IPL2022: ಈ ಬಾರಿಯ ಐಪಿಎಲ್‌ನಲ್ಲಿ ಅತಿ ದುಬಾರಿ ಆಟಗಾರರು ಈವರೆಗೆ ಹೇಗೆ ಆಟ ಆಡಿದ್ದಾರೆ? ತಮ್ಮ ತಂಡದವರಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದಾರೆಯೇ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇಶಾನ್ ಕಿಶನ್(Mumbai Indians)- ₹15.23 ಕೋಟಿ
ವಿಕೆಟ್ ಕೀಪರ್ ಹಾಗೂ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ಗೆ ₹15.23 ಕೋಟಿ ಕೊಟ್ಟು ಮುಂಬೈ ತಂಡ ಖರೀದಿಸಿತ್ತು. ಐಪಿಎಲ್ ಆರಂಭದಲ್ಲಿ ತಂಡದ ಭರವಸೆಯನ್ನು ಉಳಿಸಿಕೊಳ್ಳಲು ಈಶಾನ್ ಪೂರ್ಣ ಶ್ರಮ ಹಾಕಿದ್ದು ಕಂಡಿತು. ಈವರೆಗೆ ಎರಡು ಅರ್ಧಶತಕವನ್ನು ಬಾರಿಸಿದ್ದು, ಒಟ್ಟು 6 ಮ್ಯಾಚ್‌ಗಳಲ್ಲಿ 191 ರನ್ ಗಳಿಸಿದ್ದಾರೆ. ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 81 ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ 54 ಗಳಿಸಿ ಮಿಂಚಿದ್ದು 38.3 ಸರಾಸರಿ ಕಾಪಾಡಿಕೊಂಡಿದ್ದಾರೆ.
ಆದರೆ, ಈವರೆಗೆ ಮುಂಬೈ ತಂಡ ಎಲ್ಲಾ ಪಂದ್ಯಗಳನ್ನೂ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ.
(ದೀಪಕ್ ಚಹಾರ್‌ಗೆ 14 ಕೋಟಿ ನೀಡಿ ಚೆನ್ನೈ ತಂಡ ಖರಿದಿಸಿತ್ತು ಆದರೆ ಅವರಿಗೆ ಬೆನ್ನು ಇಂಜೂರಿ ಆಗಿದ್ದು ಐಪಿಎಲ್‌ನಿಂದ ಹೊರ ಉಳಿದಿದ್ದಾರೆ).
ಶ್ರೇಯಸ್ ಐಯ್ಯರ್(kolkata knight riders)– ₹12.25 ಕೋಟಿ
ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಐಯ್ಯರ್‌ಗೆ ₹12.25 ಕೋಟಿಯನ್ನು ನೀಡಿ ಖರೀದಿಸಲಾಗಿತ್ತು. ಶ್ರೇಯಸ್ ನೇತೃತ್ವದಲ್ಲಿ ಕೆಕೆಆರ್ ಈವರೆಗೆ 7 ಪಂದ್ಯಗಳನ್ನಾಡಿದ್ದು ಕೇವಲ ಮೂರು ಪಂದ್ಯದಲ್ಲಿ ಜಯಿಸಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇನ್ನು ಶ್ರೇಯಸ್ ಐಯ್ಯರ್ ಕಳೆದ ಮೂರು ಪಂದ್ಯದಲ್ಲಿ 2 ಅರ್ದಶತಕ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 218 ಟಾರ್ಗೆಟ್ ಚೇಸ್ ಮಾಡುವಾಗ ಶ್ರೇಯಸ್ 51 ಬಾಲ್‌ಗೆ 85 ರನ್‌ಗಳಿಸಿದ್ದರು. ಹಾಗೂ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ 216 ಟಾರ್ಗೆಟ್ ಬೆನ್ನಟ್ಟಿ ಅರ್ಧಶತಕ ಬಾರಿಸಿದ್ದರು. ಆದರೆ, ಎರಡೂ ಪಂದ್ಯಗಳಲ್ಲಿ ಕೆಕೆಆರ್ ತಂಡ ಸೋಲನುಭವಿಸಿತು.
ಶ್ರೇಯಸ್ ಈವರೆಗೆ ಆಡಿದ 7 ಪಂದ್ಯಗಳಲ್ಲಿ ಒಟ್ಟು 236 ರನ್‌ಗಳಿಸಿದ್ದಾರೆ.
ಲಿಯಾಮ್ ಲಿವಿಂಗ್‌ಸ್ಟೋನ್ (Punjab Kings)-₹11.5 ಕೋಟಿ
ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ₹11.5 ಕೋಟಿ ನೀಡಿ ಪಂಜಾಬ್ ತಂಡಕ್ಕೆ ಕರೆದೊಯ್ಯಲಾಗಿತ್ತು. ಈವರೆಗೆ ಲಿಯಾಮ್ ತಂಡದ ವಿಶ್ವಾಸವನ್ನು ಉಳಿಸಿಕೊಳ್ಳು ಯಶಸ್ವಿಯಾಗಿದ್ದಾರೆ ಎನ್ನಬಹುದು.
