Site icon Vistara News

POK Explainer in Kannada: ಪಾಕ್ ಆಕ್ರಮಿತ ಕಾಶ್ಮೀರ ಕುರಿತ 15 ಕುತೂಹಲಕಾರಿ ಸಂಗತಿಗಳು

POK Explainer in Kannada

ಪಾಕಿಸ್ತಾನವು (pakistan) 1947ರಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ (POK Explainer in Kannada) ಕಾಶ್ಮೀರದ (kashmir) ಭಾಗಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan Occupied Kashmir) ಎಂದು ಕರೆಯಲಾಗುತ್ತದೆ. ಪಾಕಿಸ್ತಾನವು ಪಿಒಕೆಯನ್ನು (POK) ಎರಡು ಭಾಗಗಳಾಗಿ ವಿಂಗಡಿಸಿದೆ. ಒಂದು ಆಜಾದ್ ಕಾಶ್ಮೀರ (Azad Kashmir) ಹಾಗೂ ಮತ್ತೊಂದು ಗಿಲ್ಗಿಟ್-ಬಾಲ್ಟಿಸ್ತಾನ್ (Gilgit-Baltistan). ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನಸಂಖ್ಯೆ 2020ರಲ್ಲಿ ಸುಮಾರು 52 ಲಕ್ಷ ಇತ್ತು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಈಗ ದಂಗೆ ಭುಗಿಲೆದ್ದಿದೆ. ಅಲ್ಲಿಯ ಜನ, ಭಾರತದ ಜತೆ ವೀಲೀನವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಅನಂತರ ಈಗ ಭಾರತೀಯ ಜನರು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.


ಪಿಒಕೆ ಎಂದರೇನು?

ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಣಕ್ಕೊಳಗಾದ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದೆ.

1. ಪಿಒಕೆಯನ್ನು ಆಡಳಿತಾತ್ಮಕವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನು ಅಧಿಕೃತವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಗಿಲ್ಗಿಟ್- ಬಾಲ್ಟಿಸ್ತಾನ್ ಎಂದು ಕರೆಯಲಾಗುತ್ತದೆ. ಪಾಕಿಸ್ತಾನದಲ್ಲಿ ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ವನ್ನು ಆಜಾದ್ ಕಾಶ್ಮೀರ ಎಂದೂ ಕರೆಯುತ್ತಾರೆ.

2. ಪಾಕ್ ಆಕ್ರಮಿತ ಕಾಶ್ಮೀರದ ಮುಖ್ಯಸ್ಥರು ಅಧ್ಯಕ್ಷರಾಗಿದ್ದರೆ, ಪ್ರಧಾನಮಂತ್ರಿಗಳು ಮಂತ್ರಿಗಳ ಮಂಡಳಿಯಿಂದ ಬೆಂಬಲಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

3. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತನ್ನ ಸ್ವ-ಆಡಳಿತ ಅಸೆಂಬ್ಲಿ ಎಂದು ಹೇಳಿಕೊಂಡಿದೆ. ಆದರೆ ವಾಸ್ತವವೆಂದರೆ ಅದು ಪಾಕಿಸ್ತಾನದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.

4. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲ ಕಾಶ್ಮೀರದ ಒಂದು ಭಾಗವಾಗಿದೆ. ಇದರ ಗಡಿಗಳು ಪಾಕಿಸ್ತಾನದ ಪಂಜಾಬ್ ಪ್ರದೇಶ, ವಾಯವ್ಯ, ಅಫ್ಘಾನಿಸ್ತಾನದ ವಖಾನ್ ಕಾರಿಡಾರ್, ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶ ಮತ್ತು ಭಾರತದ ಕಾಶ್ಮೀರದ ಪೂರ್ವಕ್ಕೆ ಸ್ಪರ್ಶಿಸುತ್ತವೆ.

