ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಶನಿವಾರ (ಆ.31) ಮುಂದುವರಿಯಿತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ರಾಜ್ಯಪಾಲರ ಪರ ಸುಮಾರು 10:30ಕ್ಕೆ ಶುರುವಾದ ತುಷಾರ್ ಮೆಹ್ತಾ ವಾದ ಸುದೀರ್ಘ ಎರಡ್ಮೂರು ಗಂಟೆಗಳ ಕಾಲ ನಡೆಯಿತು.
ಆಗಸ್ಟ್ 29ರಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಬಗ್ಗೆ ವಾದಿಸಿ, ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅರ್ಜಿದಾರ ಅಬ್ರಾಹಂ 17 ಎ ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೇ ಎಂದಿದ್ದಾರೆ. ಹೀಗಾಗಿ ರಾಜ್ಯಪಾಲರು ಹಾಗೂ ಅಬ್ರಹಾಂಗೆ ದಂಡ ವಿಧಿಸಿ ದೂರು ವಜಾಗೊಳಿಸಬೇಕು.
ರಾಜ್ಯಪಾಲರ ಮುಂದೆ ಒಂದು, ಕೋರ್ಟ್ ಮುಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಅನುಮತಿ ನೀಡಿಲ್ಲವೆಂದು ಕೋರ್ಟ್ ಭಾವಿಸಬೇಕು ಎಂದಿದ್ದರು. ಸ್ನೇಹಮಯಿ ಕೃಷ್ಣ, ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ರಾಜ್ಯಪಾಲರು ಉಲ್ಲೇಖಿಸಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. 10-15 ವರ್ಷ ಹಳೆಯ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗುತ್ತಿದೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಹೆಚ್ ಡಿ ಕುಮಾರಸ್ವಾಮಿ ಇವರುಗಳ ಆರೋಪಪಟ್ಟಿ ಸಿದ್ದವಾಗಿದ್ದರೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ. ರಾಜ್ಯಪಾಲರು ಕ್ಯಾಬಿನೆಟ್ ಸಲಹೆಯನ್ನೂ ಪಾಲಿಸಿಲ್ಲ, ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಸಿಂಘ್ವಿ ವಾದ ಮಾಡಿದ್ದರು.
ನೋಟಿಫಿಕೇಷನ್‌ಗಾಗಿ ಸಿದ್ದರಾಮಯ್ಯ ಯಾವುದೇ ಪ್ರತಿಫಲ ಪಡೆದಿಲ್ಲ. ಜಮೀನಿಗೆ ಬದಲಿಯಾಗಿ ನಿವೇಶನ ಪಡೆದಿದ್ದಾರೆ. ಇದನ್ನು ದೊಡ್ಡ ಹಗರಣದಂತೆ ಬಿಂಬಿಸಲಾಗುತ್ತಿದೆ. ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ತಿಳಿಯುತ್ತಿಲ್ಲ ಎಂದು ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಇತ್ತ ಶನಿವಾರ ವಾದ ಮಂಡಿಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದ್ದರು. ಹೀಗಾಗಿ ಹೈಕೋರ್ಟ್ ಶನಿವಾರ ಬೆಳಗ್ಗೆ 10.30 ಕ್ಕೆ ವಿಚಾರಣೆ ಮುಂದೂಡಿತ್ತು.
ಶನಿವಾರ ನಡೆದ ವಿಚಾರಣೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರೆ, ಸ್ನೇಹಮಯಿಕೃಷ್ಣ ಪರ ಮಾಜಿ ಎಎಸ್‌ಜಿ ಮಣೀಂದರ್ ಸಿಂಗ್ ವಾದ ಮಂಡಿಸಿದ್ದರು. ಅಬ್ರಾಹಂ ಪರ ವಕೀಲ ಪ್ರಭುಲಿಂಗ ನಾವದಗಿ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಜರಿದ್ದರು. ಇನ್ನು ವಾದ-ಪ್ರತಿವಾದವನ್ನು ಆಲಿಸಲೆಂದು ಕೋರ್ಟ್ ಹಾಲ್‌ನಲ್ಲಿ ವಕೀಲರು ಕಿಕ್ಕಿರಿದು ಜಮಾಯಿಸಿದ್ದರು.
ಹೈ ವೋಲ್ಟೇಜ್ ಲೀಗಲ್ ಫೈಟ್ ಹೇಗಿತ್ತು?
ಮೊದಲಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲು ಮುಂದಾದರು. ಈ ವೇಳೆ ಹಿರಿಯ ವಕೀಲ ಫ್ರೊ ರವಿವರ್ಮ ಕುಮಾರ್ ಮೆಹ್ತಾ ಅವರಿಗೂ ಮುನ್ನ ವಾದಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ ನನ್ನ ವಾದ ಆರು ಕಂಪಾರ್ಟ್‌ಮೆಂಟ್‌ಗಳಲ್ಲಿವೆ. ಮೊದಲನೆಯದಾಗಿ 17A ಹಾಗೂ 19 ನಡುವೆ ವ್ಯತ್ಯಾಸ ಇದೆ ಎಂಬುದನ್ನು ವಾದ ಮಾಡುತ್ತೇನೆ. ನ್ಯಾಯಮೂರ್ತಿಗಳಿಗೆ ಈ ಕೇಸಿನ ಎಲ್ಲಾ ಅಂಶಗಳೂ ತಿಳಿದಿವೆ. ನಾನು ರಾಜ್ಯಪಾಲರ ಪರ ನನ್ನ ವಾದ ಮಂಡಿಸುತ್ತಿದ್ದೇನೆ ಎಂದರು. ಆಗ ರವಿ ವರ್ಮ ಕುಮಾರ್ ಮಧ್ಯಪ್ರವೇಶಿಸಿ ರಾಜ್ಯಪಾಲರ ಆದೇಶದ ಒಂದು ಪ್ಯಾರಾ ಓದಲು ಮನವಿ ಮಾಡಿದರು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಅಡಿಯಲ್ಲಿ ಅನುಮತಿ ನೀಡಲಾಗಿದೆ. ಆರೋಪಿತ ಘಟನೆ ನಡೆದಾಗ ಭಾರತೀಯ ನ್ಯಾಯ ಸಂಹಿತೆ ಜಾರಿಯಲ್ಲಿರಲಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿಯೇ ಕಾನೂನುಬಾಹಿರವೆಂದು ವಾದ ಮಾಡಿದರು. ಐಪಿಸಿ ಅಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಲ್ಲವೆಂಬುದಕ್ಕೆ ಇದು ಸಾಕ್ಷಿ ಎಂದು ರವಿವರ್ಮ ಕುಮಾರ್ ಚಾಟಿ ಬೀಸಿದರು. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಅವರ ಸಹೋದರನ ವಿರುದ್ಧ ಆರೋಪವಿದೆ. ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ? ಎಂದು ಸಿಎಂ ಪರ ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿದರು.
ಬಳಿಕ ವಾದ ಆರಂಭಿಸಿದ ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ಅಬ್ರಹಾಂ ಪ್ರಕರಣದಲ್ಲಿ ನೋಟಿಸ್ ನೀಡಲಾಗಿದೆ. ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ಪ್ರಕರಣದಲ್ಲಿ ನೋಟಿಸ್ ನೀಡಿಲ್ಲ ಎಂದಿದ್ದಾರೆ. ರಾಜ್ಯಪಾಲರು ಕಾನೂನಿನ ಪ್ರಕಾರ ನೋಟಿಸ್ ನೀಡುವ ಅಗತ್ಯವೇ ಇಲ್ಲ,. ಪಿಸಿ ಕಾಯಿದೆ ಸೆಕ್ಷನ್ 17ಎ ಅಥವಾ 19 ಸಂದರ್ಭದಲ್ಲೂ ನೋಟಿಸ್ ನೀಡಬೇಕಿಲ್ಲ. ಯಾವ ಸೆಕ್ಷನ್ ಅಡಿ ಆರೋಪ ಪಟ್ಟಿ ಸಲ್ಲಿಸಬೇಕು ಎಂಬುದು ತನಿಖಾಧಿಕಾರಿಗೆ ಬಿಟ್ಟ ವಿಚಾರವಾಗಿದೆ. ಹೀಗಾಗಿ ಇಲ್ಲಿ ಬಿಎನ್‌ಎಸ್/ಐಪಿಸಿ ಉಲ್ಲೇಖಿಸಲಾಗಿದೆ ಎಂಬ ವಿಚಾರ ಬರುವುದಿಲ್ಲ.
ಕಳೆದ 26 ಜುಲೈನಲ್ಲಿ ನೊಟೀಸ್ ನೀಡಲಾಗಿದೆ. ದೂರುದಾರರಿಗೆ ಆರೋಪಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ ಎಂದು ವಾದಿಸಿದ್ದಾರೆ. ಮೂರನೇ ದೂರುದಾರಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದಾರೆ. ಉಳಿದ ಇಬ್ಬರು ದೂರುದಾರರಿಗೆ ಸಂಬಂಧಿಸಿದಂತೆ ಉಲ್ಲೇಖಿಸಿಲ್ಲ ಎಂದು ವಾದಿಸಿದ್ದಾರೆ. ಸಿಎಂ ಯಾವುದೇ ಶಿಫಾರಸ್ಸು ಮಾಡಿಲ್ಲ ಎಂದಿದ್ದಾರೆ. ಹೀಗಿರುವಾಗ ಪಿಸಿ ಕಾಯಿದೆ ಸೆಕ್ಷನ್ 17ಎ ಅಗತ್ಯವೇ ಇಲ್ಲ. ಹೀಗಿರುವಾಗ ನಮ್ಮ ವಾದ ಏತಕ್ಕಾಗಿ? ರಾಜ್ಯಪಾಲರ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಲ್ಲದೇ ಅರ್ಜಿದಾರರಿಗೂ ಕೊಡುತ್ತೇನೆ. ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ವಿವೇಚನೆ ಬಳಸಲಾಗಿದೆ ಎಂಬುದನ್ನು ಎಲ್ಲರು ತಿಳಿಯಬೇಕು ಮೆಹ್ತಾ ವಾದವನ್ನು ಮುಂದುವರಿಸಿದರು.
