Site icon Vistara News

Explainer: ನೀಟ್‌ ಪರೀಕ್ಷೆ ತಮಿಳುನಾಡಿಗೆ ಬೇಡವಂತೆ, ರಾಷ್ಟ್ರಪತಿಗಳತ್ತ ವಿಧೇಯಕ

ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (NEET) ವ್ಯಾಪ್ತಿಯಿಂದ ತಮಿಳುನಾಡು ರಾಜ್ಯಕ್ಕೆ ವಿನಾಯಿತಿ ನೀಡುವ ವಿಧೇಯಕವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳಿಸಲಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಿ, ಅಂಗೀಕರಿಸಲಾದ ನೀಟ್‌ ವಿರೋಧಿ ವಿಧೇಯಕವನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ರವಾನಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ತಮಿಳುನಾಡು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಎರಡನೇ ಬಾರಿಗೆ ಪ್ರಯತ್ನ

ತಮಿಳುನಾಡು ಸರಕಾರ ನೀಟ್‌ನಿಂದ ಹೊರಗುಳಿಯಲು ಎರಡನೇ ಬಾರಿ ಈ ಪ್ರಯತ್ನ ಮಾಡುತ್ತಿದೆ.  ಕಳೆದ ವರ್ಷ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ಕಾನೂನು ಗ್ರಾಮೀಣ ಹಾಗೂ ಬಡ ಹಿನ್ನೆಲೆಯ ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಲಿದೆ ಎಂದು ಹೇಳಿದ್ದರು. ಫೆಬ್ರವರಿಯಲ್ಲಿ ರಾಜ್ಯ ಸರಕಾರ ಮತ್ತೆ ವಿಧೇಯಕ ಅಂಗೀಕರಿಸಿತ್ತು.

ಕಾನೂನಾದರೆ ಏನಾಗುತ್ತೆ?

ಈ ವಿಧೇಯಕ ರಾಷ್ಟ್ರಪತಿಗಳ ಅಂಗೀಕಾರ ಪಡೆದು ಕಾನೂನಾಗಿಬಿಟ್ಟರೆ, ಆಗ ತಮಿಳುನಾಡಿನ ವಿದ್ಯಾರ್ಥಿಗಳು ಮೆಡಿಕಲ್‌ ಸೀಟುಗಳಿಗಾಗಿ ನೀಟ್‌ ಪರೀಕ್ಷೆಯನ್ನು ಬರೆಯಬೇಕಿಲ್ಲ. ತಮ್ಮ 12ನೇ ತರಗತಿಯ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಸೀಟು ಪಡೆಯಬಹುದು. ಪ್ರಸ್ತುತ ಎರಡನೇ ಬಾರಿ ತಮಿಳುನಾಡು ಸರಕಾರ ಈ ವಿಧೇಯಕವನ್ನು ರಾಜ್ಯಪಾಲರಿಗೆ ಕಳಿಸಿರುವುದರಿಂದ, ಅವರು ಅದನ್ನು ತಿರಸ್ಕರಿಸುವಂತೆಯೂ ಇಲ್ಲ. ಹೀಗಾಗಿ ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ. ಆದರೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯುವುದು ಸುಲಭವಿಲ್ಲ.

ವಿಧೇಯಕದಲ್ಲಿ ಏನಿದೆ?

ಪ್ರಸ್ತುತ, ದೇಶಾದ್ಯಂತ ಎಲ್ಲ ರಾಜ್ಯಗಳ ಮೆಡಿಕಲ್‌ ಕಾಲೇಜುಗಳಲ್ಲಿನ ಸೀಟುಗಳಿಗೂ ಕೇಂದ್ರ ಸರಕಾರ ನಡೆಸುವ ಅರ್ಹತಾ ಪ್ರವೇಶ ಪರೀಕ್ಷೆಯೇ ಮಾನದಂಡ. ಇದರಲ್ಲಿ ಶೇ.15ರಷ್ಟು ಸೀಟುಗಳು ಅಖಿಲ ಭಾರತ ಕೋಟಾದ ಸೀಟುಗಳಾಗಿವೆ. ಉಳಿದ ಶೇ.85 ಸೀಟುಗಳು ರಾಜ್ಯದ ವ್ಯಾಪ್ತಿಗೆ ಬರುತ್ತವೆ. ಪ್ರಸ್ತುತ ಸರಕಾರದ ಕಾನೂನು ಜಾರಿಗೆ ಬಂದರೆ, ತನ್ನ ಪಾಲಿನ ಶೇ.85 ಸೀಟುಗಳಿಗೆ ತಮಿಳುನಾಡು ತನ್ನ ವಿದ್ಯಾರ್ಥಿಗಳನ್ನು  ಯಾವುದೇ ನೀಟ್‌ ಪರೀಕ್ಷೆಗೆ ಕೂರಿಸುವ ಅಗತ್ಯವಿಲ್ಲದೆ ಹಂಚಬಹುದು.

