ಬೆಂಗಳೂರು: ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ಅರ್ಜಿ ವಿಚಾರಣೆಯು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸೆ.12ರಂದು ನಡೆಯಿತು. ವಾದ-ವಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಗುರುವಾರ (ಸೆ.12) ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಮೊದಲಿಗೆ ಸ್ನೇಹಮಯಿಕೃಷ್ಣ ಪರ ಹಿರಿಯ ವಕೀಲ ರಾಘವನ್ ವಾದ ಆರಂಭಿಸಿದರು. 50-50 ಫಾರ್ಮುಲಾ ಅಡಿಯಲ್ಲಿ ನಿವೇಶನ ಕೊಡಬಾರದು ಎಂದು ಸರ್ಕಾರ ಆದೇಶ ಮಾಡಿದೆ, ಅದರಲ್ಲಿ ತಪ್ಪು ಆಗಿವೆ. ಮೂಡಾ ಆಯುಕ್ತ ದಿನೇಶ್ ಅಮಾನತು ಆದೇಶ ಪ್ರಸ್ತಾಪಿಸಲು ಮುಂದಾದಾಗ ಎಜಿ ಶಶಿಕಿರಣ್ ಶೆಟ್ಟಿ ಆಕ್ಷೇಪಿಸಿ, ಅಮಾನತು ಆದೇಶ ಹಿಂಪಡೆಯಲಾಗಿದೆ. ರಾಘವನ್ ಅವರು ಹೇಳುತ್ತಿರುವ ವಿಚಾರಗಳು ಇಲ್ಲಿಗೆ ಅನ್ವಯಿಸುವುದಿಲ್ಲ. ಪ್ರತಿವಾದಿಗಳು ಮಿಸ್ ಲೀಡ್ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಸರ್ಕಾರ ಮಾಡಿರುವ ಆದೇಶ ಗಮನಕ್ಕೆ ತಂದಿದ್ದೇವೆ. ಅದನ್ನು ಪ್ರತಿವಾದಿಗಳು ಮುಚ್ಚಿಡುತ್ತಿದ್ದಾರೆ ಎಂದರು.
ಒಂದು ಬೆಳವಣಿಗೆಯನ್ನು ಕೋರ್ಟ್ ಗಮನಕ್ಕೆ ತರಲು ಬಯಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ವಾದಿಸಿದರು. ಸರ್ಕಾರ ಮುಡಾ ಹಗರಣ ಸಂಬಂಧ ಆಯುಕ್ತರನ್ನು ಅಮಾನತು ಮಾಡಿದೆ. 50 :50 ಅಡಿಯಲ್ಲಿ ಹಂಚಿಕೆ ಮಾಡಿದ ಕಾರಣಕ್ಕೆ ಅಮಾನತು ಮಾಡಿದೆ ಎಂದರು. ಮುಡಾದಲ್ಲಿ ಆಗಿರುವ ಅಕ್ರಮ ತನಿಖೆಗೆ ಸರ್ಕಾರ ಕಮಿಟಿ ರಚನೆ ಮಾಡಿದೆ ಎಂದು ನ್ಯಾಯಾಧೀಶರು ಉತ್ತರಿಸಿ, ಇವತ್ತು ವಿಚಾರಣೆ ಮುಗಿಸೋಣ ಎಂದರು.