ಸೆ.19 ಅಡಿಯಲ್ಲಿಯೂ ನ್ಯಾಚುಲರ್ ಜಸ್ಟೀಸ್ ಬೇಕಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ತನಿಖಾ ಹಂತದಲ್ಲಿ ತನಿಖಾಧಿಕಾರಿ ಎಲ್ಲದರ ಪರಿಶೀಲನೆ ಮಾಡಬೇಕು. ರಾಜ್ಯಪಾಲರು ತನಿಖೆಗೆ ಮೊದಲೇ ಎಲ್ಲವನ್ನೂ ಹೇಳಬೇಕಿಲ್ಲ. ಸಿಎಂ ಪತ್ನಿಯ ಮೇಲಿನ ಕ್ರಿಮಿನಲ್ ಹೊಣೆಗಾರಿಕೆ ಪತಿ ಮೇಲೆ ವರ್ಗಾಯಿಸಬಾರದು. ಹೀಗೆಂದು ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಾಡಿದ್ದಾರೆ. ಅವರ ಮಾತನ್ನು ಒಪ್ಪಿದರೆ 17ಎ ಅಡಿಯ ಅನುಮತಿಯೇ ಬೇಕಿಲ್ಲ ಎಂದು ಹೈಕೋರ್ಟ್‌ಗೆ ಲಿಖಿತ ಹೇಳಿಕೆಯನ್ನು ತುಷಾರ್ ಮೆಹ್ತಾ ಸಲ್ಲಿಸಿದ್ದರು. ರಾಜ್ಯಪಾಲರ ಕಡತವನ್ನು ತಮ್ಮ ಮಾಹಿತಿಗೆ ಸಲ್ಲಿಸುತ್ತಿದ್ದೇನೆ. ಇದರಲ್ಲಿ ಮುಚ್ಚಿಡುವಂತದ್ದೇನೂ ಇಲ್ಲ. 26 ಜುಲೈರಂದು ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ಜುಲೈ 27 ರಂದು ಸಿಎಂ ಮುಖ್ಯಕಾರ್ಯದರ್ಶಿಗೆ ಸೂಚಿಸಿದರು. ಅಡ್ವೊಕೆಟ್ ಜನರಲ್ ಅಭಿಪ್ರಾಯ ಪಡೆದು ಕ್ಯಾಬಿನೆಟ್ ಮುಂದಿಡುವಂತೆ ಸಿಎಂ ಸೂಚಿಸಿದ್ದರು ಎಂದು ಮೆಹ್ತಾ ವಾದಿಸಿದರು.
ಬಳಿಕ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ಸಾಂವಿಧಾನಿಕ ಪೀಠಗಳು ನೀಡಿರುವ ತೀರ್ಪುಗಳನ್ನು ಓದಿ ಮೆಹ್ತಾ ವಾದ ಮಂಡಿಸಿದ್ದರು. ರಾಜ್ಯಪಾಲರ ಕಡತ ಗಮನಿಸಿದರೆ ವಿವೇಚನೆ ಬಳಸಿರುವುದು ತಿಳಿಯುತ್ತದೆ. ರಾಜ್ಯಪಾಲರು ಎಲ್ಲವನ್ನು ಸಮಗ್ರವಾಗಿ ವಿವರಣೆ ನೀಡಿದ್ದಾರೆ. ಆಗಸ್ಟ್ 14ರಂದು ಎಲ್ಲಾ ಕಡತಗಳನ್ನು ಓದಿ ನೋಟ್ಸ್ ಮಾಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನು ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ. ದೂರಿನ ವಿವರ, ಕ್ಯಾಬಿನೆಟ್ ಸಲಹೆ, ತಮ್ಮ ಅಭಿಪ್ರಾಯ ಎಲ್ಲವನ್ನೂ ದಾಖಲಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಪರಿಶೀಲಿಸಿ ಅಂತಿಮವಾಗಿ ಆದೇಶಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಅಂತಿಮವಾಗಿ ನಿರ್ಧರಿಸಬೇಕಿಲ್ಲ. ಈ ಕೇಸ್ ಕಾಗ್ನಿಜೆನ್ಸಿ ಅಪರಾಧವೋ ಅಲ್ಲವೋ ತೀರ್ಮಾನಿಸಬೇಕಿಲ್ಲ ಎಂದು ಶ್ರೀರೂಪಾ ಪ್ರಕರಣವನ್ನು ಉಲ್ಲೇಖಿಸಿ ತುಷಾರ್ ಮೆಹ್ತಾ ವಾದ ಮಾಡಿದರು. ಯಾವುದೇ ಆಡಳಿತಾತ್ಮಕ ಆದೇಶ ವಿವೇಚನೆ ಬಳಸಲೇಬೇಕು. ಇದಕ್ಕೆ ಯಾವುದೇ ತೀರ್ಪುಗಳ ಸಮರ್ಥನೆಯೇ ಬೇಕಿಲ್ಲ. ಎಷ್ಟರ ಮಟ್ಟಿನ ವಿವೇಚನೆ ಬಳಸಬೇಕೆಂಬುದು ಆ ಪ್ರಕರಣ ಆಧರಿಸುತ್ತದೆ. 2013ರ ಲಲಿತ ಕುಮಾರಿ vsಉತ್ತರ ಪ್ರದೇಶ ಸರ್ಕಾರದ ಸುಪ್ರೀಂ ಕೋರ್ಟ್‌ನ ರಾಜೇಶ್ ಅಗರ್ ವಾಲ್ ತೀರ್ಪು ಅನ್ನು ಉಲ್ಲೇಖಿಸಿದರು.
