Site icon Vistara News

ChatGPT: ಚಾಟ್‌ಜಿಪಿಟಿ ಮೂಲಕ ಬರ್ಲಿನ್‌ ನಗರದಲ್ಲಿ ಬಾಡಿಗೆ ಮನೆ ಹುಡುಕಿದ ಯುವಕ!

ChatGPT

ನವದೆಹಲಿ: ಬೃಹತ್ ನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಸರಳವಲ್ಲ. ತುಂಬಾ ಕಷ್ಟಪಡಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಆ್ಯಪ್‌ಗಳಿವೆ. ಆದರೂ, ಬಾಡಿಗೆ ಮನೆ ಹುಡುಕುವುದು ಹರಸಾಹಸದ ಕೆಲಸವೇ ಸರಿ. ಆದರೆ, ಎಐ ಆಧರಿತ ಚಾಟ್‌ಜಿಪಿಟಿ ನಿಮ್ಮ ಕೆಲಸವನ್ನು ಹಗುರ ಮಾಡುತ್ತಿದೆ. ಹೌದು, 28 ವರ್ಷದ ಯುವಕನೊಬ್ಬ ಜರ್ಮನಿಯ ಬರ್ಲಿನ್‌ (Berlin) ನಗರದಲ್ಲಿ ಬಾಡಿಗೆ ಮನೆ ಹುಡುಕಿ ಸುಸ್ತಾಗಿದ್ದ. ಆದರೂ ಸಿಕ್ಕಿರಲಿಲ್ಲ. ಕೊನೆಗೆ ಚಾಟ್‌ಜಿಪಿಟಿ (ChatGPT) ಮೂಲಕ ಎರಡೇ ವಾರದಲ್ಲಿ ಆತನಿಗೆ ಮನೆ ಸಿಕ್ಕಿದೆ!(Viral News)

ಇಡಬ್ಲ್ಯೂಒಆರ್ ಎಂಬ ಸಾಹಸೋದ್ಯಮ ಬಂಡವಾಳ ಸಂಸ್ಥೆಯನ್ನು ನಡೆಸುತ್ತಿರುವ 28 ವರ್ಷದ ಉದ್ಯಮಿ ಡೇನಿಯಲ್ ಡಿಪೋಲ್ಡ್ ಮತ್ತು ಅವನ ಗೆಳತಿ ಬರ್ಲಿನ್‌ ನಗರದಲ್ಲಿ ಅಪಾರ್ಟ್‌ಮೆಂಟ್‌ ಬಾಡಿಗೆ ಪಡೆಯಲು ಭಾರೀ ಕಷ್ಟಪಟ್ಟಿದ್ದರು. ಆದರೂ ಸಿಕ್ಕಿರಲಿಲ್ಲ. ಸುಮಾರು ನಾಲ್ಕು ತಿಂಗಳುಗಳ ಕಾಲ ಹುಡುಕಿದರು. ಜತೆಗೆ Immo Scout24, immowelt ಮತ್ತು Immonet ಜನಪ್ರಿಯ ರಿಯಾಲ್ಟಿ ವೆಬ್‌ಸೈಟ್‌ಗಳ ಮೂಲಕ ಹುಡುಕಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ತಮಗೆ ಪರಿಚಯದವರ ಮೂಲಕವೂ ಬಾಡಿಗೆ ಮನೆಗೆ ಪ್ರಯತ್ನಿಸಿದರೂ ಏನೂ ಲಾಭವಾಗಲಿಲ್ಲ.