ವಾಕ್ ಆ್ಯಂಡ್ ಗೋ ನಿರ್ಧಾರಗಳು ಆಗಬಾರದು- ಅಭಿಷೇಕ್ ಮನುಸಿಂಘ್ಟಿ
ಜನಪ್ರತಿನಿಧಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೊಡುವಾಗ ವಾಕ್ ಆ್ಯಂಡ್ ಗೋ ರೀತಿಯಲ್ಲಿ ನಿರ್ಧಾರಗಳು ಆಗಬಾರದು. ರಾಜ್ಯಪಾಲರ ವಿವೇಚನಾ ಅಧಿಕಾರಕ್ಕೆ ಮಾತ್ರ ಸಿಮೀತವಾಗಿದೆ ಎಂದು ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಆರಂಭಿಸಿದರು. ರಾಜ್ಯಪಾಲರ ಆದೇಶದಲ್ಲಿ ಒಂದೆ ಅಂಶ ಮುಖ್ಯವಾಗಿದೆ. ನಾನು ವಿವೇಚನಾಧಿಕಾರವನ್ನು ಬಳಸುತ್ತಿದ್ದೇನೆ. ಸಚಿವ ಸಂಪುಟದ ಯಾವುದೇ ನಿರ್ಧಾರವನ್ನು ಪರಿಗಣಿಸಿಲ್ಲ ಎಂದಿದೆ. ಆದರೆ ರಾಜ್ಯಪಾಲರಿಗೆ ಸಿಎಂ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಮೇಲ್ನೊಟಕ್ಕೆ ಯಾವುದೇ ಸಾಕ್ಷಿ ಇದೆ ಎಂದು ಉಲ್ಲೇಖಿಸಿಲ್ಲ.
ಸಂವಿಧಾನಕ್ಕೆ ರಾಜ್ಯಪಾಲರಿಂದ ಅಪಚಾರ
ರಾಜ್ಯಪಾಲರು ವಿವೇಚನೆಯನ್ನು ಹೇಗೆ ಬಳಸಿದೆ ಎಂಬುದನ್ನು ತಿಳಿಸಬೇಕಿತ್ತು. ತಾರತಮ್ಯ ಮಾಡಿಲ್ಲವೆಂಬುದನ್ನು ರಾಜ್ಯಪಾಲರು ವಾದಿಸಬೇಕಿತ್ತು. ಇನ್ನೊಂದು ಪ್ರಮುಖ ಅಂಶವೆಂದರೆ ರಾಜ್ಯಪಾಲರ ಐದಾರು ಪುಟದ ಆದೇಶದಲ್ಲಿ ಬೇರೇನೂ ಹೇಳಿಲ್ಲ. ನಾನು ಸಚಿವ ಸಂಪುಟದ ಆದೇಶ ಪಾಲಿಸಬೇಕಿಲ್ಲವೆಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ ಸಿಎಂ ಪಾತ್ರ ಇದೆಯೇ ಎಂಬುದನ್ನು ರಾಜ್ಯಪಾಲರು ತಿಳಿಸಿಲ್ಲ. ಯಾವುದಾದರೂ ಕಡತಕ್ಕೆ ಸಿಎಂ ಸಹಿ ಹಾಕಿದ್ದಾರೆಯೇ ಹೇಳಿಲ್ಲ. ಹೀಗಾಗಿ ರಾಜ್ಯಪಾಲರು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಯಾವ ಸಂಪುಟ ತಾನೆ ತನ್ನ ನಾಯಕ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿ ಎಂದು ಹೇಳುತ್ತದೆ? ಎಂದಾಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಅಲ್ಲಿ ಪಕ್ಷಪಾತಿತ ಇರಬಹುದಲ್ಲವೇ? ಪ್ರಶ್ನೆ ಮಾಡಿದರು.
ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಬಹಳ ದೂರ ನಿಂತಿದ್ದಾರೆ. 23 ವರ್ಷದಲ್ಲಿ ನನ್ನ ಅರ್ಜಿದಾರರ ಮೇಲೆ ಯಾವುದೇ ದೂರು ಇಲ್ಲ. 1984 ರಿಂದ ನನ್ನ ಅರ್ಜಿದಾರರು ಮಂತ್ರಿ ಆಗಿದ್ದಾರೆ. ಆದರೆ ಇಲ್ಲಿವರೆಗೂ ದೂರುದಾರರು ಕೊಟ್ಟಿರುವ ಸಂಬಂಧ ಇದುವರೆಗೂ ಎಲ್ಲೂ ಅಧಿಕಾರ ಹೊಂದಿಲ್ಲ. ಅದರ ಸಂಬಂಧ ಆದೇಶ ಮಾಡಿಲ್ಲ. ಪ್ರಾಸಿಕ್ಯೂಷನ್ ಕೊಡುವಾಗ ವಿಚಾರಣೆಗೆ ಯೋಗ್ಯ ಎನ್ನುವ ಬಗ್ಗೆ ವಿಚಾರಗಳನ್ನು ಪ್ರಸ್ತಾಪ ಮಾಡಬೇಕಿತ್ತು .ಆದರೆ ಇದ್ಯಾವುದು ಸಹ ರಾಜ್ಯಪಾಲರು ಮಾಡಲಿಲ್ಲ. ಘಟನೆಗಳನ್ನು ಚೈನ್ ಲಿಂಕ್ ರೀತಿ ನೋಡಬೇಕಿತ್ತು. ಅದನ್ನು ರಾಜ್ಯಪಾಲರು ಮಾಡಲಿಲ್ಲ. ಯಾರು ಸಹ 20 ಪುಟಗಳ ರಾಜ್ಯಪಾಲರ ಆದೇಶ ಇರಬೇಕು ಅಂತ ಹೇಳುವುದಿಲ್ಲ. ಆದರೆ ಕೊಡುವ ಕಾರಣಗಳು ಸಂಪೂರ್ಣವಾಗಿ ಇರಬೇಕು. ಆಳವಾಗಿ ಅಧ್ಯಯನ ಮಾಡಿರಬೇಕು ಎಂದು ವಾದ ಮಂಡಿಸಿದರು.
ಸಿದ್ದರಾಮಯ್ಯ ವಿರುದ್ಧ ಮಾತ್ರ ಯಾಕೆ ಆರೋಪ
ಮುಂದುವರಿದು,.. ರಾಜ್ಯಪಾಲರು ಕೇವಲ ಎಂಪಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್ ಆಧರಿಸಿದ್ದಾರೆ. ರಾಜಕೀಯದಲ್ಲಿ ಕೆಲವೊಮ್ಮೆ ಸಿಎಂರನ್ನು ಸಚಿವ ಸಂಪುಟ ವಿರೋಧಿಸಲೂಬಹುದು. ಕಳೆದ 23 ವರ್ಷಗಳಲ್ಲಿ 23 ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರಬಹುದು. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತ್ರ ಆರೋಪಿಸಲಾಗಿದೆ. 1984 ರಿಂದಲೂ ಸಿದ್ದರಾಮಯ್ಯ ಶಾಸಕರಾಗಿದ್ದಾರೆ. ಆದರೆ ಅವರು ಮುಡಾಗೆ ಸಂಬಂಧಿಸಿದ ಯಾವುದೇ ಹೊಣೆ ನಿಭಾಯಿಸಿಲ್ಲ ಎಂದು ಅಭಿಷೇಕ್ ಸಿಂಘ್ವಿ ವಾದಿಸಿದರು.
ಲಲಿತಾಕುಮಾರಿ ಕೇಸ್ ಉಲ್ಲೇಖ
17a ಸಂಬಂಧಿಸಿದಂತೆ ಲಲಿತಕುಮಾರಿ ಕೇಸ್ ಉಲ್ಲೇಖಿಸಿದ ಸಿಂಘ್ವಿ, 17a ಇರುವುದು ಸುಳ್ಳು ಆರೋಪಗಳಿಂದ ಪರಿಶೀಲಿಸಿ ರಕ್ಷಣೆ ಮಾಡಲು ಇರುವುದು. ಯಾವುದೇ ವಿಚಾರಕ್ಕೂ ಎರಡು ಆಯಾಮಗಳಿರುತ್ತವೆ. ರಾಜ್ಯಪಾಲರ ಆದೇಶದಲ್ಲಿ ಒಂದೇ ಒಂದು ಕಾರಣವಿಲ್ಲ. ಆದರೆ ರಾಜ್ಯಪಾಲರ ಕಡತದಲ್ಲಿ ಕಾರಣಗಳಿವೆ ಎನ್ನಲಾಗುತ್ತಿದೆ. ರಾಜ್ಯಪಾಲರು 50 ಪುಟಗಳ ಆದೇಶ ನೀಡಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಅವರ ಸಾವಿರ ಪುಟಗಳ ಕಡತದಲ್ಲೇನಿದೆ ಎಂಬುದನ್ನು ಹೇಳಬೇಕಿತ್ತು.