ಸಿಆರ್‌ಪಿಸಿ 154 ರಲ್ಲಿ ಹೇಗೆ ಎಫ್‌ಐಆರ್ ದಾಖಲು ಮಾಡಲಾಗುತ್ತದೆ. ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಅಡಿಯ ವ್ಯಾಪ್ತಿ ಪರಿಗಣಿಸಬೇಕು. ಪೊಲೀಸ್ ಅಧಿಕಾರಿ ತನಿಖೆಗೂ ಮೊದಲು ಅನುಮತಿ ಪಡೆಯಬೇಕು. ಲಲಿತಾಕುಮಾರ್ ಪ್ರಕರಣದ ತೀರ್ಪನ್ನು ಹೈಕೋರ್ಟ್ ಪರಿಗಣಿಸಬೇಕು. ಯಾವುದೇ ಮಾಹಿತಿ ಸಂಜ್ಞೇಯವಾಗಿದ್ದರೆ ಸಾಕು ಎಫ್ಐಆರ್ ದಾಖಲಿಸಬೇಕು. ತಹಸೀಲ್ದಾರ್ ಆಗಿರಲಿ ರಾಜ್ಯಪಾಲರಾಗಲೀ ಕರ್ತವ್ಯ ಪಾಲಿಸಬೇಕು. ಕಾಗ್ನಿಜೆಬಲ್ ಅಪರಾಧದ ಮಾಹಿತಿ ನೀಡಿದರೆ ಎಫ್‌ಐಆರ್ ದಾಖಲಿಸಬೇಕು. ರಾಜ್ಯಪಾಲರು ವಿವರವಾದ ಸಾಕ್ಷ್ಯ ವಿಚಾರಣೆ ನಡೆಸುವಂತಿಲ್ಲ. ಸೆಕ್ಷನ್ 19 ಅಡಿಯೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ. 17 ಎ ಅಡಿಯಷ್ಟೇ ಅನುಮತಿ ನೀಡುತ್ತಿದ್ದಾರೆ. ಇದು ಇನ್ವೆಸ್ಟಿಗೇಷನ್‌ಗೆ ಮಾತ್ರ ನೀಡಿರುವ ಅನುಮತಿ ಎಂದಷ್ಟೇ ಪರಿಗಣಿಸಬೇಕು. 17ಎ ಎಲ್ಲ ಪಬ್ಲಿಕ್ ಸರ್ವೆಂಟ್‌ಗೆ ಅನ್ವಯವಾಗುತ್ತದೆ. ಇದು ಲಲಿತಾ ಕುಮಾರಿ ಕೇಸ್ ಹಾಗೂ ಅಶೋಕ್ ಪ್ರಕರಣದಲ್ಲೂ ಇದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಇನ್ನು 17ಎ ಅಡಿಯಲ್ಲಿ ಪೂರ್ವಾನುಮತಿ ಪಡೆಯುವ ಮುನ್ನ ನೊಟೀಸ್ ನೀಡಲು ಕೆಲ ಕಾರಣಗಳಿರುತ್ತದೆ. ನೋಟಿಸ್ ನೀಡಿದರೆ ಸಾಕ್ಷಿಗಳ ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸಿಆರ್‌ಪಿಸಿ 154 ಹಾಗೂ 17aನಲ್ಲಿ ಶೋಕಾಸ್ ನೊಟೀಸ್ ವಿಷಯ ಆಗಲ್ಲ. ಮೇಲ್ನೋಟಕ್ಕೆ ಅಪರಾಧವಾಗಬಹುದೇ ಇಲ್ಲವೇ ಎಂದಷ್ಟೇ ನೋಡಬೇಕು. 17 ಎ ಅಡಿ ಅನುಮತಿ ನೀಡುವ ಮುನ್ನ ಇಷ್ಟನ್ನ ನೋಡಬೇಕು ಎಂದು ಮೆಹ್ತಾ ವಾದಿಸಿದರು. ಈ ಮಧ್ಯೆ ಪ್ರವೇಶಿಸಿದ ನ್ಯಾಯಮೂರ್ತಿಗಳು 17 ಎ ಅಡಿ ನ್ಯಾಚುರಲ್ ಜಸ್ಟೀಸ್ ಪಾಲಿಸಬೇಕಾದರೆ ಎಫ್‌ಐಆರ್ ದಾಖಲಿಸುವ ಮುನ್ನವೂ ಆರೋಪಿಯ ಹೇಳಿಕೆ ದಾಖಲಿಸಬೇಕೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಮೆಹ್ತಾ 17ಎ ಮೊದಲು ಪ್ರಾಥಮಿಕ ತನಿಖೆಯೂ ಬೇಕಿಲ್ಲವೆಂಬುದೇ ನನ್ನ ವಾದ. ಎಲ್ಲದರ ವಿಚಾರಣೆ ನಡೆಸಿದರೆ ಸಾಕ್ಷ್ಯನಾಶವಾಗಬಹುದು. ಪೊಲೀಸರ ತನಿಖೆ ಮೇಲೆಯೂ ಇದರ ಪರಿಣಾಮವಾಗಬಹುದು ಎಂದು ರಾಜ್ಯಪಾಲರು ಬರೆಸಿರುವ ಆದೇಶವನ್ನು ಓದಿ ಹೇಳಿದರು. ನಾನು ಟಿ.