Site icon Vistara News

ಕ್ರೀಡೆ ಮೇಲೆ ಯುದ್ಧದ ನೆರಳು: ವಿಂಬಲ್‌ಡನ್‌ ಟೂರ್ನಿಯಿಂದ ರಷ್ಯಾ ಆಟಗಾರರು ಬ್ಯಾನ್‌ !

ಉಕ್ರೇನ್‌ ಮೇಲೆ ರಷ್ಯಾ ಯುದ್ಧದ ಪರಿಣಾಮ ಈಗಾಗಲೆ ಆರ್ಥಿಕ ಹಾಗೂ ರಾಜತಾಂತ್ರಿಕವಾಗಿ ಬೇರೆ ಬೇರೆ ದೇಶಗಳ ಮೇಲೆ ಕಾಣುತ್ತಿದೆ. ಇದೀಗ ಕ್ರೀಡಾ ಕ್ಷೇತ್ರದ ಮೇಲೆಯೂ ಯುದ್ಧದ ಕರಿನೆರಳು ಕಾಣಿಸಿಕೊಂಡಿದ್ದು, ಈ ಬಾರಿಯ ಪ್ರತಿಷ್ಠಿತ ವಿಂಬಲ್‌ಡನ್‌ ಟೆನ್ನಿಸ್‌ ಟೂರ್ನಿಯಿಂದ ರಷ್ಯಾ ಹಾಗೂ ಬೆಲರುಷಿಯನ್‌ ಆಟಗಾರರನ್ನು ಬ್ಯಾನ್‌ ಮಾಡಲಾಗಿದೆ.

ಉಕ್ರೇನ್‌ ಮೇಲೆ ದಾಳಿ ನಡೆಸಿದ ಕಾರಣದಿಂದ ರಷ್ಯಾ (Russia) ಆಟಗಾರರನ್ನು ವಿಂಬಲ್‌ಡನ್‌ ಟೂರ್ನಿ ಪ್ರವೇಶಕ್ಕೆ ನಿಷೇಧಾಜ್ಞೆ ಹೇರಿದೆ. ಅಲ್ಲದೆ, ರಷ್ಯಾದ ಮೈತ್ರಿ ದೇಶ ಬೆಲರುಷಿಯನ್‌ (Belarusian) ಕೂಡ ಈ ದಾಳಿಗೆ ಬೆಂಬಲ ನೀಡಿದ್ದರಿಂದ ಅಲ್ಲಿನ ಆಟಗಾರರನ್ನು ಸಹ ಬ್ಯಾನ್‌ ಮಾಡಲಾಗಿದೆ. ಆದರೆ ಟೆನ್ನಿಸ್‌ ಆಟಗಾರರ ಒಕ್ಕೂಟದ ಮುಖ್ಯಸ್ಥರು ಹಾಗೂ ಸದಸ್ಯರು ಈ ತೀರ್ಮಾನಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಟೆನ್ನಿಸ್‌ ಆಟಗಾರರ ಒಕ್ಕೂಟದ (ATP) ಸದಸ್ಯರು ʼವಿಂಬಲ್‌ಡನ್‌ನ ಈ ತೀರ್ಮಾನ ಸಮಂಜಸಲವಲ್ಲ. ಇದು ಟೆನ್ನಿಸ್‌ ಆಟಗಾರರಿಗೆ ಅನ್ಯಾಯ.ʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಒಂದು ಯುದ್ಧ.. ಪರಿಣಾಮ ಎಷ್ಟು?

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸಂಘರ್ಷದಲ್ಲಿ ಅನೇಕ ನಷ್ಟಗಳೇ ಆಗಿವೆ. ಎರಡು ದೇಶಗಳ ನಡುವಿನ ಯುದ್ಧದ ಪರಿಣಾಮ ವಿಶ್ವದ ಮೇಲೆ ಆಗುತ್ತದೆ. ಅದಕ್ಕೆ ಉದಾಹರಣೆ ರಷ್ಯಾ-ಉಕ್ರೇನ್‌ ಸಮರ. ಈವರೆಗೆ ರಷ್ಯಾ-ಉಕ್ರೇನ್‌ ಬಿಕ್ಕಟ್ಟನಿಂದ ವಿಶ್ವ ಷೇರು ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರಿತ್ತು. ಪ್ರಾಣಹಾನಿ, ದೇಶದ ವಿನಾಶ ಇವುಗಳ ಜತೆಗೆ ಕಚ್ಚಾ ತೈಲದ ದರ ಏರಿಕೆ, ವಿಶ್ವದಲ್ಲಿ ದುಬಾರಿಯಾದ ಸರಕು ಸರಬರಾಜು. ಈಗ ಈ ಯುದ್ಧದ ಬಿಸಿ ಟೆನ್ನಿಸ್‌ ಆಟಗಾರರಿಗೂ ಮುಟ್ಟಿದೆ.