ಲಲಿತಾ ಕುಮಾರಿ ಪ್ರಕರಣಕ್ಕೂ ಸೆಕ್ಷನ್ 17A ಪ್ರಕ್ರಿಯೆಗೂ ಸಂಬಂಧವಿಲ್ಲ. ತನಿಖಾಧಿಕಾರಿ ಮೊದಲು ಅಭಿಪ್ರಾಯ ರೂಪಿಸಿಕೊಳ್ಳಬೇಕು. ತನಿಖೆ ನಡೆಸುವ ಅಗತ್ಯದ ಬಗ್ಗೆ ನಿರ್ಧರಿಸಿದ ಬಳಿಕ ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಖಾಸಗಿ ದೂರಿಗೆ ಅವಕಾಶ ಕೊಟ್ಟರೆ 17Aನ ಈ ರಕ್ಷಣೆ ಇರುವುದಿಲ್ಲ. ರಾಜಕೀಯದಲ್ಲಿ ಸಾಕಷ್ಟು ಬಾರಿ ಸಂಪುಟ ತಮ್ಮ ಮುಖ್ಯಮಂತ್ರಿ ವಿರುದ್ಧ ನಡೆದಿದೆ. ತಾವು ಭಾವಿಸಿದಂತೆ ಅಷ್ಟು ವಿಶ್ವಾಸಪೂರ್ಣವಾಗಿರುವುದಿಲ್ಲ. ಇದು ಸರಿಯಾಗಿದೆ ಎಂದು ಭಾವಿಸಿದರೆ, ಅದು ಪ್ರತಿ ಸಂದರ್ಭದಲ್ಲಿ ಪೂರ್ವಾಪೇಕ್ಷಿತ ಪಕ್ಷಪಾತವನ್ನು ಅರ್ಥೈಸುತ್ತದೆ.
ವಿವೇಚನಾಧಿಕಾರ ವಿಶೇಷ ಸಂದರ್ಭದಲ್ಲಿ ಬಳಸಬೇಕು
ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ವಿಶೇಷ ಸಂದರ್ಭದಲ್ಲಷ್ಟೇ ಬಳಸಬೇಕು. ಹಾಗೆ ಬಳಸಿದಾಗ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು. ಪರಿಶೀಲಿಸಿದ ಕಡತದಲ್ಲಿನ ಒಂದೇ ಒಂದೇ ಪದವನ್ನೂ ಆದೇಶದಲ್ಲಿ ಉಲ್ಲೇಖಿಸಿಲ್ಲ. ಸಾವಿರ ಪುಟಗಳನ್ನು ಪರಿಶೀಲಿಸಿ ಆದೇಶ ನೀಡಿರಬಹುದು. ಆದರೆ ಅವರು ನೀಡದ ಕಾರಣವನ್ನು ಸಾವಿರ ಪುಟಗಳಲ್ಲಿ ಹುಡುಕಲಾಗದು ಎಂದು ಅಭಿಷೇಕ್ ಸಿಂಘ್ವಿ ವಾದಿಸಿದರು.
ಸಚಿವ ಸಂಪುಟದ ಶಿಫಾರಸು ಪಾಲಿಸದಿದ್ದಾಗ ಹೆಚ್ಚಿನ ಕಾರಣವನ್ನು ನೀಡಬೇಕು ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ರಾಜ್ಯಪಾಲರ ಪಾತ್ರದ ಬಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಚರ್ಚಿಸಿದ್ದಾರೆ. ರಾಜ್ಯಪಾಲರಿಗೆ ಕೆಲಸವೇ ಇಲ್ಲದಿರುವುದರಿಂದ ಹುದ್ದೆಗೆ ಯಾರೂ ಅರ್ಜಿ ಸಲ್ಲಿಸುವುದಿಲ್ಲ. ಹೀಗಿದ್ದ ಅಭಿಪ್ರಾಯ ಈಗಿನ ಪರಿಸ್ಥಿತಿಯಲ್ಲಿ ಬದಲಾಗಿದೆ. ಸಚಿವ ಸಂಪುಟದ ನಿರ್ಧಾರವನ್ನು ಅನುಮತಿ ನೀಡುವ ಮುನ್ನ ಸರಿ ಇರಲಿ, ತಪ್ಪಿರಲಿ ಒಮ್ಮೆ ಪರಿಶೀಲನೆ ಮಾಡಬೇಕು. ಕ್ಯಾಬಿನೆಟ್ ನಿರ್ಣಯ ಪರಿಶೀಲನೆ ಮಾಡಿ ತಿರಸ್ಕರಿಸುವುದು ರಾಜ್ಯಪಾಲರು ಏಕಪಕ್ಷೀಯ ಹಾಗೂ ರಾಜಕೀಯ ಪ್ರೇರಿತ ಆಗಿದ್ದಾರೆ ಎನ್ನಬೇಕಾಗುತ್ತೆ ಎಂದು ಅಭಿಷೇಕ್ ಸಿಂಘ್ವಿ ಲಾ ಪಾಯಿಂಟ್ ಹಾಕಿದರು.