ಜೆ.ಅಬ್ರಹಾಂರ ದಾಖಲೆಗಳನ್ನು ಗಮನಿಸಿದ್ದೇನೆ. ದೂರುದಾರರ ವಾದವನ್ನೂ ಖುದ್ದಾಗಿ ಆಲಿಸಿದ್ದೇನೆ. ಇದರ ಸಂಬಂಧ ಶೋಕಾಸ್ ನೋಟಿಸ್ ಅನ್ನು ಸಿಎಂಗೆ ನೀಡಿದ್ದಾರೆ. ಅದಾದ ನಂತರ 91 ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿಯೇ ಇಷ್ಟು ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ಯಾರೂ ತೆಗೆದುಕೊಂಡಿಲ್ಲ. ಇದರಲ್ಲಿ ಇನ್ನೂ ಒಂದು ಆಸಕ್ತಿಕರ ಅಂಶವಿದೆ.
ಅಬ್ರಹಾಂ ಮತ್ತು ಸರ್ಕಾರದ ದಾಖಲೆಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ. ಕ್ಯಾಬಿನೆಟ್ ನಿರ್ಣಯ ಸೇರಿ ಎಲ್ಲ ದಾಖಲೆಗಳನ್ನೂ ತಮ್ಮ ಮುಂದಿಡಲು ಸೂಚಿಸಿದ್ದಾರೆ. ಮೂರು ಕಲಂಗಳನ್ನು ರಚಿಸಿದ್ದಾರೆ. ಟಿ.ಜೆ. ಅಬ್ರಹಾಂ ದೂರು, ಕ್ಯಾಬಿನೆಟ್ ಉತ್ತರ, ಸಿಎಂ ಉತ್ತರ ಎಲ್ಲವನ್ನೂ ಪರಾಮರ್ಶೆ ಮಾಡಿದ್ದಾರೆ. ರಾಜ್ಯಪಾಲರು ಫೈಲ್ ನೋಡಿದ್ದೇನೆ ಎಂದು ಬರೆದಿದ್ದಾರೆ. ರಾಜ್ಯಪಾಲರ ಒರಿಜಿನಲ್ ಫೈಲ್ ಅನ್ನು ತುಷಾರ್ ಮೆಹ್ತಾ ಕೋರ್ಟ್‌ಗೆ ಸಲ್ಲಿಸಿ, ಬಳಿಕ ಪ್ರತಿಗಳನ್ನು ಸಿಎಂ ಪರ ವಕೀಲರಿಗೆ ನೀಡಿದರು. ಸದ್ಯಕ್ಕೆ ಕಡತವನ್ನು ನನ್ನ ಬಳಿಯೇ ಇಟ್ಟುಕೊಳ್ಳಬಹುದೇ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಕೇಳಿದಾಗ ದಯವಿಟ್ಟು ಇದರ ಪ್ರತಿಗಳನ್ನು ಬೇರೆ ಯಾರಿಗೂ ನೀಡದಂತೆ ಸಿಎಂ ಪರ ವಕೀಲರಿಗೆ ಹಾಗೂ ಹೈಕೋರ್ಟ್‌ಗೆ ತುಷಾರ್ ಮೆಹ್ತಾ ಮನವಿ ಮಾಡಿದರು.
ಪ್ರತಿ ಹಂತದಲ್ಲೂ ರಾಜ್ಯಪಾಲರ ನೋಟ್ ಸಿದ್ಧ
ಪ್ರತಿ ಹಂತದಲ್ಲೂ ರಾಜ್ಯಪಾಲರು ನೋಟ್ ಸಿದ್ಧಪಡಿಸಿದ್ದಾರೆ. ಅದಾದ ನಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸಚಿವ ಸಂಪುಟದ ಮಂತ್ರಿಗಳನ್ನು ಸಿಎಂ ಆಯ್ಕೆ ಮಾಡುತ್ತಾರೆ. ಹೀಗಾಗಿ ತಮ್ಮನ್ನು ಆಯ್ಕೆ ಮಾಡಿದ ಸಿಎಂ ವಿರುದ್ಧ ಕ್ಯಾಬಿನೆಟ್ ನಿರ್ಣಯ ಸಾಧ್ಯವಿಲ್ಲ. ಆದ್ದರಿಂದ ಇಂತಹ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಒಪ್ಪಬೇಕಿಲ್ಲ ಎಂದು ಮೆಹ್ತಾ ವಾದ ಮಂಡಿಸಿದರು.