ಆರಂಭಿಕ ಎರಡು ಪಂದ್ಯದಲ್ಲಿ ರನ್‌ಗಳಿಸಲು ಪರದಾಡಿದಂತೆ ಕಂಡಿತ್ತು. ಆರಂಭದ ಎರಡೂ ಪಂದ್ಯಾದಲ್ಲಿ 19 ಹಾಗೂ 19 ರನ್ ಮಾತ್ರ ಸ್ಕೋರ್ ಮಾಡಿದ್ದರು. ಆದರೆ ಮುಂದಿನ ನಾಲ್ಕು ಪಂದ್ಯದಲ್ಲಿ ಮೂರು ಅರ್ಧಶತಕ ಬಾರಿಸಿ ಮೆರೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ಬಾಲ್‌ಗೆ 60 ರನ್‌ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 27 ಬಾಲ್‌ಗೆ 64 ರನ್‌ಗಳಿಸುವ ಮೂಲಕ ರೋಚಕ ಆಟ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಪಂಜಾಬ್ ಗೆಲುವು ಕಾಣಲಿಲ್ಲ.
ನಂತರ ಮುಂಬೈ ತಂಡದ ವಿರುದ್ಧ ಕೇವಲ ಎರಡು ರನ್‌ಗೆ ಔಟಾಗಿದ್ದರು. ಆದರೆ, ಸನರೈಸರ್ಸ್ ಹೈದ್ರಾಬಾದ್ ವಿರುದ್ಧ 60ರನ್ ಬಾರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದರು.
ಈವರೆಗೆ 6 ಪಂದ್ಯದಲಿ ಒಟ್ಟು 224 ರನ್‌ಗಳಿಸುವ ಮೂಲಕ ಭರಸವೆಯ ಆಟ ಪ್ರದರ್ಶಿಸಿದ್ದಾರೆ.
ಶಾರ್ದುಲ್ ಠಾಕುರ್(Delhi Capitals)-₹10.75 ಕೋಟಿ
ಬಲಗೈ ಮಧ್ಯಮ ವೇಗಿ ಬೌಲರ್ ಶಾರ್ದುಲ್ ಠಾಕುರ್ ₹10.75 ಕೋಟಿ ಪಡೆದು ದಿಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದರು.
ಕಳೆದ ಐಪಿಎಲ್‌ನಲ್ಲಿ ಚೆನ್ನೈ ತಂಡದಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶಿಸಿದ್ದರು. ಆದರೆ ಈ ಬಾರಿ ದಿಲ್ಲಿ ತಂಡದಲ್ಲಿ ಭರವಸೆಯ ಆಟ ಅವರಿಂದ ಕಂಡುಬಂದಿಲ್ಲ. ಈವರೆಗೆ 6 ಪಂದ್ಯಗಳಲ್ಲಿ ಕೇವಲ 4 ವಿಕೆಟ್ ಪಡೆದಿದ್ದಾರೆ. ಲಾರ್ಡ್ ಶಾರ್ದುಲ್ ಠಾಕುರ್ ಎಂದೇ ಪ್ರಖ್ಯಾತರಾದ ಇವರು 9.59 ಎಕಾನಮಿ ಕಾಪಾಡಿಕೊಂಡಿದ್ದಾರೆ.
ನಿಕೊಲಸ್ ಪೂರನ್(Sunrisers Hyderabad)-₹10.75ಕೋಟಿ
₹10.75 ಕೋಟಿ ಪಡೆದು ಸನ್‌ರೈಸರ್ಸ್ ತಂಡ ಸೇರಿದ ವೆಸ್ಟ್ ಇಂಡೀಸ್‌ನ ಕೀಪರ್ ಹಾಗೂ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಈವರೆಗೆ ಯಾವುದೇ ಅದ್ಭುತ ಆಟ ಪ್ರದರ್ಶಸಿಲ್ಲ. ಆದರೆ, ತಂಡದ ಮಧ್ಯಮ ಕ್ರಮಾಂಕ ಬ್ಯಾಟಿಂಗ್‌ಗೆ ಆಸರೆಯಾಗಿದ್ದಾರೆ. ಅತಿ ವೇಗದಲ್ಲಿ ರನ್‌ಗಲಿಸುವಲ್ಲಿ ಪರಿಣಿತರಾದ ನಿಕೊಲಸ್ ಈವರೆಗೆ 6 ಮ್ಯಾಚ್‌ಗಳನ್ನು ಆಡಿದ್ದು 56.50 ಸರಾಸರಿಯಲ್ಲಿ ಒಟ್ಟು 113 ರನ್‌ಗಳಿಸಿದ್ದಾರೆ.
ಹೈದ್ರಾಬಾದ್ ತಂಡವು ಈವರೆಗೆ 6 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ 5ನೇ ಸ್ಥಾನದಲ್ಲಿದೆ.
ಹೆಚ್ಚಿನ ಓದಿಗಾಗಿ: IPL22| ಎಲ್ಲಿ ಹೋಯ್ತು ʼವಿರಾಟ್ʼರೂಪ: 100 ಬಾರಿಸಿ 100 ಆಟವಾಯಿತು