Site icon Vistara News

ವಿಸ್ತಾರ Explainer: Disease X: ಏನಿದು ʼಎಕ್ಸ್‌ʼ ಸೋಂಕು? 5 ಕೋಟಿ ಜನರ ಬಲಿ ತೆಗೆದುಕೊಳ್ಳಲಿದೆಯಾ?

disease x

ಹೊಸದಿಲ್ಲಿ: ವೈದ್ಯಕೀಯ ವಿಜ್ಞಾನಿಗಳ ಆತಂಕ ಇದೀಗ ಡಿಸೀಸ್‌ ಎಕ್ಸ್‌ ಎಂಬ (Disease X) ಭವಿಷ್ಯದ ಸೋಂಕುರೋಗವೊಂದರತ್ತ (Pandemic) ಕೇಂದ್ರೀಕೃತವಾಗಿದೆ. ಅದು ಜೀವಹಾನಿಯಲ್ಲಿ ಕೋವಿಡ್‌ಗಿಂತಲೂ (Corona virus, Covid – 19) ಭೀಕರವಾಗಿರಬಹುದು ಎಂಬ ಭವಿಷ್ಯವನ್ನೂ ಅವರು ಈಗಾಗಲೇ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಆಗಮಿಸಬಹುದಾದ ಸಾಂಕ್ರಾಮಿಕ ರೋಗವು ಸುಮಾರು 5 ಕೋಟಿ ಜನರ ಜೀವವನ್ನು ಅಪಹರಿಸಬಹುದು ಎಂದು ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾದ ಡೇಮ್ ಕೇಟ್ ಬಿಂಗ್‌ಹ್ಯಾಮ್ ಅವರು ಹೇಳಿದ್ದಾರೆ. ಅದು ಈಗಾಗಲೇ ಪ್ರಾರಂಭವಾಗಿರಲೂಬಹುದು; ಕೋವಿಡ್‌ಗಿಂತಲೂ ಅದು ಭೀಕರವಾಗಿರಲಿದೆ ಎಂದು ಹೇಳಿದ್ದಾರೆ.

ಹೊಸ ಸಾಂಕ್ರಾಮಿಕ ರೋಗವನ್ನು ವಿಶ್ವ ಆರೋಗ್ಯ ಸಂಸ್ಥೆ (world health organization – WHO) `ಡಿಸೀಸ್ ಎಕ್ಸ್’ (Disease X) ಎಂದು ಹೆಸರಿಸಿದೆ. ಇದು ಕೊರೊನಾವೈರಸ್‌ಗಿಂತ 20 ಪಟ್ಟು ಮಾರಕವಾಗಬಹುದು ಎಂಬುದು ಬಿಂಗ್‌ಹ್ಯಾಮ್ ಭವಿಷ್ಯ. “ಜಗತ್ತು ಇದನ್ನು ಎದುರಿಸಲು ಸಾಮೂಹಿಕ ವ್ಯಾಕ್ಸಿನೇಷನ್‌ಗೆ ತಯಾರಾಗಬೇಕು. ದಾಖಲೆಯ ಸಮಯದಲ್ಲಿ ಡೋಸ್‌ಗಳನ್ನು ತಲುಪಿಸಬೇಕಾಗುತ್ತದೆ. ಈ ಡಿಸೀಸ್ ಎಕ್ಸ್ ಅನ್ನು ದಡಾರದಂತೆ ಸಾಂಕ್ರಾಮಿಕವಾಗಿ ಹಾಗೂ ಎಬೋಲಾದಂತೆ ಪ್ರತಿಶತ 67 ಸಾವಿನ ಪ್ರಮಾಣದೊಂದಿಗೆ ಕಲ್ಪಿಸಿಕೊಂಡು ನೋಡಿ. ಜಗತ್ತಿನ ಯಾವುದೋ ಮೂಲೆಯಲ್ಲಿ ಅದು ಸೃಷ್ಟಿಯಾಗುವ ಹಂತದಲ್ಲಿದೆ, ಸದ್ಯದಲ್ಲೇ ಇದರ ರೋಗಿಗಳು ಕಂಡುಬರಬಹುದುʼʼ ಎಂದು ಅವರು ಎಚ್ಚರಿಸಿದ್ದಾರೆ.