ಕ್ಯಾಬಿನೆಟ್ ಸೂಚನೆಯನ್ನೂ ಏಕೆ ಪಾಲಿಸಿಲ್ಲವೆಂಬುದನ್ನೂ ರಾಜ್ಯಪಾಲರು ಹೇಳಿದ್ದಾರೆ. ಮುಡಾ ಆರೋಪಗಳ ಬಗ್ಗೆಯೂ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. 40 -60 ಹಾಗೂ 50 -50 ಗೆ ನಿಯಮ ಬದಲಾಯಿಸಲಾಗಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಬಹಳ ಪ್ರತಿಷ್ಟಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಇಷ್ಟೆಲ್ಲಾ ಅಂಶಗಳಿದ್ದರೂ ಕ್ಯಾಬಿನೆಟ್ ತಾರತಮ್ಯಪೂರಿತ ನಿರ್ಣಯ ಕೈಗೊಂಡಿದೆ. ಹೀಗಾಗಿ ಸೂಚನೆ ಪಾಲಿಸದೇ ಸ್ವಂತ ವಿವೇಚನೆ ಬಳಸುತ್ತಿದ್ದೇನೆ ಎಂದು ರಾಜ್ಯಪಾಲರು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಎಂ.ಪಿ.ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್‌ನ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ್ದಾರೆ. ಅಧಿಕಾರದಲ್ಲಿರುವವರು ಕಾನೂನು ಉಲ್ಲಂಘಿಸಿ ಆರಾಮವಾಗಿರುತ್ತಾರೆ ಎಂದು ಮೆಹ್ತಾ ವಾದಿಸಿದರು.
ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ 17 ಎ ಅಡಿ ಅನುಮತಿಯಿಲ್ಲದೇ ಪೊಲೀಸರು ತನಿಖೆ ನಡೆಸುವಂತಿಲ್ಲವೆಂದಿದೆ. ಆದರೆ ಪೊಲೀಸರೇ ಅನುಮತಿ ಪಡೆಯಬೇಕೆಂದು ಉಲ್ಲೇಖವಾಗಿಲ್ಲ. ಯಾರು ಬೇಕಾದರೂ ಸಕ್ಷಮ ಪ್ರಾಧಿಕಾರಿಯ ಅನುಮತಿ ಪಡೆಯಬಹುದು. ಇದನ್ನೇ ನಾನು ನನ್ನ ಹಿಂದಿನ ತೀರ್ಪಿನಲ್ಲಿ ಹೇಳಿದ್ದೇನೆ ಎಂದರು.
ಮುಖ್ಯ ಕಾರ್ಯದರ್ಶಿ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ, ಅಡ್ವೊಕೇಟ್ ಜನರಲ್ ಕಚೇರಿಗೆ ಕಳುಹಿಸಿದ್ದಾರೆ. ನಂತರ ಕ್ಯಾಬಿನೆಟ್‌ಗೆ ಕಳುಹಿಸಿದ್ದಾರೆ. ಅಡ್ವೊಕೇಟ್ ಜನರಲ್ ಅವರ ದಾಖಲೆಯನ್ನು ಕ್ಯಾಬಿನೆಟ್ ಕಾಪಿ ಮಾಡಿದೆ. ಸಚಿವ ಸಂಪುಟದ ಸಲಹೆ , 90 ಪುಟಗಳು ಹಾಗೂ ಅಡ್ವೋಕೇಟ್ ಜನರಲ್ ಸಲಹೆ ಹಾಗೂ ಸಿಎಂ ಉತ್ತರವನ್ನು ಕಾಮ, ಫುಲ್ ಸ್ಟಾಫ್ ಸಮೇತ ಎಲ್ಲವನ್ನು ಕಾಫಿ ಫೇಸ್ಟ್ ಮಾಡಿ ಕಳಿಸಿದ್ದಾರೆ.