5. ಗಿಲ್ಗಿಟ್- ಬಾಲ್ಟಿಸ್ತಾನ್‌ವನ್ನು ತೆಗೆದುಹಾಕಿದರೆ, ಆಜಾದ್ ಕಾಶ್ಮೀರದ ಪ್ರದೇಶವು 13,300 ಚದರ ಕಿಲೋಮೀಟರ್‌ಗಳಷ್ಟು ಅಂದರೆ ಸರಿಸುಮಾರು ಭಾರತದ ಕಾಶ್ಮೀರದ ಸುಮಾರು 3 ಪಟ್ಟು ವಿಶಾಲವಾಗಿದೆ ಮತ್ತು ಅದರ ಜನಸಂಖ್ಯೆಯು ಸುಮಾರು 52 ಲಕ್ಷ.

6. ಆಜಾದ್ ಕಾಶ್ಮೀರದ ರಾಜಧಾನಿ ಮುಜಫರಾಬಾದ್. ಇದು 10 ಜಿಲ್ಲೆಗಳು, 33 ತೆಹಸಿಲ್‌ಗಳು ಮತ್ತು 182 ಫೆಡರಲ್ ಕೌನ್ಸಿಲ್‌ಗಳನ್ನು ಹೊಂದಿದೆ.

7. ಪಾಕ್ ಆಕ್ರಮಿತ ಕಾಶ್ಮೀರದ ದಕ್ಷಿಣ ಭಾಗದಲ್ಲಿ 8 ಜಿಲ್ಲೆಗಳಿವೆ. ಮಿರ್ ಪುರ್, ಭಿಂಬರ್, ಕೋಟ್ಲಿ, ಮುಜಫರಾಬಾದ್, ಬಾಗ್, ನೀಲಂ, ರಾವಲಕೋಟ್ ಮತ್ತು ಸುಧಾನೋತಿ.

8. ಪಾಕ್ ಆಕ್ರಮಿತ ಕಾಶ್ಮೀರದ ಹುಂಜಾ-ಗಿಲ್ಗಿಟ್, ಶಕ್ಸ್‌ಗಾಮ್ ಕಣಿವೆ, ರಕ್ಸಾಮ್ ಮತ್ತು ಬಾಲ್ಟಿಸ್ತಾನ್ ಪ್ರದೇಶವನ್ನು 1963ರಲ್ಲಿ ಪಾಕಿಸ್ತಾನವು ಚೀನಾಕ್ಕೆ ಹಸ್ತಾಂತರಿಸಿತು. ಈ ಪ್ರದೇಶವನ್ನು ಸೆಡೆಡ್ ಪ್ರದೇಶ ಅಥವಾ ಟ್ರಾನ್ಸ್-ಕಾರಕೋರಂ ಟ್ರ್ಯಾಕ್ಟ್ ಎಂದು ಕರೆಯಲಾಗುತ್ತದೆ.

9. ಪಿಒಕೆಯ ಜನರು ಮುಖ್ಯವಾಗಿ ಕೃಷಿ ಮಾಡುತ್ತಾರೆ. ಅವರ ಮುಖ್ಯ ಆದಾಯದ ಮೂಲಗಳು ಜೋಳ, ಗೋಧಿ, ಅರಣ್ಯ ಮತ್ತು ಜಾನುವಾರುಗಳು.

10. ಈ ಪ್ರದೇಶದಲ್ಲಿ ಕಡಿಮೆ ದರ್ಜೆಯ ಕಲ್ಲಿದ್ದಲು ನಿಕ್ಷೇಪಗಳಿವೆ, ಸೀಮೆಸುಣ್ಣದ ನಿಕ್ಷೇಪಗಳು, ಬಾಕ್ಸೈಟ್ ನಿಕ್ಷೇಪಗಳು ಕಂಡುಬರುತ್ತವೆ. ಕೆತ್ತಿದ ಮರದ ವಸ್ತುಗಳು, ಜವಳಿ ಮತ್ತು ಕಾರ್ಪೆಟ್‌ಗಳ ತಯಾರಿಕೆಯು ಈ ಪ್ರದೇಶಗಳಲ್ಲಿ ನೆಲೆಗೊಂಡಿರುವ ಕೈಗಾರಿಕೆಗಳ ಮುಖ್ಯ ಉತ್ಪನ್ನಗಳಾಗಿವೆ.