ರಷ್ಯಾ ಹಾಗೂ ಬೆಲರುಷಿಯನ್‌ ದೇಶದ ಟೆನ್ನಿಸ್‌ ಆಟಗಾರರನ್ನು ಟೂರ್ನಿ ಪ್ರವೇಶಿಸದಂತೆ ನಿಷೇಧಾಜ್ಞೆ ಹೊರಡಿಸಿದೆ.

ಇದರಿಂದ ಏನಾಗಬಹುದು?

ರಷ್ಯಾ ಹಾಗೂ ಬೆಲರುಷಿಯನ್‌ ದೇಶದ ಪ್ರತಿಭಾವಂತ ಆಟಗಾರರಿಗೆ ಒಂದು ಸುವರ್ಣಾವಕಾಶ ತಪ್ಪಿಹೋಗುತ್ತದೆ. ಪುರುಷರ ಸಾಲಿನಲ್ಲಿ ವಿಶ್ವಕ್ಕೇ 2ನೇ ಸ್ಥಾನದಲ್ಲಿರುವ ಡಾನೀಲ್‌ ಮೆಡ್ವೆಡೇವ್‌ (Daniil Medvedev) ರಷ್ಯಾದ ಆಟಗಾರ. ಹಾಗೂ ಮಹಿಳೆಯರ ಸಾಲಿನಲ್ಲಿ ವಿಶ್ವಕ್ಕೆ 4ನೇ ಸ್ಥಾನದಲ್ಲಿರುವ ಅರೈನಾ ಸಬಲೆಂಕ (Aryna Sabalenka) ಬೆಲರುಷಿಯನ್‌ ಆಟಗಾರ್ತಿ. ಅರೈನಾ ಕಳೆದ ವರ್ಷ ಟೂರ್ನಿಯಲ್ಲಿ ಸೆಮಿ ಫೈನಲ್‌ ತಲುಪಿದ್ದರು. ಆದರೆ ಈ ಬ್ಯಾನ್‌ನಿಂದ ಅವರಿಗೆ ಈ ಬಾರಿ ಟೂರ್ನಿಯಲ್ಲಿ ಆಟವಾಡಲು ಅವಕಾಶವಿರುವುದಿಲ್ಲ.

ವಿಂಬಲ್‌ಡನ್‌ ಬ್ಯಾನ್‌ನಿಂದ ಟೆನ್ನಿಸ್‌ನಲ್ಲಿ ಸಾಧನೆ ಮಾಡಬೇಕು ಅಂದುಕೊಂಡ ಅನೇಕ ಆಟಗಾಗರಿಗೆ ವಿಷಾದ ಉಂಟಾಗಿದೆ.

ʼವಿಂಬಲ್‌ಡನ್‌ ನಿರ್ಧಾರ ಸರಿಯಲ್ಲʼ; ರಫಾಲ್‌ ನಡಾಲ್‌

ಪ್ರಖ್ಯಾತ ಟೆನ್ನಿಸ್‌ ಆಟಗಾರ ರಫಾಲ್‌ ನಡಾಲ್‌ ಈ ಹಿನ್ನೆಲೆಯಲ್ಲಿ ಮಾತನಾಡಿ ವಿಂಬಲ್‌ಡನ್‌ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದರು. ʼವಿಂಬಲ್‌ಡನ್‌ ಈ ನಿರ್ಧಾರ ಸರಿಯಲ್ಲ. ರಷ್ಯಾ-ಉಕ್ರೇನ್‌ ನಡುವಿನ ಸಮರದ ಆಧಾರದ ಮೇಲೆ ಟೆನ್ನಿಸ್‌ ಆಟಗಾರರನ್ನು ಬ್ಯಾನ್‌ ಮಾಡಿದರೆ ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ ನೀಡಿದಂತಾಗುತ್ತದೆ. ಹಾಗಾಗಬಾರದು. ಅಮಾಯಕ ಆಟಗಾರರನ್ನು ನೆನೆಸಿಕೊಂಡರೆ ಬೇಸರವಾಗುತ್ತದೆʼ ಎಂದು ನಡಾಲ್‌ ವಿಷಾದ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಜೋ ರೂಟ್ ಗುಡ್ ಬೈ..

Exit mobile version