆ. ಹೀಗಾಗಿ ಈ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಆಗಬೇಕೆಂದು ರಾಘವನ್‌ ವಾದಿಸಿದರು.

ಆಸ್ತಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಮುಡಾ ಪ್ರಾಧಿಕಾರ ವಿವೇಚನೆ ಬಳಸಿಲ್ಲ. ಎಲ್ಲಾ ವಿಚಾರಗಳನ್ನು ಗಾಳಿಗೆ ತೂರಿರುವುದರಿಂದ ತನಿಖೆ ನಡೆಯಬೇಕಿದೆ. ಪ್ರಾಧಿಕಾರ ಇಷ್ಟು ನಡು ಬಗ್ಗಿಸಿರುವುದನ್ನು ನಾನು ಹಿಂದೆಂದೂ ನೋಡಿಲ್ಲ. 2017-21ರಿಂದ ಯಾವುದೇ ಬೆಳವಣಿಗೆಯಾಗುವುದಿಲ್ಲ. 2021ರ ಡಿಸೆಂಬರ್‌ನಲ್ಲಿ 38 ಸಾವಿರ ಚದರ ಅಡಿ ಜಾಗವನ್ನು ಸಿಎಂ ಪತ್ನಿಗೆ ಮುಡಾ ಹಂಚಿಕೆ ಮಾಡುತ್ತೆ. ಅದಕ್ಕೆ 2017ರಲ್ಲಿ ತೆಗೆದುಕೊಂಡ ನಿರ್ಣಯವನ್ನು ಲಿಂಕ್ ಮಾಡಿದೆ.

ಸುಣ್ಣಕ್ಕೆ ಬೆಣ್ಣೆಯ ಬೆಲೆ – ರಾಘವನ್‌ ಪ್ರಶ್ನೆ

ಒಂದು ತಪ್ಪಾದರೆ ಸರಿ, ಪದೆಪದೇ ತಪ್ಪಾದರೆ ದುರುದ್ದೇಶವಿದೆ ಎಂದರ್ಥ. 1998ರಲ್ಲಿ 3.16 ಎಕರೆಗೆ 3.24 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಗಿತ್ತು. ಆದರೆ ಸಿಎಂ ಪತ್ನಿಗೆ 3.24 ಲಕ್ಷ ರೂಪಾಯಿಯ ಪರಿಹಾರ ಕೊಡುತ್ತಿದ್ದೀರಾ. 14 ಸೈಟಿನ ಮೌಲ್ಯ ಎಷ್ಟಿದೆ, ಸುಣ್ಣಕ್ಕೆ ಬೆಣ್ಣೆಯ ಬೆಲೆ ನೀಡುತ್ತಿದ್ದೀರಾ ಎಂದು ರಾಘವನ್ ಪ್ರಶ್ನೆ ಮಾಡಿದರು. 1998 ರ ಭೂಸ್ವಾಧೀನಕ್ಕೆ 2015ರ ನೋಟಿಫಿಕೇಷನ್ ಅನ್ವಯಿಸಿದ್ದೀರಿ. ಮಾಲೀಕರೇ ಡಿನೋಟಿಫಿಕೇಷನ್ ಮಾಡಿದ್ದೀರಿ. ಕಡಿಮೆ ಬೆಲೆಯ ಜಮೀನಿಗೆ ಅತಿ ಹೆಚ್ಚಿನ ಪರಿಹಾರ ನೀಡಿದ್ದೀರಿ. ತನಿಖೆ ನಡೆಸಲು ಇನ್ನೆಷ್ಟು ಸಂಗತಿಗಳು ಬೇಕು. ಸಿಎಂ ಮತ್ತು ಈ ಘಟನೆಗೂ ಸಂಬಂಧವೇನು ಎಂಬ ಪ್ರಶ್ನೆ ಕೇಳಿದ್ದೀರಿ. ಈ ಎಲ್ಲಾ ಘಟನೆ ನಡೆದಾಗ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು ಎಂದು ಅರ್ಜಿದಾರರ ಪರ ರಾಘವನ್‌ ವಿವರಿಸಿದರು.

ಒಂದು ಸೈಟ್‌ಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ನೀಡಿರುವುದು ಎಷ್ಟು ಸರಿ?