ಬಿಂಗ್‌ಹ್ಯಾಮ್ ಪ್ರಕಾರ ವಿಜ್ಞಾನಿಗಳು 25 ಅಪಾಯಕಾರಿ ವೈರಸ್ ಕುಟುಂಬಗಳನ್ನು ಗುರುತಿಸಿದ್ದಾರೆ. ಇದು ಸಾವಿರಾರು ವೈರಸ್‌ಗಳನ್ನು ಹೊಂದಿದೆ. ಇನ್ನೂ ಲಕ್ಷಾಂತರ ವೈರಸ್‌ಗಳನ್ನು ಕಂಡುಹಿಡಿಯಬೇಕಾಗಿದೆಯಂತೆ.

“COVID-19 ಮತ್ತು ಅದರ ರೂಪಾಂತರಗಳು ಪುನರಾವರ್ತಿತ ಮತ್ತು ಪರಿಚಿತ ಆರೋಗ್ಯ ಸಮಸ್ಯೆಗಳ ವಿಷಯದಲ್ಲಿ ಪರಿಣಾಮ ಬೀರುತ್ತವೆ. ಆರೋಗ್ಯ ವೃತ್ತಿಪರರು ಈಗ ಡಿಸೀಸ್ X ಎಂಬ ಸಂಭಾವ್ಯ ಹೊಸ ಸಾಂಕ್ರಾಮಿಕ ರೋಗಕ್ಕೆ ತಯಾರಿ ನಡೆಸುತ್ತಿದ್ದಾರೆ. ಆರೋಗ್ಯ ತಜ್ಞರು ಈ ಹೊಸ ವೈರಸ್ ಸ್ಪ್ಯಾನಿಷ್‌ ಜ್ವರದಂತೆಯೇ ವಿನಾಶಕಾರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, X ಎಲ್ಲೂ ಇನ್ನೂ ಕಂಡುಬಂದಿಲ್ಲ. ಆದರೆ ಇದು ದೊಡ್ಡ ಪ್ರಮಾಣದ, ಗಂಭೀರವಾದ ಸಾಂಕ್ರಾಮಿಕ ರೋಗವನ್ನು ಉಂಟುಮಾಡಬಹುದು. ಸಾಮೂಹಿಕ ಸಾವುನೋವಿಗೆ ಕಾರಣವಾಗಬಹುದು.

ಡಿಸೀಸ್ X ಎಂದರೇನು?

ಡಿಸೀಸ್ X ಪ್ರಾಯಶಃ ʼರೋಗಕಾರಕ X’ನಿಂದ ಉಂಟಾಗುತ್ತದೆ. ಇದು ಸಾಂಕ್ರಾಮಿಕ ರೋಗಗಳಿಗೆ ಅನುಕೂಲವಾದ ಪರಿಸರದಿಂದ ಹೊರಹೊಮ್ಮಬಹುದು. ಇದರ ಝೂನೋಟಿಕ್ ಕಾಯಿಲೆಗೆ ಸಂಬಂಧಿಸಿದ ಆರ್‌ಎನ್ಎ ವೈರಸ್‌ನಿಂದ ಉಂಟಾಗಬಹುದು. ದಿಲ್ಲಿಯ ಫೋರ್ಟಿಸ್‌ ಅಧ್ಯಯನ ಸಂಸ್ಥೆಯ ತಜ್ಞ ಡಾ. ನೇಹಾ ರಸ್ತೋಗಿ ಹೇಳಿದ್ದಾರೆ.