ಆತುರದ ನಿರ್ಣಯ ಯಾಕಾಗಿ?
ಸಂಪುಟದ ನಿರ್ಣಯದಲ್ಲಿನ ದೋಷವನ್ನು ರಾಜ್ಯಪಾಲರು ತಮ್ಮ ಆದೇಶದಲ್ಲಿ ಉಲ್ಲೇಖಿಸಬೇಕಿತ್ತು ಎಂದು ಅಭಿಷೇಕ್ ಸಿಂಘ್ವಿ ವಾದಿಸಿದಾಗ ಮಧ್ಯಪ್ರವೇಶಿಸಿದ ನ್ಯಾಯಾದೀಶರು ರಾಜ್ಯಪಾಲರ ಕಡತದಲ್ಲಿಯೇ ಕಾರಣಗಳಿದ್ದರೆ ಅದನ್ನು ಪರಿಗಣಿಸಬಾರದೇ? ನಾನು ಕೆಲ ಸ್ಪಷ್ಟನೆಗಾಗಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದರು. 17A ಅಡಿಯಲ್ಲಿ ಈ ಹಿಂದೆ ಶಶಿಕಲಾ ಜೊಲ್ಲೆ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಅನುಮತಿ ಕೇಳಲಾಗಿದೆ. ಅದಕ್ಕೆ ಅನುಮತಿ ನೀಡಿಲ್ಲ. ಆದರೆ 20 ವರ್ಷಗಳ ಹಳೆಯ ಪ್ರಕರಣಕ್ಕೆ ಅನುಮತಿ ನೀಡಲಾಗಿದೆ. ಇಷ್ಟು ಆತುರ ನಿರ್ಣಯ ತೆಗೆದುಕೊಳ್ಳುವುದರ ಹಿಂದೆ ಉದ್ದೇಶ ಏನಿದೆ?
ಬಿಜೆಪಿಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪ್ರಕರಣದಲ್ಲಿ ಸಿಸಿಟಿವಿ ವಿಡಿಯೊ ದಾಖಲೆ ಇದ್ದರೂ, ಎರಡೂವರೆ ವರ್ಷ ಕಡತಗಳನ್ನು ಇಟ್ಟುಕೊಂಡು ಆನಂತರ ರಾಜ್ಯಪಾಲರು ಪೂರ್ವಾನುಮತಿ ನಿರಾಕರಿಸಿದ್ದಾರೆ. ನನ್ನ ಅರ್ಜಿದಾರರ ಕೇಸ್‌ನಲ್ಲಿ ಬೆಳಗ್ಗೆ ಅರ್ಜಿ, ಸಂಜೆ ನನಗೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಇದರ ಹಿಂದೆ ಏನು ನಡೆದಿದೆ. ಸಿಎಂ ವಿರುದ್ಧ ಒಂದೇ ಒಂದು ಕೇಸ್ ಇಲ್ಲ. ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ರಚನೆ ಮಾಡಿ, ರಾಜ್ಯಪಾಲರಿಂದಲೇ ಪ್ರಮಾಣ ವಚನ ಭೋದಿಸಿದ್ದಾರೆ. ಅಂತವರು ಮಾಡಿದ ನಿರ್ಣಯ ಪರಿಶೀಲನೆ ಮಾಡಬೇಕು. ಪರಿಶೀಲನೆ ಮಾಡಿ ಅದನ್ನು ತಿರಸ್ಕರಿಸಿದ ಬಗ್ಗೆ ಕಾರಣಗಳನ್ನು ತಿಳಿಸಬೇಕು. ಆರ್ಟಿಕಲ್ 14 ಸಮಾನತೆಯ ಹಕ್ಕಿನ ಆಧಾರದಲ್ಲೂ ವಾದಿಸುತ್ತಿದ್ದೇನೆ. ಮಧ್ಯಾಹ್ನದ ಊಟದ ಮೊಟ್ಟೆ ಹಗರಣಕ್ಕೆ ಅನುಮತಿ ನೀಡಿಲ್ಲ. ಸಿಎಂ ಸಹಿ ಇಲ್ಲದ 23 ವರ್ಷಗಳ ಹಳೆಯ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಗೆ ಒಂದೂ ಕಾರಣ ನೀಡಿಲ್ಲ. ಆದರೆ ಶಶಿಕಲಾ ಜೊಲ್ಲೆ ವಿರುದ್ಧ ಅನುಮತಿ ನೀಡದಿರಲು ಕಾರಣಗಳನ್ನು ನೀಡಿದ್ದಾರೆ ಎಂದು ಅಭಿಷೇಕ್ ಸಿಂಘ್ವಿ ವಾದಿಸಿದರು.