2015ರಲ್ಲಿ 50 :50 ಅನುಪಾತದಲ್ಲಿ ಹಂಚಿಕೆ ಮಾಡುವಂತೆ ನಿಯಮ ರೂಪಿಸಲಾಯಿತು. 23.6.2014ರಲ್ಲಿ ಸಿಎಂ ಪತ್ನಿ ಮನವಿ ಸಲ್ಲಿಸಿದ್ದರು. 1998 ರ ಭೂಸ್ವಾಧೀನಕ್ಕೆ 2015 ರ 50 50 ನಿಯಮ ಅನ್ವಯಿಸಲು ಸಾಧ್ಯವೇ? 2017 ಡಿಸೆಂಬರ್ ತಿಂಗಳಿನಲ್ಲಿ ಸಿಎಂ ಪತ್ನಿಗೆ 50 :50 ಹಂಚಿಕೆ ನಿರ್ಣಯಿಸಲಾಯಿತು. ಸಿಎಂ ಗೂ ಮುಡಾ ಹಗರಣಕ್ಕೂ ಸಂಬಂಧವಿದೆಯೇ ಎಂದರೆ ಹೌದು ಎನ್ನುತ್ತೇನೆ. ಸಿಎಂ ಹಾಗೂ 2017 ರಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಕ್ಕೂ ಸಂಬಂಧವಿದೆ. ಒಂದು ಸೈಟ್‌ಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ನೀಡಿದ್ದಾರೆ. ಇಂತಹ ಕೃತ್ಯಕ್ಕೆ ತನಿಖೆ ಅವಶ್ಯಕತೆ ಇಲ್ಲವೆಂದು ಹೇಳಲು ಸಾಧ್ಯವೇ? 2017 ರ ನಿರ್ಣಯಕ್ಕೂ ಅಧಿಕಾರದಲ್ಲಿದ್ದದ್ದಕ್ಕೂ ಸಂಬಂಧವಿದೆ. ವಿಸ್ತೃತವಾದ ನೆಲೆಯಲ್ಲಿ ಪ್ರಕರಣವನ್ನು ನೋಡಬೇಕು ಎಂದು ಹಿರಿಯ ವಕೀಲ ರಾಘವನ್ ವಾದ ಮುಕ್ತಾಯಗೊಳಿಸಿದರು.

ಬಳಿಕ ನ್ಯಾಯಮೂರ್ತಿಗಳು ಸೆ.9ಕ್ಕೆ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ಮುಂದೂಡಿದರು. ಸೆ.9ರಂದು ಎಜಿ ಶಶಿಕಿರಣ್‌ ಆಡಟ್ಟು ವಾದ ಮಂಡಿಸಲಿದ್ದು, ಸೆ.12ರಂದು ಸಿಎಂ ಪರ ಅಭಿಷೇಕ್‌ ಸಿಂಗ್ವಿ ವಾದ ಮಾಡಲಿದ್ದಾರೆ.

ಏನಿದು ಮುಡಾ ಪ್ರಕರಣ?

ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೇ ದೂರು ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿಟ್ಟಿದೆ. ಟಿ.ಜೆ. ಅಬ್ರಾಹಂ ನೀಡಿದ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿಮ್ಮ ವಿರುದ್ಧ ಯಾಕೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬಾರದು ಎಂದು ಸಿದ್ದರಾಮಯ್ಯಗೆ ಶೋಕಾಸ್​ ನೋಟಿಸ್ ನೀಡಿದ್ದರು. ​ ಸಿಎಂಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸಚಿವ ಸಂಪುಟ ನಿರ್ಣಯ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಧಿಕ್ಕರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪ್ರದೀಪ್ ಕುಮಾರ್ ಎಸ್.ಪಿ, ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅರ್ಜಿಗಳನ್ನು ಸಲ್ಲಿಸಿದ್ದರು.

ಮೈಸೂರಿನ ಸ್ನೇಹಮಯಿ ಕೃಷ್ಣ ಸಿಎಂ ವಿರುದ್ಧ ಮತ್ತೂಂದು ದೂರು ಸಲ್ಲಿಸಿದ್ದರು. ಅಕ್ರಮ ಭೂ ಡಿನೋಟಿಫಿಕೇಶನ್‌ಗೆ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿದ್ದರು. ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, 1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version