11. ಈ ಪ್ರದೇಶದಲ್ಲಿನ ಕೃಷಿ ಉತ್ಪನ್ನಗಳಲ್ಲಿ ಅಣಬೆ, ಜೇನು, ವಾಲ್ನಟ್, ಸೇಬು, ಚೆರ್ರಿ, ಔಷಧೀಯ ಗಿಡಮೂಲಿಕೆ ಮತ್ತು ಸಸ್ಯಗಳು, ರಾಳ, ಮೇಪಲ್ ಮರಗಳು ಸೇರಿವೆ.

12. ಈ ಪ್ರದೇಶದಲ್ಲಿ ಶಾಲೆಗಳು ಮತ್ತು ಕಾಲೇಜುಗಳ ಕೊರತೆಯಿದೆ. ಆದರೆ ಈ ಪ್ರದೇಶವು ಶೇ. 72ರಷ್ಟು ಸಾಕ್ಷರತೆಯನ್ನು ಹೊಂದಿದೆ.

13. ಪಾಷ್ಟೋ, ಉರ್ದು, ಕಾಶ್ಮೀರಿ ಮತ್ತು ಪಂಜಾಬಿಯಂತಹ ಭಾಷೆಗಳನ್ನು ಇಲ್ಲಿನ ಜನರು ಪ್ರಮುಖವಾಗಿ ಮಾತನಾಡುತ್ತಾರೆ.

14. ಪಾಕ್ ಆಕ್ರಮಿತ ಕಾಶ್ಮೀರ ತನ್ನದೇ ಆದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಅನ್ನು ಸಹ ಹೊಂದಿದೆ.


ವಿವಾದದ ಮೂಲ ಏನು?

1947ರಲ್ಲಿ ಪಾಕಿಸ್ತಾನದ ಪಷ್ಟೂನ್ ಬುಡಕಟ್ಟು ಜನಾಂಗದವರು ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಇವರಿಗೆ ಪಾಕ್‌ ಸೇನೆಯ ಕುಮ್ಮಕ್ಕು ಇತ್ತು. ಆಗ ಈ ನಿರ್ಣಾಯಕ ಪರಿಸ್ಥಿತಿಯನ್ನು ನಿಭಾಯಿಸಲು ಆ ಕಾಲದ ಆಡಳಿತಗಾರ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಭಾರತ ಸರ್ಕಾರದಿಂದ ಮಿಲಿಟರಿ ಸಹಾಯವನ್ನು ಕೋರಿದರು ಮತ್ತು ಅಂದಿನ ಭಾರತದ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರು 26 ಅಕ್ಟೋಬರ್ 1947ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ ಮೂರು ವಿಷಯಗಳು ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನಗಳು ಭಾರತಕ್ಕೆ ಹಸ್ತಾಂತರಿಸಲಾಯಿತು. ಈ ವಿಷಯಗಳನ್ನು ಹೊರತುಪಡಿಸಿ, ಜಮ್ಮು ಮತ್ತು ಕಾಶ್ಮೀರವು ತನ್ನ ಎಲ್ಲಾ ನಿರ್ಧಾರಗಳಿಗೆ ಮುಕ್ತವಾಗಿತ್ತು.

ಒಪ್ಪಂದದ ಈ ಸೇರ್ಪಡೆಯ ಆಧಾರದ ಮೇಲೆ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯಪ್ರವೇಶಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ಹೇಳುತ್ತದೆ. ಮತ್ತೊಂದೆಡೆ ಪಾಕಿಸ್ತಾನ ಇದನ್ನು ಒಪ್ಪುವುದಿಲ್ಲ.

ಪಾಕಿಸ್ತಾನದ ವಾದ ಏನು?

ಕಾಶ್ಮೀರದ ಮೇಲಿನ ಪಾಕಿಸ್ತಾನದ ಹಕ್ಕು 1993ರ ಘೋಷಣೆಯನ್ನು ಆಧರಿಸಿದೆ. ಈ ಘೋಷಣೆಯ ಪ್ರಕಾರ ಪಾಕಿಸ್ತಾನ ಸರ್ಕಾರದ ಆಡಳಿತವನ್ನು ಸ್ಥಾಪಿಸಬೇಕಾದ 5 ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರವೂ ಸೇರಿದೆ. ಆದರೆ ಪಾಕಿಸ್ತಾನದ ಈ ಹೇಳಿಕೆಯನ್ನು ಭಾರತ ಎಂದಿಗೂ ಒಪ್ಪಲಿಲ್ಲ.