ಇದೊಂದು ಮಾನವ ನಿರ್ಮಿತ ಸೋಂಕೂ ಆಗಿರಬಹುದು. ಪ್ರಯೋಗಾಲಯದಲ್ಲಿ ಆಗುವ ಆಕಸ್ಮಿಕಗಳು ಅಥವಾ ಜೈವಿಕ ಭಯೋತ್ಪಾದನೆಯ ಫಲವಾಗಿ ಇದು ಹೊಮ್ಮಬಹುದು. ಇದು ಜಾಗತಿಕ ದುರಂತದ ಅಪಾಯವನ್ನು ಉಂಟುಮಾಡಬಹುದು ಎಂದೂ ತಜ್ಞರು ಹೇಳುತ್ತಾರೆ.

ತಡೆಗಟ್ಟುವುದು ಹೇಗೆ?

ನಿಯಂತ್ರಣ ಮತ್ತು ಪ್ರಸರಣ ತಗ್ಗಿಸುವಿಕೆಯ ತಂತ್ರಗಳನ್ನು ಅನುಸರಿಸಬೇಕು. ಜೈವಿಕ ಭಯೋತ್ಪಾದನೆಯನ್ನು ನಿಯಂತ್ರಿಸಲು ಏಕರೂಪದ ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಅಭಿವೃದ್ಧಿ ಮತ್ತು ಅನುಷ್ಠಾನ ಬೇಕು. ಕಟ್ಟುನಿಟ್ಟಾದ ವಿಮಾನ ನಿಲ್ದಾಣದ ಸ್ಕ್ರೀನಿಂಗ್ ಸೇರಿದಂತೆ ತಕ್ಷಣದ ಮತ್ತು ಸೂಕ್ತವಾದ ಪ್ರಯಾಣದ ನಿರ್ಬಂಧಗಳನ್ನು ಅಳವಡಿಸಬೇಕು. ಇದಕ್ಕೆ ಜಾಗತಿಕ ನಾಯಕರು, ವಿಜ್ಞಾನಿಗಳ ಸಹಯೋಗದ ಅಗತ್ಯವಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಸಾಂಕ್ರಾಮಿಕ ರೋಗ ತಜ್ಞರು ರೋಗ X ಅನ್ನು ತನಿಖೆ ಮಾಡಲು, ನಿಯಂತ್ರಿಸಲು ಮತ್ತು ತೊಡೆದುಹಾಕಲು ವ್ಯಾಪಕವಾದ ಮತ್ತು ಸಾಮೂಹಿಕ ಪರೀಕ್ಷೆ, ಕಣ್ಗಾವಲು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.

ಇದೊಂದು ಕಲ್ಪಿತ ಭಯವೇ?

ಆದರೆ ಕೆಲವು ತಜ್ಞರು ಈ ಸೋಂಕಿನ ಕಲ್ಪನೆಯನ್ನೇ ಅಲ್ಲಗಳೆದಿದ್ದಾರೆ. ಸದ್ಯಕ್ಕೆ ಇದೊಂದು ಕಲ್ಪಿತ ವೈರಸ್‌ ಹಾಗೂ ಕಲ್ಪಿತ ಸೋಂಕು ಮಾತ್ರ ಆಗಿದೆ. ಇದು ಸಂಭಾವ್ಯ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇದುವರೆಗೂ ದೊರೆತಿಲ್ಲ. ಜನತೆಯನ್ನು ಊಹೆ ಮಾತ್ರದಿಂದ ಭಯಪಡಿಸವುದು ವೈಜ್ಞಾನಿಕ ವೈದ್ಯಕೀಯ ವಿಧಾನಕ್ಕೆ ಅಪಚಾರ ಎಂದು ಕೆಲವು ತಜ್ಞರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Nipah Virus: ಕೇರಳದಲ್ಲಿ ಮತ್ತೊಂದು ನಿಫಾ ಕೇಸ್, ಸೋಂಕಿತರ ಸಂಖ್ಯೆ 6; ಶಾಲೆಗಳಿಗೆ ರಜೆ ಘೋಷಣೆ

Exit mobile version