ಮುಡಾ ಕೇಸ್‌ನಲ್ಲಿ ಹಲವು ನಿಯಮ ಉಲ್ಲಂಘನೆ ಆಗಿವೆ. ಮುಡಾದಲ್ಲಿ ಸಿಎಂ ಪುತ್ರ ಸಹ ಇದ್ದಾರೆ . ಇದು ದಲಿತರೊಬ್ಬರಿಗೆ ಸೇರಿದ ಜಮೀನಾಗಿದ್ದು, ಬಳಿಕ ಇದನ್ನು ಸಿಎಂ ಸಂಬಂಧಿಕರು ಖರೀದಿ ಮಾಡಿ, ಸಿಎಂ ಪತ್ನಿಗೆ ಗಿಫ್ಟ್ ಕೊಡುತ್ತಾರೆ. ಸಿಎಂ ಮಗ ಮುಡಾ ಕಮಿಟಿಯಲ್ಲಿಇರುತ್ತಾರೆ. ಇದು ಹೊರ ಬಂದ ಬಳಿಕ ಕಮಿಟಿ ರಚನೆ ಮಾಡಿ, ಈ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ಜತೆಗೆ ಸುದೀರ್ಘ ವಿವರಣೆಯನ್ನು ಕೊಟ್ಟಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡುವ ಅಧಿಕಾರ ಇದೆ. ಆದರೆ ಸಿಎಂ ಈಗಲೂ ಖಾಸಗಿ ವ್ಯಕ್ತಿ ಪ್ರಾಸಿಕ್ಯೂಷನ್‌ಗೆ ಕೇಳುವ ಅಧಿಕಾರ ಇಲ್ಲ ಅಂತಿದ್ದಾರೆ ಎಂದು ಮೆಹ್ತಾ ಲಾ ಪಾಯಿಂಟ್ ಹಾಕಿದ್ದರು. ಕ್ಯಾಬಿನೆಟ್‌ನಲ್ಲಿ ಮಾಡಿದ ನಿರ್ಣಯ ನಾನ್ ಅಪ್ಲಿಕೇಶನ್ ಮೈಂಡ್ ಮಾಡಿದ್ದಾರೆ . ಅಡ್ವೋಕೇಟ್ ಜನರಲ್ ಸಿಎಸ್ ಅವರನ್ನು ಪರಿಗಣಿಸಿಲ್ಲ. ಬಳಿಕ ಸಿಎಂ ವೈಯುಕ್ತಿಕವಾಗಿ ಉತ್ತರ ಕೊಡುವಾಗ ಕಾಪಿ ಪೇಸ್ಟ್ ಮಾಡಿದ್ದಾರೆ. ಇದನ್ನು ಕ್ಯಾಬಿನೆಟ್ ಒಳಗೆ ಅಪ್ಲಿಕೇಶನ್ ಮೈಂಡ್ ಇಲ್ಲ ಅನ್ನೋದು ಸ್ಪಷ್ಟವಾಗುತ್ತೆ ಎಂದು ಮೆಹ್ತಾ ವಾದಿಸಿದರು.
ನಂಬೋದರಿ ಪ್ರಕರಣ ಪ್ರಸ್ತಾಪ ಮಾಡಿದ ಮೆಹ್ತಾ ಇದರಲ್ಲೂ ಎಫ್ಐಆರ್ ಹಾಗೂ ಚಾರ್ಜ್ ಶೀಟ್‌ಗೂ ಮೊದಲು ಪ್ರಾಸಿಕ್ಯೂಷನ್ ಕೊಡಬಹುದು ಎಂದಿದ್ದಾರೆ. ಮಹಿಂದರ್ ಸಿಂಗ್ ಗಿಲ್ ಕೇಸ್‌ನಲ್ಲಿ ಇದನ್ನೇ ಹೇಳಿದ್ದಾರೆ. ಎಲ್ಲ ಕಾರಣಗಳನ್ನು ಹೇಳಿಯೇ ಪ್ರಾಸಿಕ್ಯೂಷನ್ ಕೊಡಬೇಕು ಅಂತೇನಿಲ್ಲ. 6 ಪುಟಗಳ ಉತ್ತರ ಬರೆದಿದ್ದೇನೆ, ಅಪ್ಲಿಕೇಶನ್ ಮೈಂಡ್ ಇಟ್ಕೊಂಡು ಮಾಡಿರುವ ನಿರ್ಧಾರ ಇದು. ಆದರೆ ಅಪ್ಲಿಕೇಶನ್ ಮೈಂಡ್ ಉಪಯೋಗಿಸಿಲ್ಲ ಅನ್ನೋದು ತಪ್ಪು. ಇದು ನೇರವಾಗಿ ಕಾರ್ಯಾಂಗದ ಕೆಲಸವಾಗಿದೆ. ಆಡಳಿತಾತ್ಮಕ ನಿರ್ಧಾರ ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದು. ಸಹಜ ಕಾನೂನಿಗೆ ಅವಕಾಶ ಕೊಟ್ಟೆ ನಿರ್ಧಾರ ಮಾಡಿದ್ದೇವೆ ಎಂದು ಮೆಹ್ತಾ ವಾದಿಸಿದರು.
ಮೂವರು ಅರ್ಜಿ ಕೊಟ್ಟಿರುವುದು ನಿಜ. ಒಬ್ಬರು ಮೈಸೂರು, ಮತ್ತಿಬ್ಬರು ಬೆಂಗಳೂರು ಇರಬಹುದು. ಆದರೆ ಜಮೀನು ಹಾಗೂ ಆರೋಪಿ ಒಂದೇ, ಹೀಗಾಗಿ ನಾನೇಕೆ ಮೂರು ಅರ್ಜಿಗಳ ಮೇಲೆ ಶೋಕಾಸ್ ನೋಟೀಸ್ ಕೊಡಬೇಕು. ಒಂದೇ ರೀತಿಯ ದಾಖಲೆ ಇದ್ದಾಗ ಮೂವರ ಅರ್ಜಿ ಮೇಲೆ ಶೋಕಾಸ್ ಕೊಡುವ ಅಗತ್ಯವಿಲ್ಲ. ಮೂರು ಅರ್ಜಿಗಳನ್ನು ಒಂದೇ ಎಂದು ಪರಿಗಣಿಸಿ ತೀರ್ಮಾನ ಮಾಡಿದ್ದಾರೆ. ಹೋಲಿಕೆಯನ್ನು ಗಮನಿಸಿ ರಾಜ್ಯಪಾಲರು ಪೂರ್ವಾನುಮತಿ ನೀಡಿದ್ದಾರೆ. ಹೀಗಾಗಿ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡಬೇಕಿಲ್ಲ.