ಖಾಸಗಿ ಕಾಲೇಜುಗಳಿಗೂ ಈ ಕಾಯಿದೆ ಅನ್ವಯ. ಅಲ್ಪಸಂಖ್ಯಾತರ ಮಾಲಿಕತ್ವದ ಕಾಲೇಜುಗಳು 50% ಸೀಟುಗಳನ್ನೂ, ಇತರ ಕಾಲೇಜುಗಳು 65%  ಸೀಟುಗಳನ್ನೂ ಸರಕಾರಿ ಕೌನ್ಸೆಲಿಂಗ್‌ ಮೂಲಕ ವಿದ್ಯಾರ್ಥಿಗಳಿಗೆ ನೀಡಬೇಕು.

ಹಾಗೇ, ಎಲ್ಲಾ ಸೀಟುಗಳಲ್ಲಿ ಶೇ.12ರಷ್ಟನ್ನು ಇಲ್ಲಿನ ಸರಕಾರಿ ಶಾಲೆಗಳಲ್ಲಿ ಆರರಿಂದ ಹನ್ನೆರಡನೇ ತರಗತಿವರೆಗೆ ಕಲಿತವರಿಗೆ ಮೀಸಲು ಇಡಬೇಕು. ಹೀಗಾಗಿ ಈ ಗ್ರೂಪಿನಲ್ಲಿ ಜನರಲ್‌, ಎಸ್‌ಸಿ, ಎಸ್‌ಟಿ, ಒಬಿಸಿ ಎಲ್ಲರಿಗೂ ಮೀಸಲು ಸಿಗುತ್ತದೆ. ಹಾಗೇ ಬೇರೆ ಬೇರೆ ಬೋರ್ಡ್‌ ಪರೀಕ್ಷೆಗಳ ಒಂದೇ ವಿಷಯದ ಅಂಕಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

ತಮಿಳುನಾಡಿಗೆ ಏಕೆ ಹಠ?

2012ರಲ್ಲಿ ನೀಟ್‌ ಪರೀಕ್ಷೆಯನ್ನು ಜಾರಿಗೆ ತಂದ ಕ್ಷಣದಿಂದಲೇ ತಮಿಳುನಾಡು ಇದನ್ನು ವಿರೋಧಿಸುತ್ತ ಬಂದಿದೆ. ರಾಜ್ಯದ ವಿದ್ಯಾರ್ಥಿಗಳ ಹಿತವನ್ನು ನೀಟ್‌ ಪರೀಕ್ಷೆಯಲ್ಲಿ ಕಡೆಗಣಿಸಲಾಗುತ್ತಿದೆ ಎಂಬುದು ತಮಿಳುನಾಡಿನ ವಾದ.

ರಾಜ್ಯದಲ್ಲಿ ನೀಟ್‌ನಿಂದ ಆಗಿರುವ ಪರಿಣಾಮಗಳ ಅಧ್ಯಯನ ಮಾಡಲು ನಿವೃತ್ತ ನ್ಯಾಯಮೂರ್ತಿ ಎ.ಕೆ.ರಾಜನ್‌ ನೇತೃತ್ವದಲ್ಲಿ ಒಂದು ಸಮಿತಿಯನ್ನು ತಮಿಳುನಾಡು ರಚಿಸಿತು. ನೀಟ್‌ ಪರೀಕ್ಷೆಯು ಸಿಬಿಎಸ್‌ಇ ವಿದ್ಯಾರ್ಥಿಗಳು, ಕೋಚಿಂಗ್‌ ಪಡೆಯುವವರು, ಖಾಸಗಿ ಆಂಗ್ಲ ಮಾಧ್ಯಮ ಸ್ಕೂಲ್‌ಗಳ ವಿದ್ಯಾರ್ಥಿಗಳು, ಶ್ರೀಮಂತ- ನಗರ ಹಿನ್ನೆಲೆಯ ವಿದ್ಯಾರ್ಥಿಗಳ ಪಕ್ಷಪಾತಿಯಾಗಿದೆ  ಎಂದು ಸಮಿತಿ ವರದಿ ನೀಡಿತು. ಸಂಕೀರ್ಣ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ, ಎಲ್ಲ ಬಗೆಯ ಸಾಂಸ್ಕೃತಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೂ ನೀಟ್‌ನಿಂದ ನ್ಯಾಯ ದೊರೆತಿಲ್ಲ. ಅನೇಕ ಪಂಗಡಗಳ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗಿದ್ದಾರೆ. ರಾಜ್ಯ ಸರಕಾರದ 12ನೇ ತರಗತಿ ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ ಸೀಟು ಹಂಚುವುದೇ ಪರಿಹಾರ ಎಂದು ಅದು ಹೇಳಿದೆ. ಇದೇ ಹಿನ್ನೆಲೆಯಲ್ಲಿ ಹೊಸ ವಿಧೇಯಕ ರೂಪಿಸಲಾಗಿದೆ.