ತಿಂಗಳುಗಟ್ಟಲೆ ಬಾಡಿಗೆ ಮನೆ ಪಡೆಯಲು ಕಷ್ಟಪಟ್ಟ ನಂತರ ಡಿಪೋಲ್ಡ್ ಅವರು ಚಾಟ್‌ಜಿಪಿಟಿ ಮೊರೆ ಹೋದರು. ಬುದ್ಧಿವಂತ ಮತ್ತು ತಂತ್ರಜ್ಞಾನ-ಕೇಂದ್ರಿತ ವಿಧಾನವನ್ನು ಬಳಸಿಕೊಂಡು ಅಪಾರ್ಟ್‌ಮೆಂಟ್ ಹೇಗೆ ಕಂಡುಹಿಡಿಯುವುದು ಎಂಬುದರ ಕುರಿತು 20 ಐಡಿಯಾಗಳನ್ನು ಒದಗಿಸುವಂತೆ ಅವರು ಚಾಟ್‌ಬಾಟ್‌ಗೆ ಕೇಳಿದರು. ಹೌಸಿಂಗ್ ವೆಬ್‌ಸೈಟ್‌ಗಳಲ್ಲಿ ಸ್ವಯಂಚಾಲಿತ ಎಚ್ಚರಿಕೆಗಳನ್ನು ಹೊಂದಿಸುವುದು ಮತ್ತು ಉತ್ತಮ ವ್ಯವಹಾರಗಳೊಂದಿಗೆ ಪ್ರದೇಶಗಳನ್ನು ನಿರ್ಧರಿಸಲು ಮಷಿನ್ ಲರ್ನಿಂಗ್ ಸಿಸ್ಟಮ್ ರಚಿಸುವಂತಹ ವಿವಿಧ ಸಲಹೆಗಳೊಂದಿಗೆ ಚಾಟ್‌ಬಾಟ್ ಉತ್ತರಗಳನ್ನು ನೀಡಿತು.

ಇದನ್ನೂ ಓದಿ: Apple employees : ಆ್ಯಪಲ್‌ ಉದ್ಯೋಗಿಗಳಿಗೆ ಚಾಟ್‌ಜಿಪಿಟಿ ಬ್ಯಾನ್‌, ಕಾರಣವೇನು?

ಚಾಟ್‌ಜಿಪಿಟಿ ನೀಡಿದ ಕೆಲವು ಸಲಹೆಗಳು ಡಿಪೋಲ್ಡ್‌ನಲ್ಲಿ ಆಸಕ್ತಿ ಹುಟ್ಟು ಹಾಕಿದರೂ, ಬಹಳಷ್ಟು ಸಲಹೆಗಳು ಪ್ರಾಯೋಗಿಕವಾಗಿರಲಿಲ್ಲ ಎಂಬುದನ್ನು ಅವರು ಕಂಡುಕೊಂಡರು. ಹಾಗಾಗಿ, ಮತ್ತೆ ಸಲಹೆ ನೀಡುವಂತೆ ಚಾಟ್‌ಜಿಪಿಟಿಗೆ ಕೇಳಿಕೊಂಡರು. ಆಗ ಬಂದ ಕೆಲವು ಸಲಹೆಗಳ ಪೈಕಿ ಕೆಲವು ತುಂಬಾ ಚೆನ್ನಾಗಿದ್ದವು. ಈ ಪೈಕಿ ಒಂದು ಸಲಹೆಯಲ್ಲಿ, ಬರ್ಲಿನ್‌ನಲ್ಲಿರುವ ಎಲ್ಲ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳ ವ್ಯವಸ್ಥಾಪಕರ ಮಾಹಿತಿಯನ್ನು ಒಳಗೊಂಡ ಡೇಟಾ ಬೇಸ್ ರಚಿಸುವುದು ಮತ್ತು ಅದರಿಂದ ಸಂಭಾವ್ಯ ಬಾಡಿಗೆ ಆಯ್ಕೆಗಳನ್ನು ಗುರುತಿಸುವುದಾಗಿತ್ತು. ಈ ಮಾರ್ಗದ ಮೂಲಕ ಅವರು ಕೊನೆಗೂ ಬಾಡಿಗೆ ಅಪಾರ್ಟ್‌ಮೆಂಟ್ ಪಡೆದುಕೊಂಡರು.

ಇನ್ನಷ್ಟು ಕುತೂಹಲಕರ ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version