ಅನುಮತಿ ನೀಡುವ ಮುನ್ನ ಆರೋಪಿಯ ಹೇಳಿಕೆ ದಾಖಲಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ತುಷಾರ್ ಮೆಹ್ತಾ ಉಲ್ಲೇಖಿಸಿದರು. ರಾಜೇಶ್ ಅಗರ್ ವಾಲ್ ಕೇಸ್ , ಆರ್‌ಬಿಐಗೆ ವಂಚನೆ ಪ್ರಕರಣ ಪ್ರಸ್ತಾಪಿಸಿದರು. ಆಡಳಿತಾತ್ಮಕ ನಿರ್ಧಾರಕ್ಕೆ ಯಾವುದೇ ವಿಚಾರಣೆ ಅವಶ್ಯಕತೆ ಇಲ್ಲ. ತನಿಖೆ ಅವಶ್ಯವಿದೆಯೇ ಇಲ್ಲವೇ ಎಂಬುದನ್ನಷ್ಟೇ 17ಎ ಅಡಿ ತೀರ್ಮಾನಿಸಬೇಕು. ಎಲ್ಲವನ್ನೂ ಈ ಹಂತದಲ್ಲಿಯೇ ವಿವರಿಸಿದರೆ ಸಾಕ್ಷ್ಯ ನಾಶವಾಗಬಹುದು ಎಂದು ಮೆಹ್ತಾ ಸುಬ್ರಹ್ಮಣ್ಯಸ್ವಾಮಿ ತೀರ್ಪು ಉಲ್ಲೇಖಿಸಿದರು.
ಸಂಪುಟ ಸಭೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕ್ಯಾಬಿನೆಟ್ ನಡೆದಿದೆ. ಅದು ಸಿಎಂ ಸಿದ್ದರಾಮಯ್ಯ ಅವರೇ ಸಂಪುಟ ಸಭೆ ನಡೆಸಲು ನಾಮನಿರ್ದೇಶನ ಮಾಡಿದ್ದಾರೆ. ಆ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ. ಏಕೆಂದರೆ ಅಲ್ಲಿ ಪಕ್ಷಪಾತದ ನಿಲುವು ಇರುತ್ತದೆ. ಶಂಶೇರ್ ಸಿಂಗ್ ಹಾಗೂ ಎಂ .ಪಿ.ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್ ಉಲ್ಲೇಖಿಸಿ ರಾಜ್ಯಪಾಲರು ಕೆಲ ಅಪರೂಪದ ಸಂದರ್ಭದಲ್ಲಿ ಸ್ವತಂತ್ರ ವಿವೇಚನೆ ಬಳಸಬಹುದು.
ರಾಜ್ಯಪಾಲರು ಸಾಂವಿಧಾನಿಕ ಹುದ್ದೆ ನಿರ್ವಹಣೆಯಲ್ಲಿದ್ದಾರೆ. ಅವರನ್ನು ಫ್ರೆಂಡ್ಲಿ ಗವರ್ನರ್ ಎಂದು ಉಲ್ಲೇಖಿಸುತ್ತಾರೆ. ನಾನು ಸಿಎಂ ಅವರನ್ನು ಗೌರವಾನ್ವಿತ ಸಿಎಂ ಎಂದೇ ಕರೆಯುತ್ತಿದ್ದೇನೆ. ಹೀಗಾಗಿ ವಾದ ಮಂಡನೆ ಮಾಡುವಾಗ ನಮ್ಮ ಪದ ಬಳಕೆ ಸರಿಯಿರಬೇಕೆಂದು ಸಿಂಘ್ವಿ ವಾದ ಮಂಡನೆ ಮಾಡುವಾಗ ಅಬ್ರಹಾಂ ಹಾಗೂ ರಾಜ್ಯಪಾಲರ ಬಗ್ಗೆ ಮಾತನಾಡಿದಕ್ಕೆ ಮೆಹ್ತಾ ಕೌಂಟರ್ ಕೊಟ್ಟರು. ನಾನು ಸಾಂವಿಧಾನಿಕ ಕ್ರಿಯೆಗಳನ್ನು ಮಾತ್ರ ನಿರ್ವಹಿಸಿದ್ದೇನೆ. ನಾನು 17a ಅನುಮತಿ ನೀಡಿದ್ದೇನೆ. ಫಲಾನುಭವಿ ಮಾತ್ರ ಅಪರಾಧಿಯಾಗುತ್ತಾನೆ. ತನಿಖೆಯಾಗಲಿ ಬಿಡಿ ಯಾಕೆ ಚಿಂತಿಸುತ್ತೀರಿ. ಮೂಡಾದಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ವಾದ ಮುಕ್ತಾಯ ಗೊಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