ರಾಷ್ಟ್ರಪತಿಗಳು ಒಪ್ಪುತ್ತಾರೆಯೇ?

ರಾಜ್ಯಪಾಲರು ಈಗಾಗಲೇ ಒಂದು ಬಾರಿ ವಿಧೇಯಕ ತಿರಸ್ಕರಿಸಿದ್ದಾರೆ. ಎರಡನೇ ಬಾರಿಗೆ ಅವರು ಅದನ್ನು ತಿರಸ್ಕರಿಸುವಂತಿಲ್ಲ. ಈಗಾಗಿ ಅಂಗೀಕರಿಸಿ, ರಾಷ್ಟ್ರಪತಿಗೆ ಕಳಿಸಿದ್ದಾರೆ. ಆದರೆ ಅಲ್ಲಿ ಒಪ್ಪಿಗೆ ಪಡೆಯುವುದು ಸುಲಭವಿಲ್ಲ. ಯಾಕೆಂದರೆ ವೈದ್ಯಕೀಯ ಶಿಕ್ಷಣ ರಾಜ್ಯ ಹಾಗೂ ಕೇಂದ್ರವೆರಡರ ವ್ಯಾಪ್ತಿಗೂ ಬರುತ್ತದೆ. 2017ರಲ್ಲಿ ಎಐಎಡಿಎಂಕೆ ಸರಕಾರ ಕಳಿಸಿದ್ದ ಇದೇ ತರಹದ ವಿಧೇಯಕವನ್ನು ರಾಷ್ಟ್ರಪತಿ ಎರಡು ಬಾರಿ ತಿರಸ್ಕರಿಸಿದ್ದರು. ಈ ಬಾರಿ ಬಿಜೆಪಿ, ಡಿಎಂಕೆಯ ಬದ್ಧ ವಿರೋಧಿಯಾಗಿರುವುದರಿಂದ, ವಿಧೇಯಕಕ್ಕೆ ಒಪ್ಪಿಗೆ ಸಿಗುವುದು ಸುಲಭ ಸಾಧ್ಯವಿಲ್ಲ. ಒಂದು ವೇಳೆ ರಾಷ್ಟ್ರಪತಿ ಒಪ್ಪಿಗೆ ನೀಡಿದರೂ, ರಾಜ್ಯದ ಕಾಯಿದೆಯನ್ನು ರದ್ದುಪಡಿಸುವ ಅಧಿಕಾರ ಸಂಸತ್ತಿಗೆ ಇದೆ.  

ಇದನ್ನೂ ಓದಿ: ನನ್ನ ವಾಚ್‌ ಹೆಸರು ಹೇಳಿ ನಿಮ್ಮ ಹಗರಣ ಮುಚ್ಚಿಹಾಕುವ ಪ್ರಯತ್ನ ಎಂದೂ ಫಲಿಸಲ್ಲ

ಕಾಯಿದೆ ಆದರೆ…

ಒಂದು ವೇಳೆ ಇದು ಕಾಯಿದೆ ಆಗಿಬಿಟ್ಟರೆ ಇತರ ರಾಜ್ಯಗಳೂ ತಮಗೂ ನೀಟ್‌ನಿಂದ ವಿನಾಯಿತಿ ಬೇಕು ಎಂಬ ಬೇಡಿಕೆಯನ್ನು ಮುಂದಿಡಬಹುದು. ಈ ಹಿಂದೆಯೇ ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ರಾಜ್ಯಗಳು ಕೂಡ, ತಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿರುವ ಹಿನ್ನೆಲೆಯಲ್ಲಿ ನೀಟ್‌ನಿಂದ ವಿನಾಯಿತಿ ಬೇಕು ಎಂದಿದ್ದವು. ಇದು ಕೇಂದ್ರಕ್ಕೆ ಸರಣಿ ಆಘಾತವಾಗಿ ಒದಗಲಿದೆ. ಆದರೆ ಹಾಗಾಗಲು ಕೇಂದ್ರ ಬಿಡಲಾರದು.  

Exit mobile version