ಎರಡು ಭಾಗಗಳಾಗಿ ವಿಂಗಡಣೆ

ಭಾರತ ಮತ್ತು ಪಾಕಿಸ್ತಾನದ ನಡುವಿನ 1947ರ ಯುದ್ಧದ ಅನಂತರ ಕಾಶ್ಮೀರ ಆಡಳಿತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಭಾರತದಿಂದ ಬೇರ್ಪಟ್ಟ ಕಾಶ್ಮೀರದ ಭಾಗವು ಜಮ್ಮು ಮತ್ತು ಕಾಶ್ಮೀರದ ಉಪಖಂಡವಾಯಿತು ಮತ್ತು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಿಂದ ಸಮೀಪದಲ್ಲಿದ್ದ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಯಿತು.

ಆಜಾದ್ ಕಾಶ್ಮೀರ

ಭಾರತದ ಕಾಶ್ಮೀರದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಿದೆ. 2011ರ ಹೊತ್ತಿಗೆ, ಆಜಾದ್ ಕಾಶ್ಮೀರದ ಜಿಡಿಪಿ 3.2 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಐತಿಹಾಸಿಕವಾಗಿ ಆಜಾದ್ ಕಾಶ್ಮೀರದ ಆರ್ಥಿಕತೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಕಡಿಮೆ ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಯು ಗೋಧಿ, ಬಾರ್ಲಿ, ಕಾರ್ನ್ (ಮೆಕ್ಕೆಜೋಳ) ಮಾವು, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತದೆ.

ದಕ್ಷಿಣ ಜಿಲ್ಲೆಗಳಲ್ಲಿ, ಪಾಕಿಸ್ತಾನಿ ಸಶಸ್ತ್ರ ಪಡೆಗಳಿಗೆ ಅನೇಕ ಪುರುಷರನ್ನು ನೇಮಿಸಿಕೊಳ್ಳಲಾಗಿದೆ. ಇತರ ಸ್ಥಳೀಯರು ಯುರೋಪ್ ಅಥವಾ ಮಧ್ಯಪ್ರಾಚ್ಯದ ದೇಶಗಳಿಗೆ ಪ್ರಯಾಣಿಸುತ್ತಾರೆ. ಅಲ್ಲಿ ಅವರು ಕಾರ್ಮಿಕ-ಆಧಾರಿತ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

ಉತ್ತರ ಪ್ರದೇಶ

ಗಿಲ್ಗಿಟ್ ಪ್ರದೇಶವನ್ನು ಕಾಶ್ಮೀರದ ಮಹಾರಾಜರು ಬ್ರಿಟಿಷ್ ಸರ್ಕಾರಕ್ಕೆ ಗುತ್ತಿಗೆ ನೀಡಿದರು. ಬಾಲ್ಟಿಸ್ತಾನ್ 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಿಸಲ್ಪಟ್ಟ ಪಶ್ಚಿಮ ಲಡಾಖ್ ಪ್ರಾಂತ್ಯದ ಪ್ರದೇಶವಾಗಿತ್ತು. ಈ ಪ್ರದೇಶವು ವಿವಾದಿತ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಭಾಗವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅತ್ಯಂತ ಕಳಪೆ ಸ್ಥಿತಿಯಲ್ಲಿದೆ. ಪಾಕಿಸ್ತಾನವು ಈ ಪ್ರದೇಶದ ಮೇಲೆ ಹಿಡಿತ ಹೊಂದಿದೆ. ಆದರೆ ಈ ಪ್ರದೇಶವನ್ನು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಅಭಿವೃದ್ಧಿಪಡಿಸಿಲ್ಲ. ಆದ್ದರಿಂದ ಈ ಪ್ರದೇಶದ ಬಡ ಜನರನ್ನು ಭಯೋತ್ಪಾದಕರಂತೆ ತರಬೇತಿ ನೀಡಲು ಮತ್ತು ಭಾರತವನ್ನು ಅಸ್ಥಿರಗೊಳಿಸಲು ಬಳಸಿಕೊಳ್ಳುತ್ತಿದೆ.

Exit mobile version