ಮುಡಾ ಸಭೆಗಳಲ್ಲಿ ಯತೀಂದ್ರ ಭಾಗಿ
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಮುಡಾದ ಎರಡು ನಿರ್ದಿಷ್ಟ ಸಭೆಯಲ್ಲಿ ಭಾಗವಹಿಸಿದ್ದರಲ್ಲವೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಯತೀಂದ್ರ ಅವರನ್ನು ಆರೋಪಿಯನ್ನಾಗಿಸಿಲ್ಲ ಎಂದು ಸಿಂಘ್ವಿ ಅವರು ಹೇಳಿದಾಗ ಯತೀಂದ್ರರನ್ನು ಆರೋಪಿಯನ್ನಾಗಿ ಮಾಡಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.
ಡಿನೋಟಿಫಿಕೇಷನ್ ವಿಚಾರದಲ್ಲಿ ಆಗಲಿ, ಜಮೀನು ಖರೀದಿಯಲ್ಲಾಗಲೀ ಹಾಗೂ 50:50 ನಿವೇಶನ ಹಂಚಿಕೆಯಲ್ಲಾಗಲೀ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಮುಡಾ ಸಭೆಯಲ್ಲಿ ಸಿಎಂ ಪುತ್ರ ಪದನಿಮಿತ್ತ ಸದಸ್ಯರಾಗಿ ಮಾತ್ರ ಮುಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಆ ಸಭೆಯಲ್ಲಿ ಬೇರೆ ಹಲವು ವಿಚಾರಗಳನ್ನು ನಿರ್ಣಯಿಸಲಾಗಿದೆ.
ರಾಜ್ಯಪಾಲರು ಸಚಿವ ಸಂಪುಟದೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಸಿಎಂ ವಿಚಾರ ಎಂಬ ಕಾರಣ ಮಾತ್ರಕ್ಕೆ ಸಚಿವ ಸಂಪುಟದ ತೀರ್ಮಾನ ಕಡೆಗಣಿಸಬಾರದು. ಹಾಗೆ ನೋಡಿದರೆ ರಾಷ್ಟ್ರಪತಿಗಳಿಗಿಂತ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವಿದೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಅಧಿಕಾರ ರಾಜ್ಯಪಾಲರಿಗೆ ಮಾತ್ರವಿದೆ. ಅವರ ವಿವೇಚನಾಧಿಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿರಬೇಕು ಎಂದು ಅಭಿಷೇಕ್ ಸಿಂಘ್ವಿ ವಾದಿಸಿದ್ದರು. ಬಳಿಕ ವಾದ-ವಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